More

  ಮನೋಲ್ಲಾಸ| ಆತ್ಮವಿಶ್ವಾಸವೇ ಅದಮ್ಯ ಶಕ್ತಿಯಾಗಬೇಕು

  ದಿವ್ಯಾ ಹೆಗಡೆ ಕಬ್ಬಿನಗದ್ದೆ

  ಅದೊಂದು ಸಂಪ್ರದಾಯಸ್ಥ ಕುಟುಂಬ. ಸದಾಚಾರ ಸದ್ವಿಚಾರಗಳೇ ಆ ಮನೆಯ ಜೀವಾಳ. ಸಹಜವಾಗಿಯೇ ದೈವದಲ್ಲಿ ಅಪಾರವಾದ ಭಕ್ತಿ. ಬದುಕಿನ ಎಲ್ಲ ಆಗುಹೋಗುಗಳಿಗೂ, ಕಷ್ಟ-ಸುಖಗಳಿಗೂ, ನೋವು ನಲಿವಿಗೂ ದೇವರೇ ಹೊಣೆ, ‘ತೇನ ವಿನಾ ತೃಣಮಪಿ ನ ಚಲತಿ’ ಎಂಬ ಅಚಲವಾದ ನಂಬಿಕೆ ಅವರದ್ದು. ಆದಾಗ್ಯೂ ಆ ಮನೆಯ ಯುವಕನೊಬ್ಬ ದುಶ್ಚಟಗಳಿಗೆ ಬಲಿಯಾಗಿದ್ದ. ಸಮಾಜಕ್ಕೆ ಅಂಜಿ, ಮಾನ ಮರ್ಯಾದೆಗೆ ಹೆದರಿ ಬದುಕುತ್ತಿದ್ದ ತಂದೆ ತಾಯಿಯರಿಗೆ ಇದರಿಂದ ದಿಗಿಲು ಬಡಿದಂತಾಯಿತು. ಆತನಿಗೋಸ್ಕರ ಜಪ, ತಪ, ಪೂಜೆ, ಹೋಮ, ಹವನಗಳನ್ನು ಮಾಡಿಸಲಾಯಿತು. ಹತ್ತಾರು ತೀರ್ಥಕ್ಷೇತ್ರಗಳನ್ನು ಸುತ್ತಿದ್ದಾಯ್ತು, ನೂರಾರು ಹರಕೆಗಳನ್ನು ಹೊತ್ತುಕೊಳ್ಳಲಾಯಿತು. ಆದರೆ ಪ್ರತಿಫಲ ಮಾತ್ರ ಶೂನ್ಯ.

  ಪರಿಚಿತರೊಬ್ಬರ ಸಲಹೆ ಮೇರೆಗೆ ಮಗನನ್ನು ಖ್ಯಾತ ಜ್ಯೋತಿಷಿಯೊಬ್ಬರ ಬಳಿ ಕರೆದೊಯ್ಯಲಾಯಿತು. ಮಗನ ಈ ನಡವಳಿಕೆಗೆ ಗ್ರಹಗತಿಗಳೇ ಕಾರಣ ಎಂದು ನಂಬಿದ್ದ ಅವರು, ಮಗನ ಜಾತಕವನ್ನು ಜ್ಯೋತಿಷಿಗಳ ಕೈಗಿತ್ತು ಹೇಗಾದರೂ ಮಾಡಿ ಜಾತಕದ ದೋಷಗಳನ್ನು ಪರಿಹರಿಸಿ, ಅವನಿಗೊಂದು ದಿಕ್ಕುತೋರಿಸಬೇಕೆಂದು ಪರಿ ಪರಿಯಾಗಿ ಅಂಗಲಾಚಿದರು.

  ಒಂದು ಕ್ಷಣ ಯೋಚಿಸಿದ ಜ್ಯೋತಿಷಿಗಳ ಮುಖದಲ್ಲಿ ಮಂದಹಾಸವೊಂದು ತೇಲಿತು. ಯುವಕನನ್ನು ಕರೆದು ವಿಶ್ವಾಸದಿಂದ ತಮ್ಮ ಪಕ್ಕವೇ ಕೂರಿಸಿಕೊಂಡರು. ಪಕ್ಕದಲ್ಲಿಯೇ ಗೋಡೆಗಂಟಿಸಿದ್ದ ಒಂದು ಚಿತ್ರಪಟವನ್ನು ತೋರಿಸಿ, ‘ನೋಡಪ್ಪ, ಆ ಎರಡು ಕಲ್ಲುಗಳ ಸಂಧಿಯಲ್ಲಿ ಸಸ್ಯವೊಂದು ಚಿಗುರೊಡೆದು ತನ್ನ ನೆಲೆಯನ್ನು ಕಂಡುಕೊಳ್ಳುತ್ತಿಲ್ಲವೆ? ಅದಕ್ಕೆ ಯಾರೂ ಅಲ್ಲಿ ನೀರು, ಗೊಬ್ಬರವನ್ನು ಹಾಕಿ ಪೋಷಿಸಿದವರಿಲ್ಲ. ತನ್ನ ಆತ್ಮಶಕ್ತಿ ಹಾಗೂ ಆತ್ಮವಿಶ್ವಾಸದಿಂದ ಆ ಕಲ್ಲುಗಳ ಮಧ್ಯೆ ತಾನು ತಲೆ ಎತ್ತಿ ನಿಂತು ಛಲ ಹಾಗೂ ಧೈರ್ಯವಿದ್ದರೆ ಎಲ್ಲಿ ಬೇಕಾದರೂ ಬದುಕಬಹುದು ಎಂಬ ಪಾಠವನ್ನು ನಮಗೆ ಹೇಳುತ್ತಿದೆ. ನಮ್ಮ ಜೀವನವೂ ಅಷ್ಟೆ. ಸುತ್ತಲಿನ ಪರಿಸ್ಥಿತಿ ಎಷ್ಟೇ ಕಷ್ಟವಾಗಿದ್ದರೂ ಆತ್ಮವಿಶ್ವಾಸದಿಂದ ಎಲ್ಲವನ್ನು ಎದುರಿಸಬಹುದು. ಗೆದ್ದೇ ಗೆಲ್ಲುತ್ತೇನೆ ಎಂಬ ಛಲವಿದ್ದರೆ ಎಲ್ಲ ಸವಾಲುಗಳನ್ನು ಎದುರಿಸಬಹುದು. ಈ ಚಂಚಲ ಮನಸ್ಸಿಗೆ ಲಗಾಮು ಹಾಕಿ, ಸರಿಯಾದ ದಾರಿಯಲ್ಲಿ ನಡೆಸುವ ಸಾಮರ್ಥ್ಯ ನಮ್ಮಲ್ಲಿಯೇ ಇದೆ. ಒಳ್ಳೆಯ ವಿಚಾರಗಳಿಗೆ ಮನಸ್ಸನ್ನು ತೆರೆದಿಟ್ಟು ಬದುಕನ್ನು ಸುಂದರವಾಗಿಸಿಕೊಳ್ಳಬೇಕಾದದ್ದು ನಾವೇ. ಎಲ್ಲದಕ್ಕೂ ಆತ್ಮವಿಶ್ವಾಸವೆಂಬ ಔಷಧ ಬೇಕಷ್ಟೆ’ ಎಂದರು. ಆ ಯುವಕನ ಮನಪರಿವರ್ತನೆ ಆಗಿ, ಸರಿಯಾದ ದಾರಿಯಲ್ಲಿ ನಡೆಯಲು ತೀರ್ವನಿಸಿದ.

  ಆತ್ಮವಿಶ್ವಾಸ ವ್ಯಕ್ತಿಯಲ್ಲಿನ ಅತ್ಯಮೂಲ್ಯ ಆಸ್ತಿಗಳಲ್ಲೊಂದು. ಯಶಸ್ಸಿನ ಮೊದಲು ಮೆಟ್ಟಿಲು ಸಹ ಆತ್ಮವಿಶ್ವಾಸವೇ. ಕಷ್ಟ-ಸುಖ, ಸೋಲು-ಗೆಲುವುಗಳಿಂದ ಕೂಡಿದ ಸುಂದರವಾದ ಈ ಬದುಕಿನ ಪಯಣದಲ್ಲಿ ಕಷ್ಟಗಳಿಗೆ ಅಂಜದೆ, ಸೋಲುಗಳಿಂದ ಹಿಂದೆ ಸರಿಯದೆ ಆತ್ಮವಿಶ್ವಾಸವೆಂಬ ಅದಮ್ಯ ಶಕ್ತಿಯನ್ನು ನಂಬಿ ಹೆಜ್ಜೆಕಿತ್ತರೆ ಯಶಸ್ಸು ತಾನಾಗೆಯೇ ಅರಸಿ ಬರುತ್ತದೆ. ಹಾಗಾಗಿ ಆತ್ಮವಿಶ್ವಾಸವೆಂಬ ಅಂತರಾಳದ ಶಕ್ತಿ ನಮ್ಮೆಲ್ಲರಲ್ಲಿ ಬಲಗೊಳ್ಳಲಿ.

  (ಲೇಖಕರು ಹವ್ಯಾಸಿ ಬರಹಗಾರರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts