More

    ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸೋಣ

    ನಮ್ಮ ಬದುಕಿನುದ್ದಕ್ಕೂ ನೂರಾರು ಸಮಸ್ಯೆಗಳ ಸರಮಾಲೆಗಳು ಎದುರಾಗು ವುದು ಸಹಜ ವಿದ್ಯಮಾನ. ಕೆಲವು ಸಮಸ್ಯೆಗಳಿಗಂತೂ ಪರಿಹಾರವೇ ಇಲ್ಲ ಎಂದು ಎಷ್ಟೋ ಸಲ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತೇವೆ; ಮುಂದೇನು ಎಂದು ದಾರಿಗಾಣದಾಗುತ್ತೇವೆ. ಸಮಸ್ಯೆಯನ್ನು ಬೇರೊಂದು ದೃಷ್ಟಿಕೋನದಿಂದ ನೋಡಿ ಬಗೆಹರಿಸಲು ಯತ್ನಿಸದೆ ಎಡವುತ್ತೇವೆ.

    ಇಬ್ಬರು ರಾಜಕುಮಾರರು ಉನ್ನತ ಶಿಕ್ಷಣ ಪಡೆಯಲು ಗುರುಕುಲ ಸೇರಿಕೊಂಡರು. ಗುರುಕುಲದಲ್ಲಿ ಪಾಠ, ನಿತ್ಯ ವೇದಾಧ್ಯಯನ ಪಠಣಗಳು ನಡೆಯುತ್ತಿದ್ದವು. ಜೊತೆಗೆ ಗುರುಗಳು ಉತ್ತಮ ಮೌಲ್ಯಗಳನ್ನು ಶಿಷ್ಯರಲ್ಲಿ ತುಂಬುತ್ತಿದ್ದರು. ರಾಜಕುವರರಾದರೂ ಇವರು ಗುರುಕುಲದ ಅಭ್ಯಾಸಕ್ಕೆ ಹೊಂದಿಕೊಂಡರು. ಒಮ್ಮೆ ಗುರುಗಳು ಈ ಇಬ್ಬರು ಶಿಷ್ಯರನ್ನು ಕರೆದು ಒಂದು ಜರಡಿಯನ್ನು ನೀಡಿ, ಇದರಲ್ಲಿ ನೀರು ತುಂಬಿಸಿ ಎಂದು ಸವಾಲು ಹಾಕಿದರು. ಶಿಷ್ಯರಿಬ್ಬರೂ ಜರಡಿಯಲ್ಲಿ ನೀರು ತುಂಬಲು ಪ್ರಯತ್ನಿಸಿದರು. ಜರಡಿಗೆ ನೀರು ಸುರಿದಾಗಲೆಲ್ಲ ನೀರು ಸೋರಿ ಹೋಗಿ ಬರಿದಾಗುತ್ತಿತ್ತು. ಗುರುಗಳ ಬಳಿ ಬಂದು-‘ಜರಡಿಯೊಳಗೆ ನೀರು ತುಂಬಿಸಲು ಸಾಧ್ಯವೇ ಇಲ್ಲ’ ಎಂದು ಹೇಳಿದರು. ಆಗ ಗುರುಗಳು ಜರಡಿಯನ್ನು ಅಲ್ಲಿಯೇ ನೀರಿನಿಂದ ತುಂಬಿದ್ದ ಒಂದು ದೊಡ್ಡ ಪಾತ್ರೆಯೊಳಗೆ ಹಾಕಿದರು. ಆಗ ಜರಡಿ ಪಾತ್ರೆಯಲ್ಲಿ ಮುಳುಗಿ ತಳ ಸೇರಿತು ಮತ್ತು ಅದರ ಒಡಲು ನೀರಿನಿಂದ ತುಂಬಿಕೊಂಡಿತು. ಆಗ ಶಿಷ್ಯಂದಿರರಿಬ್ಬರು ‘ನಮಗೆ ಈ ಉಪಾಯ ಹೊಳೆಯಲೇ ಇಲ್ಲವಲ್ಲ’ ಎಂದು ತಲೆ ತಗ್ಗಿಸಿದರು. ನಮ್ಮ ಕಥೆಯೂ ಎಷ್ಟೋ ಸಲ ಹೀಗೆಯೇ. ನಾವು ಸಮಸ್ಯೆಯನ್ನು ಏಕಮುಖವಾಗಿ ಮಾತ್ರ ನೋಡುತ್ತೇವೆ. ಪರಿಹಾರಕ್ಕಾಗಿ ಇರುವ ಬೇರೆಬೇರೆ ಆಯಾಮಗಳ ಕುರಿತಾಗಿ ಯೋಚಿಸುವುದೇ ಇಲ್ಲ. ಆಗ ಚಿಕ್ಕ ಸಮಸ್ಯೆ ಕೂಡ ಕಗ್ಗಂಟಾಗಿ ಕಾಡುತ್ತದೆ. ಪ್ರಸಿದ್ಧ ಉದ್ಯಮಿ ಹಾಗೂ ಹುಟ್ಟಾ ಸಾಹಸ ಪ್ರವೃತ್ತಿಯ ರಿಚರ್ಡ್ ಬ್ರಾನ್ಸನ್ ‘ಸಮಸ್ಯೆಗಳು ನಮ್ಮ ಬುದ್ಧಿಶಕ್ತಿಯನ್ನು ಪೂರ್ತಿ ಬಳಸಲು ಕಲಿಸುತ್ತವೆ. ಭಿನ್ನವಾಗಿ ಯೋಚಿಸುವುದನ್ನು ಕಲಿಸುತ್ತವೆ’ ಎಂದು ಹೇಳುತ್ತಾನೆ. ಆ ರೀತಿಯಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ಶಾಂತವಾಗಿ ಕುಳಿತು, ಸಮಸ್ಯೆಯೆಂಬ ಕೋಟೆಯ ಸುತ್ತ ಸುತ್ತು ಹಾಕಿ, ಕ್ರಿಯಾತ್ಮಕವಾಗಿ ಆಲೋಚಿಸಿ ಪರಿಹಾರದ ಬಾಗಿಲನ್ನು ಕಂಡು ಹಿಡಿದು ಮುನ್ನಡೆಯಬೇಕು. ಸಮಸ್ಯೆ ಬಂದಾಗ ಧೃತಿಗೆಡದೆ ಮುಂದೆ ಸಾಗಬೇಕು. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ ಅಲ್ಲವೇ?

    | ರೇಖಾ ಗಜಾನನ ಭಟ್ಟ

    (ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts