ಅಂತರಂಗದ ಆನಂದ

ಮದುವೆಯ ಇಪ್ಪತೆôದನೆಯ ವಾರ್ಷಿಕೋತ್ಸವ ಆಚರಿಸಿ ಆ ದಂಪತಿ ಕಾರು ಹತ್ತಿ ಸ್ವಲ್ಪ ಮುಂದೆ ಬರುವಷ್ಟರಲ್ಲಿ ರಸ್ತೆಬದಿಗೆ ಅಲ್ಲೊಬ್ಬ ಹಾರ್ವೇನಿಯಂನಲ್ಲಿ ಹಳೆಯ ಚಿತ್ರಗೀತೆಯೊಂದನ್ನು ನುಡಿಸುತ್ತಿದ್ದ. ಆ ಹಾಡು ಇವರನ್ನು ಆಕರ್ಷಿಸಿತು. ಕಾರು ನಿಲ್ಲಿಸಿ ಆ ಹಾಡನ್ನು ಕೇಳುತ್ತ ಅಲ್ಲಿಯೇ ನಿಂತರು. ಇಬ್ಬರ ಮನಸ್ಸೂ ಇಪ್ಪತೆôದು ವರ್ಷ ಹಿಂದೆ ಓಡಿತು. ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಇದೇ ಯುಗಳ ಗೀತೆಯನ್ನು ಹಾರ್ವೇನಿಯಂ ಜತೆಗೆ ಒಟ್ಟಿಗೆ ಹಾಡಿದ್ದರು. ಅಲ್ಲಿಂದಲೇ ಪ್ರೇಮಾಂಕುರವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರು ಆ ಹಾರ್ವೇನಿಯಂ ಬಾರಿಸುವನ ಹತ್ತಿರ ಹೋಗಿ ‘ಇನ್ನೊಮ್ಮೆ ಆ ಗೀತೆಯನ್ನು ನುಡಿಸು’ ಎಂದರು. ಅದನ್ನು ಆನಂದಿಸಿ ಅವನಿಗೆ ನೂರು ರೂಪಾಯಿ ಕೊಟ್ಟರು. ಆ ವಾದಕನು ಇವರಿಗಾಗಿ ಮತ್ತೊಮ್ಮೆ ಆ ಹಾಡನ್ನು ಬಾರಿಸಿದನು. ಅದನ್ನು ಆಲಿಸಿ ಕಾರು ಹತ್ತಬೇಕೆನ್ನುವಾಗ ಅವನು ಇವರ ಹತ್ತಿರವೇ ಬಂದ. ‘ಇನ್ನೊಮ್ಮೆ ನುಡಿಸಲೇ’ ಎಂದ. ‘ಬೇಡ ನಾವೀಗ ಹೊರಡಬೇಕು’ ಎಂದರು. ಅದಕ್ಕವನು, ‘ನಾನು ಬೇಕಾದರೆ ನಿಮ್ಮ ಕಾರಿನಲ್ಲಿಯೇ ಹಿಂದೆ ಕುಳಿತುಕೊಂಡು ನುಡಿಸುತ್ತೇನೆ. ನೀವಿಬ್ಬರು ಮುಂದೆ ಕುಳಿತುಕೊಂಡು ಆಲಿಸುತ್ತ ಪ್ರಯಾಣವನ್ನು ಆನಂದಿಸಬಹುದು’ ಎಂದ. ಸ್ವಲ್ಪ ಮುಜುಗರವಾದರೂ ಆ ಹಾಡಿಗೆ ಮನಸೋತ ಇವರು ಅವನನ್ನು ಕಾರಿನಲ್ಲಿ ಕೂಡ್ರಿಸಿಕೊಂಡು ಹಾಡು ಕೇಳುತ್ತ ಹೊರಟರು. ಮನೆಹತ್ತಿರ ಬಂದ ಮೇಲೆ ಇಳಿದು ಅವನಿಗೆ ಇನ್ನೂರು ರೂಪಾಯಿ ಕೊಟ್ಟು ಮನೆಯೊಳಗೆ ಹೊರಟರು. ಅವನು ಇವರನ್ನೇ ಹಿಂಬಾಲಿಸುತ್ತ, ‘ಇನ್ನೊಂದು ಸಲ ನುಡಿಸಲೇ’ ಎಂದ. ಈಗ ಇವನದು ಅತಿಯಾಯಿತು ಎನಿಸಿ ಅವರನ್ನು ರೇಗಿಸಿತು. ಬೇಡ ಬೇಡ ಎಂದರೂ ಒತ್ತಾಯದಿಂದ ಒಳಗೆ ಬರುವ ಅವನನ್ನು ಕೋಪದಿಂದ ಹೊರಗೆ ಅಟ್ಟಿ ಬಾಗಿಲು ಹಾಕಿಕೊಂಡು ‘ಪೀಡೆ ತೊಲಗಿತು’ ಎಂದೆನ್ನುತ್ತ ಸೋಫಾ ಮೇಲೆ ಬಂದು ಒರಗಿದರು.

ಯಾವ ವ್ಯಕ್ತಿಯಿಂದ ಸುಖವುಂಟಾಗಿತ್ತೋ ಅದೇ ವ್ಯಕ್ತಿ ನೀಡಿದ ಸುಖವು ಅತಿಯಾದ ಮೇಲೆ ಅವನ ಮೇಲೆ ತಿರಸ್ಕಾರವುಂಟಾಯಿತು. ಜೀವನದಲ್ಲಿ ಸುಖವನ್ನು ಅನುಭವಿಸಬೇಕು ನಿಜ. ಆದರೆ ಅದು ಅತಿಯಾದಾಗ ದುಃಖವನ್ನುಂಟು ಮಾಡುತ್ತದೆ. ಹಾಗೆಯೇ ಬಾಹ್ಯವಸ್ತುವಿನಿಂದ ಉಂಟಾಗುವ ಆ ಸುಖವನ್ನು ಕೇವಲ ಹೊರಗಿನಿಂದ ಅನುಭವಿಸಬೇಕೇ ಹೊರತು ಅದಿಲ್ಲದೆ ನಡೆಯುವುದಿಲ್ಲವೆಂಬ ಮನಸ್ಥಿತಿಗೆ ಬಂದು ಆ ವಿಷಯವನ್ನು ಅಂತರಂಗಕ್ಕೆ ತಂದುಕೊಂಡರೆ ಅದೇ ಸುಖವು ದುಃಖಕ್ಕೆ ಕಾರಣವಾಗುತ್ತದೆ. ಬಿಸಿಲಿನಲ್ಲಿ ದಣಿದು ನೀರಡಿಸಿ ಬಂದವನಿಗೆ ಒಂದು ಲೋಟ ತಣ್ಣನೆಯ ನೀರು ಸುಖವನ್ನೀಯುತ್ತದೆ. ಹಾಗೆಂದು ನೀರಿಗೆ ಸುಖವೆಂಬ ಹಣೆಪಟ್ಟಿ ಅಂಟಿಸಬಹುದೇ? ಇನ್ನೊಂದು ಸಂದರ್ಭದಲ್ಲಿ ಅದೇ ವ್ಯಕ್ತಿ ನೀರಲ್ಲಿ ಮುಳುಗಿ ಅಲ್ಲಿಂದ ಹೊರ ಬಂದರೆ ಸಾಕೆನ್ನುವ ಹಾಗೆ ಆದಾಗ ಅದೇ ನೀರಿಗೆ ದುಃಖ ಎನ್ನಲಾದೀತೆ? ಇಲ್ಲ. ಯಾಕೆಂದರೆ ಆ ವಸ್ತುವಿಗೆ ಸುಖ ಅಥವಾ ದುಃಖ ನೀಡುವ ಗುಣಧರ್ಮ ಇರುವದಿಲ್ಲ. ಅದು ಕೇವಲ ನಮ್ಮ ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಅದನ್ನೇ ಭಗವದ್ಗೀತೆಯಲ್ಲಿ ಹೊರಗಿನ ವಿಷಯಭೋಗಗಳನ್ನು ಹೊರಗಡೆಯೇ ತ್ಯಜಿಸಿ ಆತ್ಮನಲ್ಲಿಯೇ ಆನಂದಭರಿತನಾಗಿರುವ ಜ್ಞಾನವನ್ನು ಹೊಂದಿದವನು ಬ್ರಹ್ಮನಿರ್ವಾಣ ಅಂದರೆ ಬ್ರಹ್ಮಾನಂದವನ್ನು ಅನುಭವಿಸುತ್ತಾನೆ ಎಂದು ಹೇಳಿದೆ. ಅಂತರಂಗದಲ್ಲಿ ಆನಂದದಿಂದಿರೋಣ.

|ಚಿದಂಬರ ಮುನವಳ್ಳಿ

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ) (ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *