ಶಾಲೆಗೆ ನಡೆದುಕೊಂಡು ಹೋಗುವ ಸುಖವೇ ಬೇರೆ…

ನಾನು ಹತ್ತಿದ ಬಸ್ಸು ಶಾಲೆಯ ಎದುರು ನಿಂತಿತ್ತು. ಪುಟುಪುಟನೆ ಓಡಿ ಬಂದ ಮಕ್ಕಳು ಬಸ್ಸೇರಿದರು. ಅವರ ಹಿಂದೆ ಕೆಲವರು ನಡೆದು ಬಂದು ಬಸ್ಸೇರಿದರು. ನನ್ನ ಹತ್ತಿರ ಬಂದು ನಿಂತ ಪುಟಾಣಿ ತನ್ನ ಕೈಯಲ್ಲಿದ್ದ ಬ್ಯಾಗನ್ನು ನನ್ನ ಕೈಗೆ ಕೊಟ್ಟು ಏದುಸಿರು ಬಿಡುತ್ತ ನಿಂತಿದ್ದ. ಅವನ ಬಾಯಲ್ಲಿ ಚಾಕಲೇಟು ತುಂಬಿತ್ತು. ತನ್ನ ಪ್ರಾಯಕ್ಕೆ, ಎತ್ತರಕ್ಕೆ ಇರಬೇಕಾದ್ದಕ್ಕಿಂತ ಎರಡರಷ್ಟು ದಪ್ಪದ ಹುಡುಗ. ಸುಮ್ಮನೆ ಕುತೂಹಲಕ್ಕೆ ಕಣ್ಣಾಡಿಸಿದೆ. ಬಸ್ಸಿಗೆ ಹತ್ತಿದ್ದ ಪುಟಾಣಿಗಳಲ್ಲಿ ಸುಮಾರು ಏಳಕ್ಕಿಂತ ಹೆಚ್ಚಿನ ಮಕ್ಕಳು ಇವನಂತವರೇ. ಗಡಕ್ಕನೆ ಬಸ್ ಬ್ರೇಕ್ ಹಾಕಿತು. ಶಾಲೆಯಿಂದ ಇನ್ನೂರು ಮೀಟರ್ ದೂರ ಬಂದಿರಬಹುದಷ್ಟೇ. ಹುಡುಗ ನನ್ನ ಕೈಯಲ್ಲಿದ್ದ ಬ್ಯಾಗನ್ನು ಎಳೆದುಕೊಂಡು ಇಳಿದ. ಇನ್ನೂ ಸ್ವಲ್ಪ ಹೊತ್ತು ಬಸ್ ಅಲ್ಲೇ ನಿಂತಿತ್ತಾದ ಕಾರಣ ಆ ಹುಡುಗ ರಸ್ತೆ ಬದಿಯಲ್ಲೇ ಇದ್ದ ಮನೆಯ ಗೇಟಿನೊಳಗೆ ನುಸುಳಿದ್ದು, ಅವನಮ್ಮ ಅವನ ಬೆನ್ನಿನ ಬ್ಯಾಗನ್ನು ತನ್ನ ಕೈಗೆ ವರ್ಗಾಯಿಸುತ್ತ ಒಳ ನಡೆದಿದ್ದು ಕಾಣಿಸಿತು. ಇಷ್ಟು ಹತ್ತಿರವಿರುವ ಮನೆಗೆ ಆ ಹುಡುಗ ಬಸ್ ಏರಬೇಕಾಗಿತ್ತೇ ಎಂಬ ಯೋಚನೆ ಮನದೊಳಗೆ.

ನಾವೂ ಹೋಗುತ್ತಿದ್ದೆವಲ್ಲ ಶಾಲಾ ಕಾಲೇಜುಗಳಿಗೆ… ಆ ಕಾಲ ಹೇಗಿತ್ತು…? ಬಸ್ಸು ಮುಂದಕ್ಕೋಡಿದಂತೆ ಮನಸ್ಸು ಹಿಂದಕ್ಕೆ ಚಲಿಸಿತ್ತು.

ನಾವಿದ್ದದ್ದು ಕೊಡಗಿನ ಪ್ರಸಿದ್ಧ ಊರಿನಲ್ಲಿ. ನಾಲಕ್ಕಂಗಡಿ ಇರುವ ಪೇಟೆ ಎಂದೇ ಹೆಸರಾದ ಸುತ್ತಮುತ್ತಲಿನ ಐದು ಹಳ್ಳಿಗಳಿಗೆ ವ್ಯವಹಾರ ಕೇಂದ್ರವಾಗಿದ್ದ ಊರದು. ಶಾಲೆ ಊರಿನ ಒಂದು ತುದಿಯಲ್ಲಿದ್ದರೆ ಹೈಸ್ಕೂಲು ಮತ್ತು ಜೂನಿಯರ್ ಕಾಲೇಜು ಇನ್ನೊಂದು ತುದಿಯಲ್ಲಿ. ಎರಡೂ ಊರ ಗಡಿಯಿಂದಾಚೆಗೆ ಇದ್ದವು. ಬಸ್ಸಿನ ಅನುಕೂಲ ಇಲ್ಲದ ಹಳ್ಳಿಯವರು ಹೇಗೂ ನಡೆದು ಬರಬೇಕಿತ್ತಲ್ಲ. ಜೊತೆಗೆ ಈ ಪೇಟೆಯ ಸುತ್ತಮುತ್ತಲಿನವರೂ ನಡೆದೋ ಇಲ್ಲವೇ ಬಸ್ಸಿನಲ್ಲೋ ಶಾಲೆ ತಲುಪಬೇಕಿತ್ತು. ಹೆಚ್ಚು ಕಡಿಮೆ ಪೇಟೆಯಿಂದ ಐದು ಕಿಮೀಗಳಷ್ಟು ದೂರವಿದ್ದ ಶಾಲೆಗೆ ಎಲ್ಲರೂ ನಡೆದೇ ಹೋಗುತ್ತಿದ್ದುದು.

ಹೈಸ್ಕೂಲಿನ ಪ್ರಥಮ ದಿನ ನನ್ನದು. ನೋಡಿದರೆ ಇನ್ನೂ ಎರಡೋ, ಮೂರೋ ಕ್ಲಾಸಿನ ಹುಡುಗಿಯಿರಬಹುದೆಂದು ಹೇಳುವಷ್ಟುದ್ದ ಇದ್ದೆ. ಮಗಳು ಅಷ್ಟು ದೂರ ನಡೆಯಲಾರಳು ಎಂದು ಗ್ರಹಿಸಿದ್ದ ಅಪ್ಪ ಮುನ್ನಾ ದಿನವೇ ಎರಡು ರೂಪಾಯಿಯ ನೋಟು ಕೊಟ್ಟಿದ್ದರು. ಮೂವತ್ತು ಪೈಸೆ ಬಸ್ ಚಾರ್ಜಿನ ದಿನಗಳವು. ಮರುದಿನ ಜೊತೆಗೆ ಹೋಗುವ ಗೆಳತಿಯರಿಗೆಲ್ಲ ಹಣವನ್ನು ಎತ್ತಿ ತೋರಿಸಿ ‘ನಾನು ಬಸ್ಸಲ್ಲಿ ಹೋಗುವವಳು’ ಎಂದು ಕೊಚ್ಚಿಕೊಂಡಿದ್ದು ಆಗಿತ್ತು.

ಕುಳಿತುಕೊಳ್ಳುವುದು ಬಿಡಿ, ನಿಲ್ಲಲೇ ಕಷ್ಟ ಎಂಬಂತಿದ್ದ ಬಸ್ಸನ್ನು ಕಷ್ಟಪಟ್ಟು ಏರಿದ್ದೆ. ಹೇಗೂ ಹೆಚ್ಚು ದೂರವಿಲ್ಲ. ಹತ್ತು ನಿಮಿಷದೊಳಗೆ ತಲುಪುತ್ತದೆ ಎಂದು ಸಮಾಧಾನ ಹೇಳಿಕೊಂಡು ಕೈಯಲ್ಲಿದ್ದ ಬ್ಯಾಗು, ಕೊಡೆಗಳನ್ನು ಸಂಭಾಳಿಸುತ್ತ ನಿಂತೆ. ಬಸ್ಸು ಸ್ವಲ್ಪ ಮುಂದಕ್ಕೆ ಚಲಿಸಿ ಹೈಸ್ಕೂಲಿನ ಮಾರ್ಗ ಬಿಟ್ಟು ಬೇರೆ ಮಾರ್ಗ ಹಿಡಿಯಿತು. ಅರೇ ಇದೇಕೆ ಇಲ್ಲಿ ಹೋಗುತ್ತಿದೆ? ನಾನೇ ತಪ್ಪಿ ಬೇರೆ ಬಸ್ಸು ಏರಿದೆನಾ ಎಂದು ಗಾಬರಿ… ಒಂದಷ್ಟು ಮಕ್ಕಳು ಹೋ ಎಂದು ಬೊಬ್ಬೆ ಹಾಕಿದರೆ ನನ್ನಂತೆ ಹೆದರಿಕೊಂಡಿದ್ದ ಪಕ್ಕದ ಸೀಟಿನಲ್ಲಿ ಕುಳಿತ ಹಿರಿಯ ಮಹಿಳೆಯೋರ್ವರು ‘ನಂಗೆ ಇಲ್ಲಿಗಲ್ಲಾ ಹೋಗಲಿಕ್ಕಿರುವುದು, ನನ್ನನ್ನಿಲ್ಲಿಯೇ ಇಳಿಸಿ’ ಎಂದು ಸೀಟು ಬಿಟ್ಟು ಎದ್ದು ನಿಂತು ಬೊಬ್ಬೆ ಹೊಡೆಯತೊಡಗಿದರು. ಕಂಡಕ್ಟರ್ ‘ಟಿಕೆಟ್ ಟಿಕೆಟ್’ ಎಂದು ಹೇಳಿಕೊಂಡು ಬಂದವರು ಆ ಮಹಿಳೆಯನ್ನು ಕುಳಿತುಕೊಳ್ಳಲು ಹೇಳಿ ‘ಇಲ್ಲೇ ಸ್ವಲ್ಪ ಮುಂದೆ ನಮ್ಮದೇ ಇನ್ನೊಂದು ಬಸ್ಸು ಹಾಳಾಗಿದೆ. ಆ ಪ್ರಯಾಣಿಕರನ್ನು ಪೇಟೆಯವರೆಗೆ ತಂದು ಬಿಟ್ಟು ನಾವು ಮತ್ತೆ ನಿಮಗೆ ಬೇಕಾದ ಕಡೆಯೇ ಹೋಗುವುದು’ ಎಂದು ಸಮಾಧಾನಿಸಿದರು. ಅವರ ಜೊತೆಜೊತೆಗೆ ನಾನೂ ಸಮಾಧಾನಗೊಂಡೆ.

ಬಸ್ಸು ಮಾತ್ರ ಸ್ವಲ್ಪ ದೂರ ಎಂದಿದ್ದು ಹತ್ತು ಕಿ.ಮೀ.ಕ್ಕಿಂತಲೂ ಹೆಚ್ಚಾಗುವಷ್ಟು ಚಲಿಸಿ ಹಾಳಾದ ಬಸ್ಸಿನ ಸಮೀಪ ಬಂದು ರಸ್ತೆ ಬದಿ ನಿಂತಿದ್ದ ಒಂದಷ್ಟು ಜನರನ್ನು ಏರಿಸಿಕೊಂಡಿತು. ಮೊದಲೇ ತುಂಬಿದ ಬಸ್ಸು, ಜೊತೆಗೆ ಇನ್ನೊಂದು ಬಸ್ಸಿನ ಪಯಣಿಗರು. ಕುಳಿತವರಿಗೇನೋ ಪರವಾಗಿಲ್ಲ. ನಿಂತವರ ಪಾಡು ದೇವರಿಗೇ ಪ್ರೀತಿ. ಈ ವಿಪರೀತದ ಸಂದಣಿಯಿಂದಾಗಿ ಹೊಟ್ಟೆಯಲ್ಲಿ ತಳಮಳ ಶುರು ಆಗಿ ವಾಂತಿ ಬರುವಂತಾಯಿತು. ಅದೇ ಹೊತ್ತಿಗೆ ಕಂಡಕ್ಟರ್ ಟಿಕೆಟ್ ಎಂದು ಹಣಕ್ಕೆ ಕೈಯೊಡ್ಡಿದರು. ಬಸ್ಸು ಹತ್ತುವಾಗಲೇ ಕೈಯಲ್ಲಿ ಮುದ್ದೆ ಮಾಡಿ ಹಿಡಿದಿದ್ದ ಎರಡು ರೂಪಾಯಿಗಳನ್ನು ಅವರಿಗೆ ವರ್ಗಾಯಿಸಿದೆ. ‘ಮೂವತ್ತು ಪೈಸೆಗೆ ಎರಡು ರೂಪಾಯಿಯಾ? ಚಿಲ್ಲರೆ ಇಲ್ವಾ’ ಎಂದು ಮುಖ ಸಿಂಡರಿಸುತ್ತಲೇ ಕೇಳಿದವರು ಒಂದು ಟಿಕೆಟ್ ಹರಿದು ಅದರ ಹಿಂದೆ ಕೊಡಬೇಕಾದ ಚಿಲ್ಲರೆಯ ಮೊತ್ತವನ್ನು ಬರೆದು, ‘ದಿನಾ ಇದೇ ಬಸ್ಸಲ್ಲಿ ಬರೋದಲ್ವಾ .. ಇದನ್ನೇ ತೋರಿಸಿದರೆ ಸಾಕು, ಹಣ ಕೊಡೋದು ಬೇಡ, ಜಾಗ್ರತೆ ತೆಗೆದಿಟ್ಟುಕೋ’ ಎಂದು ಹೇಳುತ್ತ ದಾರಿ ಮಾಡಿಕೊಳ್ಳುತ್ತ ಮುಂದಕ್ಕೆ ನಡೆದರು. ಅದನ್ನು ಬಿಗಿಯಾಗಿ ಕೈಯಲ್ಲಿ ಹಿಡಿದು ನಿಂತೆ. ಹೊಟ್ಟೆ ಮಾತ್ರ ವಿಪರೀತ ತಳಮಳಗೊಂಡು ನಿಂತುಕೊಳ್ಳಲು ಆಗದಂತೆ ಮಾಡುತ್ತಿತ್ತು. ಅಲ್ಲೇ ವಾಂತಿಯಾದರೆ ಎಂತಹಾ ನಾಚಿಗೆಗೇಡು ಎಂಬ ಭಯ. ಹಾಗೂಹೀಗೂ ಬಸ್ಸು ಬಂದು ಹೈಸ್ಕೂಲಿನ ಎದುರು ನಿಂತಿತು. ಬಡಬಡನೆ ಇಳಿದೆ. ಹೈಸ್ಕೂಲಿನ ಒಳಗೆ ಹೋಗುವ ಬದಲು ರಸ್ತೆಯ ಬದಿಯಲ್ಲಿದ್ದ ನೀಲಗಿರಿ ಮರದ ಪಕ್ಕಕ್ಕೆ ಹೋಗಿ ಹೊಟ್ಟೆಯಲ್ಲಿದ್ದದ್ದೆಲ್ಲ ಕಕ್ಕಿ ನಿರಾಳವಾದೆ. ಬೆನ್ನಿನಲ್ಲಿದ್ದ ಬ್ಯಾಗಿನಿಂದ ನೀರು ತೆಗೆದು ಮುಖ ತೊಳೆದುಕೊಂಡು ಶಾಲೆಯೊಳಗೆ ನುಗ್ಗಿದವಳಿಗೆ ಕಂಡಕ್ಟರ್ ಕೊಟ್ಟ ಟಿಕೆಟ್ ನೆನಪಾಗಿತ್ತು. ಬಿಗಿಮುಷ್ಟಿಯಲ್ಲಿರಬೇಕಿದ್ದ ಟಿಕೆಟ್ ಕಾಣೆಯಾಗಿ ಖಾಲಿ ಕೈ ಅಣಕಿಸಹತ್ತಿತು. ನೀರು ಹಾಕಿ ಮುಖ ತೊಳೆಯುವಾಗ ಎಲ್ಲಿಯೋ ಬಿದ್ದಿರಬೇಕು. ಹೋಗಿ ಹುಡುಕೋಣವೆಂದರೆ ದಾರಿಯಲ್ಲಿ ನಡೆದು ಬರುವ ಬೇರೆ ಮಕ್ಕಳೆದುರು ಕುತೂಹಲದ ವಸ್ತುವಾದೇನು ಎನ್ನುವ ಭಯ. ಮೊದಲ ದಿನ ಬೇರೆ… ಹಳೆ ಗೆಳತಿಯರಿನ್ನೂ ತಲುಪಿರಲಿಲ್ಲ. ಕೆಲವು ಹೊಸ ಮುಖಗಳಿದ್ದರೂ ಅವರ ಪರಿಚಯವಿಲ್ಲ. ಸುಮ್ಮನೆ ಸುದ್ದಿಯನ್ನು ಬಚ್ಚಿಟ್ಟೆ.

ಸಂಜೆ ಗೆಳತಿಯರೊಂದಿಗೆ ನಾನು ಕಾಲ್ನಡಿಗೆಯಲ್ಲೇ ಮನೆಗೆ ಹೊರಟೆ. ‘ಈಗೇನು ನಿನ್ನ ಬಸ್ಸಿಲ್ವಾ’ ಎಂದವರು ಕೊಂಕು ನುಡಿದಾಗ ಆದ ಎಡವಟ್ಟನ್ನು ಹೇಳದೆ, ‘ಬಸ್ಸಲ್ಲಿ ಸಿಕ್ಕಾಪಟ್ಟೆ ಜನ ಇರ್ತಾರೆ, ನಾನು ಇನ್ನು ನಿಮ್ಮ ಜೊತೆಗೆ ನಡೆಯುವುದೇ’ ಎಂದು ಜೊತೆಗೆ ಹೆಜ್ಜೆ ಹಾಕಿದೆ.

ಮೊದಲ ಬಾರಿ ಅಷ್ಟು ದೂರ ಒಂದೇ ವೇಗದಲ್ಲಿ ಹೆಜ್ಜೆ ಹಾಕಿದ್ದು. ಕೈಕಾಲುಗಳೆಲ್ಲ ನೋವಾಗುತ್ತಿದ್ದರೂ ಮನೆಯಲ್ಲಿ ಹೇಳುವ ಹಾಗಿರಲಿಲ್ಲ. ಸುಕುಮಾರಿ ಮಗಳು ಬಸ್ಸಿನಲ್ಲಿ ಜುಂ ಅಂತ ಬಂದಿಳಿದಿದ್ದಾಳೆ ಎಂದೇ ನಂಬಿಕೆ ಹುಟ್ಟಿಸಬೇಕಲ್ಲ… ಆ ವಾರವಿಡೀ ಪಾದಯಾತ್ರೆ. ನಡೆಯುವಿಕೆ ಮುಂದುವರಿದಂತೆ ನೋವೆಲ್ಲ ತನ್ನಿಂದ ತಾನೇ ಮಾಯವಾಗಿ ಲವಲವಿಕೆ ಮೂಡಿತ್ತು. ಆದಿತ್ಯವಾರದ ರಜೆ ಕಳೆದು ಸೋಮವಾರ ಬಂದಾಗ ಅಪ್ಪ ಎರಡು ರೂಪಾಯಿ ಕೊಡಲುಬಂದರು. ‘ನನ್ನೆಲ್ಲ ಗೆಳತಿಯರೂ ನಡ್ಕೊಂಡೇ ಹೋಗ್ತಾರಪ್ಪಾ, ನಾನೂ ನಡೀತೀನಿ..’ ಎಂದೆ. ಬೆನ್ನು ತಟ್ಟಿದ ಅಪ್ಪ ಹಣವನ್ನು ತನ್ನ ಕಿಸೆಯಲ್ಲಿಟ್ಟುಕೊಂಡರು.

ಹೈಸ್ಕೂಲಿನ ಮೂರುವರ್ಷಗಳು ಅನಿವಾರ್ಯ ಪರಿಸ್ಥಿತಿಗಳ ಹೊರತಾಗಿ ಉಳಿದೆಲ್ಲ ದಿನಗಳು ಕಾಲ್ನಡಿಗೆಯೇ. ದಿನಕ್ಕೆ ಹತ್ತು ಹದಿನೈದು ಕಿ.ಮೀ. ನಡೆದು ಶಾಲೆ ಸೇರುವ ಮಕ್ಕಳೂ ಹಲವರಿದ್ದರು. ಎಲ್ಲ ಮನೆಯವರಿಗೂ ಇದು ತಮ್ಮ ಮಕ್ಕಳು ಮಾಡುವ ಸಾಹಸವೆಂದೇನೂ ಅನ್ನಿಸುತ್ತಿರಲಿಲ್ಲ. ಬಸ್ಸಿನಲ್ಲಿ ಹೋಗುವ ಅನುಕೂಲವಿಲ್ಲದಿದ್ದರೆ ನಡೆಯುವುದು ಅತಿ ಸಹಜ ಪ್ರಕ್ರಿಯೆಯಾಗಿತ್ತಷ್ಟೇ.

ಈಗ ಹಾಗಿಲ್ಲ. ಎಡವಿ ಬಿದ್ದರೆ ಶಾಲೆ ಸಿಗುವಷ್ಟು ಸಮೀಪವಿದ್ದರೂ ಬಸ್ಸೋ, ವ್ಯಾನೋ, ಆಟೋರಿಕ್ಷಾವೋ ಏರಿಯೇ ಹೋಗಬೇಕು. ಮಕ್ಕಳು ನಡೆದು ಹೋಗುವುದು ಅಪ್ಪ-ಅಮ್ಮನಿಗೇ ಸಹ್ಯವಲ್ಲ. ಶಾಲೆ ಬಿಟ್ಟು ಮನೆಗೆ ತಲುಪುವ ಮೊದಲೇ ಹಾಳುಮೂಳು ತಿಂಡಿ ತೆಗೆದುಕೊಳ್ಳಲು ಹಣವನ್ನೂ ಕೊಟ್ಟಿರುತ್ತಾರೆ. ಈ ಆಹಾರ ವಿಧಾನ ಮತ್ತು ನಡಿಗೆಯಂತಹ ಉತ್ತಮ ವ್ಯಾಯಾಮದಿಂದ ವಂಚಿತರಾಗುವ ಮಕ್ಕಳು ಬೊಜ್ಜು ಶರೀರದ ತೊಂದರೆಗೆ ಸಿಲುಕಿಕೊಳ್ಳುತ್ತಾರೆ.

ನಮ್ಮ ಮಕ್ಕಳು ಬಲಹೀನರಲ್ಲ. ನಾವು ಅವರನ್ನು ಬಲಹೀನಗೊಳಿಸುತ್ತಿದ್ದೇವೆ. ಸಹಜವಾಗಿ ಅವರಿಗೆ ಸಿಗಬೇಕಾದ ಬಿಸಿಲು, ಗಾಳಿಗಳಿಂದಲೂ ವಂಚಿತರಾಗಿಸುತ್ತಿದ್ದೇವೆ. ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಹಲವು ಬಗೆಯ ವಿಟಮಿನ್ನುಗಳು ಪರಿಸರಕ್ಕೆ ಮೈಯೊಡ್ಡಿದರೇ ಸಿಗುವುದು. ವಾಹನಗಳಲ್ಲಿ ಅವರನ್ನು ಬಂಧಿಸಿಟ್ಟು ಅದನ್ನು ಸಿಗದಂತೆ ಮಾಡಿ ಕಾಯಿಲೆಗಳಿಗೆ ಗುರಿಯಾಗಿಸುತ್ತಿದ್ದೇವೆ. ಆಟೋರಿಕ್ಷಾಗಳ ಒಳಗೆ ಪೆಟ್ಟಿಗೆಯಲ್ಲಿ ತುಂಬಿಟ್ಟ ಫಾರಂಕೋಳಿಗಳಂತೆ ಮಕ್ಕಳನ್ನು ತುಂಬಿ ಕೊಂಡೊಯ್ಯುವುದಕ್ಕೂ ಸಾವಿರಗಟ್ಟಲೆ ಹಣ ಸುರಿಯುತ್ತೇವೆ. ಅದನ್ನೇ ‘ಮಕ್ಕಳ ಸುರಕ್ಷತೆ’ ಎಂದು ತಿಳಿದುಕೊಳ್ಳುವ ಮೂಢತೆ ನಮ್ಮದು. ಶಾಲೆಗೆ ಮೂರ್ನಾಲ್ಕು ಕಿ.ಮೀ.ಗಳ ದೂರದಲ್ಲಿ ಮನೆ ಇರುವ ಮಕ್ಕಳ ಪೋಷಕರು ಈಗಲೂ ಮನಸ್ಸು ಮಾಡಿದರೆ ಮಕ್ಕಳಿಗೆ ಸುಲಭದಲ್ಲಿ ವ್ಯಾಯಾಮವನ್ನೂ, ಆರೋಗ್ಯವನ್ನೂ ಕೊಡಬಹುದು. ತಮ್ಮ ಕಿಸೆಯ ಭಾರವನ್ನೂ ಕಡಿಮೆ ಮಾಡಿಕೊಳ್ಳಬಹುದು. ಒಂದಷ್ಟು ಮಕ್ಕಳು ಒಟ್ಟಿಗೇ ಸಾಗಿದರೆ ಸುರಕ್ಷತೆಗೂ ತೊಂದರೆಯಾಗಲಾರದು.

(ಲೇಖಕರು ಸಾಹಿತಿ)

Leave a Reply

Your email address will not be published. Required fields are marked *