ಗರ್ಭಪಾತ ಕಾನೂನಿನಲ್ಲಿ ಬದಲಾವಣೆ ಬಗ್ಗೆ…

ವೈದ್ಯಕೀಯ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳಿಂದಾಗಿ ಗರ್ಭಾವಸ್ಥೆಯ ಮುಂದುವರಿದ ಹಂತದಲ್ಲೂ ಸುರಕ್ಷಿತವಾಗಿ ಗರ್ಭಪಾತ ಮಾಡುವುದು ಸಾಧ್ಯವಿದೆ. ಗರ್ಭಪಾತ ಕಾಯ್ದೆ ತಿದ್ದುಪಡಿ ಮಸೂದೆ ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಬಾಕಿ ಇದೆ. ಈ ಮಸೂದೆಯಲ್ಲಿ, ಗರ್ಭಪಾತದ ಗರಿಷ್ಠ ಅವಧಿ ಮಿತಿಯನ್ನು 20 ರಿಂದ 24 ವಾರಕ್ಕೆ ವಿಸ್ತರಿಸುವ ಪ್ರಸ್ತಾಪವಿದೆ.

ಇಪ್ಪತ್ತು ವಾರಗಳನ್ನು ದಾಟಿದ ಭ್ರೂಣ ತೆಗೆಸಲು ಅನುಮತಿ ನೀಡಬೇಕೆಂದು ಕೋರಿ ಮೂವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಬಾಂಬೆ ಉಚ್ಚ ನ್ಯಾಯಾಲಯ ಇದೇ ಏಪ್ರಿಲ್ 3ರಂದು ಐತಿಹಾಸಿಕ ಎಂಬಂಥ ನಿರ್ದೇಶನಗಳನ್ನು ನೀಡಿತು. ಗರ್ಭಿಣಿಯ ಜೀವವನ್ನು ಉಳಿಸುವ ಸಲುವಾಗಿ ತುರ್ತು ಗರ್ಭಪಾತ ಅನಿವಾರ್ಯ ಎಂದು ನೋಂದಾಯಿತ ವೈದ್ಯನಿಗೆ ಅನಿಸಿದರೆ, ನ್ಯಾಯಾಲಯದ ಅನುಮತಿ ಇಲ್ಲದೆಯೇ, ಇಪ್ಪತ್ತು ವಾರ ದಾಟಿದ ಭ್ರೂಣದ ಗರ್ಭಪಾತ ಮಾಡಬಹುದು ಎಂದು ನ್ಯಾ. ಎ.ಎಸ್.ಓಕಾ ಮತ್ತು ಎಸ್.ಸೊನಾಕ್ ಅವರಿದ್ದ ಪೀಠ ಹೇಳಿತು.

ಆದರೆ ಇದೇ ಸಂದರ್ಭದಲ್ಲಿ ಕೋರ್ಟ್ ಒಂದು ಸಂಗತಿಯನ್ನೂ ಸ್ಪಷ್ಟಪಡಿಸಿತು. ಇಪ್ಪತ್ತು ವಾರ ದಾಟಿದ ಗರ್ಭಿಣಿಯ ಜೀವಕ್ಕೆ ಅಪಾಯ ಇಲ್ಲದೆ, ಭ್ರೂಣದ ಬೆಳವಣಿಗೆ ಮುಂದುವರಿದರೆ ತನ್ನ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ತೊಂದರೆಯಾಗಬಹುದು ಎಂದು ಆಕೆ ಭಾವಿಸಿ ಅಥವಾ ಮುಂದೆ ಜನಿಸುವ ಮಗುವಿಗೆ ದೈಹಿಕ ಅಥವಾ ಮಾನಸಿಕ ಸಮಸ್ಯೆಯಾಗಬಹುದು ಅಥವಾ ಅಂಗವೈಕಲ್ಯ ಉಂಟಾಗಬಹುದು ಎಂಬ ಗ್ರಹಿಕೆಯಲ್ಲಿ ಆಕೆ ಗರ್ಭಪಾತ ಬಯಸಿದರೆ ಆಗ ವೈದ್ಯರು ಏಕಾಏಕಿ ಗರ್ಭಪಾತ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿತು. ಅಂಥ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಸೂಚಿಸಿತು.

ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಗರ್ಭಪಾತ ಕುರಿತು ಇರುವ ಕಾನೂನಿನ ಬಗ್ಗೆ ನೋಡೋಣ. ಮಹಿಳೆಯೋರ್ವಳು ಗರ್ಭಧರಿಸಿದ 12 ವಾರಗಳ ಅವಧಿಯಲ್ಲಿ, ನೋಂದಾಯಿತ ವೈದ್ಯರ ಅನುಮತಿ ಮೇರೆಗೆ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಮೆಡಿಕಲ್ ಟರ್ವಿುನೇಶನ್ ಆಫ್ ಪ್ರೆಗ್ನನ್ಸಿ ಆಕ್ಟ್, 1971 (ಅಂದರೆ ವೈದ್ಯಕೀಯ ಸಲಹೆ ಮೇರೆಗೆ ಭ್ರೂಣವನ್ನು ತೆಗೆಯುವಿಕೆ)ಹೇಳುತ್ತದೆ. ಒಂದೊಮ್ಮೆ ಗರ್ಭಾವಧಿ 12 ವಾರ ಮೀರಿದ್ದರೆ, ಇಬ್ಬರು ನೋಂದಾಯಿತ ವೈದ್ಯರ ಅನುಮತಿ ಮೇರೆಗೆ 20 ವಾರಗಳವರೆಗೆ ಗರ್ಭಪಾತ ಮಾಡಿಸಿಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದೆ.

ಇಲ್ಲಿ ನಾವು ಒಂದು ಅಂಶ ಗಮನಿಸಬೇಕು. ಭ್ರೂಣದ ಬೆಳವಣಿಗೆ ಮುಂದುವರಿದರೆ ತಾಯಿಯ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗುತ್ತದೆ ಅಥವಾ ಆಕೆಗೆ ತೀವ್ರಗಾಯದ ಆತಂಕವಿದೆ ಎಂಬ ಸಂದರ್ಭದಲ್ಲಿ ಮತ್ತು ಮಗು ಜನಿಸಿದಲ್ಲಿ ಮುಂದೆ ದೈಹಿಕ ಅಥವಾ ಮಾನಸಿಕ ಸಮಸ್ಯೆ ಈಡಾಗಬಹುದು ಅಥವಾ ಗಂಭೀರ ಅಂಗವೈಕಲ್ಯಕ್ಕೆ ತುತ್ತಾಗಬಹುದು ಎಂಬ ಸನ್ನಿವೇಶದಲ್ಲಿ ಗರ್ಭಪಾತದ ಅವಧಿಯನ್ನು ವಿಸ್ತರಿಸಲು ಕಾನೂನಿನಲ್ಲಿ ಅವಕಾಶವಿದೆ.

ಹಾಗಾದರೆ ಗರ್ಭ ಮುಂದುವರಿದಲ್ಲಿ ಆ ಮಹಿಳೆಯ ಆರೋಗ್ಯಕ್ಕೆ ಗಂಭೀರ ಅಪಾಯವಿದೆ ಎಂದು ನಿರ್ಧರಿಸುವುದು ಹೇಗೆ? ಆಗ ಮಹಿಳೆಯ ವಾಸ್ತವ ದೈಹಿಕ ಪರಿಸ್ಥಿತಿಯನ್ನು ಗಮನಿಸಬೇಕಾಗುತ್ತದೆ. ಇದಲ್ಲದೆ, ಅತ್ಯಾಚಾರ ಅಥವಾ ಗರ್ಭನಿರೋಧಕ ಸಾಧನಗಳ ವೈಫಲ್ಯದ ಸಂದರ್ಭದಲ್ಲಿ ಸಹ ಗರ್ಭಪಾತಕ್ಕೆ ಕಾನೂನು ಅವಕಾಶವೀಯುತ್ತದೆ. ಅಂದರೆ, ಆಗಲೂ ಗರ್ಭಿಣಿಗೆ ಜೀವಾಪಾಯವಿರಬೇಕು. ಏಕೆಂದರೆ, ಇಂಥ ಸಂದರ್ಭದಲ್ಲೂ ಪರಿಣಾಮ ಒಂದೇ ಆಗಿರುತ್ತದೆ ಎಂಬುದ ಕಾನೂನಿನ ಪರಿಗಣನೆ. ಆದರೆ ಈ ಎಲ್ಲ ಸಂದರ್ಭಗಳಲ್ಲೂ ಗರ್ಭಿಣಿಯ ಸಮ್ಮತಿ ಅತ್ಯಗತ್ಯ. ಒಂದೊಮ್ಮೆ ಗರ್ಭಿಣಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದಲ್ಲಿ ಅಥವಾ ಮಾನಸಿಕ ಅನಾರೋಗ್ಯವಿರುವವಳಾದಲ್ಲಿ ಆಕೆಯ ಪಾಲಕರು ಗರ್ಭಪಾತಕ್ಕೆ ಸಮ್ಮತಿಸಲು ಕಾಯ್ದೆ ಅವಕಾಶವಿತ್ತಿದೆ.

ಆದರೆ, ಸದ್ಯದ ಕಾನೂನಿನಲ್ಲಿ ಒಂದು ಸಮಸ್ಯೆಯೂ ಇದೆ. ಓರ್ವ ಗರ್ಭಿಣಿಯ ಗರ್ಭಾವಸ್ಥೆ ಮುಂದುವರಿದಲ್ಲಿ ಆಕೆಗೆ ಅಥವಾ ಮುಂದೆ ಜನಿಸುವ ಮಗುವಿಗೆ ತೊಂದರೆಯಾಗುವ ಅಪಾಯ ಇದ್ದರೂ, ಗರ್ಭಾವಧಿ 20 ವಾರ ದಾಟಿದ್ದರೆ ಆಕೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿಲ್ಲ. ಇಂಥ ಸಂದರ್ಭದಲ್ಲಿ, ಮಹಿಳೆಯ ಖಾಸಗಿತನ, ಸಂತಾನೋತ್ಪತ್ತಿ ಆಯ್ಕೆ, ಘನತೆ ಮುಂತಾದ ಮೂಲಭೂತ ಹಕ್ಕುಗಳ ಪ್ರಶ್ನೆಯೂ ಉದ್ಭವಿಸುತ್ತದೆ.

ಗರ್ಭಫಾತಕ್ಕೆ ವಿಧಿಸಲಾಗಿರುವ 20 ವಾರಗಳ ಮಿತಿಯ ಹಿಂದಿನ ತರ್ಕವನ್ನು ಸುಪ್ರೀಂ ಕೋರ್ಟು ಸುಚಿತಾ ಶ್ರೀವಾಸ್ತವ ಮತ್ತು ಅನರ್ ವರ್ಸಸ್ ಚಂಡೀಗಢ ಆಡಳಿತ ಪ್ರಕರಣದಲ್ಲಿ (2009) ವಿವರಿಸಿದೆ. ಅದು ಹೀಗಿದೆ. 1-ಗರ್ಭಾವಸ್ಥೆಯ ಮುಂದುವರಿದ ಹಂತದಲ್ಲಿ ಗರ್ಭಪಾತ ಮಾಡಿದರೆ ಮಹಿಳೆಯ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ ಎಂಬ ಬಗ್ಗ್ಗೆ ವೈದ್ಯಲೋಕದಲ್ಲಿ ಒಮ್ಮತವಿದೆ. 2-ಜನಿಸಲಿರುವ ಮಗುವಿನ ಹಕ್ಕು ಅಥವಾ ಮಾನವಬದುಕಿನ ಸಾಮರ್ಥ್ಯವನ್ನು ಕಾಪಾಡಬೇಕಾದುದು ಸರ್ಕಾರದ ಹೊಣೆಗಾರಿಕೆ.

ಇಂದಿನ ದಿನಮಾನದಲ್ಲಿ ವೈದ್ಯಕೀಯ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳಿಂದಾಗಿ ಗರ್ಭಾವಸ್ಥೆಯ ಮುಂದುವರಿದ ಹಂತದಲ್ಲೂ ಸುರಕ್ಷಿತವಾಗಿ ಗರ್ಭಪಾತ ಮಾಡುವುದು ಸಾಧ್ಯವಿದೆ. ಹೀಗಾಗಿ ಗರ್ಭಪಾತ ಕಾಯ್ದೆ (ಮೆಡಿಕಲ್ ಟರ್ವಿುನೇಶನ್ ಆಫ್ ಪ್ರೆಗ್ನಸ್ಸಿ ಆಕ್ಟ್) ಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಗರ್ಭಪಾತ ಕಾಯ್ದೆ ತಿದ್ದುಪಡಿ ಮಸೂದೆ, 2014, ಇದು ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಬಾಕಿ ಇದೆ. ಈ ಮಸೂದೆಯಲ್ಲಿ, ಗರ್ಭಪಾತದ ಗರಿಷ್ಠ ಅವಧಿ ಮಿತಿಯನ್ನು 20 ರಿಂದ 24 ವಾರಕ್ಕೆ ವಿಸ್ತರಿಸುವ ಪ್ರಸ್ತಾಪವಿದೆ ಎಂಬುದು ಗಮನಾರ್ಹ.

ಗರ್ಭಾವಸ್ಥೆ 20 ವಾರಗಳನ್ನು ದಾಟಿದ ಅನೇಕ ಮಹಿಳೆಯರಿಗೆ ಗಂಭೀರ ದೈಹಿಕ-ಮಾನಸಿಕ ಅಪಾಯ ಮತ್ತು ಭ್ರೂಣವು ಅಸಹಜವಾಗಿ ಬೆಳೆಯಬಹುದಾದ ಸಾಧ್ಯತೆಯ ಅನೇಕ ನೈಜ ಪ್ರಕರಣಗಳು ಬೇರೆ ಬೇರೆ ಕಡೆಯಿಂದ ವರದಿಯಾಗಿವೆ. ಇದಲ್ಲದೆ, ಗರ್ಭಾವಸ್ಥೆಯ 20 ವಾರಗಳ ನಂತರ ಭ್ರೂಣದ ಅಸಹಜ ಬೆಳವಣಿಗೆ ಅಥವಾ ಗರ್ಭಿಣಿಯ ಜೀವಾಪಾಯ ಪತ್ತೆಯಾದ ಎಷ್ಟೋ ನಿದರ್ಶನಗಳಿವೆ. ಇದರಿಂದಾಗಿ, ಗರ್ಭಾವಸ್ಥೆ 20 ವಾರ ದಾಟಿದ ಅನೇಕ ಮಹಿಳೆಯರು ಗರ್ಭಪಾತಕ್ಕಾಗಿ ನ್ಯಾಯಾಲಯದ ಮೊರೆಹೋಗುವ ಸನ್ನಿವೇಶ ನಿರ್ವಣವಾಗುತ್ತಿದೆ. ಇದರಿಂದ ಅವರಿಗೆ ಮಾನಸಿಕ ಕಿರಿಕಿರಿಯಲ್ಲದೆ ಆರ್ಥಿಕವಾಗಿಯೂ ಹೊರೆಯಾಗುತ್ತದೆ. ಪ್ರಸ್ತಾವಿತ ಮಸೂದೆಯಲ್ಲಿ ಇನ್ನೂ ಕೆಲ ಅಂಶಗಳಿವೆ. ಅತ್ಯಾಚಾರ ಸಂತ್ರಸ್ತರು, ನಿಷಿದ್ಧ ಸಂಬಂಧದ ಬಲಿಪಶುಗಳು ಹಾಗೂ ಅಂಗವಿಕಲ ಮಹಿಳೆಯರು ಈ ಮುಂತಾದವರಿಗೆ ಗರ್ಭಪಾತಕ್ಕೆ ಕಾನೂನು ಅವಕಾಶಗಳನ್ನು ಒದಗಿಸುವ ಬಗ್ಗೆಯೂ ತಿದ್ದುಪಡಿ ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ.

ಇನ್ನು, ಆರಂಭದಲ್ಲಿ ಉಲ್ಲೇಖಿಸಿದ ಬಾಂಬೆ ಹೈಕೋರ್ಟ್ ತೀರ್ಪಿನ ವಿಚಾರಕ್ಕೆ ಮತ್ತೆ ಬರುವುದಾದರೆ, ತೀರ್ಪಿನಲ್ಲಿ ಹೇಳಿದ ಇನ್ನೊಂದು ಸಂಗತಿ ಗಮನಾರ್ಹ. ಗರ್ಭಪಾತದ ಪ್ರಯತ್ನದ ಬಳಿಕವೂ ಒಂದೊಮ್ಮೆ ಮಗು ಜನಿಸಿದಲ್ಲಿ, ಆ ಮಗುವಿನ ಕಾಳಜಿ ವಹಿಸುವುದು ಪಾಲಕರ ಕರ್ತವ್ಯ ಮಾತ್ರವಲ್ಲ, ವೈದ್ಯರದೂ ಇರುತ್ತದೆ. ಅಲ್ಲದೆ, ಆ ಮಗುವಿನ ಮಾನವಘನತೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯ; ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಇಂಥ ಸಂದರ್ಭದಲ್ಲಿ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದೇ ಮಗುವಿನ ಹಿತಾಸಕ್ತಿ ಕಾಪಾಡುವಲ್ಲಿ ಮುಖ್ಯವಾದುದು ಎಂದೂ ಕೋರ್ಟ್ ಹೇಳಿತು.

ಒಂದಾನುವೇಳೆ ಪಾಲಕರಿಗೆ ಇಂಥ ಮಗುವನ್ನು ಸಾಕಲಾಗದಿದ್ದರೆ, ಸರ್ಕಾರ ಆ ಮಗುವಿನ ಪಾಲಕನ ಜವಾಬ್ದಾರಿ ಹೊತ್ತು (parens patriae doctorine) ವೈದ್ಯಕೀಯ ಬೆಂಬಲ ನೀಡಬೇಕು ಮತ್ತು ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದೂ ಕೋರ್ಟ್ ಹೇಳಿದ್ದು ಗಮನಾರ್ಹ.

ಬಹುಧರ್ವಿುಯ ದೇಶವಾದ ಭಾರತದಲ್ಲಿ 46 ವರ್ಷಗಳ ಹಿಂದೆ ರಚನೆಯಾದ ಗರ್ಭಪಾತ ಕಾನೂನು ಸೆಕ್ಯುಲರ್ ಆದುದು ಎಂದೇ ಹೇಳಬೇಕು. ಈ ಕಾನೂನು ಯಾವುದೇ ಧಾರ್ವಿುಕ ನಂಬಿಕೆಗಳ ಬಗ್ಗೆ ಅಥವಾ ತಾಯಿಯ ಉದರದಲ್ಲಿ ಭ್ರೂಣದ ಜೀವನ ಯಾವಾಗ ಆರಂಭವಾಗುತ್ತದೆ ಎಂಬಿತ್ಯಾದಿ ಸಂಗತಿಗಳ ಬಗ್ಗೆ ಹೇಳುವುದಿಲ್ಲ. ಬದಲಾಗಿ, ತಾಯಿಯ ಹಿತಾಸಕ್ತಿ ಕಾಪಾಡುವತ್ತ ಆದ್ಯ ಗಮನ ನೀಡಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಗರ್ಭಪಾತ ಕಾನೂನು ಯಾವೆಲ್ಲ ಬದಲಾವಣೆಗಳನ್ನು ಹೊಂದುತ್ತದೆ ಎಂಬುದು ಕುತೂಹಲಕರ. ಹಾಗೆಯೇ, ತಮ್ಮ ದೇಹದ ಮೇಲೆ ನಿಯಂತ್ರಣ ಹೊಂದುವ ಮಹಿಳೆಯರ ಹಕ್ಕು ಹಾಗೂ ಮಹಿಳೆ ಮತ್ತು ಭ್ರೂಣದ ಹಿತಾಸಕ್ತಿಗಳನ್ನು ಕಾಪಾಡುವ ತಮ್ಮ ಕಾನೂನುಬದ್ಧ ಹಿತಾಸಕ್ತಿಗಳನ್ನು ಸರ್ಕಾರಗಳು ಹೇಗೆ ನಿಭಾಯಿಸುತ್ತವೆ ಎಂಬುದು ಕೂಡ ಕಾದುನೋಡಬೇಕಾದ ಸಂಗತಿ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)