ಸೈಬರ್ ಅನಾಚಾರ ಮತ್ತು ಮಧ್ಯವರ್ತಿಗಳ ಬಾಧ್ಯತೆ

ಪುಸ್ತಕ ಪ್ರಕಾಶಕರಿಗಿಂತ ಭಿನ್ನವಾಗಿರುವ ಅಂತರ್ಜಾಲ ಮಧ್ಯವರ್ತಿಗಳಿಗೆ, ತಮ್ಮ ಮಡಿಲಲ್ಲಿ ವ್ಯಾಪಿಸಿರುವ ವಸ್ತು-ವಿಷಯದೊಂದಿಗೆ ನಿಷ್ಕ್ರಿಯ ಬಾಂಧವ್ಯವಿರುತ್ತದೆ. ಪರಿಷ್ಕರಣೆಯ ಹತೋಟಿಯನ್ನು ಅವರು ಚಲಾಯಿಸುವುದಿಲ್ಲವಾದ್ದರಿಂದ, ಅಪರಾಧಿಕ ಬಾಧ್ಯತೆಯಿಂದ ಅಂತರ್ಜಾಲ ವ್ಯವಸ್ಥೆಯ ಮಧ್ಯವರ್ತಿಗಳನ್ನು ಸುರಕ್ಷಿತವಾಗಿಸುವ ಕಾನೂನುಗಳ ರೂಪಣೆಗೆ ಉತ್ತೇಜನ ಸಿಕ್ಕಂತಾಗಿದೆ.

ಆನ್​ಲೈನ್ ಮಾಧ್ಯಮದಲ್ಲಿ ಮಹಿಳೆಯರ ವಿರುದ್ಧ ಅಪಚಾರಗಳು ಹೆಚ್ಚುತ್ತಿರುವುದು ಕಳವಳಕಾರಿ. ಭಾರತೀಯ ಅಂತರ್ಜಾಲ ವಲಯದಲ್ಲಿ ಲಿಂಗಭೇದಭಾವ, ಅದರಲ್ಲೂ ನಿರ್ದಿಷ್ಟವಾಗಿ, ಸ್ತ್ರೀಯರ ವಿರುದ್ಧದ ಪೂರ್ವಗ್ರಹವು ಸರ್ವೆಸಾಮಾನ್ಯ ವಿದ್ಯಮಾನವಾಗಿಬಿಟ್ಟಿದೆ. ವಿಶ್ವಸಂಸ್ಥೆಯ ಬ್ರಾಡ್​ಬ್ಯಾಂಡ್ ಆಯೋಗದ ವರದಿಯಂತೆ, ಮೂವರು ಮಹಿಳೆಯರ ಪೈಕಿ ಒಬ್ಬರು ಒಂದಲ್ಲ ಒಂದು ತೆರನಾದ ಸೈಬರ್ ಹಿಂಸೆ ಅಪಚಾರ ಅಥವಾ ಮಾನಹಾನಿಯನ್ನು ಎದುರಿಸಿದ್ದಾರೆ. ಮಹಿಳೆಯರನ್ನು ಟ್ರೋಲ್ ಮಾಡುವಿಕೆ, ಅವರ ಚಿತ್ರಗಳನ್ನು ವಿಕೃತವಾಗಿ ಮಾರ್ಪಡಿಸುವಿಕೆ ಮತ್ತು ಆಪ್ತಕ್ಷಣಗಳ ಚಿತ್ರಗಳನ್ನು ಅವರ ಒಪ್ಪಿಗೆಯಿಲ್ಲದೆ ಪ್ರಸರಣ ಮಾಡುವಿಕೆ, ಅತ್ಯಾಚಾರ ಮತ್ತು ಹತ್ಯೆಯ ಬೆದರಿಕೆ ಒಡ್ಡುವಿಕೆ- ಇವು ಆನ್​ಲೈನ್​ನಲ್ಲಿ ಎಸಗಲಾಗುತ್ತಿರುವ ಅಪಚಾರಗಳ ಒಂದಷ್ಟು ವಿಧಾನಗಳಾಗಿವೆ. ಈ ಕುರಿತಾಗಿ ವಿಶ್ವಸಂಸ್ಥೆಯ ವಿಶೇಷ ಕಾರ್ಯಕಲಾಪ ವರದಿ ವ್ಯಕ್ತಪಡಿಸಿರುವ ಅಭಿಪ್ರಾಯ ಹೀಗಿದೆ- ಜಾಗತಿಕ ಆನ್​ಲೈನ್ ಶೋಧನಾಸಾಧ್ಯತೆಯು ಆಫ್​ಲೈನ್ ಅಪಚಾರದ ಪ್ರತಿರೂಪವಾಗಿ ವ್ಯಕ್ತಗೊಂಡಿರುವುದು ಮಾತ್ರವಲ್ಲದೆ, ಆನ್​ಲೈನ್ ಮಾಧ್ಯಮದಲ್ಲಿ ಲಿಂಗಾಧಾರಿತ ತಾರತಮ್ಯದ ಹೊಸ ಸ್ವರೂಪಗಳು ಸೃಷ್ಟಿಯಾಗುವುದಕ್ಕೆ, ವರ್ಧಿಸುವುದಕ್ಕೂ ಕಾರಣವಾಗಿವೆ.

ಆನ್​ಲೈನ್ ಮಾಧ್ಯಮದ ಅನುಭವ ದಕ್ಕಿಸಿಕೊಳ್ಳುವಲ್ಲಿ ನಮಗೆ ಅನುವುಮಾಡಿಕೊಡುವಲ್ಲಿ ಮಧ್ಯವರ್ತಿಗಳು ಮುಖ್ಯಪಾತ್ರ ವಹಿಸುತ್ತವೆ ಹಾಗೂ ಅವು ಮಾನವಹಕ್ಕುಗಳ ಹೊಣೆಗಾರಿಕೆಗಳನ್ನು ಹೊರಬೇಕಾಗಿ ಬರುತ್ತದೆ ಎಂಬುದನ್ನು ಈ ವರದಿ ಒತ್ತಿಹೇಳುತ್ತದೆ. ಅಂತರ್ಜಾಲ ಮಧ್ಯವರ್ತಿಗಳು ಅಂದರೆ, ಅಂತರ್ಜಾಲಕ್ಕೆ ಪ್ರವೇಶಾವಕಾಶ ಕಲ್ಪಿಸುವ ಅಥವಾ ಅಂತರ್ಜಾಲ ಮಾಧ್ಯಮದಲ್ಲಿ ಸೇವೆಗಳನ್ನು ಒದಗಿಸುವ ಅಸ್ತಿತ್ವಗಳೆಂದು ವ್ಯಾಖ್ಯಾನಿಸಬಹುದು. ಅಂತರ್ಜಾಲ ಸೇವಾದಾತರು, ಸರ್ಚ್ ಇಂಜಿನ್​ಗಳು, ಸಾಮಾಜಿಕ ಮಾಧ್ಯಮ ಜಾಲಗಳು ಮುಂತಾದವು ಸಾಮಾನ್ಯ ಬಗೆಯ ಮಧ್ಯವರ್ತಿಗಳಾಗಿವೆ. ಒಂದೊಮ್ಮೆ ಇಂಥ ಸಂಸ್ಥೆಗಳ ಬಳಕೆದಾರರಿಂದ ಕಾನೂನುಬಾಹಿರ ಅಥವಾ ಹಾನಿಕರ ವಿಷಯವೇನಾದರೂ ಸೃಷ್ಟಿಯಾದಲ್ಲಿ ಇವುಗಳ ಉತ್ತರದಾಯಿತ್ವ ಏನು ಎಂಬ ಸಂಗತಿ ತಡವಾಗಿಯಾದರೂ ಚರ್ಚೆಗೆ ಬಂದಿದೆ.

ಪುಸ್ತಕ ಪ್ರಕಾಶಕರಿಗಿಂತ ಭಿನ್ನವಾಗಿರುವ ಅಂತರ್ಜಾಲ ಮಧ್ಯವರ್ತಿಗಳು, ತಮ್ಮ ಮಡಿಲಲ್ಲಿ ವ್ಯಾಪಿಸಿರುವ ವಸ್ತು-ವಿಷಯದೊಂದಿಗೆ ಒಂದು ತೆರನಾದ ನಿಷ್ಕ್ರಿಯ ಬಾಂಧವ್ಯ ಹೊಂದಿರುತ್ತವೆ. ಪರಿಷ್ಕರಣೆಯ ಅಥವಾ ತಿದ್ದುಪಾಟಿನ ಹತೋಟಿಯನ್ನು ಅವರು ಚಲಾಯಿಸುವುದಿಲ್ಲವಾದ್ದರಿಂದ, ಅಪರಾಧಿಕ ಬಾಧ್ಯತೆಯಿಂದ ಅಂತರ್ಜಾಲ ವ್ಯವಸ್ಥೆಯ ಮಧ್ಯವರ್ತಿಗಳನ್ನು ಸುರಕ್ಷಿತವಾಗಿಸುವ ಕಾನೂನುಗಳನ್ನು ರೂಪಿಸುವುದಕ್ಕೆ ದೇಶಗಳಿಗೆ ಉತ್ತೇಜನ ಸಿಕ್ಕಂತಾಗಿದೆ. 2008ರಲ್ಲಿ,”notice-and-takedown’ (ಅಕ್ರಮ ಅಂಶಗಳ ಪ್ರಸರಣ ಆರೋಪ ಮತ್ತು ಕೋರ್ಟ್ ಸೂಚನೆಗಳಿಗೆ ಸಂಬಂಧಪಟ್ಟವರು ಪ್ರತಿಕ್ರಿಯಿಸುವುದು) ಎಂಬ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ, ಐರೋಪ್ಯ ಒಕ್ಕೂಟದ ‘ಇ-ಕಾಮರ್ಸ್ ಮಾರ್ಗದರ್ಶಿ ಸೂತ್ರ 2000/31/ಇಸಿ’ ಇದಕ್ಕೆ ಅನುಗುಣವಾಗಿ ‘ಮಾಹಿತಿ ತಂತ್ರಜ್ಞಾನ ಕಾಯ್ದೆ, 2000’ (ಐಟಿ ಕಾಯ್ದೆ)ಗೆ ಭಾರತ ಗಮನಾರ್ಹ ತಿದ್ದುಪಡಿಗಳನ್ನು ತಂದಿತು.

ತೃತೀಯ ಪಕ್ಷಸ್ಥರು ಒದಗಿಸಿದ ಅಥವಾ ಬಳಕೆದಾರರಿಂದ ಸೃಷ್ಟಿಯಾದ ವಸ್ತು-ವಿಷಯ/ಮಾಹಿತಿಯಿಂದಾಗುವ ಅಪಾಯಗಳಿಂದ ಮಧ್ಯವರ್ತಿಗಳನ್ನು ರಕ್ಷಿಸುವಂಥ ಸುರಕ್ಷಿತ ಮಾಗೋಪಾಯಗಳಿಗೆ ಐಟಿ ಕಾಯ್ದೆಯ ಪರಿಚ್ಛೇದ 79ಎ ಅನುವುಮಾಡಿಕೊಡುತ್ತದೆ. ಮಧ್ಯವರ್ತಿ ಇಂಥದೊಂದು ಸಂವಹನಾ ವ್ಯವಸ್ಥೆಗೆ ಪ್ರವೇಶಾವಕಾಶವನ್ನಷ್ಟೇ ಒದಗಿಸುತ್ತಿದ್ದು, ಇಂಥದೊಂದು ಮಾಹಿತಿ ಪ್ರಸರಣಕ್ಕೆ ಮಧ್ಯವರ್ತಿ ಚಾಲನೆ ನೀಡಿಲ್ಲ, ಮಾಹಿತಿ ಲಭ್ಯವಿರುತ್ತದೆ ಎಂಬಂಥ ಅಥವಾ ಯಾವುದೇ ರೀತಿಯಲ್ಲಿ ಆ ಮಾಹಿತಿಯನ್ನು ಮಾರ್ಪಡಿಸಿಲ್ಲ ಎಂಬಂಥ ಪ್ರಮಾಣ ಆಧರಿಸಿ ಇಂಥದೊಂದು ಪ್ರತಿರಕ್ಷೆಯ ಷರತ್ತನ್ನು ಹಾಕಲಾಗಿರುತ್ತದೆ. ಅಷ್ಟೇ ಅಲ್ಲ, ಐಟಿ ಕಾಯ್ದೆ ಶಿಫಾರಸು ಮಾಡಿರುವ ಅವಶ್ಯಕತೆಗಳನ್ನು ಹಾಗೂ ಮಧ್ಯಸ್ಥಿಕೆಯ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವುದು ಕೂಡ ಇಲ್ಲಿ ಅಗತ್ಯವಾಗಿರುತ್ತದೆ. ಮೇಲೆ ಉಲ್ಲೇಖಿಸಿರುವ ಅಂಶಗಳ ಹೊರತಾಗಿಯೂ ಮಧ್ಯವರ್ತಿಯೊಬ್ಬರು ಕೆಲವೊಂದು ಬಾಧ್ಯತೆಗೆ ಒಳಗಾಗಬಹುದು; ಅಂದರೆ, ಉಲ್ಲಂಘನೀಯ ವಿಷಯ/ಮಾಹಿತಿಯ ‘ವಾಸ್ತವಿಕ ಅರಿವನ್ನು’ ತಿಳಿದ ನಂತರವೂ ಅಥವಾ ಸರ್ಕಾರ/ಅದರ ಅಧೀನ ಸಂಸ್ಥೆಗಳು ತಿಳಿಯಪಡಿಸಿದ ನಂತರವೂ, 36 ಗಂಟೆಯೊಳಗಾಗಿ ಇಂಥ ವಿಷಯ/ಮಾಹಿತಿಗಿರುವ ಪ್ರವೇಶಲಭ್ಯತೆಯನ್ನು ರದ್ದುಗೊಳಿಸುವಲ್ಲಿ ಮಧ್ಯವರ್ತಿ ವಿಫಲರಾದಲ್ಲಿ, ಅದರಿಂದಾಗುವ ಪರಿಣಾಮಕ್ಕೆ ಅವರೇ ಬಾಧ್ಯಸ್ಥರಾಗಿರುತ್ತಾರೆ. ಈ ಬಗೆಯ ಕಾರ್ಯವಿಧಾನಕ್ಕೆ private notice and takedown ಎಂದು ಉಲ್ಲೇಖಿಸಲಾಗುತ್ತದೆ.

ಮಧ್ಯವರ್ತಿ ಹೀಗೆ ಸೂಚನೆ/ನಿರ್ದೇಶನವನ್ನು ಪಡೆಯು ವುದಕ್ಕೆ ಕಾರಣವಾಗುವಂಥ ವಿಷಯದ ವಿಸõತಪಟ್ಟಿಯೊಂದನ್ನು ಮಧ್ಯವರ್ತಿಯ ಮಾರ್ಗದರ್ಶಿಸೂತ್ರಗಳಲ್ಲಿ ಕಾಣಬಹುದು. ಈ ಪಟ್ಟಿ ‘ತೀರಾ ಹಾನಿಕರ, ಉಪದ್ರವಕಾರಿ, ದೈವ/ಧರ್ಮ ನಿಂದಕ, ಮಾನಹಾನಿಕರ, ಹೇವರಿಕೆ ಹುಟ್ಟಿಸುವ, ಅಶ್ಲೀಲ, ಶಿಶುಕಾಮದ ಛಾಯೆಯ, ಅಪಮಾನಕರ, ಮತ್ತೊಬ್ಬರ ಖಾಸಗಿತನವನ್ನು ಉಲ್ಲಂಘಿಸುವ, ಹಗೆ ಹುಟ್ಟಿಸುವ, ಅಥವಾ ಜನಾಂಗೀಯವಾಗಿ ಆಕ್ಷೇಪಣಾರ್ಹವಾದ, ಹೀನೈಸುವಂಥ, ಅಕ್ರಮ ಹಣ ವರ್ಗಾವಣೆ ಅಥವಾ ಜೂಜುಗಾರಿಕೆಗೆ ಸಂಬಂಧಿಸಿರುವ, ಅಥವಾ ಮತ್ತಾವುದೇ ರೀತಿಯಲ್ಲಿ ಕಾನೂನುಬಾಹಿರವಾಗಿರುವಂಥ ಮಾಹಿತಿಯನ್ನು’ ಒಳಗೊಂಡಿದೆ. ಈ ಪೈಕಿಯ ಅನೇಕ ವಿಷಯ/ಮಾಹಿತಿಗಳಿಗೆ ಕರಾರುವಾಕ್ಕಾದ ವಿಧ್ಯುಕ್ತ ವ್ಯಾಖ್ಯಾನವಿಲ್ಲ ಮತ್ತು ಇಂಥ ವಿಷಯ/ಮಾಹಿತಿಯನ್ನು ಪರಿಗ್ರಹಿಸುವಾಗಲೇ ಮಧ್ಯವರ್ತಿಗಳು ವಿವೇಚನಾಶಕ್ತಿಯನ್ನು ಬಳಸಬೇಕಾಗುತ್ತದೆ ಎಂದಾಯಿತು. ಇದೇ ವೇಳೆ, ಅಕ್ರಮ ವಿಷಯ/ಮಾಹಿತಿಯನ್ನು ತೆಗೆದುಹಾಕುವುದಕ್ಕೆ ಮಧ್ಯವರ್ತಿಗೆ ಸೂಚನೆ ನೀಡುವ ಪದ್ಧತಿ ಟೀಕೆಗೊಳಗಾಗಿದೆ; ಮಾಹಿತಿ/ವಿಷಯದ ವಿಧಿಬದ್ಧತೆಯ ನಿರ್ಣಯವನ್ನು ಖಾಸಗಿ ಸಂಸ್ಥೆಯೊಂದರ ಕೈಗಳಲ್ಲಿ ಉಳಿಸಿರುವುದು ಇದಕ್ಕೆ ಕಾರಣ.

2015ರಲ್ಲಿ, ‘ಶ್ರೇಯಾ ಸಿಂಘಾಲ್ ವರ್ಸಸ್ ಕೇಂದ್ರ ಸರ್ಕಾರ’ ಪ್ರಕರಣದಲ್ಲಿ, ‘ವಾಸ್ತವಿಕ ಜ್ಞಾನ’ ಎಂಬ ಪರಿಭಾಷೆಯನ್ನು ನ್ಯಾಯಾಲಯದ ಅಥವಾ ಕಾರ್ಯಾಂಗದ ಒಂದು ಆದೇಶ ಎಂದು ಅರ್ಥೈಸುವ ಮೂಲಕ, ಸವೋಚ್ಚ ನ್ಯಾಯಾಲಯವು ಮಧ್ಯವರ್ತಿಗಳ ಹೊಣೆಗಾರಿಕೆಯ ವ್ಯವಸ್ಥೆಯಲ್ಲಿ ಸೂಕ್ತ ಹೊಂದಾಣಿಕೆ ಮಾಡಿತು. ಈ ತೀರ್ಪಿನ ಪರಿಣಾಮವಾಗಿ, ಅಂತರ್ಜಾಲದಿಂದ ಮಾಹಿತಿಯೊಂದನ್ನು ತೆಗೆದುಹಾಕುವುದಕ್ಕೂ ಮೊದಲು ನ್ಯಾಯಾಂಗ ಅಥವಾ ಕಾರ್ಯಾಂಗದ ವತಿಯಿಂದ ಜಾಗರೂಕ ಪರಿಶೀಲನೆ ಅಗತ್ಯವಾಗುತ್ತದೆ. ‘ಆನ್​ಲೈನ್ ವೇದಿಕೆಯಲ್ಲಿನ ಲಕ್ಷಾಂತರ ಸಂಖ್ಯೆಯಲ್ಲಿನ ಕೋರಿಕೆಗಳ ಪೈಕಿ ಯಾವುದು ವಿಧಿಬದ್ಧವಾಗಿವೆ, ಯಾವುದು ಹಾಗಿಲ್ಲ ಎಂಬುದನ್ನು ಮಧ್ಯವರ್ತಿ ಸೇವಾದಾತರು ತೀರ್ವನಿಸಬೇಕಾಗುವುದರಿಂದ, ಗೂಗಲ್, ಫೇಸ್​ಬುಕ್​ನಂಥ ಮಧ್ಯವರ್ತಿಗಳಿಗೆ ಕಾರ್ಯನಿರ್ವಹಿಸುವುದು ತುಂಬ ಕಷ್ಟಕರವಾಗಿರುತ್ತದೆ’ ಎಂಬುದು ಇಲ್ಲಿ ಹೊಮ್ಮಿದ ತರ್ಕವಾಗಿತ್ತು. ಹೀಗೆ, ನಿರ್ದಿಷ್ಟ ಬಗೆಯ ಮಾಹಿತಿಯ ಕಾನೂನುಬಾಹಿರತೆ ಸ್ಪಷ್ಟಗ್ರಾಹ್ಯವಲ್ಲದಿದ್ದಾಗ ಮತ್ತು ಇಂಥ ವೇಳೆ ಗ್ರಹಿಕೆ/ವ್ಯಾಖ್ಯಾನಕ್ಕೆ ಸಾಕಷ್ಟು ಅವಕಾಶಗಳಿರುವಾಗ, ಜಾಗರೂಕ ಪರಿಶೀಲನೆ ಮಾತ್ರವೇ ಅಕ್ರಮ ಮಾಹಿತಿಯ ಸಿಂಧುತ್ವವನ್ನು ಖಾತ್ರಿಪಡಿಸಬಲ್ಲದು. ಭಾರತದಲ್ಲಿ ಮಧ್ಯವರ್ತಿಗಳ ಬಾಧ್ಯತೆ ನಿಯಂತ್ರಿಸುವಲ್ಲಿ ಈ ನಿರ್ಣಯ ಒಂದು ಮಹತ್ವದ ಮೈಲಿಗಲ್ಲು ಎನ್ನಲಡ್ಡಿಯಿಲ್ಲ. ಸವೋಚ್ಚ ನ್ಯಾಯಾಲಯದ ಸಮ್ಮುಖದಲ್ಲಿ ಬಿಸಿಯೇರಿಸಿಕೊಂಡಿದ್ದ ಮತ್ತೆರಡು ಪ್ರಕರಣಗಳನ್ನು ಪರಾಮಶಿಸುವುದು ಇಲ್ಲಿ ಸೂಕ್ತವಾಗಬಲ್ಲದು. ಈ ಪೈಕಿ ಮೊದಲನೆಯದು ‘ಸಾಬು ಮ್ಯಾಥ್ಯೂ ಜಾರ್ಜ್ ವರ್ಸಸ್ ಕೇಂದ್ರ ಸರ್ಕಾರ ಮತ್ತು ಇತರರು’ ಪ್ರಕರಣ; ಇದು, ಅಂತರ್ಜಾಲ ಮಾಧ್ಯಮದಲ್ಲಿನ ಸರ್ಚ್ ಎಂಜಿನ್ ಫಲಿತಾಂಶಗಳಿಂದ ‘ಲಿಂಗ-ಆಯ್ಕೆಯ’ ಗರ್ಭಪಾತಗಳಿಗೆ ಅನುಮೋದಿಸುವ ಜಾಹೀರಾತುಗಳನ್ನು ನಿಷೇಧಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯಾಗಿತ್ತು. ‘ಗರ್ಭಧಾರಣಾಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ವಿಧಾನಗಳ (ಲಿಂಗ ಆಯ್ಕೆಯ ತಡೆ) ಕಾಯ್ದೆ, 1994’ರ ಪರಿಚ್ಛೇದ 22ರಲ್ಲಿ ಈ ನಿಷೇಧ ಅಂರ್ತಗತವಾಗಿದೆ. ಈ ಪ್ರಕರಣದಲ್ಲಿ, ಮೇಲೆ ಉಲ್ಲೇಖಿಸಲಾದ ಕಾಯ್ದೆಯಲ್ಲಿನ ‘ಜಾಹೀರಾತು’ ಎಂಬ ಶಬ್ದವು ವಾಣಿಜ್ಯ ಜಾಹೀರಾತುಗಳ ಕುರಿತಾಗಿ ಮಾತ್ರವೇ ಉಲ್ಲೇಖಿಸಲ್ಪಟ್ಟಿದೆಯೇ ವಿನಾ, ತನ್ನ ನಿಯಂತ್ರಣಕ್ಕೊಳಪಡದ ಸಾರ್ವತ್ರಿಕವಾದ ವ್ಯವಸ್ಥಿತ ಶೋಧನಾ ಫಲಿತಾಂಶಗಳ ಕುರಿತಾಗಿ ಅಲ್ಲ ಎಂಬುದಾಗಿ ಮಧ್ಯವರ್ತಿಗಳು ವಾದಿಸಿದರು. ಆದರೆ, ಅಹವಾಲುದಾರರು, ಇದು ಕಾನೂನಿನ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ ಹಾಗೂ ಭಾರತದಲ್ಲಿ ಲಿಂಗಾನುಪಾತದಲ್ಲಿ ಭಾರಿ ಅಂತರ ಕಂಡುಬಂದಿರುವ ಮತ್ತು ಲಿಂಗ-ಆಯ್ಕೆಯ ಗರ್ಭಪಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದರಿ ಕಾನೂನಿನ ಪೀಠಿಕಾ ಭಾಗವು ಜಾಹೀರಾತುಗಳ ವಿಸõತ ವ್ಯಾಖ್ಯಾನಕ್ಕೆ ಒತ್ತಾಸೆಯಾಗಿದೆ ಎಂದು ಅಭಿಪ್ರಾಯಪಟ್ಟರು.

“In Re: Prajwala (2015)’ಎಂಬುದು ಎರಡನೇ ಪ್ರಕರಣ. ಇದು, ಸಾಮಾಜಿಕ ಜಾಲಗಳು ಮತ್ತು ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಅತ್ಯಾಚಾರದ ವಿಡಿಯೋಗಳು ಅತಿರೇಕವೆಂಬಂತೆ ಪ್ರಸರಣಗೊಳ್ಳುತ್ತಿದ್ದುದರ ಕುರಿತಾಗಿ, ಸುನೀತಾ ಕೃಷ್ಣನ್ ಎಂಬ ಹೋರಾಟಗಾರ್ತಿಯಿಂದ ಬಂದಿದ್ದ ಪತ್ರಕ್ಕೆ ಪ್ರತಿಸ್ಪಂದನೆಯಾಗಿ, ಸವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿಯ ದಾವೆಯಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ, ಫೇಸ್​ಬುಕ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್​ನಂಥ ಹಲವು ಮಧ್ಯವರ್ತಿಗಳು ಪಕ್ಷಸ್ಥರಾಗಿದ್ದರು.

ಈ ಎರಡೂ ಪ್ರಕರಣಗಳಲ್ಲಿ, ವಿಷಯಕ್ಕೆ ಸಂಬಂಧಿಸಿ ‘ಸೂಚನೆ ಮತ್ತು ರದ್ದಿಯಾತಿ’ ಮಾತ್ರವಲ್ಲದೆ ಮಧ್ಯವರ್ತಿ ವಿಷಯ/ಮಾಹಿತಿಯನ್ನು ಪೂರ್ವಭಾವಿಯಾಗಿ ಸೋಸುವಂಥ ಕ್ರಮದ ಅಗತ್ಯವಿದೆ ಎಂಬುದಾಗಿ ಸವೋಚ್ಚ ನ್ಯಾಯಾಲಯ 2017ರ ಅಂತ್ಯದ ವೇಳೆಗೆ ನಿರ್ಧರಿಸಿತು. ಇದರ ಪರಿಣಾಮವಾಗಿ, ದೂರುಗಳನ್ನು ಸ್ವೀಕರಿಸಿ ರದ್ದಿಯಾತಿ ಪ್ರಕ್ರಿಯೆಗೆ ಚಾಲನೆ ನೀಡಲೆಂದು ವಿಶೇಷ ನೋಡಲ್ ಸಂಸ್ಥೆಗಳನ್ನು ಸರ್ಕಾರ ಸ್ಥಾಪಿಸುವಂತಾಯಿತು. ಆದರೆ, ಶ್ರೇಯಾ ಸಿಂಘಾಲ್ ಪ್ರಕರಣದ ತೀರ್ಪಿನಲ್ಲಿ ನಿರೂಪಿತವಾಗಿದ್ದ ಆನ್​ಲೈನ್ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ರಕ್ಷಣಾಕ್ರಮಗಳನ್ನು ನ್ಯಾಯಾಲಯ ಉಪೇಕ್ಷಿಸುತ್ತದೆ ಎಂದು ಟೀಕೆಗಳೂ ವ್ಯಕ್ತವಾದವು.

ಆನ್​ಲೈನ್ ಮಾಧ್ಯಮದಲ್ಲಿ ಕಾನೂನುಬಾಹಿರ ಮಾಹಿತಿ/ವಿಷಯಕ್ಕಿರುವ ಪ್ರವೇಶಾವಕಾಶವನ್ನು ದಮನಿಸುವಲ್ಲಿನ ನ್ಯಾಯಾಲಯದ ಉತ್ಸಾಹದ ಕುರಿತಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಸೆನ್ಸಾರ್​ಷಿಪ್ ಹೆಚ್ಚಿಸುವ ಹಾದಿಯಲ್ಲಿ ನ್ಯಾಯಾಲಯ ಮುಂದುವರಿಯುತ್ತಿರಬಹುದು ಮತ್ತು ಇದು ಅಂತರ್ಜಾಲದಂಥ ಒಂದಿಡೀ ವ್ಯಾಪಕ ಹಾದಿಯನ್ನು ಎಲ್ಲೆಮೀರಿ ಎಲ್ಲರಿಗೂ ನೀಡುವಂತಾಗುವುದಕ್ಕೆ ಕಾರಣವಾಗಬಹುದು ಎಂಬುದು ಅವರ ಭಯ.

ಈ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಹೊಮ್ಮಿರುವ ಪ್ರತಿಸ್ಪಂದನೆ, ಪ್ರಕರಣವನ್ನು ಅವಲಂಬಿಸಿ ಪ್ರಚೋದಿಸಲ್ಪಟ್ಟಿರುವಂಥದ್ದು ಎಂಬುದು ತೋರುತ್ತದೆ.

ಅತ್ಯಾಚಾರದ ವಿಡಿಯೋಗಳನ್ನು ಮತ್ತು ಪ್ರಸವಪೂರ್ವ ಲಿಂಗನಿರ್ಣಯದ ಪರೀಕ್ಷೆಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಆನ್​ಲೈನ್ ಮಾಧ್ಯಮದಲ್ಲಿ ಪ್ರಸರಣಗೊಳಿಸುವ ಪರಿಪಾಠವು ಭಾರತೀಯ ಸಂದರ್ಭದಲ್ಲಿ ಸುಸ್ಪಷ್ಟವಾಗಿ ಅಕ್ರಮವಾಗಿದೆ ಮತ್ತು ಕ್ಷಿಪ್ರವಾಗಿ ಇದನ್ನು ರದ್ದುಮಾಡಬೇಕೆಂಬುದನ್ನು ನ್ಯಾಯಾಲಯ ಹೇಳುತ್ತದೆ; ಈ ಪರಿಗಣನೆಯೊಂದಿಗೆ ನೋಡಿದಾಗ, ಇತರ ಬಗೆಯ ಅಕ್ರಮ ಮಾಹಿತಿ, ನ್ಯಾಯಾಲಯದ ಆದೇಶ ಬಾಕಿಯಿರುವ ಕಾರಣ ಆನ್​ಲೈನ್ ಮಾಧ್ಯಮದಲ್ಲಿ ಉಳಿದುಕೊಂಡಿರಲು ಸಾಧ್ಯವಿದೆ. ತಂತಮ್ಮ ನೆಲೆಗಟ್ಟಿಗೆ ಸಂಬಂಧಿಸಿದಂತೆ ವ್ಯವಸ್ಥಿತವಾಗಿರುವ ಹಕ್ಕುಗಳ ಪರಿಕಲ್ಪನೆಗೆ ಹೊಂದಿಕೊಳ್ಳುವಂಥ ಮಧ್ಯವರ್ತಿಗಳ ಬಾಧ್ಯತೆಯ ಪದ್ಧತಿಯೊಂದು ಅಸ್ತಿತ್ವಕ್ಕೆ ಬರಬೇಕಿದೆ. ಮಹಿಳೆಯರ ವಿರುದ್ಧವಾದ ಆನ್​ಲೈನ್ ಅಪಚಾರ ಸಂದರ್ಭದಲ್ಲಿ, ಸ್ಪಂದನಾಶೀಲ ಪರಿಹಾರದ ಮಾಗೋಪಾಯದ ಅಗತ್ಯವಿದೆ. ಐಟಿ ಕಾಯ್ದೆ ಮತ್ತು ಅದಕ್ಕೆ ಪೂರಕವಾಗಿರುವ ನಿಯಮಗಳಿಗೆ ಸಂಬಂಧಿಸಿದಂತೆಯೂ ರಕ್ಷಣಾ ಕಾರ್ಯವಿಧಾನಗಳ ಅವಶ್ಯಕತೆಯೂ ಇದೆ. ಹಾಗೆಂದ ಮಾತ್ರಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ರಕ್ಷಣಾ ಉಪಕ್ರಮಗಳನ್ನು ರದ್ದುಮಾಡ ಬೇಕೆಂಬುದು ಇದರರ್ಥವಲ್ಲ; ಅಂತರ್ಜಾಲ ಬಳಕೆದಾರರ ಮತ್ತು ಮಧ್ಯವರ್ತಿ ಸೇವಾದಾರರ ಹಕ್ಕುಗಳ ವಿಷಯದಲ್ಲಿ ಶಾಸನಾತ್ಮಕವಾಗಿಯೂ ನ್ಯಾಯಯುತ ವಾಗಿಯೂ ಸಮತೋಲನ ಕಾಯ್ದುಕೊಳ್ಳಬೇಕಿದೆ ಎಂಬುದು ಇದರರ್ಥ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)