ವಿಜಯವಾಣಿ ಸರಣಿ ವರದಿಗೆ ಉತ್ತಮ ಸ್ಪಂದನೆ

ಮಡಿಕೇರಿ: ಕೊಡಗು ಕಟ್ಟೋಣ ಬನ್ನಿ ಆಶಯದೊಂದಿಗೆ ವಿಜಯವಾಣಿ ಪ್ರಕಟಿಸುತ್ತಿರುವ ಮಳೆ ಹಾನಿಯ ಪ್ರತ್ಯಕ್ಷ ದರ್ಶನ ಸರಣಿ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿಜಯವಾಣಿ ವರದಿ ಗಮನಿಸಿದ ಹಲವರು ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಕಣ್ಣೀರು ಒರೆಸುವ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.

ಬೆಂಗಳೂರಿನ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್​ಕುಮಾರ್ ಶನಿವಾರ ಭೇಟಿ ನೀಡಿ ಎರಡು ಕುಟುಂಬಗಳಿಗೆ ತಲಾ 25 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ. ‘ನೋವಿನ ಮೇಲೆ ನೋವು, ಹೊಡೆತದ ಮೇಲೆ ಹೊಡೆತ’ ಶೀರ್ಷಿಕೆಯಲ್ಲಿ ‘ವಿಜಯವಾಣಿ’ಯಲ್ಲಿ ಅಕ್ಟೋಬರ್ 1ರಂದು ಪ್ರಕಟವಾದ ವರದಿಗೆ ಶಾಸಕರು ಸ್ಪಂದಿಸಿ, ಖುದ್ದು ಪರಿಹಾರ ಮೊತ್ತ ತಲುಪಿಸಿದ್ದಾರೆ.

ಕಾಲೂರು ಗ್ರಾಮದ ಚನ್ನಪಂಡ ಶೈಲಾ ನೀಲಮ್ಮ 11 ವರ್ಷಗಳಿಂದ ಕುಟುಂಬದ 6 ಜನರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚನ್ನಪಂಡ ಬನ್ಸಿ ಪೂಣಚ್ಚ ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಂಡಿದ್ದಾರೆ. ತಜ್ಞ ವೈದ್ಯರು ಹಾಗೂ ಅನುಭವಿಗಳನ್ನು ಸಂರ್ಪಸುವುದರೊಂದಿಗೆ ಬನ್ಸಿ ಪೂಣಚ್ಚ ಇತರರಂತೆ ನಡೆದಾಡುವಂತೆ ಮಾಡಲು ಗಮನ ಹರಿಸಲಾಗುವುದು ಎಂದು ಸುರೇಶ್​ಕುಮಾರ್ ಭರವಸೆ ನೀಡಿದರು.

ಅಂಗವಿಕಲ ದಂಪತಿ ಕೆ. ಬಾಡಗ ನಿವಾಸಿ ಚಾಮೇರ ಕೆ. ನಾಣಯ್ಯ ಅವರಿಗೆ 25 ಸಾವಿರ ರೂ. ಆರ್ಥಿಕ ನೆರವು ನೀಡಿದರು. ಈ ಹಣವನ್ನು ಮನೆ ದುರಸ್ತಿಗೆ ಬಳಸಿಕೊಳ್ಳುವಂತೆ ಕೋರಿದರು. ಬೆಂಗಳೂರಿನ ಎಚ್​ಎಸ್​ಆರ್ ಬಡಾವಣೆಯಲ್ಲಿರುವ ಗೃಹಿಣಿ ಕಲ್ಪನಾ ನಾಗರಾಜ್ 3 ಕುಟುಂಬಗಳಿಗೆ ತಲಾ 15 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ. ಸಬ್ಬುಡ ಸತಿ ತಮ್ಮಯ್ಯ, ಚಾಮೇರ ಕೆ. ನಾಣಯ್ಯ, ಆಮೆಮನೆ ಅಕ್ಷತಾ ಅವರ ಖಾತೆಗೆ ತಲಾ 15 ಸಾವಿರ ರೂ. ಜಮೆ ಮಾಡಿದ್ದಾರೆ. ಬೆಂಗಳೂರಿನ ಅಯ್ಯಪ್ಪ ಸೇವಾ ಟ್ರಸ್ಟ್​ನಿಂದ ಸತಿ ತಮ್ಮಯ್ಯ ಅವರಿಗೆ 20 ಸಾವಿರ ರೂ. ಆರ್ಥಿಕ ನೆರವು ಒದಗಿಸುವ ಭರವಸೆ ಸಿಕ್ಕಿದೆ.

ಕೌಟುಂಬಿಕ ನೋವಿನ ನಡುವೆ ಪ್ರಕೃತಿವಿಕೋಪ

ಸಂಕಷ್ಟ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವರದಿಗೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕನ್ನಿಕಂಡ ಕುಸುಮಾ ಅವರಿಗೆ ಬೆಂಗಳೂರಿನಿಂದ ಗಾಯತ್ರಿದೇವಿ, ರಾಮೋಜಿರಾವ್ ಕರೆ ಮಾಡಿ, ಹೊಲಿಗೆ ಯಂತ್ರ ನೀಡುವ ಭರವಸೆ ನೀಡಿದ್ದಾರೆ. ಮಂಡ್ಯದ ಭಾರತಿ ರೆಡ್ಡಿ ಅವರು ಕವಿತಾ, ಕುಸುಮಾ, ಸತಿ ತಮ್ಮಯ್ಯ, ಚಾಮೇರ ನಾಣಯ್ಯ ಅವರಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ.