ಭಾರತದ ಕೀರ್ತಿಯನ್ನು ಬಾನೆತ್ತರಕ್ಕೆ ಮುಟ್ಟಿಸಿದ ಪ್ರತಿಮೆ

ದೇಶದಲ್ಲಿ ಮಹಾನ್ ಪುತ್ಥಳಿಯೊಂದರ ಅನಾವರಣ 2018ರ ಅಕ್ಟೋಬರ್ 31ರಂದು ಆಯಿತು. ಅದೇ ಅತ್ಯದ್ಭುತವಾದ ಶಿಲ್ಪ. ಜಗತ್ತಿನಲ್ಲೆ ಇದುವರೆಗೆ ಅತ್ಯಂತ ಎತ್ತರದ ಗಂಭೀರಮೂರ್ತಿ. ಬ್ರಿಟಿಷರು ತೊಲಗಿದ ನಂತರ 500ಕ್ಕಿಂತ ಹೆಚ್ಚು ಪುಟ್ಟರಾಜ್ಯಗಳಾಗಿದ್ದ ಈ ಪ್ರಾಚೀನ ಭೌಗೋಳಿಕ ಸಂಪತ್ತನ್ನು ರಾಜಕೀಯ ಏಕತೆಯ ಆಳ್ವಿಕೆಗೆ ಒಳಪಡಿಸಿದ ಲೋಹಪುರುಷ ಸರ್ದಾರ್ ವಲ್ಲಭಭಾಯ್ ಪಟೇಲರ ಅತ್ಯುನ್ನತ ಮೂರ್ತಿ. ರಾಜಕೀಯ ಏಕತೆ ಎಂಬುದಕ್ಕೆ ವಿಶೇಷ ಅರ್ಥವಿದೆ. ಈ ದೇಶದಲ್ಲಿ ಅಷ್ಟೊಂದು ವೈವಿಧ್ಯ ಇದ್ದರೂ, ನೂರಾರು ರಾಜರು ಪುಟ್ಟ ರಾಜ್ಯಗಳನ್ನು ಆಳುತ್ತಿದ್ದರು. ಹೈಮಾಚಲದ ಗೋಮುಖದಿಂದ ಹಿಂದೂ ಮಹಾಸಾಗರದ ತೀರದವರೆಗಿನ, ಕಛ್​ನಿಂದ ಕಾಮರೂಪದವರೆಗಿನ ಅಪಾರ ಭೂಖಂಡವನ್ನು ಇಲ್ಲಿಗೆ ಬಂದವರೆಲ್ಲ, ಹೊರಗಿನವರೆಲ್ಲ ಒಂದೇ ಭಾರತವಾಗಿ ಕಂಡಿದ್ದರು. ಒಡೆದು ಅಳುವಲ್ಲಿ ನಿಸ್ಸೀಮರಾದ ಇಂಗ್ಲಿಷರೇ ಇದನ್ನು ಒಂದೇ ದೇಶವಾಗಿ ಪರಿಗಣಿಸಿದ್ದರು. ಆದರೆ ಅವರು ಹಿಡಿತ ಸಡಿಲಿಸಿದ ಮೇಲೆ ಈ ದೇಶ ಪುಡಿಪುಡಿಯಾಗಿ ಹೋಗಲಿ ಎಂಬ ಆಶಯವನ್ನು ಮನಸ್ಸಿನಲ್ಲಿ ಹುದುಗಿಸಿಕೊಂಡಿದ್ದರು. ತಮಗಿಲ್ಲದುದು ಇತರರಿಗೇಕೆ ಎಂಬ ಔದಾರ್ಯ! ಅಂತೂ, 1905ರಲ್ಲಿ ವಂಗಭಂಗ ಚಳವಳಿ ಮಾಡಿ 1916ರಲ್ಲಿ ಮುಖಭಂಗ ಅನುಭವಿಸಿದ ಬ್ರಿಟಿಷರು ಛಲ ಬಿಡಲಿಲ್ಲ. ದೇಶವನ್ನು ಕತ್ತರಿಸಿಯೇ ತೀರುವ ಮನೋಭಿಲಾಷೆಯನ್ನು 1947ರಲ್ಲಿ ಈಡೇರಿಸಿದರು. ಹಿಂದೂ ಮುಸಲ್ಮಾನರಲ್ಲಿ ಸಾಕಷ್ಟು ವೈಮನಸ್ಯ ಉಂಟಾಗುವಂತೆ ನೋಡಿಕೊಂಡರು. ಸ್ವಾತಂತ್ರ್ಯ ಬಂದರೂ ನಂತರ ಒಂದಾಗಿ ಬಾಳುವೆ ಮಾಡಲಾರದೆ ನೆಮ್ಮದಿ ಇಲ್ಲದ ಪರಿಸ್ಥಿತಿ ಇತ್ತು. ಇಂಥ ಪ್ರಕ್ಷುಬ್ಧ, ಸಂದಿಗ್ಧ ಸ್ಥಿತಿಯಲ್ಲಿ ದೇಶದ ಏಕತೆಯನ್ನು ಸಾಧಿಸಲು ಚುಕ್ಕಾಣಿ ಹಿಡಿದವರು ಸರ್ದಾರರು. ಅವರ ದಾರಿಯೇನು ನಿಷ್ಕಂಟಕವಾಗಿರಲಿಲ್ಲ. ಸ್ವತಃ ಪ್ರಧಾನಿಯೇ ಲಾಲಸೆಯುಳ್ಳವರೂ, ದೂರದೃಷ್ಟಿರಹಿತರೂ ಆಗಿದ್ದರು. ಒಂದೆಡೆ ಇಂಥ ನಾಯಕನ ಕಿರುಕುಳ, ಮತ್ತೊಂದೆಡೆ ರಾಜ-ಮಹಾರಾಜರುಗಳ ಸ್ವತಂತ್ರಾಪೇಕ್ಷೆ… ಎಂಥ ಧೀರನನ್ನೂ ದಿಕ್ಕೆಡಿಸುವ ದುಸ್ಥಿತಿ. ಆದರೇನು ಸಾಮ- ದಾನ-ಭೇದ-ದಂಡೋಪಾಯಗಳನ್ನು ಬಳಸಿ ಎಲ್ಲರನ್ನೂ ಭಾರತವೆಂಬ ಮಹಾಮಾತೆಯ ಮಡಿಲಲ್ಲಾಡುವ ಮಕ್ಕಳನ್ನಾಗಿಸುವ ಅಪರೂಪದ ಚಾತುರ್ಯ ತೋರಿದರು. ಜನರಲ್ಲಿ ಕ್ರೌರ್ಯ, ಹುಂಬತನ, ಮತೀಯ ಅಲ್ಪತೆ, ಭೇದಬುದ್ಧಿ, ಅತ್ಯಾಸೆಗಳಿಗೇನೂ ಕಡಿಮೆ ಇರಲಿಲ್ಲ. ಈಗಿಲ್ಲವೆ? ಹಾಗೆಯೇ ದೇಶದ ಅಂದಿನ ಸ್ಥಿತಿಯನ್ನು ಕುರಿತು ಓದಿದರೆ ಮೈನಡುಕ ಉಂಟಾಗುತ್ತದೆ. ಇಂಥ ಘೊರ ಸಂದರ್ಭದಲ್ಲಿ ಏಕತೆಯನ್ನು ಮೂಡಿಸಿ, ಸ್ವಾತಂತ್ರ್ಯದ ಸಾರ್ಥಕತೆಯ ಮೊದಲಹಂತದಲ್ಲಿ ಈ ದೇಶ ನಿಲ್ಲುವಂತೆ ಮಾಡಿದವರು ಪಟೇಲರು. ಅಬ್ಬ ಎಂಥ ವ್ಯಕ್ತಿತ್ವ! ವಾದ ಮಾಡುತ್ತಿದ್ದ ಈ ವಕೀಲ, ಹೆಂಡತಿ ಸತ್ತ ಸುದ್ದಿ ಬಂದರೂ, ಅದನ್ನು ಒಂದಿಷ್ಟೂ ತೋರಗೊಡದೆ ರೈತರನ್ನು ಬ್ರಿಟಿಷರ ದುಷ್ಟ ಕಾನೂನಿನ ಹಿಡಿತದಿಂದ ಬಿಡಿಸಿದ ಕರ್ಮವೀರ. ತಮ್ಮ ಮಹಾಗುಣಕ್ಕನುಗುಣವಾಗಿ ಬಂದ ಪ್ರಧಾನಿ ಪಟ್ಟ ತಪ್ಪಿದಾಗ, ಒಂದಿಷ್ಟೂ ಮನಃಕಷಾಯವಿಲ್ಲದೆ ದೇಶಕ್ಕಾಗಿ ಸಮರ್ಪಿಸಿಕೊಂಡ ಅವರ ಸಮಚಿತ್ತತೆ ಎಷ್ಟು ಜನಕ್ಕಿರಬಹುದು. ಇಂದು ಅರುಣ್ ಶೌರಿಯೆಂಬ ಮಹಾನ್ ಚಿಂತಕ, ಸಂಶೋಧಕ, ಈ ಸರ್ಕಾರದಲ್ಲಿ ತಮಗೆ ಸ್ಥಾನ ಸಿಗಲಿಲ್ಲವೆಂಬ ಒಂದೇ ಕಾರಣಕ್ಕೆ ವಿರೋಧಕೂಟದಲ್ಲಿ ಸೇರಿ ಅದೆಷ್ಟು ಗೊಂದಲ ಎಬ್ಬಿಸುತ್ತಿದ್ದಾರೆ ಎಂಬುದನ್ನು ಕಂಡಾಗ ಸರ್ದಾರ್ ಪಟೇಲರ ಸಮಾಧಾನ ಸ್ಥಿತಿ, ದೇಶಭಕ್ತಿ, ಕಾರ್ಯನಿಷ್ಠೆಗಳು ಮಹಾನಾಯಕನೋರ್ವನಿಗೆ ಇರಬೇಕಾದ ಗರಿಮಾಮಯ ಸದ್ಗುಣಗಳು ಎಂದು ಮನದಟ್ಟಾಗುತ್ತದೆ.

ಇಂಥ ಮಹಾತ್ಮನೊಬ್ಬನ (ನಿಜವಾದ ಮಹಾತ್ಮ ಸರ್ದಾರ್ ಪಟೇಲರು ಎನ್ನುವುದರಲ್ಲಿ ನನ್ನಂಥವರಿಗೆ ಯಾವ ಸಂದೇಹವೂ ಉಳಿದಿಲ್ಲ) ಭಾರತ ಏಕೀಕರಣದ ಮಹತ್ಕಾರ್ಯವನ್ನು ಜನಮನದಲ್ಲಿ ಸ್ಥಿತವಾಗಿಸುವ ಕನಸು ಕಂಡ, ‘ಛೋಟೆ ಸರ್ದಾರ್’ ಎಂದು ಈಗಾಗಲೇ ಭಾರತ ಪ್ರೇಮಿಗಳ ಹೃದಯಗೆದ್ದಿರುವ ನರೇಂದ್ರ ಮೋದಿಯವರು ಕೇವಲ 4-5 ವರ್ಷಗಳ ಅಲ್ಪಕಾಲದಲ್ಲೇ ತಾವು ಕಂಡ ಕನಸನ್ನು ಕಾರ್ಯಾನ್ವಿತಗೊಳಿಸಿಬಿಟ್ಟರು. ನಮ್ಮ ದೇಶದಲ್ಲಿ ಸರ್ಕಾರದ ಯಾವೊಂದು ಯೋಜನೆಗಳು ನಿಗದಿತ ಸಮಯದಲ್ಲಿ ಮುಗಿಯುವುದೆಂದರೆ ಪರಮಾಶ್ಚರ್ಯದ ಸಂಗತಿಯೆ ಸರಿ. ಅದ್ಭುತ ಶಿಲ್ಪಕಲಾಕೌಶಲ, ಅಮೋಘ ಇಂಜಿನಿಯರಿಂಗ್ ತಂತ್ರಗಾರಿಕೆ, ಅಲ್ಪಕಾಲದಲ್ಲಿ ಮಹತ್ತರ ಸಾಧನೆ ಇಲ್ಲಿನ ಹೆಗ್ಗಳಿಕೆ. ನರ್ಮದಾ ನದಿಯ ದಂಡೆಯಲ್ಲಿ ನಿಂತು ಸರೋವರವನ್ನು ನೋಡುತ್ತಿರುವ ಜಗತ್ತಿನ ಅತ್ಯುನ್ನತ ಉಕ್ಕಿನ ಶಿಲ್ಪದ ಭವ್ಯವಾದ ಅನಾವರಣ ಕಾರ್ಯಕ್ರಮವನ್ನು ಟಿವಿ ಪರದೆಯಲ್ಲಿ ನೋಡಿ ಕಣ್ತುಂಬಿಸಿಕೊಂಡಾಯಿತು. ಅದನ್ನು ನೋಡುತ್ತಿದ್ದಂತೆ ಕೃಷ್ಣರಾಜಸಾಗರ ಅಣೆಕಟ್ಟನ್ನು ಇಂಥದೇ ಅಭಿಯಂತರ ತಂತ್ರಕೌಶಲದಿಂದ ನಿಗದಿತ ಕಾಲದಲ್ಲಿ ಅತ್ಯಂತ ಯಶಸ್ವಿಯಾಗಿ ಮುಗಿಸಿದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ನೆನಪಾಗಿ, ಮನದ ತುಂಬ ಹಿಗ್ಗಿನ ಬುಗ್ಗೆ ಎದ್ದಿತು. ನಾವು ಹೆಮ್ಮೆಪಡಬೇಕಾದ ವಿಶ್ವವಿಖ್ಯಾತ ಇಂಜಿನಿಯರ್​ಗಳು ಭಾರತದ ಭವ್ಯತೆಯನ್ನು ಎತ್ತಿಹಿಡಿಯುತ್ತಿದ್ದಾರೆಂಬ ಧನ್ಯತೆ ಮೂಡಿತು. ತೆರೆಯ ಮೇಲೆ ನೋಡಿದ ಅವಿಸ್ಮರಣೀಯ ದೃಶ್ಯವನ್ನು ನೇರ ನೋಡಿಬಿಡೋಣ ಎನ್ನಿಸಿತು. ನಾನು ಮತ್ತು ಸ್ನೇಹಿತೆ ಪದ್ಮಾ ಹೊರಟೇಬಿಟ್ಟೆವು. ನಮ್ಮ ಕರ್ನಾಟಕದ ನಟೀಮಣಿಯೋರ್ವರು ಅನಾವರಣ ಕಾರ್ಯಕ್ರಮದ ಒಂದು ಫೋಟೋ ನೋಡಿ ಆಣಿಮುತ್ತೊಂದನ್ನು ಉದುರಿಸಿದ್ದರು. ಆಕೆ ಆಗಾಗ್ಗೆ ಇಂಥ ಮಾತು ಉದುರಿಸುವುದರಲ್ಲಿ ನಿಸ್ಸೀಮಳಾದ ಕಾಂಗ್ರೆಸ್ ಕಾರ್ಯಕರ್ತೆ. ಇದೇ ಕಾರ್ಯಕ್ಕಾಗಿ ಕಾಂಗ್ರೆಸ್ ಅಧ್ಯಕ್ಷರ ಮೆಚ್ಚುಗೆಯನ್ನು ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಮೋದಿ ಅತ್ಯುನ್ನತವಾದ ಆ ಪ್ರತಿಮೆಯ ಬಳಿ ನಿಂತುಕೊಂಡಿರುವ ಚಿತ್ರ. 182 ಮೀಟರ್ ಉದ್ದದ ಕಬ್ಬಿಣದ ಐಕ್ಯತಾಶಿಲ್ಪ. ಆ ಮಹೋನ್ನತ ಶಿಲ್ಪದ ಪಾದಪೀಠದಲ್ಲಿ ಮನುಷ್ಯ ನಿಂತರೆ ಹೇಗೆ ಕಾಣಬಹುದು? ಬಿಳಿಬಟ್ಟೆ ಧರಿಸಿ ನಿಂತಿದ್ದ ಪ್ರಧಾನಿ ದೊಡ್ಡಹಕ್ಕಿಯ ಹಿಕ್ಕೆಯಂತೆ ಕಾಣುತ್ತಿದ್ದರು ಎಂದು ಟ್ವೀಟಿಸಿದ್ದರು ನಮ್ಮ ನಟೀಮಣಿ. ಎಲ್ಲ ಅವರವರ ಭಾವಕ್ಕೆ ಅಲ್ಲವೆ? ಜಗತ್ತೆ ಅಚ್ಚರಿ ಪಡುವಂಥ ಒಂದು ಮಹತ್ಸಾಧನೆ ಮಾಡಿದ ದೇಶದ ಪ್ರಧಾನಿ ಹಿಕ್ಕೆಯಂತೆ! ನಮ್ಮ ಕಾವ್ಯಗಳಲ್ಲಿ ಹೀನೋಪಮೆ ಎಂಬುದನ್ನು ಹೇಳಿದ್ದಾರೆ. ಮಾಂಸ ಹುಡುಕುತ್ತಿರುವ ಹದ್ದು ಎಷ್ಟು ಎತ್ತರಕ್ಕೆ ಹಾರಿದರೂ ಅದಕ್ಕೆ ಕಾಣುವುದು ಹೆಣ ಮಾತ್ರವಂತೆ! ಹಾಗೆ.

ದೇಶ-ವಿದೇಶಗಳಲ್ಲಿ ಗೌರವ ಪಡೆದು ಭಾರತೀಯರು ತಲೆಯೆತ್ತಿ ನಡೆಯುವಂತೆ ಮಾಡುತ್ತಿರುವ ಒಬ್ಬ ಕರ್ಮಯೋಗಿಯನ್ನು ಹಿಕ್ಕೆಗೆ ಹೋಲಿಸುವ ಮನಸ್ಸು ಹೀನಬುದ್ಧಿಯವರಿಗೆ ಮಾತ್ರ ಬರಬಹುದು. ಕಾಯಾ, ವಾಚಾ, ಮನಸಾ ಪ್ರಧಾನಿಯನ್ನು ದ್ವೇಷಿಸುವ ಜನರ ಬಾಯಲ್ಲಿ ಇನ್ನೆಂಥ ಸೊಗಸಿನ ಮಾತು ಬರಬಹುದು.

ಆ ಚಿತ್ರ ನೋಡಿದ ಸಾಮಾನ್ಯರಿಗೆ ಪಾದದ ಬಳಿ ಪೂಜೆಗಾಗಿ ಇಟ್ಟ ಬಿಳಿಪುಷ್ಪ ಎನಿಸಿರಲಿಕ್ಕೆ ಸಾಕು. ಆದರೆ ದ್ವೇಷ ಅಸೂಯೆ ತುಂಬಿದವರ ‘ದಿವ್ಯಸ್ಪಂದನ’ ಎಷ್ಟು ಕೀಳಾಗಿರಬಹುದು ಎನ್ನುವುದಕ್ಕೆ ಇದೇ ಸಾಕ್ಷಿ.

ನಾವು ಬರೋಡಾಕ್ಕೆ ಹೋಗಿ ಅಲ್ಲಿಂದ ಕೇವಾಡಕ್ಕೆ ಹೋದೆವು. ಬರೋಡಾದಿಂದ 100 ಕಿ.ಮೀ. ದೂರದಲ್ಲಿರುವ ಐಕ್ಯತಾ ಪ್ರತಿಮಾ ಸ್ಥಳ ರಾಜ್​ಪಿಪ್ಪಲಿ ಬಳಿ ಇದೆ. 100 ಕಿ.ಮೀ. ದೂರವನ್ನು 2 ಗಂಟೆಗಿಂತ ಕಮ್ಮಿ ಸಮಯದಲ್ಲಿ ಟ್ಯಾಕ್ಸಿ ಕ್ರಮಿಸಿತು. ಅಷ್ಟು ಚೆಂದವಾದ ರಸ್ತೆ. ಈಗೀಗ ಬೆಂಗಳೂರು-ಮೈಸೂರು ತಲುಪಲು (160 ಕಿ.ಮಿ) ಮೂರು ಗಂಟೆಗಿಂತ ಅಧಿಕ ಸಮಯಬೇಕು. ಇದು ಕರ್ನಾಟಕ, ಗುಜರಾತಲ್ಲ ಬಿಡಿ.

ಭವ್ಯ ಪ್ರತಿಮೆ ಮುಖ್ಯದ್ವಾರದಿಂದ ಒಂದು ಕಿ.ಮೀ.ನಷ್ಟಾದರೂ ದೂರದಲ್ಲಿದೆ. ಚಿಕ್ಕವರು, ದೊಡ್ಡವರು, ಕೈಲಾಗದವರು, ಮುದುಕರು, ಮಕ್ಕಳು ಕೂಡ ಸುಲಭವಾಗಿ ಹೋಗಿ ಬರಬಹುದಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದೊಂದು ತುಂಬ ಆಪ್ಯಾಯಮಾನವಾದ ವಿಚಾರ. ಎಲ್ಲೆಡೆ ಎಲಿವೇಟರ್ಸ್, ನಡೆಯಲು, ಹತ್ತಲು ಕೂಡ. ಏರ್​ಪೋರ್ಟ್​ನಲ್ಲಿದ್ದಂತೆ ನಮಗೆ ಹತ್ತಲು ಆಗುವುದಿಲ್ಲ, ಮೇಲೆ ಹೇಗೆ ಹೋಗೋದು ಎಂಬ ಆತಂಕವಿಲ್ಲ. ಎಲ್ಲರೂ ಸುಖವಾಗಿ ನೋಡಬಹುದಾದ ರೀತಿಯಲ್ಲಿ ನಿರ್ವಣವಾಗಿದೆ. ನಿರ್ವಣದ ಬಗ್ಗೆ ಎಲ್ಲರಿಗೂ ಕುತೂಹಲ. ಜನಸಾಗರವೇ ಹರಿದುಬರುತ್ತಿದೆ. ಪ್ರತಿಮಾಸ್ಥಳ ಒಂದು ದೊಡ್ಡ ಭವನದಂತಿದೆ. ಪಟೇಲರ ರಾಜಕೀಯ ಜೀವನವನ್ನು ಪರಿಚಯಿಸುವ ಪುಟ್ಟ ಸಾಕ್ಷ್ಯಚಿತ್ರ. ಭಾರತದ ಮಹನೀಯತೆಯನ್ನು ಪ್ರತಿನಿಧಿಸುವಂತಿರುವ ಮಹಾಶಿಲ್ಪ. ತಿಂಡಿ-ತೀರ್ಥದ ಸೌಕರ್ಯ, ಸೊಗಸಾದ ಸರಳವಾದ ಉಪಾಹಾರ ಮಂದಿರ. ಇರಲು ಟೆಂಟ್ ಮನೆಗಳು. ಬಟ್ಟೆಯ ಟೆಂಟ್​ಗೋಡೆಗಳ ಮೇಲೆ ಗುಜರಾತಿ ಕಸೂತಿ, ರಂಗೋಲಿ, ಕರಕುಶಲತೆ ಎದ್ದುಕಾಣುತ್ತದೆ. ಊಟದಲ್ಲಿ ಡೋಕ್ಲವೂ ಸೇರಿದಂತೆ ಗುಜರಾತಿ ತಿಂಡಿ-ತಿನಿಸುಗಳು. ಯಾರ ಭೂಮಿಯನ್ನು ಕೊಂಡಿದ್ದಾರೋ ಆ ರೈತಾಪಿ, ಬುಡಕಟ್ಟು ಜನರಿಗೆ ಕೆಲಸ. ಕೈತುಂಬ ಸಂಬಳ. ರಾತ್ರಿ ಊಟದ ನಂತರ ಸಂಜೆ ಪ್ರವಾಸಿಗಳು ಉಳಿದುಕೊಳ್ಳುವ ಟೆಂಟ್​ಗಳ ಬಳಿಯ ನೃತ್ಯ, ಗೀತ ವಾದ್ಯಮೇಳ ಗುಜರಾತಿ ಬುಡಕಟ್ಟುಗಳ ಜನಾಂಗದವರ ಸಹಜ ಕುಣಿತ, ಬಣ್ಣದ ಬೆಡಗು ಎಲ್ಲವೂ ಅಚ್ಚುಕಟ್ಟು. ಭಾರತದಲ್ಲೂ ಇಂಥದೊಂದು ಆಕರ್ಷಣೆ ಇದೆ ಎಂದು ದೇಶ-ವಿದೇಶಗಳಿಂದ ಜನಪ್ರವಾಹ ಬರುತ್ತಿದೆ. ನಾವು ಹೋದಾಗ ಕರ್ನಾಟಕದವರೇ ಹೆಚ್ಚಿಗಿದ್ದರು. ಉತ್ತಮವಾದದ್ದನ್ನು ನಮ್ಮ ಜನ ಮೆಚ್ಚುತ್ತಾರೆ ಎಂಬುದು ಸಾಬೀತಾಯಿತು.

ಎಲ್ಲ ಕೆಲಸಕಾರ್ಯಗಳಲ್ಲೂ, ಅದರಲ್ಲೂ ಸರ್ಕಾರಿ ಯೋಜನೆಗಳಲ್ಲಿ ವಿಳಂಬನೀತಿಯೇ ಉತ್ತಮನೀತಿ ಎಂದುಕೊಂಡಿರುವ ಭಾರತದಲ್ಲೂ ಈ ಮಟ್ಟದ ದಕ್ಷತೆ ಕಂಡು ದೇಶದ ಬಗ್ಗೆ ಅಭಿಮಾನ ಮೂಡಿತು. ಎಲ್ಲ ಸರ್ಕಾರಗಳು ಕಾರ್ಯನಿಷ್ಠೆ, ದಕ್ಷತೆ ತೋರಿದರೆ ಯಾವುದು ತಾನೇ ಅಸಾಧ್ಯ? ನಮ್ಮ ರಾಜ್ಯದ ಸ್ಥಿತಿ ನೋಡಿ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ರಾಜಕೀಯ ರಂಗದಲ್ಲಿ ಮೆರೆದಾಡುತ್ತಿದ್ದಾರೆ. ರಾಜಕೀಯಕ್ಕಿಳಿಯುವಾಗ ಇರುವ ಉತ್ಸಾಹ ನಂತರ ಎಲ್ಲಿ ಹೋಗುತ್ತೋ?

ಈ ದೇಶದ ಅಗಾಧ ಪ್ರಮಾಣಕ್ಕೆ ಒಬ್ಬ ನಾಯಕನ, ಒಂದು ತಂಡದ ಅತ್ಯುತ್ತಮ ಕಾರ್ಯ ಸಾಕಾಗುವುದಿಲ್ಲ. ಮುಂದೆ ಹೋಗುವವರ ಕಾಲೆಳೆಯಲು ಎಲ್ಲ ವಿರೋಧಪಕ್ಷಗಳು ಅದೇ ತಮ್ಮ ಕಾಯಕವೆಂಬಂತೆ ತಯಾರಾಗಿ ನಿಂತಿವೆ. ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳೋಣ. ದಕ್ಷರ ಕಾಲೆಳೆದರೆ ಹಿಂದಕ್ಕೆ ಹೋಗುವುದು ದೇಶ, ನಮ್ಮದೇಶ ಎಂಬ ಕಾಮನ್​ಸೆನ್ಸ್ ಆದರೂ ಇರಬೇಕು.

(ಲೇಖಕರು ಸಂಸ್ಕೃತ ವಿದುಷಿ ಮತ್ತು ನಿಕಟಪೂರ್ವ ವಿಧಾನಪರಿಷತ್ ಸದಸ್ಯರು)