More

  ಜರೂರ್​ ಮಾತು ಅಂಕಣ: ಬದುಕನ್ನು ಆಹ್ಲಾದಗೊಳಿಸುವ ಹೊಸ ಕನಸುಗಳು

  ಬದುಕೆಂದ ಮೇಲೆ ಏಳು-ಬೀಳು ಇದ್ದದ್ದೇ. ಕೆಲವೇ ದುಃಖಗಳಲ್ಲಿ ಅಥವಾ ವ್ಯಥೆಗಳಲ್ಲಿ ಮುಳುಗಿ ಇರುವಷ್ಟು ಜೀವನ ದೀರ್ಘವಾಗಿಲ್ಲ. ನಿರಾಸೆಯ ನಿಟ್ಟುಸಿರಿನಲ್ಲಿ ಎಷ್ಟೋ ಬಾರಿ ಹೇಳುತ್ತೇವೆ-‘ಈ ಜೀವನಕ್ಕೆ ಏನೂ ಅರ್ಥವಿಲ್ಲ’ ಅಂತ. ಸರಿಯೇ. ಆದರೆ, ಆ ಜೀವನಕ್ಕೆ ಅರ್ಥ ತುಂಬಬೇಕು ಅಂತ ತಾನೇ ವಿವೇಚನೆ, ವಿವೇಕದ ಗುಣಗಳೊಂದಿಗೆ ಮನುಷ್ಯನ ಸೃಷ್ಟಿಯಾಗಿರೋದು. ಆದರೂ, ಲೈಫ್ ತುಂಬ ಬೋರ್ ಬಿಡ್ರಿ ಅಂತ ಹೇಳುವವರಿಗೆ ಕೊರತೆಯೇನಿಲ್ಲ. ಆದರೆ, ಜೀವನವನ್ನು ರೂಪಿಸಿಕೊಳ್ಳಬೇಕಾದ ಹಂತದಲ್ಲೇ ಯುವಕರು ಬೋರ್ ಸಿಂಡ್ರೋಮ್​ಗೆ ಒಳಗಾಗುತ್ತಿದ್ದಾರಲ್ಲ, ಇದು ಚಿಂತೆಪಡುವ ವಿಷಯವೇ. ಸ್ವಲ್ಪ ದೃಷ್ಟಿ ಹೊರಳಿಸಿ ನೋಡೋಣ. ಕೆಲವರು ದಿನದ ಇಪ್ಪತ್ನಾಲ್ಕು ಗಂಟೆ ಸಾಲದು ಎಂಬಂತೆ ಲವಲವಿಕೆಯಿಂದ ಕೆಲಸ ಮಾಡುತ್ತಿರುತ್ತಾರೆ. ಕನಸು ನನಸಾಗಲಿಲ್ಲ ಅಂತ ಅವರು ಕೈಚೆಲ್ಲುವುದಿಲ್ಲ, ಬದಲಾಗಿ ಹೊಸ ಕನಸು ಕಾಣುತ್ತಾರೆ, ಅದರ ಸಾಕಾರಕ್ಕೆ ಮತ್ತಷ್ಟು ಶ್ರಮ ಹಾಕುತ್ತಾರೆ. ಇದೆಷ್ಟು ಸುಂದರ ಸಮನ್ವಯ ನೋಡಿ. ಹೊಸ ಕನಸುಗಳು ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ನವೀನ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತವೆ. ಇಂಥ ತಾಜಾ ಚಿಂತನೆಗಳು ವಿನೂತನ ಸಾಹಸ, ಸಾಧನೆಗಳಿಗೆ ಕಾರಣವಾಗುತ್ತವೆ. ಅಂದರೆ, ಬೋರ್ ಸಿಂಡ್ರೋಮ್ ಹೊಡೆದೋಡಿಸಲು, ನೈರಾಶ್ಯ ಕಳೆಯಲು, ಮುಖ್ಯವಾಗಿ ಬದುಕನ್ನು ಆಹ್ಲಾದಗೊಳಿಸುವ ಸರಳಸೂತ್ರವೆಂದರೆ ಹೊಸ ಕನಸು+ತಾಜಾ ಚಿಂತನೆ= ಮಹತ್ವದ ಸಾಧನೆ! ಅದಕ್ಕೆಂದೆ, ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ‘ಸಣ್ಣ ಕನಸು ಕಾಣುವುದೇ ದೊಡ್ಡ ಅಪರಾಧ…’ ಎನ್ನುತ್ತಿದ್ದರು. ಸುಂದರವಾದ ಮತ್ತು ಮಹತ್ತರವಾದ ಕನಸು (ಧ್ಯೇಯ) ಹೊಂದಿದವರು ಸುಲಭವಾಗಿ ಸೋಲು ಒಪ್ಪಿಕೊಳ್ಳುವುದಿಲ್ಲ. ಛಲ ಬಿಡದೆ ಮುಂದೆ ಸಾಗುವುದರಿಂದ ಅಂಥವರು ಜೀವನದ ಅಚ್ಚರಿಯ ಮುಖಗಳನ್ನು ಅನಾವರಣಗೊಳಿಸುತ್ತಾರೆ, ಮನುಷ್ಯನ ಸಾಮರ್ಥ್ಯಕ್ಕೆ ಮಿತಿ ಇಲ್ಲ ಎಂಬುದನ್ನು ರುಜುವಾತು ಮಾಡುತ್ತಾರೆ.

  ಸೋಮವಾರವಷ್ಟೇ ಯುಪಿಎಸ್​ಸಿ ಫಲಿತಾಂಶ ಪ್ರಕಟವಾಗಿದೆ. ರ‍್ಯಾಂಕಿಂಗ್ ಪಡೆದುಕೊಂಡವರ ಹಿನ್ನೆಲೆ ನೋಡಿದರೆ ಒಬ್ಬೊಬ್ಬರದ್ದು ಒಂದೊಂದು ಕಥೆ. ಕಡುಬಡತನದ ಬವಣೆ, ಸಮಾಜ ಮಾಡಿದ ಅವಮಾನ, ಕೌಟುಂಬಿಕ ಕಿರುಕುಳ, ದೈಹಿಕ ಅಂಗವೈಕಲ್ಯ, ಯಾವುದೇ ಸೌಲಭ್ಯಗಳು ಇಲ್ಲದಿರುವುದು ಹೀಗೆ ಹತ್ತುಹಲವು ನೈರಾಶ್ಯಗಳನ್ನು ಮೀರಿ, ಗೆಲುವಿನ ನಗೆ ಬೀರಿದ್ದಾರೆ. ನೌಕರಿ ಮಾಡುತ್ತಲೇ ಓದಿನಲ್ಲಿ ತೊಡಗಿ, ರ‍್ಯಾಂಕಿಂಗ್ ಪಟ್ಟ ಏರಿದ್ದಾರೆ. ನಮ್ಮ ಕರ್ನಾಟಕದ ಇಪ್ಪತ್ತೈದು ಜನರು ಉತ್ತಮ ರ‍್ಯಾಂಕಿಂಗ್ ಪಡೆದುಕೊಂಡಿದ್ದಾರೆ. ಸಾಧನೆಯಿಂದ ವಿಮುಖರಾಗಲು ಇವರ ಬಳಿಯೂ ಸಾಕಷ್ಟು ಸಬೂಬುಗಳಿದ್ದವು, ಏನೋ ನೆಪ ಹೇಳಿ ಇತರರಂತೆ ದೈನಂದಿನ ಜಂಜಾಟಗಳಲ್ಲೇ ಮುಳುಗಿದ್ದರೆ ಇಂಥದ್ದೊಂದು ಸಾಧನೆ ಸಾಧ್ಯವಿತ್ತೆ? ಮನೆಯಲ್ಲಿ ಅಪ್ಪ-ಅಮ್ಮ ಪಡುವ ಕಷ್ಟ ನೋಡದೆ ಯುಪಿಎಸ್​ಸಿ ಪರೀಕ್ಷೆಗೆ ಸಜ್ಜಾದವರು, ಏನಾದರೂ ಸಾಧನೆ ಮಾಡಲೇಬೇಕು ಎಂಬ ಹಂಬಲದಿಂದ ಓದಿದವರು- ಹೀಗೆ ಯಾರದ್ದೇ ಪಯಣ ಅವಲೋಕಿಸಿದರೂ ಪ್ರೇರಣೆಯ ಮಹಾಶಕ್ತಿಯೊಂದು ಗೋಚರಿಸುತ್ತದೆ. ಆದರೆ, ಇವರಲ್ಲಿ ಇಂಥ ಕನಸೇ ಮೂಡಿರದಿದ್ದರೆ…? ಬರೀ ಯುಪಿಎಸ್​ಸಿಗಷ್ಟೇ ಇದು ಅನ್ವಯವಲ್ಲ. ನವೋದ್ಯಮ ಆರಂಭಿಸಲು, ಉತ್ತಮ ಕ್ರೀಡಾಪಟು, ಸಂಗೀತಗಾರ, ನಟ, ಲೇಖಕ, ಡಾನ್ಸರ್, ವೈದ್ಯ, ಇಂಜಿನಿಯರ್, ಶಿಕ್ಷಕ, ರೈತ… ಏನೇ ಆಗಬೇಕಾದರೂ ಎದೆಯ ಅಂಗಳದಲ್ಲಿ ಮೊದಲು ಕನಸಿನ ಬೀಜ ಬಿತ್ತಬೇಕು. ಅದು ಸೃಷ್ಟಿಸುವ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಬೇಕು. ‘ಯುವಸಮೂಹ ಮುಖ್ಯವಾಗಿ ಎರಡು ಕೊರತೆಯಿಂದ ಬಳಲುತ್ತಿದೆ- ಒಂದು, ಮಹತ್ತರ ಕನಸುಗಳು, ಮತ್ತೊಂದು, ಸಂವೇದನೆ ನಶಿಸುತ್ತಿರುವುದು’ ಎನ್ನುತ್ತಾರೆ ಸಾಮಾಜಿಕ ವಿಜ್ಞಾನಿಗಳು. ದುರದೃಷ್ಟವಶಾತ್, ನಮ್ಮ ಶಿಕ್ಷಣ ವ್ಯವಸ್ಥೆ ದೊಡ್ಡ ಕನಸುಗಳನ್ನು ಬಿತ್ತುತ್ತಿಲ್ಲ. ಮೊದಲು ಅಂಕಗಳ ಸ್ಪರ್ಧೆ, ಆಮೇಲೆ ಪ್ಯಾಕೇಜಿನ ಸ್ಪರ್ಧೆ. ನಮ್ಮ ಮನೆಗಳಲ್ಲೂ ಮುಂಚೆ ದೊಡ್ಡ ಕನಸುಗಳನ್ನು ಬಿತ್ತಲಾಗುತ್ತಿತ್ತು. ಇಂದಿನ ಸೋಕಾಲ್ಡ್ ‘ಆಧುನಿಕ’ ಜಮಾನಾದಲ್ಲಿ ಮನೆಯಲ್ಲಿನ ಕನಸುಗಳೂ ಸಂಕುಚಿತಗೊಂಡಿವೆ. ಹಾಗಂತ, ಸಮಸ್ಯೆಗಳ ಬಗ್ಗೆಯೇ ವಿಶ್ಲೇಷಣೆ ಮಾಡುತ್ತ ಕುಳಿತರೆ ಪರಿಹಾರದ ಹಾದಿಯಲ್ಲಿ ಸಾಗುವುದು ಹೇಗೆ? ಪರಿಹಾರ ಕಂಡುಕೊಳ್ಳುವ ವಿಶಿಷ್ಟ ಪ್ರಯತ್ನಗಳು ನಮ್ಮ ಸುತ್ತಮುತ್ತ ನಡೆಯುತ್ತಿವೆ. ಅವುಗಳನ್ನು ಗಮನಿಸಬೇಕಿದೆ, ಅನುಷ್ಠಾನಕ್ಕೆ ತರಬೇಕಿದೆ.

  ದಿನಂಪ್ರತಿ ನಾವು ಹಲವು ಬಗೆಯ ಸ್ಪರ್ಧೆಗಳನ್ನು ನೋಡುತ್ತೇವೆ. ಆದರೆ, ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ (ಮಹಾನ್ ಸಂತ ಶ್ರೀ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಸ್ಥಳ ವರದಹಳ್ಳಿಯಿಂದ ಪ್ರೇರಣೆ ಪಡೆದ ಹೆಸರು) ಪ್ರತಿವರ್ಷವೂ ವಿದ್ಯಾರ್ಥಿಗಳಿಗಾಗಿ ‘ಕನಸುಗಳ ಸ್ಪರ್ಧೆ’ ಏರ್ಪಡಿಸುತ್ತಿದೆ. ಇಪ್ಪತೆôದು ವರ್ಷದೊಳಗಿನ ವಿದ್ಯಾರ್ಥಿ ಗಳಿಗೆ ಒಂದೇ ಪ್ರಶ್ನೆಪತ್ರಿಕೆ- ‘ನಿಮ್ಮ ಕನಸು ಏನು?’ ಮಕ್ಕಳು ಮನಸು ಬಿಚ್ಚಿ ಅವರ ಕನಸುಗಳನ್ನು ವಿವರಿಸಬೇಕು (ಈ ಪರೀಕ್ಷೆ ಪ್ರತಿ ವರ್ಷ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿದ್ದು, ರಾಜ್ಯದ ಇತರೆಡೆಗಳಲ್ಲಿ ವಿಸ್ತರಿಸುವ ಚಿಂತನೆ ಇದೆ). ವಿಶೇಷವೆಂದರೆ, ಅಲ್ಲಿ ಬರೀ ಕನಸುಗಳು ಇರುವುದಿಲ್ಲ. ಸೃಜನಾತ್ಮಕ ಚಿಂತನೆ, ವಿಶಿಷ್ಟ ಬಗೆಯ ಪರಿಹಾರ, ಪ್ರಬಲ ಇಚ್ಛಾಶಕ್ತಿ, ಒಂದಿಷ್ಟು ಮುಗ್ಧತೆ ಎಲ್ಲವುಗಳ ಸುಂದರ ಮಿಳಿತ. ಇವುಗಳಲ್ಲಿ ವಿಶಿಷ್ಟ, ಅಸಾಧಾರಣ ಕನಸುಗಳನ್ನು ಆಯ್ಕೆ ಮಾಡುವುದಲ್ಲದೆ, ಅವುಗಳನ್ನು ಸಾಕಾರಗೊಳಿಸಲು ಬೆಂಬಲವಾಗಿ ನಿಂತಿದ್ದಾರೆ ವರದಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ. ಅಂದರೆ, ಆ ಕನಸುಗಳ ಮುಖೇನ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು, ಅವರಿಗೆ ವಿದ್ಯಾರ್ಥಿವೇತನ ಒದಗಿಸಲಾಗುತ್ತಿದೆ. ಪ್ರಸಕ್ತ ಹೈಸ್ಕೂಲ್ ಹಂತದಿಂದ ಪದವಿಯವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಈವರೆಗೆ 1500ಕ್ಕೂ ಅಧಿಕ ಮಕ್ಕಳಿಗೆ ಒಂದೂವರೆ ಕೋಟಿಗೂ ಹೆಚ್ಚು ವಿದ್ಯಾರ್ಥಿವೇತನ ಪಾವತಿಸಲಾಗಿದೆ. ಬರೀ ಶುಲ್ಕ ಭರಿಸುವುದಲ್ಲ, ನಾಳೆಯ ಅನಿವಾರ್ಯತೆಗಳಿಗೆ, ಜೀವನದ ಅನಿರೀಕ್ಷಿತ ತಿರುವುಗಳಿಗೆ ಯುವಮನಸುಗಳು ಮೂಲ ಕನಸನ್ನು ಕಳೆದುಕೊಳ್ಳಬಾರದಲ್ಲ…. ಅದಕ್ಕಾಗಿ ಬೋಧನೆ, ಮಾರ್ಗದರ್ಶನ ಮತ್ತು ಪ್ರೇರಣೆ ಒದಗಿಸಲು ಉಚಿತ ತರಬೇತಿಯನ್ನೂ ನೀಡಲಾಗುತ್ತಿದೆ. 85 ಸಾವಿರಕ್ಕೂ ಅಧಿಕ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ (ಹೆಚ್ಚಿನ ಮಾಹಿತಿಗೆ: 94484-15780). ಜ್ಞಾನ ಸಂಸತ್ತನ್ನು ಕಾಲಕಾಲಕ್ಕೆ ಆಯೋಜಿಸಿ ಈ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಮಕ್ಕಳಿಗೆ ಕನಸಿನ ಬಗ್ಗೆ ಕೇಳಿರುವುದರಿಂದ ಏನೆಲ್ಲ ಪ್ರಯೋಜನಗಳಾಗಿವೆ ಎಂಬ ಪ್ರಶ್ನೆಗೆ ಮಲ್ಲಿಕಾರ್ಜುನ ರಡ್ಡೇರ ಆತ್ಮವಿಶ್ವಾಸದಿಂದ ಹೇಳಿದ್ದು ಹೀಗೆ-‘ಮಕ್ಕಳು ಒಳ್ಳೆಯ, ಸಕಾರಾತ್ಮಕ ಸಂಗತಿಗಳ ಬಗ್ಗೆಯೇ ಯೋಚಿಸಲು ಆರಂಭಿಸಿದ್ದಾರೆ. ಇದರಿಂದ ಸುಲಭವಾಗಿ ಅವರನ್ನು ನಕಾರಾತ್ಮಕ ವಿಚಾರಗಳಿಂದ ದೂರ ತರಲು ಸಾಧ್ಯವಾಗಿದೆ. ಸ್ವಾರ್ಥವನ್ನು ಮರೆತು ಎಲ್ಲರ ಬಗ್ಗೆ, ಸಮಾಜದ ಅಭ್ಯುದಯದ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ. ಸಮಸ್ಯೆಗಳ ಬಗ್ಗೆ ರ್ಚಚಿಸುವುದಕ್ಕಿಂತ ಪರಿಹಾರವಾಗಿ ತಾನೇನು ಮಾಡಬಹುದು ಎಂಬ ಉತ್ತರ ಹುಡುಕುತ್ತಿದ್ದಾರೆ. ಒಟ್ಟಾರೆ, ಅವರ ಕನಸೇ ಅವರ ಗುರಿ, ಸಾಗಬೇಕಾದ ಮಾರ್ಗವನ್ನು ಸ್ಪಷ್ಟವಾಗಿಸುತ್ತಿದೆ’.

  ಶೈಕ್ಷಣಿಕ ಪಾಠಗಳ ವಿಷಯ ಬಂದಾಗ ತುಂಬ ವಿದ್ಯಾರ್ಥಿಗಳ ದೂರು-‘ನಮಗೆ ಸುಲಭದಲ್ಲಿ ಪಾಠವೇ ಅರ್ಥವಾಗುವುದಿಲ್ಲ’ ಎಂದು. ಅದರಲ್ಲೂ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿ ಕಾಡುವುದುಂಟು. ಬೆಂಗಳೂರಿನ ಯುವ ಇಂಜಿನಿಯರ್ ಅಭಿರಾಮ್ ವಿ ಮೂರ್ತಿ ಮತ್ತು ಅವರ ತಂಡ, ಕ್ಯಾಡ್​ಕಾನ್ (Cadcon) ಎಂಬ ಸಂಸ್ಥೆ ಕಟ್ಟಿ, ಹಲವು ಶೈಕ್ಷಣಿಕ ಸಮಸ್ಯೆಗಳಿಗೆ ಸೃಜನಾತ್ಮಕ ಪರಿಹಾರ ಒದಗಿಸಿದ್ದಾರೆ. ಎಂಟು, ಒಂಬತ್ತು, ಹತ್ತನೇ ತರಗತಿ ಮತ್ತು ಪ್ರಥಮ, ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿಗಳಿಗೆ ವಿಡಿಯೋ ಪಾಠಗಳನ್ನು ಆಪ್ ಮುಖಾಂತರ ಒದಗಿಸುತ್ತಿರುವ ಕ್ಯಾಡ್​ಕಾನ್, ಗ್ರಾಮೀಣ ಪ್ರದೇಶದ ಮಕ್ಕಳನ್ನು ಗಮನದಲ್ಲಿ ಇರಿಸಿಕೊಂಡು, ಇದನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಮಕ್ಕಳು ಯಾವುದೇ ಸಮಯದಲ್ಲಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ತಜ್ಞರಿಂದ, ಸಂಪನ್ಮೂಲ ವ್ಯಕ್ತಿಗಳಿಂದ ಪಾಠಗಳನ್ನು ಹೇಳಿಸಲಾಗಿದೆ. ಈ ಪಾಠಗಳು ಸರಳ ಕನ್ನಡದಲ್ಲಿ ಇರುವುದರಿಂದ ಮಕ್ಕಳ ಕಲಿಕೆ ಚುರುಕಾಗಿಸಲು ನೆರವಾಗಿವೆ. ಆಪ್​ನಲ್ಲಿ ಪಾಠಗಳಷ್ಟೇ ಅಲ್ಲ, ನೋಟ್ಸ್, ಕಿರುಪರೀಕ್ಷೆ, ಮೌಲ್ಯಮಾಪನ ವ್ಯವಸ್ಥೆ, ವಿದ್ಯಾರ್ಥಿ ಹೆಚ್ಚು ಗಮನ ಕೇಂದ್ರೀಕರಿಸಬೇಕಾದ ವಿಷಯ… ಇದೆಲ್ಲದರ ಬಗ್ಗೆ ಸಮಗ್ರ ಮಾಹಿತಿ ಇದೆ. ಉಚಿತವಾಗಿ ನೀಡಿದರೆ ಬೆಲೆ ಇರುವುದಿಲ್ಲ ಎಂಬ ಕಾರಣಕ್ಕೆ. ಸಾಂಕೇತಿಕ ಶುಲ್ಕದಲ್ಲಿ ಈ ವಿಡಿಯೋ ಪಾಠಗಳನ್ನು ಒದಗಿಸಲಾಗುತ್ತಿದೆ. ಈ ಆಪ್ ಅನ್ನು 74 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ. ಕ್ಯಾಡ್​ಕಾನ್ ಶಿಕ್ಷಣ ಪಡೆದ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ಬಾರಿ ಸಿಇಟಿ ತರಬೇತಿಯನ್ನೂ ಕನ್ನಡದಲ್ಲಿ ನೀಡಲಾಗುತ್ತಿದ್ದು, ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ. ಯುವಾ ಬ್ರಿಗೇಡ್ ಸಹಯೋಗ, ಇನ್ಪೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಸರ್ಕಾರಿ ಶಾಲೆಯ ಒಂದೂವರೆ ಸಾವಿರ ಮಕ್ಕಳಿಗೆ ಉಚಿತವಾಗಿ ಟ್ಯಾಬ್ ವಿತರಿಸಲಾಗಿದೆ. ಸ್ಟಾರ್ಟಪ್ ಇಂಡಿಯಾ ಕೂಡ ಕ್ಯಾಡ್​ಕಾನ್ ಪ್ರಯತ್ನವನ್ನು ಮೆಚ್ಚಿಕೊಂಡಿದೆ. ‘ಶಿಕ್ಷಣದ ಪ್ರಕ್ರಿಯೆ ಸರಳಗೊಳಿಸುವುದು ಮತ್ತು ಕಲಿಕೆಯನ್ನು ವಿದ್ಯಾರ್ಥಿಗಳ ಮನೆಗಳವರೆಗೂ ತಲುಪಿಸುವುದು ನಮ್ಮ ಉದ್ದೇಶ. ಗ್ರಾಮೀಣ ಭಾಗದ ಮತ್ತು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಪಾಠವನ್ನು ತಿಳಿಸಿಕೊಟ್ಟರೆ ವಿಷಯವನ್ನು ಚೆನ್ನಾಗಿ ಗ್ರಹಿಸುತ್ತಾರೆ, ಅಲ್ಲದೆ, ಮುಂದಿನ ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಇದಕ್ಕಾಗಿ ವಿನೂತನ ತಂತ್ರಜ್ಞಾನ, ಸಾಫ್ಟ್​ವೇರ್, ತಜ್ಞರ ತಂಡ ಎಲ್ಲವನ್ನೂ ಹೊಂದಿದ್ದು, ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ತಲುಪುವುದೇ ನಮ್ಮ ಗುರಿ’ ಎನ್ನುವ ಅಭಿರಾಮ ಮೂರ್ತಿಯವರು ತಾಜಾ ಚಿಂತನೆಯ ಬಲದಿಂದ ಮಕ್ಕಳಿಗೆ ಶಿಕ್ಷಣದ ಬೆಳಕನ್ನು ವಿಸ್ತರಿಸುತ್ತಿದ್ದಾರೆ. (ಹೆಚ್ಚಿನ ಮಾಹಿತಿಗಾಗಿ: 81237-87834) ಕನಸುಗಳನ್ನು ಪೋಷಿಸೋಣ, ತಾಜಾ ಚಿಂತನೆಗಳನ್ನು ಉತ್ತೇಜಿಸೋಣ. ಆಗಲೇ, ಸಾಧನೆಯ ತೋರಣ ಸಂಭ್ರಮ ಹೆಚ್ಚಿಸಬಲ್ಲದು. ಅಲ್ಲವೇ?
  (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts