More

    ಜೀವನದಲ್ಲಿ ಏನು ಬೇಕು ಎಂದು ನಿರ್ಧರಿಸುವ ಸಮಯ…

    ಈ ಭೂಮಿ ನಾಲ್ಕು ದಿನದ ಊರು

    ತಾಳಿ ನಿಂತು ಮುಂದೆ ಸಾಗು… ಎನ್ನುತ್ತದೆ ಕವಿವಾಣಿ. ಆದರೆ, ಈ ನಾಲ್ಕು ದಿನದ ಊರಿನಲ್ಲಿ ಹೇಗೆ ಬದುಕಬೇಕು ಎಂಬುದನ್ನೇ ಜೀವನದಲ್ಲಿ ಏನು ಬೇಕು ಎಂದು ನಿರ್ಧರಿಸುವ ಸಮಯ...ಅರಿಯದೆ ತುಂಬ ಜನ ಪರಿತಪಿಸುತ್ತಾರೆ. ಕಾರಣ, ಬಂದ ಉದ್ದೇಶವನ್ನೇ ಮರೆಯುವುದರಿಂದ! ಈ ಭೂಮಿಗೆ ನಾವು ಪ್ರಯಾಣಿಕರಷ್ಟೇ. ಈ ಪ್ರಯಾಣಕ್ಕೆ ನಿರ್ದಿಷ್ಟ ಉದ್ದೇಶವಿರುತ್ತದೆ, ಮಾಡಿ ಹೋಗಬೇಕಾದ ಒಂದಿಷ್ಟು ಕೆಲಸಗಳೂ ಇರುತ್ತವೆ. ಅದೆಲ್ಲವನ್ನೂ ಮರೆತು ಭ್ರಮೆಗಳ ಬೆನ್ನತ್ತಿ ಹೋಗುವುದರಲ್ಲೇ, ಜೀವನದ ಪಯಣ ಕೊನೆಯ ಘಟ್ಟಕ್ಕೆ ಬಂದು ನಿಂತಿರುತ್ತದೆ. ಜೀವನವನ್ನು ಪ್ರತಿನಿತ್ಯ ಅವಲೋಕಿಸಬೇಕು ಎಂಬುದು ನಿಜ. ಆದರೆ, ಯುದ್ಧಗಳು ಸಂಭವಿಸಿದಾಗ, ಪ್ರಾಕೃತಿಕ ಅವಘಡಗಳು ಘಟಿಸಿದಾಗ, ‘ನಿಜಕ್ಕೂ ಜೀವನಕ್ಕೆ ಬೇಕಾಗಿರುವುದು ಏನು…?’ ಎಂದು ಪ್ರಶ್ನಿಸಿಕೊಳ್ಳುವ ಮನಸ್ಸಾಗುತ್ತದೆ. ಈಗ ಇಂಥ ಸ್ಥಿತಿಯನ್ನು ಕರೊನಾ ತಂದಿಟ್ಟಿದೆ. ಕರೊನಾ ತಂದೊಡ್ಡಿರುವ ಸ್ಥಿತ್ಯಂತರ ಅಂತಿಂಥದ್ದಲ್ಲ. ಗ್ರಾಮಗಳಿಗೆ ಮರುವಲಸೆ ಆರಂಭವಾಗಿದೆ, ‘ನಮ್ಮವರು ಬೇಕು’ ಎಂಬ ಸಂಬಂಧಗಳ ತುಡಿತ ಜೀವಂತವಾಗಿದೆ. ಇರುವುದರಲ್ಲೇ ನೆಮ್ಮದಿಯಾಗಿ ಬದುಕೋಣ ಎಂಬ ಭಾವ ಜಾಗೃತವಾಗುತ್ತಿದೆ. ಮಾನಸಿಕ ಆರೋಗ್ಯವೂ ಎಷ್ಟು ಮುಖ್ಯ ಎಂಬುದರ ಅರಿವಾಗುತ್ತಿದೆ. ಒಟ್ಟಾರೆ, ಬಯಕೆಗಳ ಸಂತೆಯಲ್ಲೇ ಓಡಾಡಿಕೊಂಡಿದ್ದ ಮನಸ್ಸು ಅಂತಮುಖಿಯಾಗುತ್ತಿದೆ! ಈ ಆಂತರ್ಯದ ಪಯಣದಿಂದ ಹೊಸದೊಂದು ಲೋಕ ತೆರೆದುಕೊಳ್ಳಲಿದೆ!

    ಹಾಗೆ ನೋಡಿದರೆ ಭಾರತೀಯ ಸಂಸ್ಕೃತಿಯಲ್ಲಿ, ಇಲ್ಲಿನ ಜೀವನಧರ್ಮದಲ್ಲಿ ಯಾವುದೂ ಜಟಿಲವಲ್ಲ. ಮನುಷ್ಯ ಜನ್ಮ ಏತಕ್ಕಾಗಿ ಆಗಿದೆ, ಕರ್ತವ್ಯಗಳೇನು? ಸಾಗಬೇಕಾದ ದಾರಿ ಯಾವುದು? ಮರಳಬೇಕಾದ ಗಮ್ಯ ಯಾವುದು? ಇದಕ್ಕೆಲ್ಲ ದಾರ್ಶನಿಕರು, ಆಧ್ಯಾತ್ಮಿಕ ಮಹಾಪುರುಷರು, ಸಂತ-ಮಹಂತರು ಸ್ಪಷ್ಟ ಉತ್ತರವನ್ನೇ ನೀಡಿದ್ದಾರೆ. ಆದರೆ, ಯಾವಾಗ ಇತರರಂತೆ ನಾವು ಬದುಕಬೇಕು ಎಂಬ ಅನುಕರಣೆ ಶುರುವಾಯಿತೋ ಆಗ ಈ ಮೌಲ್ಯಗಳೆಲ್ಲ ಒಂದೊಂದಾಗಿ ಮೂಲೆಗೆ ಸೇರಿದವು. ಹೊಸ ವ್ಯಾಖ್ಯೆಗಳು ಹುಟ್ಟಿಕೊಂಡವು. ‘ಬದುಕಿಗೆ ಏನು ಬೇಕು?’ ಎಂಬ ಅತ್ಯಂತ ಗಹನ ಪ್ರಶ್ನೆಗೆ ಹುಟ್ಟಿಕೊಂಡ ಉತ್ತರವೇ ದಿಕ್ಕು ತಪ್ಪಿಸಿತು. ಬಹುತೇಕರು, ‘ಈ ಲೈಫ್​ದಾಗ ಮಸ್ತ್ ಇರಬೇಕೆಂದ್ರ ಭರಪೂರ ರೊಕ್ಕ (ದುಡ್ಡು), ಅಧಿಕಾರ, ಸ್ವಲ್ಪ ವರ್ಚಸ್ಸು ಇರಬೇಕ್ ನೋಡ್ರಿ. ಇಷ್ಟ ಇತ್ತಂದ್ರ ನಾವು ಹೇಳಿದಾಂಗ ಜೀವನ ನಡೀತದ ನೋಡ್ರಿ’ ಎನ್ನುತ್ತಾರೆ. ಪ್ರಾಯೋಗಿಕ ನೆಲೆಯಲ್ಲಷ್ಟೇ ಇದು ಸಮರ್ಥನಿಯ ಎನ್ನಬಹುದೇನೋ.

    ‘ಕೌನ್ ಬನೇಗಾ ಕರೋಡಪತಿ’ ಕಾರ್ಯಕ್ರಮ ಯಾರಿಗೆ ಗೊತ್ತಿಲ್ಲ? ಅಮಿತಾಭ್ ಕಂಚಿನ ಕಂಠದಲ್ಲಿ ನಿರೂಪಣೆ ಮಾಡುವಾಗ, ಅವರ ಮುಂದೆ ಇರುವ ಹಾಟ್ ಸೀಟಿನ ಮೇಲೆ ಕುಳಿತುಕೊಂಡು ಒಂದೊಂದೇ ಪ್ರಶ್ನೆಗಳಿಗೆ ಉತ್ತರಿಸುತ್ತ ಸಾವಿರದಿಂದ ಶುರುವಾಗಿ, ಕೋಟಿವರೆಗೆ ಗೆಲ್ಲಬೇಕು ಎಂಬ ಕನಸು ಕೋಟ್ಯಂತರ ಮನಸ್ಸುಗಳದ್ದು. ಅದೇನು ತಪ್ಪಲ್ಲ ಬಿಡಿ. ಏಕೆಂದರೆ, ಜೀವನದ ಬಂಡಿ ಮುಂದೆ ಸಾಗಬೇಕಾದರೆ ಹಣಕಾಸು ಎಂಬ ಇಂಧನ ಬೇಕೇಬೇಕು! ಇದೇ ಶೋನಲ್ಲಿ ಬಿಹಾರದ ಸುಶೀಲ್​ಕುಮಾರ್ ಎಂಬ ವ್ಯಕ್ತಿ ಬರೋಬ್ಬರಿ ಐದು ಕೋಟಿ ರೂ. ಗೆದ್ದುಕೊಂಡರು. ಅಬ್ಬಾ, ಲೈಫೇ ಸೆಟ್ಲಾಗಿ ಬಿಡ್ತಲ್ಲ ಅಂತ ನೀವು ಯೋಚಿಸುತ್ತಿದ್ದರೆ ಕ್ಷಣಕಾಲ ಯೋಚನಾಲಹರಿಗೆ ಬ್ರೇಕ್ ಹಾಕಿ. ಕೋಟಿಯೇನೋ ಬಂತು. ನೆಮ್ಮದಿ, ಕೌಟುಂಬಿಕ ಸೌಖ್ಯ, ಉದ್ಯಮ ಎಲ್ಲವೂ ಬರಿದಾಯಿತು. ಕೋಟಿ ಬರುವ ಮುಂಚೆಗಿಂತ ಇದ್ದ ಅಲ್ಪ-ಸ್ವಲ್ಪ ಸಂತೋಷವೂ ಮರೀಚಿಕೆಯಾಯಿತು. ‘ಅಯ್ಯೋ, ಯಾಕಾದ್ರೂ ಕೋಟಿ ಬಂತಪ್ಪ, ಮೊದಲಿದ್ದ ನೆಮ್ಮದಿ ಸಿಕ್ಕರೆ ಸಾಕು’ ಅಂತ ಸುಶೀಲ್​ಕುಮಾರ್ ಕೊರಗುತ್ತಿದ್ದಾರಾದರೂ, ಕಾಲಚಕ್ರ ವೇಗವಾಗಿ ತಿರುಗಿಬಿಟ್ಟಿದೆ! ದುಡ್ಡು ಬರುತ್ತಿದ್ದಂತೆ ಕಿರಿಕಿರಿ, ಜಗಳ, ಮಾನಸಿಕ ಕ್ಲೇಶ, ಹಿತಾಸಕ್ತಿಗಳ ತಾಕಲಾಟ, ಸ್ವಾರ್ಥದ ಪರಾಕಾಷ್ಠೆ ಶುರುವಾಯಿತು ಎನ್ನುವ ಅವರು ಈಗ ನಿಜಕ್ಕೂ ಜೀವನಕ್ಕೆ ಬೇಕಾದ್ದು ಏನು ಅಂತ ಶೋಧಿಸುತ್ತಿದ್ದಾರೆ. ಇದು ಒಂದು ಮನೆ ಅಥವಾ ಒಂದು ಊರಿನ ಕಥೆಯಲ್ಲ. ‘ದುಡ್ಡೊಂದು ಇದ್ದುಬಿಟ್ಟರೆ ಚಿಂತೆಯಿಲ್ಲ’ ಎಂದು ನಂಬಿಕೊಂಡು ಆರೋಗ್ಯವನ್ನೂ ಕಳೆದುಕೊಂಡು ದುಡ್ಡಿನ ಹಿಂದೆ ಧಾವಿಸುತ್ತಿರುವ ಎಲ್ಲರ ಕಥೆ.

    ಲಾಕ್​ಡೌನ್ ಹಾಗೂ ಅದು ಸೃಷ್ಟಿ ಮಾಡಿದ ಆರ್ಥಿಕ ಸಂಕಷ್ಟದಿಂದ ಲಕ್ಷಾಂತರ ಜನರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಹೀಗೆ ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬ ಮನೆಯಲ್ಲಿನ ಕಷ್ಟಗಳನ್ನು ನೋಡಲಾಗದೆ, ಕುಟುಂಬ ನಡೆಸಲೇಬೇಕು ಎಂಬ ಅನಿವಾರ್ಯತೆಯಿಂದ ಸರಗಳ್ಳತನಕ್ಕೆ ಇಳಿದ. ಆದರೆ, ಅವನಲ್ಲಿ ಆಂತರ್ಯದ ದನಿ ಎಚ್ಚರವಾಗಿ ಬಿಟ್ಟಿತು. ‘ನೀನು ಮಾಡುತ್ತಿರುವುದು ತಪು್ಪ’ ಎಂದು ಕ್ಷಣ-ಕ್ಷಣಕ್ಕೂ ಎಚ್ಚರಿಸುತ್ತ ರಾತ್ರಿಯ ನಿದ್ದೆಯನ್ನು ಕಸಿದುಕೊಂಡಿತು. ಆತ್ಮಸಾಕ್ಷಿಯನ್ನು ಕೊಂದು ಬಾಳುವುದಕ್ಕಿಂತ ಕಷ್ಟಗಳನ್ನೇ ಸಹಿಸುವುದು ಒಳಿತು ಎಂದು ನಿಶ್ಚಯಿಸಿದ ಆ ವ್ಯಕ್ತಿ ಧೈರ್ಯ ಮಾಡಿ ತಾನು ಎಗರಿಸಿದ್ದ ಆಭರಣ, ಒಡವೆಗಳನ್ನೆಲ್ಲ ಸುದ್ದಿವಾಹಿನಿಯೊಂದರ ಕಚೇರಿಗೆ ಕ್ಷಮಾಪಣೆ ಪತ್ರದ ಸಮೇತ ಹಿಂದಿರುಗಿಸಿದ್ದಾನೆ!

    ಕಳೆದ ವರ್ಷವೂ ಕರ್ನಾಟಕ ನೆರೆಯಿಂದ ತತ್ತರಿಸಿತು. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳು ಭಾರಿ ಹಾನಿ ಅನುಭವಿಸಿ, ನಲುಗಿದವು. ಇಂಥ ಸಂಕಷ್ಟದ ಹೊತ್ತಲ್ಲಿ ನೆರವಿಗೆ ಧಾವಿಸಿದ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ‘ಯುವಾ ಬ್ರಿಗೇಡ್’ ಸಂಘಟನೆ ತೀರಾ ಕಡುಕಷ್ಟದಲ್ಲಿದ್ದ ಕುಟುಂಬಗಳನ್ನು ಆರು ತಿಂಗಳ ಅವಧಿಗೆ ದತ್ತು ಪಡೆದುಕೊಂಡಿತು. ದಾನಿಗಳ ಮೂಲಕ ಅಂಥ ಕುಟುಂಬಕ್ಕೆ ತಿಂಗಳಿಗೆ -ಠಿ; 5 ಸಾವಿರ ಒದಗಿಸುವ ಯೋಜನೆ ಅದು. ಮಹಾಮಳೆಗೆ ಎಲ್ಲವನ್ನೂ ಕಳೆದುಕೊಂಡವರು, ಸಾವರಿಸಿಕೊಂಡು ಎದ್ದುನಿಲ್ಲುವಂತಾಗಲಿ ಎಂಬ ಆಶಯ. ಶಿವಮೊಗ್ಗದಲ್ಲಿ ಪೊರಕೆ ಮಾರಾಟ ಮಾಡುತ್ತಿದ್ದ ಕುಟುಂಬಕ್ಕೆ ಹೀಗೆ ನೆರವು ಒದಗಿಸುತ್ತಿರುವಾಗ, ಮೂರು ತಿಂಗಳು ಆಗುವಷ್ಟರಲ್ಲೇ ಆ ಕುಟುಂಬ-‘ನಮಗೆ ಈಗ ನೆರವು ಬೇಡ, ಮತ್ತೆ ಪೊರಕೆ ಮಾರಾಟ ಶುರು ಮಾಡಲು ಸಿದ್ಧರಾಗಿದ್ದೇವೆ. ತೀರಾ ಅಗತ್ಯ ಇರುವವರಿಗೆ ಆ ಹಣ ಒದಗಿಸಿ’ ಎಂದಾಗ ಕಾರ್ಯಕರ್ತರಿಗೆಲ್ಲ ಆಶ್ಚರ್ಯ.ನೆರೆಯಲ್ಲಿ ಮನೆಯನ್ನೂ ಕಳೆದುಕೊಂಡ ಅಜ್ಜಿಯೊಬ್ಬರು ಕಾಳಜಿ ಕೇಂದ್ರ ಸೇರಿಕೊಂಡಿದ್ದರು. ಅವರಿಗೆ ಈ ಸಂಘಟನೆಯವರು ಹೊದಿಕೆ ಮತ್ತು ಇತರ ಜೀವನಾವಶ್ಯಕ ಸಾಮಗ್ರಿ ನೀಡಬೇಕಾದರೆ, ಆ ಅಜ್ಜಿ-‘ನನಗೆ ಒಂದು ಬೆಡ್​ಶೀಟ್ ಇದೆ, ಸಾಕು. ಮುಂದೆ ಯಾರಿಗಾದ್ರೂ ಬೇಕಾಗಬಹುದು ಅವರಿಗೆ ಕೊಡಿ’ ಎಂದು ಹೇಳಿದಾಗ ತೃಪ್ತಿಯ ಶಕ್ತಿ ಎಷ್ಟು ವಿಶಿಷ್ಟ ಎಂಬುದರ ಅನಾವರಣವಾಗಿತ್ತು.

    ಮೂರೂ ಘಟನೆಗಳನ್ನು ಮತ್ತೆ ಅವಲೋಕಿಸಿ-ಮೊದಲನೆಯದು ‘ಬೇಕು’ಗಳನ್ನು ಬೆನ್ನು ಹತ್ತಿ, ಅದೇ ಸರ್ವಸ್ವ ಎಂದು ಭಾವಿಸಿ ಧಾವಿಸಿದ ಫಲ. ಎರಡನೆಯದು ಆತ್ಮಸಾಕ್ಷಿಯ ಶಕ್ತಿ. ಮೂರನೆಯದ್ದು-ತೃಪ್ತಿಯಿಂದಲೇ ಬದುಕು ಸುಂದರ ಎಂಬ ಸಂದೇಶ. ಜೀವನಕ್ಕೆ ಏನು ಬೇಕು ಎಂಬ ಪ್ರಶ್ನೆಗೆ ಇಲ್ಲೇ ಉತ್ತರವಿದೆ. ಅಲ್ಲವೇ?

    ಮನುಷ್ಯನ ಸ್ವಭಾವವೇ ಭೋಗವಸ್ತುಗಳತ್ತ ಆಕರ್ಷಣೆ. ಶರೀರ, ಹಣವನ್ನು ಅದು ಪ್ರೀತಿಸುತ್ತ ಹೋಗುತ್ತದೆ. ಆದರೆ, ಇಂಥ ಪ್ರೀತಿ ಒಂದಿಲ್ಲ ಒಂದು ದಿನ ಕೈಕೊಡುತ್ತದೆ, ಅದು ನಿಜವಾದ ಆನಂದವಲ್ಲ ಎಂಬುದು ಅರಿವಾಗುತ್ತದೆ. ಆಗ ಬದುಕನ್ನೇ ಹಳಿಯುವ, ಯಾವುದೂ ಸರಿಯಿಲ್ಲ ಎಂದು ದೂರುವ ಪ್ರವೃತ್ತಿ ಶುರುವಾಗುತ್ತದೆ. ಕರೊನಾದ ಪರಿಣಾಮ ಖಿನ್ನತೆಯ ಗ್ರಾಫ್ ಏರುತ್ತಲೇ ಇದೆ. ನೆರೆರಾಜ್ಯ ಕೇರಳದಲ್ಲಂತೂ ಆತ್ಮಹತ್ಯೆ ಪ್ರಮಾಣ ಅಲ್ಲಿನ ಸರ್ಕಾರವನ್ನೂ ಕಂಗೆಡಿಸಿದ್ದು, ಈ ಪರಿ ಆತ್ಮಹತ್ಯೆ ಹೆಚ್ಚಲು ಕಾರಣಗಳನ್ನು ಶೋಧಿಸಲಾಗುತ್ತಿದೆ. ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯರೂ ಖಿನ್ನತೆಯ ಜಾಲದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇನ್ನು ಕೆಲಸ ಕಳೆದುಕೊಂಡವರು, ನಾಳೆ ಹೇಗೆ ಎಂದು ಗೊತ್ತಿಲ್ಲದವರು ಭರವಸೆಯನ್ನೇ ಕಳೆದುಕೊಂಡಿದ್ದಾರೆ.

    ಆದರೂ, ಹೊಸಪಯಣ ಆರಂಭಿಸಲೇಬೇಕಿದೆ! ಅದು ಹೇಗಿರಬೇಕು ಎಂಬುದು ಪ್ರಶ್ನೆ. ಜೀವನವನ್ನು ಹೊಸದೃಷ್ಟಿಯಿಂದ ನೋಡಲು ಆರಂಭಿಸಬೇಕಿದೆ. ಸಂತೃಪ್ತಿ, ಸೇವೆ, ಸಮಾಧಾನವನ್ನೇ ಆಭರಣವಾಗಿಸಿಕೊಂಡು, ಬದುಕನ್ನು ಬಂಗಾರವಾಗಿಸಿಕೊಂಡ ಜನರ ಸಂಖ್ಯೆ ನಮ್ಮಲ್ಲಿ ಕಡಿಮೆ ಏನಿಲ್ಲ. ಅತ್ತ ಗಮನ ಹರಿಸುವ ಮನಸ್ಸು ಮಾಡಬೇಕಿದೆ ಅಷ್ಟೇ. ಜೀವನದಲ್ಲಿ ಕಷ್ಟ, ನೋವುಗಳಿವೆ ಎಂಬುದು ನಿಜ. ಆದರೆ, ಅದನ್ನು ಮತ್ತಷ್ಟು ಕ್ಲಿಷ್ಟವಾಗಿಸಿಕೊಳ್ಳದಿರೋಣ. ಏತಕ್ಕಾಗಿ ಜೀವನವಿದೆ, ನಾವು ಹೇಗೆ ಬದುಕಬೇಕು ಎಂದು ಅರಿತುಕೊಂಡರೆ ಚಿಂತೆಯ ಗೂಡು ದೂರವಾಗಿ ಆನಂದದ ಆಹ್ಲಾದ ಅಂತರಂಗವನ್ನೂ ಅರಳಿಸಬಲ್ಲದು. ಯಾವೆಲ್ಲ ಪ್ರಮಾದಗಳನ್ನು ಮಾಡಿದ್ದೇವೆ, ಎಲ್ಲೆಲ್ಲಿ ಎಡವಿದ್ದೇವೆ, ಯಾವುದನ್ನು ‘ಸುಖ’ ಅಂತ ಭಾವಿಸಿ ಪರಿತಪಿಸಿದ್ದೇವೆ ಎಂಬುದನ್ನೆಲ್ಲ ಕರೊನಾ ಕಾಲಘಟ್ಟ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಅದಕ್ಕೇ ಹೇಳಿದ್ದು, ಪಯಣವನ್ನು ಮತ್ತೊಮ್ಮೆ ಹೊಸದಾಗಿ ಆರಂಭಿಸಬೇಕಿದೆ ಎಂದು. ಆದರಿದು, ಅಂತಿಮ ಗಮ್ಯವನ್ನು ಅರಿತುಕೊಂಡು ಆರಂಭಿಸೋಣ. ಅನಿವಾರ್ಯತೆಗಳು ಹೆಚ್ಚೋ, ಸಂತೃಪ್ತಿ ಹೆಚ್ಚೋ ಎಂಬ ಪ್ರಶ್ನೆ ಬಂದಾಗ ಸಂತೃಪ್ತಿಯನ್ನು ಆಯ್ಕೆ ಮಾಡಿಕೊಳ್ಳೋಣ. ಈ ಊರಿಂದ ಮತ್ತೆಲ್ಲಿಗೋ ಪಯಣ ಮಾಡಬೇಕಿರುವಾಗ ಈ ಬದುಕನ್ನೇ ಶಾಶ್ವತವೆಂದು ಭಾವಿಸಿ, ಚಿಂತೆಯಲ್ಲಿ ತೊಳಲಾಡುವುದೇಕೆ?

    ಒಮ್ಮೆ ಮನಸ್ಸಿನೊಂದಿಗೆ, ಆತ್ಮಸಾಕ್ಷಿಯೊಂದಿಗೆ ಕೂತು ಮಾತಾಡೋಣ. ಆನಂದದ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತ, ಬದುಕಿನ ಸವಿಯನ್ನು ಸವಿಯೋಣ. ‘ಇತನಿ ಶಕ್ತಿ ಹಮೇ ದೇನಾ ದಾತಾ ಮನ್ ಕಾ ವಿಶ್ವಾಸ ಕಮಜೋರ್ ಹೋ ನಾ…’ (ಓ ದೇವರೇ ಮನಸ್ಸಿನ ವಿಶ್ವಾಸ ಕಡಿಮೆಯಾಗದಂತೆ ಶಕ್ತಿಯನ್ನು ನೀಡು) ಎಂದು ಪ್ರಾರ್ಥಿಸೋಣ. ಹಳೆಯ ಚಿಂತೆಗಳನ್ನೆಲ್ಲ ಡಿಲಿಟ್ ಮಾಡಿ, ಸಂತೋಷ, ಆತ್ಮಸ್ಥೈರ್ಯವನ್ನಷ್ಟೇ ಅಪ್​ಲೋಡ್ ಮಾಡಿಕೊಳ್ಳೋಣ.

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts