More

    ವಿಜಯವಾಣಿ ಜನತಾದರ್ಶನ|ಮಡಿವಾಳ ವಾರ್ಡ್​ಗೆ ಹೊಸ ರೂಪ ರಾಮಲಿಂಗಾರೆಡ್ಡಿ, ಮಂಜುನಾಥ ರೆಡ್ಡಿ ಭರವಸೆ ಸಂಚಾರದಟ್ಟಣೆ, ಪಿ.ಜಿ.ಗಳ ಸಮಸ್ಯೆಗೆ ಆದ್ಯತೆ

    ಬೆಂಗಳೂರು: ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡ್ ವಿಸ್ತೀರ್ಣದಲ್ಲಿ ಚಿಕ್ಕದಿದ್ದರೂ ಹೆಚ್ಚು ಜನರು ವಾಸವಿದ್ದಾರೆ. ಆದ್ದರಿಂದ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಸವಾಲಿನ ಕೆಲಸವಾಗಿದೆ. ಹಳೆಯ ಮಡಿವಾಳಕ್ಕೆ ಹೊಸ ರೂಪವನ್ನು ಕೊಟ್ಟು ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯ ಒದಗಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾ ರೆಡ್ಡಿ ಮತ್ತು ಪಾಲಿಕೆ ಸದಸ್ಯ ಬಿ.ಎನ್. ಮಂಜುನಾಥ ರೆಡ್ಡಿ ಭರವಸೆ ನೀಡಿದ್ದಾರೆ.

    ವಾರ್ಡ್ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಮಡಿವಾಳ ವಾರ್ಡ್ ನಲ್ಲಿ ಆಯೋಜಿಸಿದ್ದ ‘ಜನತಾದರ್ಶನ’ದಲ್ಲಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಯೋಜನೆಗಳನ್ನು ಮುಂದಿಟ್ಟರು.

    ಸಮಸ್ಯೆಗಳಿದ್ದರೆ ಮುಕ್ತವಾಗಿ ಹಂಚಿಕೊಳ್ಳಲು ಜನತಾದರ್ಶನ ವೇದಿಕೆಯಾಯಿತು. ಸಮಸ್ಯೆಗಳಿದ್ದರೂ ಹೇಳಿಕೊಳ್ಳಲು ವೇದಿಕೆ ಸಿಗದ ನೂರಾರು ಜನರು ಸ್ಥಳೀಯ ಜನಪ್ರತಿನಿಧಿಗಳ ಮುಂದೆ ನೇರವಾಗಿ ಸಮಸ್ಯೆ ಹಂಚಿಕೊಂಡರು. ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗಳನ್ನು ಇಂತಿಷ್ಟು ದಿನದೊಳಗೆ ಪರಿಹರಿಸಬೇಕು ಎಂದು ರಾಮಲಿಂಗಾ ರೆಡ್ಡಿ ಮತ್ತು ಮಂಜುನಾಥ ರೆಡ್ಡಿ ಸೂಚನೆ ನೀಡಿದರು.

    3 ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮದ ನಂತರ ಮಾತನಾಡಿದ ರಾಮಲಿಂಗಾ ರೆಡ್ಡಿ, ಮಡಿವಾಳ 1.5 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದರೂ ಹಳೆಯ ಮನೆ ಒಡೆದು ಅಪಾರ್ಟ್​ವೆುಂಟ್ ನಿರ್ವಿುಸುವವರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ತಕ್ಕಂತೆ ಸೌಲಭ್ಯ ಒದಗಿಸಲು ನಾವು ಸಿದ್ಧರಿದ್ದೇವೆ. ನಮ್ಮ ಕ್ಷೇತ್ರದ ಅಭಿವೃದ್ಧಿಕಾರ್ಯಕ್ಕೆ ಹಣದ ಕೊರತೆಯಿಲ್ಲ. ಕಳೆದ ವರ್ಷ 70 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 30 ಕೋಟಿ ರೂ. ಬಳಕೆಯಾಗಿದೆ. ಉಳಿದ 40 ಕೋಟಿ ರೂ. ಅನುದಾನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

    ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸೂಚನೆ: ಅಪಾರ್ಟ್​ವೆುಂಟ್​ಗಳು ಮತ್ತು ಹೆಚ್ಚಿನ ಪಿ.ಜಿ.ಗಳಿಂದ ಬೈಕ್, ಕಾರುಗಳ ಸಂಖ್ಯೆ ಹೆಚ್ಚಾಗಿವೆ. ರಸ್ತೆ ಎರಡೂ ಬದಿಯಲ್ಲಿ, ಬಸ್ ನಿಲ್ದಾಣದ ಹಿಂಭಾಗ ಮತ್ತು ನಿವೇಶನಗಳಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ರಸ್ತೆ ನಿಯಮ ಉಲ್ಲಂಘಿಸುವ, ಬೇಕಾಬಿಟ್ಟಿ ವಾಹನ ನಿಲ್ಲಿಸುವವರಿಗೆ ಮುಲಾಜಿಲ್ಲದೆ ದಂಡ ವಿಧಿಸಬೇಕು. ಅಗತ್ಯವಿದ್ದಲ್ಲಿ ಪೊಲೀಸರನ್ನು ನೇಮಕ ಮಾಡಿ, ಅಪಘಾತ ಮತ್ತು ವಾಹನ ದಟ್ಟಣೆ ನಿಯಂತ್ರಿಸಬೇಕು ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ರಾಮಲಿಂಗಾರೆಡ್ಡಿ ನಿರ್ದೇಶನ ನೀಡಿದರು.

    ಹೊಸ ಸೌಲಭ್ಯಗಳ ಮಾಹಿತಿ: ಮಡಿವಾಳದಲ್ಲಿ ಶೇ. 100 ಸ್ಯಾನಿಟರಿ ಲೈನ್ ಬದಲಾಯಿಸಿ ಹೊಸ ಪೈಪ್ ಅಳವಡಿಸಲಾಗಿದೆ. ರಸ್ತೆಗಳ ಡಾಂಬರೀಕರಣ ಕಾರ್ಯ ಶೇ. 90 ಪೂರ್ಣಗೊಂಡಿದೆ. ಶೇ. 60 ಕನ್ನಡ ನಾಮಫಲಕ ಅಳವಡಿಕೆ ಮಾಡದ ಉದ್ದಿಮೆಗಳ ಪರವಾನಗಿ ನವೀಕರಣ ಮಾಡದಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವಾರ್ಡ್​ನಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಮುಕ್ತಾಯ ಹಂತ ತಲುಪಿದೆ. ಸಮುದಾಯ ಭವನ ನಿರ್ವಿುಸಲಾಗಿದೆ. ತಾವರೆಕೆರೆಯಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ, ಪಶು ಆಸ್ಪತ್ರೆ, ಅಂಗನವಾಡಿ, ಡಯಾಲಿಸಿಸ್ ಕೇಂದ್ರ ನಿರ್ವಿುಸಲಾಗಿದೆ. ಎರಡು ಚಿಕ್ಕ ಉದ್ಯಾನಗಳು, ವ್ಯಾಯಾಮಶಾಲೆ, ಗರಡಿಮನೆ ಹಾಗೂ ಬಿಟಿಎಂ ಲೇಔಟ್​ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಸಾರ್ವಜನಿಕರ ಅನುಕೂಲಕ್ಕೆ ಮುಕ್ತವಾಗಿವೆ ಎಂದು ಸೌಲಭ್ಯಗಳ ಬಗ್ಗೆ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದರು.

    ಒಂಟಿ ಮನೆಗಳಿಗೆ 5 ಲಕ್ಷ ರೂ. ಅನುದಾನ: ವಾರ್ಡ್​ನಲ್ಲಿ ಅಭಿವೃದ್ಧಿ ಕಾರ್ಯಗಳ ಮಹಾಪೂರವೇ ಇದೆ. 18 ಹಾಸಿಗೆಗಳ ಡಯಾಲಿಸಿಸ್ ಕೇಂದ್ರವಿದ್ದು, 550 ರೂ.ಗೆ ಸೇವೆ ಲಭ್ಯವಿದೆ. 40 ಸುಸಜ್ಜಿತ ಹೆರಿಗೆ ಆಸ್ಪತ್ರೆ ನಿರ್ವಿುಸಲಾಗಿದೆ. ಯುವಕರಿಗೆ ಮಟ್ಟಿ ಕುಸ್ತಿಮನೆ ಆರಂಭಿಸಲಾಗಿದ್ದು, ಇಲ್ಲಿ ಅಭ್ಯಾಸ ಮಾಡಿದವರು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆಯುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ವಾರ್ಡ್ ಮುಂದಿದೆ. ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್, ಯುವಕರಿಗೆ ಸಹಾಯಧನದಲ್ಲಿ ಕಾರುಗಳ ಸೌಲಭ್ಯ, ಒಂಟಿ ಶೀಟ್ ಮನೆಗಳಿಗೆ 5 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತ ಮನೆಗಳಾಗಿ ನಿರ್ಮಾಣ ಮಾಡಲು ಅನುದಾನ ನೀಡಲಾಗುತ್ತಿದೆ ಎಂದು ಪಾಲಿಕೆ ಸದಸ್ಯ ಮಂಜುನಾಥ ರೆಡ್ಡಿ ತಿಳಿಸಿದರು. ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಯಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದ್ದು, ಸ್ಥಳಾಂತರಕ್ಕೆ ಒತ್ತಾಯವಿದೆ. ಸ್ಥಳಾಂತರ ಕಡತ ಅಧಿಕಾರಿಗಳ ಬಳಿಯಿದ್ದು, ಅನುಮೋದನೆ ಬಾಕಿಯಿದೆ. ಇಲ್ಲಿನ ಸರ್ವೆ ನಂಬರ್ 99ರಲ್ಲಿ ಶೇ. 10 ಖಾತೆಗಳ ನೋಂದಣಿ ಕಾರ್ಯಕ್ಕೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ತೀರ್ಪು ಬಂದ ನಂತರ ಖಾತೆ ಮಾಡಿಕೊಡಲಾಗುವುದು. ಪಿ.ಜಿ. ಗಳ ಮಾಲೀಕರಿಗೆ ಪಾಲಿಕೆ ನಿಯಮ ಪಾಲನೆ ಮಾಡುವಂತೆ ನೋಟಿಸ್ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ 25 ಸಾವಿರ ರೂ. ದಂಡ ಹಾಗೂ 2 ವರ್ಷ ಜೈಲುಶಿಕ್ಷೆಗೆ ಗುರಿಪಡಿಸಲಾಗುವುದು. ಸಮಸ್ಯೆಗಳ ಪರಿಹಾರಕ್ಕೆ ಎಂದಿಗೂ ನಾನು ನಿಮ್ಮ ಜತೆಗಿರುತ್ತೇನೆ ಎಂದರು.

    ಮೆಟ್ರೋ ಮತ್ತು ವಾಹನಕ್ಕೂ ಮೇಲ್ಸೇತುವೆ: ಟ್ರಾಫಿಕ್ ಸಮಸ್ಯೆ ಅರಿತು ಜಯದೇವ ಆಸ್ಪತ್ರೆ ವೃತ್ತದಿಂದ ಸಿಲ್ಕ್​ಬೋರ್ಡ್​ವರೆಗೆ ಮೇಲ್ಸೇತುವೆ ನಿರ್ವಣಕ್ಕೆ ಒಪ್ಪಿಗೆ ಪಡೆಯಲಾಗಿತ್ತು. ಆದರೆ ಮೆಟ್ರೋ ಕಾಮಗಾರಿ ಆರಂಭವಾದ ನಂತರ ನಿಂತಿತ್ತು. ಈಗ ಮೆಟ್ರೋ ಮತ್ತು ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಮೇಲ್ಸೇತುವೆ ನಿರ್ವಣವಾಗುತ್ತಿವೆ. ಮುಂದಿನ 2 ವರ್ಷಗಳಲ್ಲಿ ಟ್ರಾಫಿಕ್ ಸಮಸ್ಯೆ ನೀಗಲಿದೆ. ರೂಪೇನ ಅಗ್ರಹಾರದಿಂದ ಮಡಿವಾಳದ 29ನೇ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಲು ಹೊಸ ರಸ್ತೆ ಶೀಘ್ರ ಲೋಕಾರ್ಪಣೆ ಆಗಲಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

    ಪೇಯಿಂಗ್ ಗೆಸ್ಟ್​ಗಳಲ್ಲಿ ಶಿಸ್ತುಪಾಲನೆಗೆ ಒತ್ತು:  ವಾರ್ಡ್​ನಲ್ಲಿ 250 ಕ್ಕೂ ಹೆಚ್ಚು ಪಿ.ಜಿ.ಗಳಿದ್ದು, ದೇಶದ ವಿವಿಧ ಬಾಗಗಳ ಜನರು ವಾಸವಿದ್ದಾರೆ. ಪಿ.ಜಿ. ನಡೆಸುವವರು ಅವರ ಬಗ್ಗೆ ತಿಂಗಳಿಗೊಮ್ಮೆ ಮಾಹಿತಿ ನೀಡಬೇಕು. ಪಾಲಿಕೆ ನಿಯಮಗಳನ್ನು ಪಾಲಿಸಬೇಕು. ಪೊಲೀಸರು ಆಗಾಗ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಯಾವುದೇ ತೊಂದರೆಯಾದರೂ ತಪ್ಪಿತಸ್ಥರ ಜತೆಗೆ ಪಿ.ಜಿ. ಮಾಲೀಕರು, ಬಾಡಿಗೆದಾರರ ಮೇಲೆ ಕ್ರಮ ಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

    ಹಲವು ವರ್ಷಗಳ ಸಮಸ್ಯೆಗೆ ಪರಿಹಾರ: ಹಳೇ ಮಡಿವಾಳದಲ್ಲಿ 10 ಸಾವಿರ ಮನೆಗಳಿವೆ. ವಿದ್ಯುತ್ ಬಿಲ್ ಕಟ್ಟಲು ಹತ್ತಿರದಲ್ಲೇ ಕೌಂಟರ್ ವ್ಯವಸ್ಥೆ ಮಾಡಿ. ಪಿಜಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ವಲಸಿಗರ ಹಾವಳಿ ಹೆಚ್ಚಾಗಿದೆ. ಕಸದ ಸಮಸ್ಯೆ, ಸಿಲ್ಕ್ ಬೋರ್ಡ್ ಭಾಗದಲ್ಲಿ ಮೊಬೈಲ್ ಕಳ್ಳರ ಹಾವಳಿ , ಉದ್ಯಾನಕ್ಕೆ ನೀರುಣಿಸುವವರಿಲ್ಲ. ಪಾರ್ಕ್

    ಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಳವಾಗಿದ್ದು, ರಾತ್ರಿ ವೇಳೆ ಬೇಗ ಬೀಗ ಹಾಕಿ ಎಂಬುದು ಸೇರಿ ಹಲವು ಸಮಸ್ಯೆಗಳ ಬಗ್ಗೆ ಜನತಾದರ್ಶನದಲ್ಲಿ ಸ್ಥಳೀಯ ನಾರಾಯಣಪ್ಪ ಗಮನ ಸೆಳೆದರು. ಅದ್ವೆತ್ ಪೆಟ್ರೋಲ್ ಬಂಕ್ ಮೇಲೆ ವಿದ್ಯುತ್ ಬಿಲ್ ಕಟ್ಟುವ ಕೌಂಟರ್ ನಿರ್ವಿುಸಲು ತೀರ್ವನಿಸಲಾಗಿದೆ. 45 ಲಕ್ಷ ರೂ. ಅನುದಾನದಲ್ಲಿ ವಾರ್ಡ್​ನ ಪ್ರಮುಖ ಪ್ರದೇಶಗಳಾದ ಹಳೇ ಮಡಿವಾಳ, ಜೈ ಭೀಮ್ ನಗರ ಸೇರಿ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಪಾರ್ಕ್​ಗಳ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಅಭಿವೃದ್ಧಿಪಡಿಸಲಾಗುವುದು. ಪಾರ್ಕ್​ನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೂ ಬ್ರೇಕ್ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಪಾಲಿಕೆ ಸದಸ್ಯ ಬಿ.ಎನ್. ಮಂಜುನಾಥ ರೆಡ್ಡಿ ಹೇಳಿದರು.

    ಲ್ಯಾಪ್​ಟಾಪ್​ಗೆ 3 ಕೋಟಿ ರೂ. ಅನುದಾನ : ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ಲ್ಯಾಪ್​ಟಾಪ್​ಗಾಗಿ 3 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಪಾಲಿಕೆ ಸದಸ್ಯ ಮಂಜುನಾಥ ರೆಡ್ಡಿ ತಿಳಿಸಿದರು. ಈಗಾಗಲೇ ಅಕ್ಕಪಕ್ಕದ ಬಡಾವಣೆಗಳಿಂದ 150ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಈ ಬಾರಿ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್​ಟಾಪ್ ನೀಡಲಾಗುವುದು ಎಂದರು. ಕಳೆದ ಬಾರಿ ಲ್ಯಾಪ್​ಟಾಪ್ ಸಿಗದ ರೆಡ್ಡಿ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಶಾಲಿನಿಗೆ ನೀಡುವುದಾಗಿ ಭರವಸೆ ನೀಡಿದರು.

    ಜನರು ಕೇಳಿದ್ದೇನು? ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳಿದ್ದೇನು?

    ಸಂಜಯ್ ಥಿಯೇಟರ್ ಬಳಿ ಫುಟ್​ಪಾತ್ ಒತ್ತುವರಿಯಿಂದಾಗಿ, ವಾಹನಗಳು ರಸ್ತೆಯ ಎರಡು ಬದಿಗಳಲ್ಲಿ ಅಡ್ಡಾದಿಡ್ಡಿ ರ್ಪಾಂಗ್ ಮಾಡುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ . ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

    | ಕೃಷ್ಣಾ ರೆಡ್ಡಿ ಡಾಲರ್ಸ್ ಕಾಲನಿ

    ರಸ್ತೆಯ ಒಂದು ಬದಿಯಲ್ಲಿ ರ್ಪಾಂಗ್ ಮಾಡುವಂತೆ ಸೂಚನಾ ಫಲಕ ಅಳವಡಿಸಲಾಗಿದ್ದರೂ ಕೆಲವರು ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಾರೆ. ಅಡ್ಡಾದಿಡ್ಡಿ ವಾಹನ ನಿಲ್ಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಾಹನಗಳನ್ನು ಟೋಯಿಂಗ್ ಮಾಡಿ ದಂಡ ವಿಧಿಸಲಾಗುವುದು ಎಂದು ಮಡಿವಾಳ ಸಂಚಾರ ಠಾಣೆ ಪಿಎಸ್​ಐ ನಾಗಮಣಿ ತಿಳಿಸಿದರು.

     

    ಜೈ ಭೀಮ್ಗರದ ಸುತ್ತಲಿನ ಮನೆಗೆ ಕಾವೇರಿ ನೀರು ಬರುತ್ತಿಲ್ಲ. ಇದರಿಂದ ನಿತ್ಯ ಸಮಸ್ಯೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು.

    | ಮಹಮದ್ ಶಫಿ ಜೈ ಭೀಮ್ಗರ

    ಮೆಟ್ರೋ ಕಾಮಗಾರಿಯಿಂದಾಗಿ ಕಾವೇರಿ ನೀರಿನ ಸಮಸ್ಯೆ ಉಂಟಾಗಿದೆ. ಹಳೆಯದಾದ 6 ಇಂಚು ಪೈಪ್ ಬದಲಾಯಿಸಲು ಕಾಲಾವಕಾಶ ಬೇಕು. ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಮಸ್ಯೆ ಬಗೆಹರಿಯಲಿದೆ ಎಂದು ಜಲಮಂಡಳಿ ಎಇಇ ಧರಣೀಶ್ ಹೇಳಿದರು.

     

    ಹಳೇ ಮಡಿವಾಳದ ಬೀದಿಬೀದಿಯಲ್ಲೂ ಪಿಜಿಗಳಿವೆ. ಪಿಜಿಗಳ ಸುತ್ತ ಮೊಬೈಲ್ ಕಳವು ಸೇರಿ ಹಲವು ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಈ ಬಗ್ಗೆ ಪಿಜಿ ಮಾಲೀಕರನ್ನು ಕರೆಸಿ ಕಠಿಣ ಕ್ರಮ ಕೈಗೊಳ್ಳಬೇಕು

    | ಭಾರ್ಗವಿ ಹಳೇ ಮಡಿವಾಳ

    ಅಪರಾದ ತಡೆ ಹಾಗೂ ಪತ್ತೆ ಬಗ್ಗೆ ಮಡಿವಾಳ ವಾರ್ಡ್ ಸುತ್ತಲಿನ 250ಕ್ಕೂ ಅಧಿಕ ಪಿಜಿಗಳ ಮಾಲೀಕರಿಗೆ ಕಳೆದ ಡಿಸೆಂಬರ್​ನಲ್ಲಿ ಜಾಗೃತಿ ಅಭಿಯಾನವನ್ನು ಏರ್ಪಡಿಸಲಾಗಿತ್ತು. ಪಿಜಿಯಲ್ಲಿರುವ ಪ್ರತಿಯೊಬ್ಬರ ಮಾಹಿತಿ ಪಡೆದು ಪರಿಶೀಲಿಸಿದ್ದೇವೆ. ಈಗಾಗಲೇ ಹಲವರ ಮೇಲೆ ಕೇಸ್ ದಾಖಲಾಗಿದೆ. ಪೊಲೀಸ್ ಆಯುಕ್ತ ಭಾಸ್ಕರ್​ರಾವ್ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿವಾಳ ಇನ್​ಸ್ಪೆಕ್ಟರ್ ಪ್ರಕಾಶ್ ಗೌಡ ಪಾಟೀಲ ತಿಳಿಸಿದರು.

     ತಾವರೆಕೆರೆ ಬಸ್​ನಿಲ್ದಾಣ ಹಾಗೂ ಸುತ್ತಲಿನ ರಸ್ತೆಗಳಲ್ಲಿ ಆಟೋಗಳನ್ನು ಚಾಲಕರು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಮಸ್ಯೆ ಉಂಟಾಗಿದೆ . ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.

    | ಚಂದ್ರು ತಾವರೆಕೆರೆ

    ಆಟೋ ಚಾಲಕರು ಅಡ್ಡಾದಿಡ್ಡಿಯಾಗಿ ರ್ಪಾಂಗ್ ಮಾಡಿದ್ದರೆ ಅಂತಹ ಆಟೋಗಳನ್ನು ಸಂಚಾರ ಠಾಣಾಧಿಕಾರಿ ಗಳು ವಶಕ್ಕೆ ಪಡೆದು ಕ್ರಮ ಕೈಗೊಳ್ಳಿ. ಆಟೋ ನಿಲ್ದಾಣಗಳಿಗಾಗಿ ಸೂಕ್ತ ಜಾಗ ನಿಗದಿಪಡಿಸಿ ಅದನ್ನು ಹೊರತು ಪಡಿಸಿ ನಿಲುಗಡೆ ಮಾಡಿದವರಿಗೆ ದಂಡ ವಿಧಿಸಿ ಎಂದು ಸಂಚಾರ ಠಾಣಾಧಿಕಾರಿಗಳಿಗೆ ಶಾಸಕ ರಾಮಲಿಂಗಾರೆಡ್ಡಿ ಸೂಚಿಸಿದರು.

    ಗಂಗೋತ್ರಿ ಸರ್ಕಲ್​ನಿಂದ ಮಡಿವಾಳದ ರಸ್ತೆ ಹಾಗೂ ಸುತ್ತಲಿನ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಶಾಲಾ ವಾಹನಗಳು ಬೆಳಗ್ಗೆ ನಿಗದಿ ವೇಳೆಗೆ ಶಾಲೆ ತಲುಪುತ್ತಿಲ್ಲ. ಇದರಿಂದ ಮಕ್ಕಳಿಗೆ ಸಮಸ್ಯೆಯಾಗಿದೆ.

    | ವೈ. ರಮೇಶ್ ವಾರ್ಡ್ ನಿವಾಸಿ

    ಮೆಟ್ರೋ ಕಾಮಗಾರಿಯಿಂದಾಗಿ 16ನೇ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಸ್ಥಳೀಯರು ಇದಕ್ಕೆ ಸಹಕರಿಸಬೇಕು. ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹಗಳ ತೆರವು ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಗುವುದು ಎಂದು ಮಡಿವಾಳ ಸಂಚಾರ ಠಾಣೆ ಪಿಎಸ್​ಐ ನಾಗಮಣಿ ಹೇಳಿದರು.

    ಮಾರುತಿನಗರದಿಂದ ಶ್ರೀನಿವಾಸ ರಸ್ತೆಗೆ ಹೋಗುವ ರಸ್ತೆ ಮಧ್ಯಭಾಗದಲ್ಲಿ ದೊಡ್ಡ ಕಂಬ ನೆಡಲಾಗಿದೆ. ಇದನ್ನು ತೆರವುಗೊಳಿಸಿ.

    | ಬಿ.ಟಿ. ಭಟ್ ಮಡಿವಾಳ

    ಶಾಲಾ ವಲಯದಲ್ಲಿ ಸವಾರರು ಅಡ್ಡಾದಿಡ್ಡಿ ರ್ಪಾಂಗ್ ಮಾಡು ತ್ತಾರೆ. ಇದರಿಂದ ಸಮಸ್ಯೆಯಾಗುತ್ತಿದೆ. ಈ ಕಂಬ ಇರುವುದರಿಂದ ವಾಹನಗಳು ಮಂದಗತಿಯಲ್ಲಿ ಪ್ರಯಾಣಿಸುತ್ತವೆ. ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ಪಾಲಿಕೆ ಸದಸ್ಯ.

    ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಬೇಳೆ ಪಡೆಯಲು ಗಂಟೆಗಟ್ಟಲೆ ಸಾಲು ನಿಲ್ಲಬೇಕು. ಗ್ರಾಹಕರ ಬಯೋಮೆಟ್ರಿಕ್ ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬೆರಳಚ್ಚು ಪಡೆಯಲು ಒಬ್ಬರಿಗೆ ಅರ್ಧ ಗಂಟೆಯಾದರೂ ಮುಗಿಯುವುದಿಲ್ಲ. ವಯಸ್ಸಾದವರು ರೇಷನ್ ಪಡೆಯಲು ಗಂಟೆಗಟ್ಟಲೆ ಕಾಯಬೇಕಿದೆ. ಸಮಸ್ಯೆ ಶೀಘ್ರ ಪರಿಹರಿಸಿ.

    | ಪೊನ್ನಪ್ಪ ವಾರ್ಡ್ ನಿವಾಸಿ

    ಸರ್ವರ್ ಸಮಸ್ಯೆಯಿಂದಾಗಿ ರಾಜ್ಯದೆಲ್ಲೆಡೆ ಸಮಸ್ಯೆ ಉಂಟಾಗಿದೆ. ಆಯುಕ್ತರ ಗಮನಕ್ಕೆ ಸಮಸ್ಯೆ ತರಲಾಗಿದ್ದು, 3 ತಿಂಗಳಲ್ಲಿ ಬಗೆಹರಿಯಲಿದೆ ಎಂದು ಆಹಾರ ನಿರೀಕ್ಷಕ ವಿ. ಲಕ್ಷಣ್ ಹೇಳಿದರು.

    29ನೇ ವೃತ್ತದಲ್ಲಿನ ಸಿಗ್ನಲ್ ಟೈಮರ್ 2 ನಿಮಿಷ ಹೆಚ್ಚಿಸಿದರೆ ಲೇಕ್ ರಸ್ತೆಯ ಮೂಲಕ ಹಾದುಹೋಗುವ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ.

    | ರಾಜಾರೆಡ್ಡಿ ಸ್ಥಳೀಯ ನಿವಾಸಿ

    ಪ್ರಮುಖ ರಸ್ತೆ ಸಿಗ್ನಲ್​ಗಳ ವಾಹನ ದಟ್ಟಣೆ ಪರಿಹಾರಕ್ಕಾಗಿ ಟೈಮರ್​ಗಳನ್ನು ಅಳವಡಿಸಲಾಗಿದೆ. ಇನ್ನು ಯೂ ಟರ್ನ್ ನಿರ್ಬಂಧ ಸೇರಿ ಹಲವು ಸಮಸ್ಯೆಗಳನ್ನು ಹಿರಿಯ ಅಧಿಕಾರಿಗೊಳೊಂದಿಗೆ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಡಿವಾಳ ಸಂಚಾರ ಠಾಣೆ ಎಸ್​ಐ ನಾಗಮಣಿ ತಿಳಿಸಿದರು.

    ತಾವರೆಕೆರೆ ವೃತ್ತದಲ್ಲಿನ ಅಶ್ವತ್ಥಕಟ್ಟೆ ಸುತ್ತಲಿನ ಜಾಗಗಳಲ್ಲಿ ಗಾಂಜಾ ವ್ಯಸನಿಗಳ ಉಪಟಳ ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು.

    | ಗಂಗಣ್ಣ ತಾವರೆಕೆರೆ

    ಮಧ್ಯರಾತ್ರಿ ನಂತರ ತಾವರೆಕೆರೆ ವೃತ್ತದಲ್ಲಿ ಗಾಂಜಾವ್ಯಸನಿಗಳು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿ ಪ್ರಕರಣಗಳು ಕಂಡುಬಂದಲ್ಲಿ ಠಾಣೆಗೆ ಅಥವಾ ನನ್ನ ನಂಬರ್​ಗೆ ಕರೆ ಮಾಡಿ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಜಿ ಪಾಳ್ಯ ಠಾಣೆ ಎಸ್​ಐ ಗಂಗಾಧರ್ ಹೇಳಿದರು. 

    ಜೈ ಭೀಮ್ಗರ ಅಂಬೇಡ್ಕರ್ ಭವನ ಪೂರ್ಣಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.

    | ಎಂ. ಶ್ರೀನಿವಾಸಮೂರ್ತಿ ಜೈ ಭೀಮ್ಗರ

    1 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ಭವನ ನಿರ್ವಣವಾಗುತ್ತಿದೆ. 35 ಲಕ್ಷ ರೂ. ಅನುದಾನ ಕೊರತೆಯಿಂದ ಭವನ ಉದ್ಘಾಟನೆಗೆ ತಡವಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

    ಹಳೇ ಮಡಿವಾಳ ವಾರ್ಡ್​ನ 1ನೇ ಅಡ್ಡರಸ್ತೆಯ ಬಹುತೇಕ ಮನೆಗಳಲ್ಲಿನ ಬೋರ್​ವೆಲ್ ನೀರು ಕಲುಷಿತಗೊಂಡಿದೆ. 15 ದಿನಗಳಿಂದ ಸಮಸ್ಯೆ ಉಂಟಾಗಿದ್ದು, ನೀರು ಯಾವುದೇ ಬಳಕೆಗೂ ಯೋಗ್ಯವಿಲ್ಲದ ರೀತಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಿ

    | ಸಿ.ಕೃಷ್ಣ ಹಳೇ ಮಡಿವಾಳ

    ಹಳೇ ಮಡಿವಾಳ ಸೇರಿ ವಾರ್ಡ್​ನ ಬಹುತೇಕ ರಸ್ತೆಗಳಲ್ಲಿ ಕುಡಿಯುವ ನೀರಿನ ಟೆಂಡರ್ ಪ್ರಕ್ರಿಯೆ ಆಗಿದೆ. ಇದು ಪೂರ್ಣಗೊಂಡ ನಂತರ ಹಳೇ ಕನೆಕ್ಷನ್ ಬಂದ್ ಮಾಡಿಸಿ, ಹೊಸ ಕನೆಕ್ಷನ್ ಪಡೆದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬೋರ್ ನೀರು ಕಲುಷಿತಗೊಂಡಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಪಾಲಿಕೆ ಸದಸ್ಯ ಮಂಜನಾಥ್ ರೆಡ್ಡಿ ತಿಳಿಸಿದರು.

    ವಿವೇಕಾನಂದ ಮೈದಾನದಲ್ಲಿ ಕ್ರೀಡಾಚಟುವಟಿಕೆಗಳು ನಡೆಸಲು ಆಗದ ಪರಿಸ್ಥಿತಿ ಇದೆ.

    | ಅಪ್ಪು ಬಿಟಿಎಂ ಲೇಔಟ್

    3.5 ಕೋಟಿ ರೂ ಅನುದಾನದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕಬಡ್ಡಿ ಅಂಗಣಕ್ಕೆ ಸಿದ್ಧತೆ ನಡೆಸಲಾಗಿತ್ತು, ಸ್ಥಳೀಯರೇ ಅಡ್ಡಿಪಡಿಸಿದರು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

    ಬೃಂದಾವನ ನಗರದ ಬಳಿ ಇರುವ ಪಾದಚಾರಿ ಸೇತುವೆ ಬಳಿ ಸಾರ್ವಜನಿಕರೇ ಕಸ ಹಾಕುತ್ತಿದ್ದಾರೆ.

    | ಸರಸ್ವತಿ ಬೃಂದಾವನನಗರ

    ಮಡಿವಾಳ ವಾರ್ಡ್​ನ ಹಲವೆಡೆ ನಿರ್ವಿುಸಲಾಗಿರುವ ಪಾದಚಾರಿ ಸೇತುವೆಯಲ್ಲಿ ಕಸ ಹಾಕುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಕಸ ಎಸೆಯುವವರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಂಜುನಾಥ ರೆಡ್ಡಿ ಹೇಳಿದರು.

    ಬಡಾವಣೆಯ ಕಸದ ರಾಶಿಯಲ್ಲಿ ಕೋಳಿ ತ್ಯಾಜ್ಯ, ಮಾಂಸದ ಅಂಗಡಿಗಳಲ್ಲಿನ ತ್ಯಾಜ್ಯಗಳೂ ಹೆಚ್ಚಾಗಿವೆ. ಈಗಾಗಲೇ ಹಲವು ಬಾರಿ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಅರಿವಿನ ಅಭಿಯಾನ ನಡೆಸಬೇಕು.

    | ಡಿ.ಆರ್. ಕೃಷ್ಣ ಬಿಟಿಎಂ ಲೇಔಟ್

    ಬಿಟಿಎಂ ಸುತ್ತಮುತ್ತಲಿನ ಬಡಾವಣೆಗಳ ಮಾಂಸದಂಗಡಿಗಳಿಗೆ ತೆರಳಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಎಚ್ಚರಿಕೆ ನೀಡಲಾಗಿದೆ. ಎಸೆದವರ ವಿರುದ್ಧ ದಂಡ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರೂ ಈ ಬಗ್ಗೆ ಕೈ ಜೋಡಿಸಿದರೆ ಅರಿವು ಮೂಡಿಸಬಹುದಾಗಿದೆ ಎಂದು ಘನತ್ಯಾಜ್ಯ ನಿರ್ವಹಣಾಧಿಕಾರಿ ಸಂತೋಷ್ ಕುಮಾರ್ ಹೇಳಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts