ಶಂಕರಮಠ ವಾರ್ಡ್​ನಲ್ಲಿ ಬೀದಿನಾಯಿ ಉಪಟಳ

ಬೆಂಗಳೂರು: ನೀರು ಬರುತ್ತಿದೆ.. ರಸ್ತೆ ಚೆನ್ನಾಗಿದೆ.. ತ್ಯಾಜ್ಯ ಸಮಸ್ಯೆ ಅಷ್ಟೊಂದಿಲ್ಲ.. ಎಲ್ಲವೂ ತಕ್ಕಮಟ್ಟಿಗೆ ಚೆನ್ನಾಗಿದೆ. ಆದರೆ, ಬೀದಿನಾಯಿಗಳ ಕಾಟದಿಂದ ನಮಗೆ ಮುಕ್ತಿ ನೀಡಿ!

ಇದು ಶಂಕರಮಠ ವಾರ್ಡ್​ನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಶನಿವಾರ ಆಯೋಜಿಸಿದ್ದ ಜನತಾ ದರ್ಶನದಲ್ಲಿ ಶಾಸಕ ಗೋಪಾಲಯ್ಯ ಹಾಗೂ ಬಿಬಿಎಂಪಿ ಸದಸ್ಯ ಎಂ. ಶಿವರಾಜು ಬಳಿ ಸ್ಥಳೀಯರು ಹೇಳಿಕೊಂಡ ಸಮಸ್ಯೆ.

ಬಿಬಿಎಂಪಿ ಹಳೆಯ ವಾರ್ಡ್​ಗಳಲ್ಲೊಂದಾದ ಶಂಕರಮಠದಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳಿಲ್ಲ. ಜನತಾದರ್ಶನದಲ್ಲಿ ಪಾಲ್ಗೊಂಡವರು ಕೂಡ ಅದನ್ನು ಅನುಮೋದಿಸಿದರು. ಆದರೆ, ಬೀದಿನಾಯಿಗಳ ಕಾಟವೇ ಪ್ರಮುಖ ಸಮಸ್ಯೆ. ಪಾದಚಾರಿಗಳು, ಬೈಕ್ ಸವಾರರು ಬೀದಿನಾಯಿಗಳಿಗೆ ಹೆದರಿಕೊಂಡೇ ಓಡಾಡಬೇಕಿದೆ. ನಾಯಿ ಹಾವಳಿ ನಿಯಂತ್ರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೂ, ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸಮಸ್ಯೆ ನಿವಾರಿಸಿ ಎಂದು ಮನವಿ ಮಾಡಿಕೊಂಡರು.

ಅಧಿಕಾರಿಗಳ ಅಸಹಾಯಕತೆ: ನಾಯಿ ಕಾಟದ ಸಮಸ್ಯೆಗೆ ಉತ್ತರಿಸಿದ ಬಿಬಿಎಂಪಿ ಪಶುಪಾಲನಾ ವಿಭಾಗದ ಸಹಾಯಕ ನಿರ್ದೇಶಕ ಡಾ.ಬಸವರಾಜು ಬೀದಿ ನಾಯಿಗಳನ್ನು ಕೊಲ್ಲುವುದು, ಒಂದೆಡೆ ಕೂಡಿಹಾಕಿ ಸಾಕುವುದು, ಒಂದು ಪ್ರದೇಶದಿಂದ ತೆಗೆದುಕೊಂಡು ಹೋಗಿ ಇನ್ನೊಂದು ಪ್ರದೇಶದಲ್ಲಿ ಬಿಡುವುದು ಈ ರೀತಿಯ ಕಾರ್ಯಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿದೆ. ಹೀಗಾಗಿ ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ನಾಯಿಗಳ ವಿಚಾರದಲ್ಲಿ ಸ್ವಲ್ಪ ಕ್ರಮ ಕೈಗೊಂಡರೂ ಸ್ವಯಂಸೇವಾ ಸಂಸ್ಥೆಗಳು ಕೋರ್ಟ್ ಮೊರೆ ಹೋಗುತ್ತಾರೆ. ಈಗಾಗಲೇ ಕೆಲ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಬೀದಿನಾಯಿ ವಿಚಾರದಲ್ಲಿ ಶಸ್ತ್ರಚಿಕಿತ್ಸೆ ಹೊರತು ಬೇರೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶ ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಕ್ರಮಕ್ಕೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಿದರೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕ್ಷೇತ್ರಾಭಿವೃದ್ಧಿಗೆ ಶಾಸಕರ ದೂರದೃಷ್ಟಿ

ಜನತಾದರ್ಶನದಲ್ಲಿ ಜನರ ಅಹವಾಲು ಆಲಿಸಿದ ಶಾಸಕ ಗೋಪಾಲಯ್ಯ, ಕ್ಷೇತ್ರದಲ್ಲಿ ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿನ 7 ವಾರ್ಡ್​ಗಳ ಅಭಿವೃದ್ಧಿಗೆ ಹಲವು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ರಿಂಗ್ ರಸ್ತೆ ಸಂರ್ಪಸುವ ಮಾರ್ಗದಲ್ಲಿ ಮೇಲ್ಸೇತುವೆ ನಿರ್ಮಾಣ ಶೀಘ್ರದಲ್ಲಿ ಕೈಗೊಳ್ಳಲಾಗುವುದು. ಶಂಕರಮಠ ವಾರ್ಡ್​ನಲ್ಲಿ 50 ಒಳರೋಗಿ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ವಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಟೆಂಡರ್ ಕರೆದು ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಜತೆಗೆ, ಮಳೆ ನೀರುಕಾಲುವೆ ದುರಸ್ತಿಗೆ 80 ಕೋಟಿ ರೂ. ಮೀಸಲಿಡಲಾಗಿದೆ, ಕಮಲಾನಗರ, ಕುರುಬರಹಳ್ಳಿ, ಮಾರಪ್ಪನಪಾಳ್ಯದಲ್ಲಿ ಶಾಲೆಗಳ ದುರಸ್ತಿಗೆ 6 ಕೋಟಿ ರೂ. ವ್ಯಯಿಸಲಾಗುತ್ತಿದೆ, ಕ್ಷೇತ್ರದ ಎಲ್ಲ ವಾರ್ಡ್ ಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಹೀಗೆ ಕ್ಷೇತ್ರದ ಜನರು ಸಮಸ್ಯೆಗಳಿಲ್ಲದೆ ವಾಸಿಸಲು ಅವಶ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

ಮಾದರಿ ವಾರ್ಡ್ ರಚನೆಗೆ ಪಣ

ಜನತಾದರ್ಶನದಲ್ಲಿ ಸಾರ್ವಜನಿಕರು ಕೇಳಿದ ಪ್ರತಿ ಪ್ರಶ್ನೆಗೂ ಸಮಾಧಾನದಿಂದ ಉತ್ತರ ನೀಡಿದ ಸದಸ್ಯ ಶಿವರಾಜು, ಶಂಕರಮಠವನ್ನು ಮಾದರಿ ವಾರ್ಡ್ ಆಗಿ ರೂಪಿಸುವುದಾಗಿ ತಿಳಿಸಿದರು. ಮತದಾರರು 3 ಬಾರಿ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. ಯಾವುದೇ ವಾರ್ಡ್​ನಲ್ಲೂ ಜಾರಿಯಾಗದ ಹಲವು ಕಾರ್ಯಗಳನ್ನು ಶಂಕರ ಮಠದಲ್ಲಿ ಅನುಷ್ಠಾನ ಗೊಳಿಸಲಾಗಿದೆ. ಈಗಾಗಲೇ ವಿಭಿನ್ನ ರೀತಿಯ ಸಹಾಯವಾಣಿ ಕೇಂದ್ರ, ಸಿಸಿ ಕ್ಯಾಮರಾ ಅಳವಡಿಕೆ, ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆಗಳಲ್ಲಿ ಅಗೆಯುವುದಕ್ಕೆ ನಿಷೇಧ, ಉದ್ಯಾನಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಲಾಗಿದೆ. ಅದರ ಜತೆಗೆ, ವಾರ್ಡ್ ಜನರ ಹಲವು ದಿನದ ಬೇಡಿಕೆಯಾದ ಆರೋಗ್ಯ ಕೇಂದ್ರ ನಿರ್ವಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಲೋಕಸಭೆ ಚುನಾವಣೆ ಮುಗಿದ ನಂತರ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು. ವಾರ್ಡ್ ನಲ್ಲಿನ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆಬಾವಿ ಕೊರೆಸಲಾಗುತ್ತಿದೆ ಎಂದು ವಿವರಿಸಿದರು.

ಸಮಸ್ಯೆ ಬಗೆಹರಿಸಲು ಗಡುವು

ಕೆಂಪೇಗೌಡ ಉದ್ಯಾನದಲ್ಲಿ ಹಿರಿಯರು ಮೆಟ್ಟಿಲು ಹತ್ತಲು ಸಹಕಾರಿಯಾಗು ವಂತೆ ಕಂಬಿ ಅಳವಡಿಸದಿರುವ ಬಗ್ಗೆ ಕೆಲವರು ದೂರಿದರು. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಕಾಪೋರೇಟರ್, ಸಮಸ್ಯೆ ಬಗೆಹರಿಯದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.