More

    ಒಂಟೆಯನ್ನೇನೋ ಹತ್ಯೆ ಮಾಡಿದಿರಿ, ಆದರೆ…

    ಸ್ಟ್ರೇಲಿಯಾದಲ್ಲಿ ಅಲ್ಲಿನ ಸರ್ಕಾರದ ಆದೇಶದಂತೆ ಐದು ಸಾವಿರ ಒಂಟೆಗಳನ್ನು ಹತ್ಯೆ ಮಾಡಲಾಗಿದೆ. ‘ಒಂಟೆಗಳು ಅಧಿಕ ನೀರನ್ನು ಕುಡಿಯುತ್ತವೆ. ದಕ್ಷಿಣ ಆಸ್ಟ್ರೇಲಿಯಾದ ಬುಡಕಟ್ಟು ಜನರು ಒಂಟೆಗಳಿಂದ ನೀರಿನ ಅಭಾವ ಆಗುತ್ತಿದೆ ಎಂದು ದೂರು ಕೊಟ್ಟಿದ್ದರು. ಹೀಗಾಗಿ ಒಂಟೆಗಳನ್ನು ಕೊಲ್ಲಲು ಆದೇಶಿಸಲಾಗಿದೆ’ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಮನುಷ್ಯ ತಾನು ಬದುಕುವುದಕ್ಕೆ ಏನು ಬೇಕಾದರೂ ಮಾಡುತ್ತಾನೆ ಎಂಬುದಕ್ಕೆ ಇದು ಸಾಕ್ಷಿ. ಭೂಮಿ ಮೇಲೆ ಎಲ್ಲ ಜೀವಿಗಳಿಗೆ ಬದುಕುವ ಹಕ್ಕಿದೆ. ಈ ಭೂಮಿ ಮೇಲೆ ತಾನು ಮಾತ್ರ ಬದುಕಬೇಕೆಂಬ ಸ್ವಾರ್ಥ ಮನುಷ್ಯನ ಹೆಗಲ ಏರಿದೆ. ದೇವರು ಕೇವಲ ಮನುಷ್ಯರು ಬದುಕಲಿ ಎಂದು ಈ ಭೂಮಿಯನ್ನು ಯಾರಿಗೂ ಬರೆದುಕೊಟ್ಟಿಲ್ಲ. ಹೀಗಿರುವಾಗ ಮನುಷ್ಯ ತನ್ನ ಇರುವಿಕೆಗಾಗಿ ಏನೆಲ್ಲ ಕ್ರೂರ ಮನಸ್ಥಿತಿಗೆ ಇಳಿಯುತ್ತಾನೆ ಎನ್ನುವುದಕ್ಕೆ ಇದಕ್ಕಿಂತ ಕೆಟ್ಟ ನಿದರ್ಶನ ಬೇಕಿಲ್ಲ!

    ಒಂಟೆಗಳು ಸಾಕಷ್ಟು ನೀರು ಕುಡಿಯುತ್ತಿರುವುದರಿಂದ ನೀರಿನ ಹಾಹಾಕಾರ ಹೆಚ್ಚಾಗಿದೆ ಎನ್ನುವ ಕಾರಣದಿಂದ ಅವುಗಳನ್ನು ಕೊಲ್ಲುವಂಥ ಹೀನ ಸ್ಥಿತಿಗೆ ಮನುಷ್ಯ ತಲುಪಿರುವುದು ಶೋಚನೀಯ. ಒಂಟೆಗಳು ದೇಹಸ್ಥಿತಿ ಮತ್ತು ವಾತಾವರಣಕ್ಕೆ ತಕ್ಕಂತೆ ನೀರು ಕುಡಿಯುವುದು ತಪ್ಪಾದರೆ ಮನುಷ್ಯ ವ್ಯರ್ಥವಾಗಿ ದಿನನಿತ್ಯ ಸಾವಿರಾರು ಲೀಟರ್​ನ್ನು ಬಳಸುತ್ತಿದ್ದಾನಲ್ಲ ಅವನಿಗೆ ಯಾವ ಶಿಕ್ಷೆ ಕೊಡುತ್ತೀರಾ? ಬೆಳಗ್ಗೆಯಿಂದ ಸಂಜೆಯವರೆಗೂ ತನ್ನ ನಿತ್ಯಕರ್ಮಗಳಿಂದ ಹಿಡಿದು ಮನೆಯ ಅನೇಕ ಕೆಲಸ ಕಾರ್ಯಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಳಸುತ್ತಿದ್ದಾನಲ್ಲ ಅವನಿಗೆ ಯಾವ ಶಿಕ್ಷೆ ಕೊಡುತ್ತೀರಾ? ಭೂಮಿಯ ಮೇಲೆ ಏನೆಲ್ಲ ಸಮಸ್ಯೆಗಳು, ಅನಾಹುತಗಳು, ಏರುಪೇರುಗಳು ಆಗುತ್ತಿದ್ದರೂ ಅದೆಲ್ಲದಕ್ಕೂ ಮನುಷ್ಯನ ಹಸ್ತಕ್ಷೇಪ ಕಾರಣವೇ ಹೊರತು ಮೂಕಪ್ರಾಣಿಗಳಲ್ಲ. ನೀರಿನ ತತ್ವಾರಕ್ಕೆ ಕಾರಣವಾಗಿರುವ ಮೂಲ ಸಮಸ್ಯೆಯ ಬಗ್ಗೆ ಸರ್ಕಾರ ಚಿಂತನೆ ನಡೆಸಿ, ಒಂಟೆಗಳನ್ನು ಉಳಿಸಲು ಪರ್ಯಾಯ ಯೋಜನೆಯನ್ನು ರೂಪಿಸುವುದು ಮನುಷ್ಯತ್ವದ ಗುಣ.

    | ಗಿರಿಜಾಶಂಕರ್ ಜಿ ಎಸ್, ನೇರಲಕೆರೆ (ತರೀಕೆರೆ ತಾಲೂಕು)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts