More

    ಲಕ್ಷ ವೃಕ್ಷೋತ್ಸವ ಮತ್ತು ಕೊಪ್ಪಳ ಜನಜಾತ್ರೆ

    ಲ್ಯಾಣ ಕರ್ನಾಟಕದಲ್ಲಿ ಕೊಪ್ಪಳ ಗವಿಸಿದ್ಧೇಶ್ವರ ಮಠದ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದು ವಿಶ್ಲೇಷಣೆಗೆ ಒಳಗಾಗುತ್ತಿರುವುದು ವರ್ತಮಾನದ ಬೆರಗು. ಗ್ರಾಮೀಣ ಜನತೆಗೆ ಜಾತ್ರೆ ಎಂಬುದೊಂದು ಭಕ್ತಿ, ಸಂಭ್ರಮ ಮತ್ತು ಮನರಂಜನೆ ಕೇಂದ್ರ. ಈಗ ಕಾಲ ಬದಲಾಗಿದೆ, ಮನರಂಜನೆ ಟಿ.ವಿ. ಮೂಲಕ ಜನರ ಮನೆ ತಲುಪಿದೆ. ರಂಗಭೂಮಿ ಕ್ಷೀಣಗೊಂಡಿದೆ. ಆನ್​ಲೈನ್ ಶಾಪಿಂಗ್ ಕಾರಣದಿಂದ ಭರ್ಜರಿ ವ್ಯಾಪಾರ ಮೊಟಕಾಗಿದೆ. ಈ ಎಲ್ಲ ಬದಲಾವಣೆ ಮಧ್ಯೆ ಮಠಾಧೀಶರೊಬ್ಬರು ಮನಸು ಮಾಡಿದರೆ ಏನೆಲ್ಲ ಸಾಧ್ಯ ಎಂಬುದನ್ನು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧ ಮಹಾಸ್ವಾಮಿಗಳು ತೋರಿಸಿಕೊಟ್ಟಿದ್ದಾರೆ. ಜಾತ್ರೆಯನ್ನು ವೈಚಾರಿಕ ಭಾವನೆಗಳ ಬೀಜ ಬಿತ್ತಲು ಬಳಸಿಕೊಳ್ಳುತ್ತಿರುವುದು ಅಭಿನಂದನೀಯ. ಲಕ್ಷಾಂತರ ಜನ ಒಂದೆಡೆ ಸೇರುವುದು, ಥರಹೇವಾರಿ ಊಟ ಮಾಡುವುದು, ಶಿಸ್ತು, ಜನರ ಸಂಯಮ ಮತ್ತು ಭಕ್ತಿಯ ಪರಾಕಾಷ್ಠೆಯ ವೈಭವದಾಚೆ ಇರುವ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವೂ ಇದೆ.

    ಕಳೆದ ದಶಕದಿಂದ ಜಾತ್ರೆಯ ಸ್ವರೂಪ ಬದಲಾಗುತ್ತ ಸಾಗಿದೆ. ಆಳವಾದ ವೈಚಾರಿಕತೆಯ ಗೊಡವೆಗೆ ಹೋಗದೆ ಜನ ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಸ್ವಾಮೀಜಿ ಯೋಜನೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಕೆರೆಗಳ ಸಂರಕ್ಷಣೆ, ಗುಣಮಟ್ಟದ ಪ್ರಾಥಮಿಕ ಶಿಕ್ಷಣ, ಆಯುರ್ವೆದ ಚಿಕಿತ್ಸೆ, ಸ್ವಚ್ಛತಾ ಅಂದೋಲನ, ಗ್ರಾಮೀಣ ಪ್ರದೇಶಗಳಲ್ಲಿ ಅಧ್ಯಾತ್ಮ ಪ್ರವಚನ ಮತ್ತು ಪ್ರತಿ ವರ್ಷ ನಡೆಯುವ ಅದ್ಧೂರಿ ಜನಜಾತ್ರೆ ಪೂಜ್ಯರ ಎದುರಿಗಿರುವ ಪ್ರಮುಖ ಸಂಗತಿಗಳು. ಹಣಕಾಸಿನ ಮುಗ್ಗಟ್ಟು, ಕ್ಷೀಣಗೊಂಡ ವ್ಯಾಪಾರ ವಹಿವಾಟು, ಒಣಬೇಸಾಯದ ಆತಂಕಗಳು, ಪರಿಸರ ವಿನಾಶ ಮತ್ತು ಮೌಢ್ಯತೆ ನಮ್ಮ ಪ್ರದೇಶದ ಪ್ರಮುಖ ಸವಾಲುಗಳು. ಈ ವ್ಯವಸ್ಥೆ ಸರಿಪಡಿಸುವ ಸಾಮರ್ಥ್ಯ ಮತ್ತು ಉತ್ಸಾಹ ಕೊಪ್ಪಳ ಸ್ವಾಮಿಗಳಲ್ಲಿದೆ. ಇತ್ತೀಚೆಗೆ ಜಿಲ್ಲೆಯ ಕಾರಟಗಿಯಲ್ಲಿ ಪ್ರವಚನ ಇದ್ದಾಗ ನಿತ್ಯದ ಪಥ ಸಂಚಲನಗಳ ಮೂಲಕ ಸಾಮೂಹಿಕ ಬದಲಾವಣೆ ಮಾಡಲು ಯುವಕರನ್ನು ಬಳಸಿಕೊಂಡು ಕ್ರಿಯಾಶೀಲ ವಾತಾವರಣ ನಿರ್ವಿುಸಿದ್ದಾರೆ.

    ಈ ವರ್ಷದ ಕೊಪ್ಪಳ ಜಾತ್ರೆಯ ಘೊಷವಾಕ್ಯ ಲಕ್ಷ ವೃಕ್ಷೋತ್ಸವ, ಕೊಪ್ಪಳ ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಸಸಿ ನೆಡುವ ಮೂಲಕ ಪರಿಸರ ಕಾಳಜಿ ತೋರುವ ಮೊದಲ ಹೆಜ್ಜೆ ಇದಾಗಿದೆ. ಅರಣ್ಯ ಇಲಾಖೆ ಇಂತಹ ಹಲವು ಯೋಜನೆಗಳನ್ನು ರೂಪಿಸಿದರೂ ಅದು ಯಶಸ್ವಿಯಾಗದಿರಲು ಜನರ ಅಸಹಕಾರ ಮತ್ತು ಅಸಡ್ಡೆಯೇ ಕಾರಣ. ಈಗ ಸ್ವಾಮೀಜಿಗಳ ಈ ಯೋಜನೆ ಯಶಸ್ವಿಯಾಗಲು ಜನರ ನಂಬಿಕೆ, ಶ್ರದ್ಧೆ ಮತ್ತು ಭಕ್ತಿ ಕಾರಣವಾಗುತ್ತದೆ.

    ಮಠದಿಂದ ಜಾತ್ರೆ ಮೂಲಕ ವೃಕ್ಷೋತ್ಸವ ಆರಂಭ ಭರವಸೆಯ ಆಶಾಕಿರಣ. ಗದುಗಿನ ಮಹಾಭಾರತದಲ್ಲಿ ಕವಿ ಕುಮಾರವ್ಯಾಸ ಹೇಳುವಂತೆ ‘ಮದುವೆ ಎಂಬುದು ನೆಪ, ನೆಂಟರು ಬರುವದೇ ಮುಖ್ಯ’ ಎಂಬ ವಾಣಿಯಂತೆ, ಸರ್ವರನ್ನು ಒಳಗೊಂಡು ಎಳೆಯುವ ತೇರಿನೋತ್ಸವದಲ್ಲಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಲಕ್ಷಾಂತರ ಜನ ಸೇರುವ ಜಾತ್ರೆ ಸಾಮಾಜಿಕ ಬದಲಾವಣೆಯ ಮಹತ್ವದ ಸಂದೇಶಕ್ಕೆ ಸಾಕ್ಷಿಯಾಗಿರುವುದು ಸಂತಸದ ಸಂಗತಿ.

    | ಸಿದ್ದು ಯಾಪಲಪರವಿ ಉಪನ್ಯಾಸಕರು, ಕಾರಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts