ಸಕಾಲಿಕ ಲೇಖನ

ಚಕ್ರವರ್ತಿ ಸೂಲಿಬೆಲೆ ಅವರ ‘ವಿಶ್ವಗುರು’ ಅಂಕಣ (ವಿಜಯವಾಣಿ ಫೆ. 11) ಸಕಾಲಿಕವಾಗಿತ್ತು ಮತ್ತು ಮಾಹಿತಿಪೂರ್ಣವಾಗಿತ್ತು. ಭಾರತೀಯ ಅಸ್ಮಿತೆ, ಇತಿಹಾಸ, ಪರಂಪರೆ ಇತ್ಯಾದಿಗಳಿಗೆ ಇನ್ನು ಉಳಿಗಾಲವಿಲ್ಲವೇನೋ ಎಂಬ ಪರಿಸ್ಥಿತಿ ಮೂಡಿದ್ದ ಸಂದರ್ಭದಲ್ಲಿ, ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಯೋಗಿ ಆದಿತ್ಯನಾಥರು ‘ಭಾರತೀಯ’ ಎನ್ನಬಹುದಾದ ಒಂದೊಂದು ಗುಣ-ವೈಶಿಷ್ಟ್ಯಗಳಿಗೂ, ಪರಿಕಲ್ಪನೆಗಳಿಗೂ ಮರುಜೀವ ಕೊಡುತ್ತಿರುವುದು ಶ್ಲಾಘನೀಯ ಬೆಳವಣಿಗೆ. ಮಾತ್ರವಲ್ಲದೆ, ಸಮಾಜವಿರೋಧಿ ಶಕ್ತಿಗಳನ್ನು ಮಟ್ಟಹಾಕಿ, ಶ್ರಮಿಕವರ್ಗಗಳ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಮಾಗೋಪಾಯಗಳನ್ನೂ ಅನುಸರಿಸುತ್ತಿದ್ದಾರೆ. ರಾಜಕೀಯ ಒತ್ತಡಗಳು ಅಥವಾ ಕಾನೂನು-ಸುವ್ಯವಸ್ಥೆ ಕಾಪಾಡುವುದಕ್ಕೆ ಸಂಬಂಧಿಸಿದ ಸವಾಲುಗಳು ಏನೇ ಇರಲಿ, ಹೀಗೆ ಧೈರ್ಯ-ಧೀಮಂತಿಕೆ ತೋರುವವರಷ್ಟೇ ನಿಜನಾಯಕರಾಗುತ್ತಾರೆಯೇ ವಿನಾ, ಚಕ್ರವರ್ತಿಯವರು ಉಲ್ಲೇಖಿಸಿರುವಂತೆ ‘ಕೈಲಾಗದೆಂದು ಕಣ್ಣೀರು ಸುರಿಸುವವರಲ್ಲ’. ಇದನ್ನು ಸಂಬಂಧಪಟ್ಟವರು ಅರ್ಥಮಾಡಿಕೊಂಡರೆ ಜನಸಾಮಾನ್ಯರ ಬದುಕು ನಿರಾತಂಕವಾಗಿ ಸಾಗುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ.

| ರಮೇಶ್ ನಾಯಕ್, ಬೆಂಗಳೂರು

ಇನ್ನೂ ಪಾಠ ಕಲಿಯದ ಉಗ್ರರು

ಹಲವು ಸುತ್ತುಗಳ ಎನ್​ಕೌಂಟರ್, ಸರ್ಜಿಕಲ್ ದಾಳಿ ಹೀಗೆ ಬಗೆಬಗೆಯಾಗಿ ತಿಳಿಹೇಳುತ್ತಿದ್ದರೂ ಪಾಕ್-ಪ್ರೇರಿತ ಉಗ್ರರು ಇನ್ನೂ ಪಾಠ ಕಲಿತಿಲ್ಲ ಎಂಬುದಕ್ಕೆ ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಐವರು ಉಗ್ರರು ಹತರಾಗಿರುವುದೇ ಸಾಕ್ಷಿ. ತನಗೆ ಒತ್ತಾಸೆಯಾಗಿ ನಿಂತಿದ್ದ ಪಾಕಿಸ್ತಾನವೇ ಸ್ವತಃ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದು, ಇನ್ನು ಮುಂದೆ ತನಗೆ ಹಣಕಾಸಿನ ನೆರವನ್ನು ಅದು ನೀಡಲಾರದು ಎಂಬ ಕಹಿಸತ್ಯವನ್ನು ಮನಗಂಡಾದರೂ ಲಷ್ಕರ್-ಎ-ತೊಯ್ಬಾ, ಜೈಷ್-ಎ-ಮೊಹಮ್ಮದ್​ನಂಥ ಉಗ್ರ ಸಂಘಟನೆಗಳು ಕಿಡಿಗೇಡಿ ಕೃತ್ಯಗಳನ್ನು ನಿಲ್ಲಿಸಬೇಕಾಗಿದೆ. ಇಲ್ಲವಾದಲ್ಲಿ, ಅವು ಇನ್ನೂ ದುಬಾರಿ ಬೆಲೆ ತೆರಬೇಕಾದ ಸಂದರ್ಭ ಅನಿವಾರ್ಯವಾಗಬಹುದು.

| ಮಂಜುನಾಥ ಪುರೋಹಿತ್, ಮೈಸೂರು