ಭಾರತದ ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಧಾರ್ವಿುಕ ಕಿರುಕುಳಕ್ಕೊಳಪಟ್ಟ ಅಲ್ಪಸಂಖ್ಯಾತರು ಜೀವರಕ್ಷಣೆಗೋಸ್ಕರ ಭಾರತಕ್ಕೆ ಬಂದು, ಭಾರತೀಯ ಪೌರತ್ವ ಬಯಸಿದ್ದಾರೆ. ನಿಯಮಾನುಸಾರ ಅವರಿಗೆ ಪೌರತ್ವ ಒದಗಿಸಲು ಕಾಯ್ದೆ ತಿದ್ದುಪಡಿ ಮಾಡಿದ್ದು ಸ್ವಾಗತಾರ್ಹ. ಇದನ್ನು ಪ್ರಶ್ನಿಸುತ್ತಿರುವ ವಿರೋಧ ಪಕ್ಷಗಳು, ಸಂಘಟನೆಗಳು ಎಂದಾದರೊಂದು ದಿನ ಅಕ್ರಮ ವಲಸೆ ನಿಲ್ಲಬೇಕು ಮತ್ತು ಬಂದವರಲ್ಲಿ ಅರ್ಹರಿಗೆ ಪೌರತ್ವ ನೀಡಬೇಕು ಎಂಬ ಬಗ್ಗೆ ರಚನಾತ್ಮಕ ಸಲಹೆ ನೀಡಬೇಕು. ಈಗ ನಿಜವಾಗಿಯೂ ಯಾರಿಗೆ ತೊಂದರೆಯಾಗುತ್ತದೆಯೋ ಅವರ ಸಮಸ್ಯೆಗೆ ಪರಿಹಾರ ಸೂಚಿಸಬೇಕು. ಪ್ರತಿಭಟನೆ ಹಿಂಸಾತ್ಮಕ ರೂಪ ತಳೆದದ್ದು ಆತಂಕಕಾರಿ ಬೆಳವಣಿಗೆ. ದೇಶದ, ಸಾರ್ವಜನಿಕರ ಆಸ್ತಿ ಹಾಳು ಮಾಡುವುದು ಅನಾಗರಿಕ ವಿಧಾನ. ಅದರಂತೆಯೇ ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸುವುದು, ಆಕ್ಷೇಪಾರ್ಹ ಹೇಳಿಕೆ ನೀಡುವುದರಿಂದ ಪ್ರಜಾಪ್ರಭುತ್ವದ ಭದ್ರಬುನಾದಿಗೆ ಧಕ್ಕೆ ಉಂಟಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೆಲ ಜನರಲ್ಲಿರಬಹುದಾದ ಆತಂಕ, ಸಂದೇಹಗಳನ್ನು ದೂರಗೊಳಿಸಿ ಎಲ್ಲರನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಸರ್ಕಾರ, ವಿರೋಧ ಪಕ್ಷದವರು ಮತ್ತು ಪ್ರಜ್ಞಾವಂತ ನಾಗರಿಕರು ಸಾಮೂಹಿಕವಾಗಿ ಮಾಡಿ ಭಾರತದ ವರ್ಚಸ್ಸನ್ನು ಹೆಚ್ಚಿಸಲಿ, ಕಳಂಕ ಹಚ್ಚುವ ಪ್ರಯತ್ನಗಳಿಗೆ ತಡೆ ಹಾಕುವುದು ಎಲ್ಲರ ಆದ್ಯತೆಯಾಗಲಿ.
| ಉದಯ ಮ. ಯಂಡಿಗೇರಿ, ಧಾರವಾಡ