ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನವಿರಲಿ, ಜಾತಿ ಸಮ್ಮೇಳನವಿರಲಿ, ಕಾರ್ವಿುಕರ ಅಥವಾ ಇನ್ಯಾವುದೇ ವರ್ಗದ ಸಮ್ಮೇಳನವಾಗಲಿ ಶಾಸಕರನ್ನೋ, ಸಿಕ್ಕಿದರೆ ಸಚಿವರನ್ನೋ ಕರೆಸಿ ಉದ್ಘಾಟನೆ ಮಾಡಿಸುವುದು ವಾಡಿಕೆ ಎಂಬಂತಾಗಿದೆ. ಇದರಲ್ಲಿ ಕಾರ್ಯಕ್ರಮದ ಆಯೋಜಕರ ಸ್ವಾರ್ಥವೂ ಇದೆ. ಹಾಗೆ ಭಾಗವಹಿಸುವ ಶಾಸಕರು/ಸಚಿವರು ತಮ್ಮ ಬೇಡಿಕೆಯನ್ನು ಈಡೇರಿಸುತ್ತಾರೇನೋ ಎಂಬ ಆಸೆಯಿಂದ ಅವರನ್ನು ಕರೆಸಿ, ಸನ್ಮಾನ ಇತ್ಯಾದಿ ಮಾಡುತ್ತಾರೆ. ಆದರೆ ಇಂತಹ ಸಮ್ಮೇಳನದಲ್ಲಿ ಭಾಗವಹಿಸುವ ರಾಜಕೀಯ ಧುರೀಣರು ವೇದಿಕೆಯಿಂದ ಇಳಿಯುತ್ತಿದ್ದಂತೆ ತಾವು ಮಾಡಿದ ಭಾಷಣ, ನೀಡಿದ ಆಶ್ವಾಸನೆಗಳನ್ನು ಮರೆತು ಬಿಡುವುದು ಯಾಂತ್ರಿಕ ಪ್ರಕ್ರಿಯೆ ಎಂಬಂತಾಗಿದೆ. ಹೊಸದಾಗಿ ಸಚಿವರಾದವರನ್ನು ಅವರ ಜಾತಿಯ ಸಂಘಟನೆಗಳು ಕರೆಸಿ ಅದ್ಧೂರಿಯಾಗಿ ಸನ್ಮಾನಿಸುವುದು, ಸಮ್ಮೇಳನದಲ್ಲಿ ಭಾಗವಹಿಸಿದ ಸಚಿವರು, ಜಾತಿ/ಧರ್ಮದ ಸ್ಥಾಪಕರ ಅಥವಾ ಧಾರ್ವಿುಕ ಮುಖಂಡರ ಹೆಸರಿನಲ್ಲಿ ದತ್ತಿಪೀಠವನ್ನೋ ಇನ್ನೇನೋ ಸ್ಥಾಪಿಸುವುದು ಹೀಗೆ ವಿವಿಧ ಆಶ್ವಾಸನೆಗಳನ್ನು ನೀಡುವುದು ಇತ್ಯಾದಿ ನಡೆಯುತ್ತದೆ. ಇಂಥ ಆಶ್ವಾಸನೆಗಳನ್ನು ಕೇಳುವಾಗ ಮೂಡುವ ಜಿಜ್ಞಾಸೆಯೇನೆಂದರೆ, ಈ ಸಚಿವರು ಒಂದು ಜಾತಿ/ಧರ್ಮದ ಪ್ರತಿನಿಧಿಯೇ ಅಥವಾ ಇಡೀ ರಾಜ್ಯದ ಪ್ರತಿನಿಧಿಯೇ ಎಂಬುದು. ಇತ್ತೀಚಿನ ಗುತ್ತಿಗೆ ಶುಶ್ರೂಷಕರ ಸಮ್ಮೇಳನದಲ್ಲಿ ಸಚಿವರು ಗುತ್ತಿಗೆ ಶುಶ್ರೂಷಕರನ್ನು ಕಾಯಂಗೊಳಿಸುವ ಆಶ್ವಾಸನೆ ನೀಡಿರುವ ವರದಿ ಓದಿದಾಗ ಅನ್ನಿಸಿದ್ದು ಹೀಗೆ: ಒಂದರ್ಥದಲ್ಲಿ ಗುತ್ತಿಗೆ ಆಧಾರದ ನೇಮಕಾತಿ ಸರ್ಕಾರಿ ಪ್ರಾಯೋಜಿತ ಜೀತ. ಇವರಿಗೆ ಕಾಯಂ ನೌಕರರಿಗೆ ಇರುವುದಕ್ಕಿಂತಲೂ ಸ್ವಲ್ಪ ಹೆಚ್ಚಾಗಿಯೇ ಇರುವ ಕೆಲಸದ ಒತ್ತಡ, ಆದರೂ ಅಲ್ಪವೇತನ, ಉದ್ಯೋಗವೋ ತೀರಾ ಅಭದ್ರ. ಇದು ಕೇವಲ ಶುಶ್ರೂಷಕ ಹುದ್ದೆಗೆ ಸೀಮಿತವಲ್ಲ. ಇಂತಹ ಶೋಷಣೆ ಕೆಲವೊಂದು ಇಲಾಖೆಯಲ್ಲಿ ಆಡಳಿತಾತ್ಮಕ ಹುದ್ದೆಗಳೂ ಸೇರಿ ಬಹುತೇಕ ಎಲ್ಲ ವರ್ಗದ ಹುದ್ದೆಗೆ, ಎಲ್ಲ ಇಲಾಖೆಗಳಲ್ಲೂ ಸಾಮಾನ್ಯವಾಗಿದೆ. ಇದಕ್ಕೊಂದು ಪರಿಹಾರ ಯಾವಾಗ? ಗುತ್ತಿಗೆ ಕಾರ್ವಿುಕರೂ ಮನುಷ್ಯರಲ್ಲವೇ, ಅವರಿಗೂ ಆಸೆ-ಆಕಾಂಕ್ಷೆಗಳು, ಭವಿಷ್ಯದ ಬಗ್ಗೆ ಕನಸು ಇರುವುದಿಲ್ಲವೇ? ನಮ್ಮನ್ನಾಳುವವರಿಗೆ ಇದೇಕೆ ಅರ್ಥವಾಗುವುದಿಲ್ಲ?
| ಮೋಹನದಾಸ ಕಿಣಿ, ಕಾಪು