More

    ಜಗದಗಲ ಅಂಕಣ: ನಿನ್ನೆಯ ಆತಂಕ, ಇಂದಿನ ಅನಿಶ್ಚಿತತೆ, ನಾಳಿನ ಆಶಾವಾದ

    ಕೊಲ್ಲಿಯಲ್ಲಿ ಈ ಕ್ಷಣಕ್ಕೆ ಯುದ್ಧವಾಗುವ ಸಾಧ್ಯತೆ ಇಲ್ಲ. ಇರಾನ್ ಕುರಿತಂತೆ ಕೊಲ್ಲಿ ರಾಷ್ಟ್ರಗಳ ಮತ್ತು ಅಮೆರಿಕದ ಅಭಿಪ್ರಾಯಗಳನ್ನೂ, ಅದರ ವಿರುದ್ಧದ ಯೋಜನೆಗಳನ್ನೂ ರಷ್ಯಾ, ಫ್ರಾನ್ಸ್, ಬ್ರಿಟನ್ ಹಾಗೂ ಚೀನಾಗಳು ಬೆಂಬಲಿಸುತ್ತಿಲ್ಲ. ಅವೆಲ್ಲವನ್ನೂ ಎದುರು ಹಾಕಿಕೊಂಡು ಇರಾನ್ ಮೇಲೆರಗಲು ವ್ಯವಹಾರಚತುರ ಟ್ರಂಪ್ ಹೋಗಲಾರರು.

    ಜಗದಗಲ ಅಂಕಣ: ನಿನ್ನೆಯ ಆತಂಕ, ಇಂದಿನ ಅನಿಶ್ಚಿತತೆ, ನಾಳಿನ ಆಶಾವಾದಹದಿನೆಂಟು ವರ್ಷಗಳ ಹಿಂದೆ ಪೆಂಟಗನ್ ಮತ್ತು ವಿಶ್ವ ವ್ಯಾಪಾರ ಕೇಂದ್ರಗಳ ಮೇಲೆ ನಡೆದ ಅಲ್-ಖಯೀದಾ ದಾಳಿ ಇರಾಕ್ ಅನ್ನು ಮತ್ತೊಮ್ಮೆ ಮುಂಚೂಣಿಗೆ ತಂದದ್ದಷ್ಟೇ ಅಲ್ಲ, ಜಗತ್ತು ಇರಾನ್​ನತ್ತಲೂ ಗಮನ ಹರಿಸುವಂತೆ ಮಾಡಿತು. ತನ್ನ ಮೇಲಾದ ದಾಳಿಯ ಒಂದು ತಿಂಗಳಲ್ಲೇ ಅಮೆರಿಕದ ಸೇನೆ ಅಲ್-ಖಯೀದಾ ಮತ್ತು ಅದರ ಪೋಷಕ ತಾಲಿಬಾನ್ ಮೂಲಭೂತವಾದಿಗಳ ಬೇಟೆಗೆಂದು ಅಫ್ಘಾನಿಸ್ತಾನಕ್ಕೆ ಕಾಲಿಟ್ಟಿತಷ್ಟೇ. ಈ ಮೂಲಭೂತವಾದಿಗಳಲ್ಲಿ ಹೆಚ್ಚಿನವರು ಸದ್ದಿಲ್ಲದೆ ಅಫ್ಘಾನಿಸ್ತಾನದ ಗಡಿ ದಾಟಿ ನೆರೆಯ ಇರಾನ್ ಸೇರಿದರು. ತನ್ನ ನೆಲದಲ್ಲಿ ಅವರಿಗೆ ನಿಲ್ಲಲು ನೆಲೆ ನೀಡದ ಇರಾನ್ ಅವರು ತನ್ನ ಗಡಿ ದಾಟಿ ಇರಾಕ್ ಸೇರಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಕಟ್ಟಾ ಅಮೆರಿಕ-ವಿರೋಧಿ ಇಸ್ಲಾಮಿಕ್ ಮೂಲಭೂತವಾದಿಗಳು ಕಟ್ಟಾ ಅಮೆರಿಕ-ವಿರೋಧಿ ಸದ್ದಾಂ ಹುಸೇನ್​ನ ನಾಡಿನಲ್ಲಿ ನೆಲೆ ನಿಂತರು!

    ಇರಾನ್-ಇರಾಕ್ ಸಮರದ ಕಾಲದಲ್ಲಿ ಸದ್ದಾಂಗೆ ಅಮೆರಿಕದಿಂದಲೇ ರಾಸಾಯನಿಕ ಅಸ್ತ್ರಗಳ ಪೂರೈಕೆಯಾಗಿತ್ತು. ಅದನ್ನವನು ಇರಾನ್​ನ ವಿರುದ್ಧವಲ್ಲದೆ ತನ್ನದೇ ಕುರ್ದ್ ಜನರ ಮೇಲೂ ಪ್ರಯೋಗಿಸಿ ಸಹಸ್ರಾರು ಜನರನ್ನು ಕೊಂದಿದ್ದ. ಅವನ ಅಣ್ವಸ್ತ್ರದ ಬಯಕೆಯನ್ನು ಇಸ್ರೇಲ್ 1981ರ ಜೂನ್​ನಲ್ಲಿ ಒಸಿರಾಕ್ ನ್ಯೂಕ್ಲಿಯರ್ ರಿಯಾಕ್ಟರ್ ಮೇಲೆ ದಾಳಿಯೆಸಗುವುದರ ಮೂಲಕ ಹೊಸಕಿಹಾಕಿತ್ತು. ಆನಂತರ ಅವನು ಯುರೇನಿಯಂ ಸಂಸ್ಕರಣೆಯನ್ನು ರಹಸ್ಯವಾಗಿ ಕೈಗೊಂಡ ಬಗ್ಗೆ ವಿವರಗಳು ಲಭ್ಯವಿಲ್ಲ. ಅವನು ಹಾಗೆ ಮಾಡಿದ್ದೇ ಆದರೆ ಅದು ಅಮೆರಿಕಕ್ಕೆ ಗೊತ್ತಿರುವ ಹಾಗೂ ಅಮೆರಿಕ ಅದರ ಬಗ್ಗೆ ಬೆನ್ನು ತಿರುಗಿಸಿರುವ ಸಾಧ್ಯತೆ ಇದೆ. ಸೋವಿಯೆತ್ ವಿರುದ್ಧದ ಅಫ್ಘನ್ ಸಮರದಲ್ಲಿ ಪಾಕಿಸ್ತಾನವನ್ನು ತನ್ನ ಕಡೆಯೇ ಇರಿಸಿಕೊಳ್ಳುವ ಒಂದೇ ಉದ್ದೇಶದಿಂದ ಆ ದೇಶದ ಅಣ್ವಸ್ತ್ರ ಯೋಜನೆಗಳ ಬಗ್ಗೆ ಅಮೆರಿಕ ನಿರ್ಲಕ್ಷ್ಯ ತೋರಿ ಅದು ಅಣ್ವಸ್ತ್ರಗಳನ್ನು ಗಳಿಸಿಕೊಳ್ಳಲು ಪರೋಕ್ಷವಾಗಿ ಕಾರಣವಾದ ಉದಾಹರಣೆ ನಮ್ಮ ಮುಂದೆಯೇ ಇದೆ.

    ಕೇವಲ ಪ್ರಯಾಣಿಕರ ವಿಮಾನಗಳನ್ನೇ ಅಸ್ತ್ರಗಳನ್ನಾಗಿ ಬಳಸಿ, ಹಿಂದಿನ ಯಾವುದೇ ಶತ್ರುಗಳಾದ ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್​ಗಳು ಎಸಗಲಾಗದಿದ್ದಷ್ಟು ಹಾನಿಯನ್ನು ಅಮೆರಿಕಕ್ಕೆ ಎಸಗಿ, ಅದರ ಅಧ್ಯಕ್ಷ ಹಲವಾರು ಗಂಟೆಗಳ ಕಾಲ ಅಡಗಿಕೊಳ್ಳುವಂತೆ ಮಾಡಿದ ಅಲ್-ಖಯೀದಾಗೆ ಇರಾಕ್​ನಲ್ಲಿರುವ ರಾಸಾಯನಿಕ ಅಸ್ತ್ರಗಳು ಹಾಗೂ ಬಹುಷಃ… ಅಣ್ವಸ್ತ್ರಗಳು ಅಥವಾ ಅದರ ತಂತ್ರಜ್ಞಾನ ಸಿಕ್ಕಿಬಿಟ್ಟರೆ ಅದರ ವಿಧ್ವಂಸಕ ಸಾಮರ್ಥ್ಯ ಅದೆಷ್ಟು ಉಗ್ರವಾಗಬಹುದು? ‘ಇರಾಕ್​ನಲ್ಲಿ ಯಾವುದೇ ಸಮೂಹ ವಿನಾಶಕ ಶಸ್ತ್ರಾಸ್ತ್ರಗಳಿಲ್ಲ’ ಎಂದು ವಿಶ್ವಸಂಸ್ಥೆಯ ಆಯೋಗವೇ ಹೇಳಿದರೂ ಅಮೆರಿಕ ಆ ದೇಶದ ಮೇಲೆ 2003ರಲ್ಲಿ ದಾಳಿ ಎಸಗಿ ಇಡೀ ದೇಶವನ್ನು ಜಾಲಾಡತೊಡಗಿದ್ದಕ್ಕೆ ಇದು ಕಾರಣ.

    ಜನವರಿ 2009ರಲ್ಲಿ ಗದ್ದುಗೆಗೇರಿದ ಬರಾಕ್ ಒಬಾಮರ ಆಡಳಿತಾವಧಿಯಲ್ಲಿ ಇರಾಕ್ ಮತ್ತು ಅಫ್ಘಾನಿಸ್ತಾನದ ಬಗ್ಗೆ ಅಮೆರಿಕದ ನೀತಿಗಳು ಮೊನಚು ಕಳೆದುಕೊಂಡವು. ಈ ವಿಷಯಗಳ ಬಗ್ಗೆ ಚುನಾವಣಾ ಪ್ರಚಾರದ ವಿವಿಧ ಘಟ್ಟಗಳಲ್ಲಿ ಒಬಾಮ ನೀಡಿರುವ ಹೇಳಿಕೆಗಳಲ್ಲೇ ಅರ್ತಾಕತೆ ಹಾಗೂ ಅನನುಭವ ಎದ್ದುಕಾಣುತ್ತಿತ್ತು. ಭಯೋತ್ಪಾದನೆ ವಿರುದ್ಧದ ಸಮರವನ್ನು ಆದಷ್ಟು ಶೀಘ್ರವಾಗಿ ‘ವಿಜಯ’ದಲ್ಲಿ ಮುಕ್ತಾಯಗೊಳಿಸುವುದಾಗಿ ಹೇಳಿಕೆ ನೀಡಿದ ಒಬಾಮ ಇರಾಕ್​ನಿಂದ ಅಮೆರಿಕನ್ ಸೇನೆಯ ಬಹು ದೊಡ್ಡ ಭಾಗವನ್ನು ಹದಿನಾರು ತಿಂಗಳುಗಳಲ್ಲಿ ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಘೊಷಿಸಿದ್ದರು ಮತ್ತು ಅಧ್ಯಕ್ಷ ಗಾದಿಗೇರಿದ ನಂತರ ಅದನ್ನು ಕಾರ್ಯರೂಪಕ್ಕಿಳಿಸಿಯೂಬಿಟ್ಟರು.

    2003-08ರವರೆಗಿನ ಐದೂವರೆ ವರ್ಷಗಳ ಯುದ್ಧದಲ್ಲಿ ಅಮೆರಿಕ ಇರಾಕ್​ನಲ್ಲಿ ತನ್ನ ಸ್ವಂತ ರಕ್ಷಣೆಗೆ ಸಂಬಂಧಿಸಿದ ಗುರಿಗಳನ್ನು ಸಾಧಿಸಿಕೊಂಡದ್ದು ನಿಜ. ಸದ್ದಾಂನನ್ನು ಅದು ಹಿಡಿದು ನೇಣಿಗೇರಿಸಿತು, ಇರಾಕ್​ನಲ್ಲಿದ್ದ ಅಲ್-ಖಯೀದಾ ಕಾರ್ಯಕರ್ತರನ್ನು ಬಹುತೇಕವಾಗಿ ನಿರ್ನಾಮಗೊಳಿಸಿತು, ಇರಾಕ್​ನಲ್ಲಿದ್ದ ಅಸ್ತ್ರಗಳನ್ನೂ ಅವುಗಳ ತಂತ್ರಜ್ಞಾನಗಳನ್ನೂ ಕೈವಶ ಮಾಡಿಕೊಂಡು ನಾಶಪಡಿಸಿಯೂ ಇತ್ತು. ಆದರೆ ಇರಾಕ್​ನಲ್ಲಿ ಇಸ್ಲಾಮಿಕ್ ಮೂಲಭೂತವಾದದ ಬೆಳವಣಿಗೆಗೆ ಅವಕಾಶ ನೀಡದಂತಹ ಒಂದು ಪ್ರಜಾಪ್ರಭುತ್ವವಾದೀ ರಾಜಕೀಯ ವ್ಯವಸ್ಥೆಯ ನಿರ್ವಣದಲ್ಲಿ ಹಲವಾರು ಕಾರಣಗಳಿಂದಾಗಿ ಅಮೆರಿಕ ಸೋತಿತು. ಶಿಯಾ ಮತ್ತು ಸುನ್ನಿಗಳ ನಡುವೆ ಅಧಿಕಾರ ಹಂಚಿಕೆಯ ಒಂದು ವ್ಯಾವಹಾರಿಕ ವ್ಯವಸ್ಥೆ ರಚನೆಯಾಗತೊಡಗಿದ್ದರೂ ಎರಡೂ ಸಮುದಾಯಗಳ ನಡುವಿನ ಯಾದವೀಕಲಹ ದಿನೇದಿನೇ ಉಗ್ರವಾಗುತ್ತಿತ್ತು ಹಾಗೂ ಅದು ಇರಾಕ್​ನ ಭೌಗೋಳಿಕ ಸಮಗ್ರತೆಗೇ ಧಕ್ಕೆಯೊದಗಿಸುವಂತಿತ್ತು. ಇರಾಕ್ ಅನ್ನು ಆ ಸ್ಥಿತಿಯಲ್ಲೇ ಬಿಟ್ಟುಹೋದರೆ ಅರಾಜಕತೆ ಉಗ್ರವಾಗಿ ಆ ನತದೃಷ್ಟ ದೇಶ ಊಹಾತೀತ ರಕ್ತಪಾತದಲ್ಲಿ ಮುಳುಗಿಹೋಗುವ ಎಲ್ಲ ಸಾಧ್ಯತೆಗಳೂ ಇದ್ದವು. ಇದೆಲ್ಲಕ್ಕಿಂತಲೂ ದೊಡ್ಡ ಅಪಾಯವೆಂದರೆ, ಅಮೆರಿಕ ಪಾಲಿಗೆ ಒಂದು ಕ್ರೂರ ವಿರೋಧಾಭಾಸದಂತೆ ಇರಾಕ್​ನಲ್ಲಿ ಇರಾನ್ ಪ್ರಭಾವ ಒಂದೇಸಮನೆ ಏರುತ್ತಿತ್ತು!

    ಇರಾಕ್ ಒಂದು ಶಿಯಾ-ಪ್ರಧಾನ ನಾಡು. ಆದರೆ ಸದ್ದಾಂನ ಕಾಲದವರೆಗೂ ಅಲ್ಲಿನ ರಾಜಕೀಯ ಅಧಿಕಾರ ಇದ್ದದ್ದು ಸುನ್ನಿಗಳ ಕೈಯಲ್ಲಿ. ಸದ್ದಾಂ ಪತನಾನಂತರ ಅಮೆರಿಕದ ಉಸ್ತುವಾರಿಯಲ್ಲೇ ರಚಿತವಾದ ಹೊಸ ರಾಜಕೀಯ ವ್ಯವಸ್ಥೆಯಲ್ಲಿ ಶಿಯಾಗಳು ಮೇಲುಗೈ ಸಾಧಿಸಿದರು. ಪ್ರಧಾನಮಂತ್ರಿಯ ಸ್ಥಾನ ಶಿಯಾಗಳಿಗೂ, ರಬ್ಬರ್ ಸ್ಟಾ್ಯಂಪ್​ನಂತಿರುವ ರಾಷ್ಟ್ರಾಧ್ಯಕ್ಷನ ಸ್ಥಾನ ಕುರ್ದಿಗಳಿಗೂ ಮೀಸಲಾಗಿ ಸುನ್ನಿಗಳಿಗೆ ದಕ್ಕಿದ್ದು ಸಂಸತ್ತಿನ ಅಧ್ಯಕ್ಷ ಸ್ಥಾನವಷ್ಟೇ. ಹೀಗೆ ಇಂದು ಅರಬ್ ರಾಷ್ಟ್ರವೊಂದರಲ್ಲಿ ಮೊಟ್ಟಮೊದಲ ಬಾರಿಗೆ ಶಿಯಾಗಳು ರಾಜಕೀಯವಾಗಿ ಪ್ರಭಾವ ಗಳಿಸಿಕೊಂಡಿದ್ದಾರೆ. ಶಿಯಾಗಳು ಅಧಿಕವಾಗಿರುವ ದಕ್ಷಿಣ ಇರಾಕ್ ಅಂತೂ ಬಹುತೇಕ ಇರಾನೀ ಪ್ರಭಾವಮಯವಾಗಿಹೊಗಿದೆ. ಇರಾಕ್ ಛಿದ್ರವಾಗಬಹುದೆಂಬ ಆತಂಕ ಕೆಲವರ್ಷಗಳ ಹಿಂದೆ ದಟ್ಟವಾಗಿದ್ಡಾಗ ಸ್ವತಂತ್ರ ದಕ್ಷಿಣ ಇರಾಕ್ ಪೂರ್ಣವಾಗಿ ಇರಾನ್​ನ ತೆಕ್ಕೆಗೆ ಸಿಲುಕಿಹೋಗಬಹುದೆಂಬ, ಆ ಮೂಲಕ ಅರಬ್ ರಾಷ್ಟ್ರವೊಂದರಲ್ಲಿ ಪೂರ್ಣ ಪ್ರಮಾಣದ ಶಿಯಾ ರಾಜಕೀಯ ವ್ಯವಸ್ಥೆ ಅಸ್ತಿತ್ವಕ್ಕೆ ಬರಬಹುದಾದ ಸ್ಥಿತಿ ನಿರ್ವಣವಾಗಿತ್ತು. ಇದು ಸಾಲದೆಂಬಂತೆ, ಕೊಲ್ಲಿಯಲ್ಲಿ ಆಯಕಟ್ಟಿನ ಸ್ಥಾನವನ್ನು ದಕ್ಷಿಣ ಇರಾಕ್ ಪಡೆಯಬಹುದಾಗಿದ್ದ ಕಾರಣ ಆ ವಲಯದಲ್ಲಿ ಇರಾನ್​ನ ಸಾಮರಿಕ ಸ್ಥಿತಿ ವಿರೋಧಿಗಳನ್ನು ಅಂದರೆ ಅಮೆರಿಕ ಮತ್ತು ಸೌದಿ ಅರೇಬಿಯಾಗಳನ್ನು ಕಂಗೆಡಿಸುವ ಮಟ್ಟಕ್ಕೆ ಬೆಳೆದು ನಿಲ್ಲವಂತಿತ್ತು. ಇರಾಕ್ ಅನ್ನು ಹೇಗಾದರೂ ಒಂದಾಗಿಯೇ ಉಳಿಸಿಕೊಳ್ಳಬೇಕೆಂಬ ತೀರ್ವನಕ್ಕೆ ಅಮೆರಿಕ, ಸೌದಿ ಅರೇಬಿಯಾ ಮತ್ತು ಕೊಲ್ಲಿ ದೇಶಗಳು ಬಂದದ್ದು ಈ ಕಾರಣದಿಂದ.

    ಆದರೆ, ಇನ್ನೂ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಒಬಾಮರ ಎರಡನೆಯ ಆಡಳಿತಾವಧಿಯಲ್ಲಿ ಅಮೆರಿಕದ ಪ್ರಮುಖ ಸಹಯೋಗಿ ಸೌದಿ ಪ್ರಭುತ್ವದ ಮುಂದೆ ದುಃಸ್ವಪ್ನದಂತೆ ಎದುರಾದದ್ದು ಈಗಾಗಲೇ ಇರಾನ್​ನ ಪ್ರಭಾವಕ್ಕೊಳಗಾಗಿರುವ ದಕ್ಷಿಣ ಇರಾಕ್​ನ ಶಿಯಾ ಪ್ರಾಂತ್ಯಗಳಿಗೆ ಹೊಂದಿಕೊಂಡಿರುವ ಈಶಾನ್ಯ ಸೌದಿ ಅರೇಬಿಯಾದಲ್ಲೂ ಇರಾನ್​ನ ಪ್ರಭಾವದ ಕುರುಹುಗಳು ಕಾಣಿಸಿಕೊಂಡದ್ದು. ಇರಾನ್​ನ ಅದೃಷ್ಟರೇಖೆ ಹೀಗೇ ಉತ್ಕರ್ಷಕ್ಕೇರುತ್ತ ಹೋದರೆ ಈಶಾನ್ಯ ಸೌದಿ ಅರೇಬಿಯಾದಲ್ಲಿನ ಬಹುಸಂಖ್ಯಾತ ಶಿಯಾಗಳು ಸುನ್ನಿ ಸೌದಿ ಸರ್ಕಾರದ ವಿರುದ್ಧ ಬಂಡೇಳುವ ಗಳಿಗೆ ದೂರವೇನೂ ಇಲ್ಲ. ಆಗ ತನ್ನ ಸುತ್ತಲೂ ಹರಡಿರುವ ರಾಜಕೀಯ ಅಸ್ಥಿರತೆ ಮನೆಯೊಳಗೇ ನುಗ್ಗಿಬಂದಂತಹ ದುರಂತಕ್ಕೆ ಸೌದಿ ಅರೇಬಿಯಾ ಮುಖಾಮುಖಿಯಾಗುತ್ತದೆ.

    ಕೊಲ್ಲಿಯ ಎರಡನೆಯ ಅತಿ ಪ್ರಮುಖ ಅರಬ್ ರಾಷ್ಟ್ರ ಮತ್ತು ಅಮೆರಿಕದ ಸಹಯೋಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎದುರಿಸುತ್ತಿರುವ ಆತಂಕಗಳು ಇನ್ನೊಂದು ಬಗೆಯವು. ಕೊಲ್ಲಿಯಲ್ಲಿರುವ ಕೆಲವು ದ್ವೀಪಗಳ ಒಡೆತನದ ಕುರಿತಾಗಿ ಯುಎಇ ಮತ್ತು ಇರಾನ್ ನಡುವೆ ಈಗಾಗಲೇ ವೈಮನಸ್ಯವಿದೆ. ನೆರೆಯ ಬಹರೀನ್​ನಲ್ಲಿ 2011ರಲ್ಲಿ ಆರಂಭವಾಗಿ ತಣ್ಣಗಾದ ಬಹುಸಂಖ್ಯಾತ ಶಿಯಾಗಳ ಆಂದೋಲನ ಮತ್ತೆ ಭುಗಿಲೆದ್ದರೆ ಹಾಗೂ ಯಶಸ್ವಿಯಾದರೆ, ಅದರ ಜತೆಗೆ ಈಶಾನ್ಯ ಸೌದಿ ಅರೇಬಿಯಾ ಶಿಯಾ-ಸುನ್ನಿಗಳ ಕಾಳಗದ ಕಣವಾದರೆ ಯುಎಇ ಅಡಕತ್ತರಿಯಲ್ಲಿ ಸಿಕ್ಕಿಹೋಗುತ್ತದೆ. ಎಡಕ್ಕೆ ಇರಾನೀ ಬೆಂಬಲಿತ ಶಿಯಾ ಬಂಡುಕೋರರಿದ್ದರೆ ಬಲಕ್ಕೆ ಸಾಕ್ಷಾತ್ ಇರಾನ್!

    ವಾಸ್ತವದಿಂದ ದೂರವಿರುವಂತೆ ಕಂಡ ಒಬಾಮ ಅಮೆರಿಕದ ಕೊಲ್ಲಿ ಸಹಯೋಗಿಗಳ ಆತಂಕವನ್ನು ನಿರ್ಲಕ್ಷಿಸಿ, ಇರಾನ್ ಜತೆ ಅಣು ನಿಯಂತ್ರಣ ಒಪ್ಪಂದಕ್ಕೆ ಮುಂದಾದರು. 2015ರ ಡಿಸೆಂಬರ್​ನಲ್ಲಿ ಅಮೆರಿಕ ಮತ್ತು ನಾಲ್ಕು ಪಶ್ಚಿಮದ ಮಹಾಶಕ್ತಿಗಳು ಇರಾನ್ ಜತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಇರಾನ್ ತನ್ನ ಅಣ್ವಸ್ತ್ರ ಕಾರ್ಯಯೋಜನೆಗಳನ್ನು ನಿಲುಗಡೆಗೆ ತರುವಂತೆಯೂ, ಪ್ರತಿಯಾಗಿ ಇರಾನ್ ವಿರುದ್ಧದ ಆರ್ಥಿಕ ದಿಗ್ಬಂಧನಗಳನ್ನು ಹಂತಹಂತವಾಗಿ ತೆಗೆಯುವಂತೆಯೂ ವ್ಯವಸ್ಥೆಯಾಯಿತು. ಆರ್ಥಿಕ ದಿಗ್ಬಂಧನಗಳು ತೆರವಾಗಿ ಇರಾನ್ ತೈಲ ರಫ್ತಿನ ಮೂಲಕ ಮತ್ತೆ ವಿದೇಶಿ ವಿನಿಮಯ ಗಳಿಸಿಕೊಳ್ಳತೊಡಗಿದರೆ ಆ ಹಣದ ಒಂದು ಭಾಗ ಇರಾಕ್, ಈಶಾನ್ಯ ಸೌದಿ ಅರೇಬಿಯಾ ಮತ್ತು ಕೊಲ್ಲಿಯಲ್ಲಿ ಶಿಯಾಗಳ ರಾಜಕೀಯ ಆಕಾಂಕ್ಷೆಗಳ ಪೂರೈಕೆಗೆ ಬಳಕೆಯಾಗುವುದು ನಿಶ್ಚಿತವೆಂದು ವಲಯದ ಎಲ್ಲ ಅರಬ್ ದೇಶಗಳೂ ಆತಂಕ ಪಟ್ಟದ್ದರಲ್ಲಿ ಅರ್ಥವಿದೆ. ಜತೆಗೆ ತೆರೆಮರೆಯಲ್ಲೇ ಇರಾನ್ ತನ್ನ ಅಣ್ವಸ್ತ್ರ ಕಾರ್ಯಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಸಾಧ್ಯತೆಯೂ ಇತ್ತು. ಇದಾವುದನ್ನೂ ಒಬಾಮ ಸರ್ಕಾರ ಅರ್ಥ ಮಾಡಿಕೊಳ್ಳಲೇ ಇಲ್ಲ.

    ಆದರೆ ಟ್ರಂಪ್ ಅಧ್ಯಕ್ಷಗಾದಿಗೇರುತ್ತಿದ್ದಂತೆ ಇರಾನ್ ಬಗ್ಗೆ ಅಮೆರಿಕದ ನೀತಿ ಸಾರಾಸಗಟಾಗಿ ಬದಲಾಯಿತು. ಅಣು ಒಪ್ಪಂದಕ್ಕೆ ಇರಾನ್ ನಿಷ್ಠವಾಗಿ ನಡೆದುಕೊಳ್ಳುತ್ತಿಲ್ಲವೆಂದು ನೇರವಾಗಿ ಆಪಾದಿಸಿದ ಟ್ರಂಪ್ ಒಪ್ಪಂದದಿಂದ ಅಮೆರಿಕವನ್ನು ಹೊರಗೊಯ್ಯುವುದಾಗಿ 2018ರ ಮೇ ನಲ್ಲಿ ಘೊಷಿಸಿ ಒಂದು ವರ್ಷದೊಳಗೆ ಹಾಗೆ ಮಾಡಿಯೂ ಬಿಟ್ಟರು. ಇರಾನ್ ಬಗ್ಗೆ ಅಮೆರಿಕದ ನೀತಿಗಳು ಹೀಗೆ ಬದಲಾಗುತ್ತಿದ್ದಂತೆ ಸಹಜವಾಗಿಯೇ ಅಮೆರಿಕ ಮತ್ತು ಕೊಲ್ಲಿಯ ಅರಬ್ ದೇಶಗಳ ನಡುವೆ ಇರಾನ್ ವಿರುದ್ಧದ ಸ್ನೇಹ ಸಹಕಾರ ದಿನೇದಿನೇ ವೃದ್ಧಿಸುತ್ತಿದೆ. ಅದು 2018ರ ಅಕ್ಟೋಬರ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 73ನೇ ವಾರ್ಷಿಕ ಅಧಿವೇಶನದಲ್ಲಿ ಯಾವ ಮಟ್ಟಕ್ಕೇರಿತೆಂದರೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಗಲ್ಪ್ ಕೋಆಪರೇಟಿವ್ ಕೌನ್ಸಿಲ್​ನ ಎಲ್ಲ ಆರು ದೇಶಗಳ (ಕುವೈತ್, ಸೌದಿ ಅರೇಬಿಯಾ, ಕತಾರ್, ಬಹರೀನ್, ಯುಎಇ ಮತ್ತು ಒಮಾನ್) ಹಾಗೂ ಈಜಿಪ್ತ್ ಮತ್ತು ಜೋರ್ಡಾನ್​ಗಳ ವಿದೇಶ ಮಂತ್ರಿಗಳ ಜತೆ ಮಾತುಕತೆ ನಡೆಸಿದರು. ಈ ಮಾತುಕತೆಗಳ ಕುರಿತಾಗಿ ಅಮೆರಿಕದ ವಿದೇಶಾಂಗ ಇಲಾಖೆ ನೀಡಿದ ಪ್ರಕಟಣೆ ಹೀಗಿತ್ತು-‘(ಕೊಲ್ಲಿ) ವಲಯ ಹಾಗೂ ಅಮೆರಿಕಕ್ಕೆ ಇರಾನ್​ನಿಂದ ಬರುತ್ತಿರುವ ಅಪಾಯಗಳನ್ನು ಎದುರಿಸುವ ಅಗತ್ಯದ ಬಗ್ಗೆ ಭಾಗಿದಾರರು ಸಹಮತಿ ವ್ಯಕ್ತಪಡಿಸಿದರು’. ಅಷ್ಟೇ ಅಲ್ಲ, ಇರಾನ್ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ನ್ಯಾಟೋ ಮಾದರಿಯ ‘ಮಧ್ಯಪ್ರಾಚ್ಯ ಸಾಮರಿಕ ಒಕ್ಕೂಟ’ (Mಜಿಛಛ್ಝಛಿ ಉಚಠಠಿ ಖಠ್ಟಿಚಠಿಛಿಜಜ್ಚಿ ಅ್ಝಚ್ಞ್ಚ) ಎಂಬ ರಕ್ಷಣಾ ಒಕ್ಕೂಟವನ್ನು ಸ್ಥಾಪಿಸುವ ಬಗ್ಗೆ ಎಲ್ಲ ಸಚಿವರೂ ಫಲಪ್ರದ ಮಾತುಕತೆಗಳನ್ನು ನಡೆಸಿದರೆಂದೂ ಆ ಪ್ರಕಟಣೆ ಹೇಳಿತು! ಇದೆಲ್ಲವೂ ಸೂಚಿಸಿದ್ದು ಇರಾನ್ ಕುರಿತಂತೆ ಅಧ್ಯಕ್ಷ ಟ್ರಂಪ್ ಖಡಕ್ ನಿಲುವುಗಳನ್ನು ತಳೆಯುತ್ತಾರೆಂದು. ಅದೀಗ ಎಲ್ಲರಿಗೂ ಕಾಣುವಂತೆ ವ್ಯಕ್ತವಾಗುತ್ತಿದೆ.

    ಆದರೆ ಕೊಲ್ಲಿಯಲ್ಲಿ ಈ ಕ್ಷಣಕ್ಕೆ ಯುದ್ಧವಾಗುವ ಸಾಧ್ಯತೆ ಇಲ್ಲ. ಅಮೆರಿಕ ಬಗ್ಗೆ ಹೇಳುವುದಾದರೆ, ಇರಾನ್ ಕುರಿತಂತೆ ಕೊಲ್ಲಿ ರಾಷ್ಟ್ರಗಳ ಮತ್ತು ಅಮೆರಿಕದ ಅಭಿಪ್ರಾಯಗಳನ್ನೂ, ಅದರ ವಿರುದ್ಧದ ಯೋಜನೆಗಳನ್ನೂ ರಷ್ಯಾ, ಫ್ರಾನ್ಸ್, ಬ್ರಿಟನ್ ಹಾಗೂ ಚೀನಾಗಳು ಬೆಂಬಲಿಸುತ್ತಿಲ್ಲ. ಅವೆಲ್ಲವನ್ನೂ ಎದುರು ಹಾಕಿಕೊಂಡು ಇರಾನ್ ಮೇಲೆರಗಲು ವ್ಯವಹಾರಚತುರ ಟ್ರಂಪ್ ಹೋಗಲಾರರು. ಇರಾನ್ ಬಗ್ಗೆ ಹೇಳುವುದಾದರೆ, ಯುದ್ಧವಾದರೆ ತಾನು ನೇರ ಹೊಡೆತ ತಿನ್ನುವುದಾಗಿಯೂ, ದೂರದಲ್ಲಿರುವ ಅಮೆರಿಕದ ಕೂದಲನ್ನೂ ಕೊಂಕಿಸುವುದು ತನ್ನಿಂದಾಗದೆಂದು ತೆಹರಾನ್​ಗೆ ಚೆನ್ನಾಗಿಯೇ ಗೊತ್ತು. ಯುದ್ಧದ ಬೆದರಿಕೆಯೊಡ್ಡುತ್ತಲೇ ಇರಾನ್ ಅನ್ನು ಮಣಿಸಿ ಅಮೆರಿಕದ ದಾರಿಗಿಳಿಸಿಕೊಳ್ಳುವುದು ಅಧ್ಯಕ್ಷ ಟ್ರಂಪ್​ರ ಇಂಗಿತವಾಗಿರುವಂತಿದೆ. ಇರಾನ್​ನ ಧರ್ಮಗುರುಗಳು ಇಂದು ಬಹಿರಂಗವಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೂ, ಒಳಗೊಳಗೆ ಯಾವ ಚಿಂತನೆಯಲ್ಲಿ ತೊಡಗಿದ್ದಾರೆಂಬುದರ ಮೇಲೆ ಮುಂದಿನ ದಿನಗಳ ಕೊಲ್ಲಿ ರಾಜಕೀಯ ನಿರ್ಧಾರವಾಗುತ್ತದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts