ಎಲ್ಲಿ ಹೋದಿರಿ ನೇತಾಜೀ? ನಿಮಗೇನಾಯಿತು ಹೇಳಿ!

ವಾಜಪೇಯಿ ಸರ್ಕಾರ ನೇಮಿಸಿದ ಮೂರನೆಯ, ಜಸ್ಟಿಸ್ ಮುಖರ್ಜಿ ಆಯೋಗ, ತೈಪೈಯಲ್ಲಿ ಘಟಿಸಿದ ವಿಮಾನಾಪಘಾತದ ವಿವರ ನೀಡುವಂತೆ 2003ರಲ್ಲಿ ಅಮೆರಿಕ ಸರ್ಕಾರಕ್ಕೆ ಮನವಿ ಮಾಡಿ ಕೊಂಡಿತು. ಅದಕ್ಕೆ ಬಂದ ಉತ್ತರ, ‘…ಆ ದಿನದಂದಾಗಲೀ, ಅದರ ಹಿಂದಿನ ಮತ್ತು ಮುಂದಿನ ಆರು ತಿಂಗಳುಗಳಲ್ಲಾಗಲೀ ತೈಪೈಯಲ್ಲಿ ಯಾವುದೇ ವಿಮಾನಾಪಘಾತ ಸಂಭವಿಸಿದ ದಾಖಲೆ ಇಲ್ಲ’.

‘ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದು ಹೇಳಿ, ತನ್ನ ರಕ್ತವನ್ನೇ ದೇಶಕ್ಕಾಗಿ ಚೆಲ್ಲಿ ಹಿಂತಿರುಗಿ ನೋಡದೇ ಹೊರಟುಹೋದ ನೇತಾಜಿ ಸುಭಾಷ್ ಚಂದ್ರ ಬೋಸ್​ರ ನೂರಾಇಪ್ಪತ್ತೆರಡನೇ ಜನ್ಮದಿನವಾದ ಇಂದು ಅವರ ಅಂತ್ಯದ ಬಗ್ಗೆ ಮಾತಾಡುವುದು ಉಚಿತವೆನಿಸದಿದ್ದರೂ, ಇನ್ನೂ ರಹಸ್ಯವಾಗಿಯೇ ಉಳಿಸಲಾಗಿರುವ ಆ ವಿಷಯದ ಕುರಿತಾಗಿನ ಕುತೂಹಲಕರ ಮಾಹಿತಿಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದೇನೆ.

ಜರ್ಮನ್-ಜಪಾನಿ ಸೇನೆಗಳಿಗೆ ಸೆರೆಸಿಕ್ಕಿದ್ದ ಬ್ರಿಟಿಷ್ ಭಾರತೀಯ ಸೇನೆಯ ಸೈನಿಕರನ್ನೂ, ಆಗ್ನೇಯ ಏಷ್ಯಾದಲ್ಲಿದ್ದ ಭಾರತೀಯರನ್ನೂ ಒಗ್ಗೂಡಿಸಿ ನೇತಾಜಿ ‘ಆಜಾದ್ ಹಿಂದ್’ ಸೇನೆ ಕಟ್ಟಿ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದೀಗ ಇತಿಹಾಸ. ಜರ್ಮನಿ ಶರಣಾಗತಗೊಂಡ ನಂತರವೂ ಯುದ್ಧ ಮುಂದುವರಿಸಿದ ಜಪಾನ್ ಮೂರು ತಿಂಗಳುಗಳ ನಂತರ ಎರಡು ಅಣ್ವಸ್ತ್ರಗಳ ಹೊಡೆತಕ್ಕೆ ಸಿಕ್ಕಿ ಜಝುರಿತಗೊಂಡು ಶರಣಾಗತಿ ಘೊಷಿಸಿದಾಗ ನೇತಾಜಿ ಅತಂತ್ರರಾಗಿಬಿಟ್ಟರು. ಇನ್ನು ‘ನನಗೆ ನೆಲೆಯೆಲ್ಲಿ’ ಎನ್ನುವುದು ಅವರ ಮುಂದೆ ಭೂತಾಕಾರವಾಗಿ ಎದ್ದುನಿಂತ ಪ್ರಶ್ನೆ. ಅವರು ಅತೀವವಾಗಿ ಬಯಸಿದ್ದ ಸ್ವಾತಂತ್ರ್ಯ ದೇಶಕ್ಕಿನ್ನೂ ಲಭಿಸಿರಲಿಲ್ಲ, ಬ್ರಿಟಿಷರಿನ್ನೂ ಭಾರತದಿಂದ ತೊಲಗಿರಲಿಲ್ಲ. ನೇತಾಜಿಯವರನ್ನೂ, ‘ಆಜಾದ್ ಹಿಂದ್’ ಸೇನೆಯ ಸಹಸ್ರಾರು ಯೋಧರನ್ನೂ ‘ದೇಶದ್ರೋಹಿಗಳು’ ಎಂದು ಘೊಷಿಸಿ ಬ್ರಿಟಿಷ್ ವಸಾಹತುಶಾಹಿ ಸತ್ತೆ ಅವರೆಲ್ಲರ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ವಿಚಾರಣೆ ಆರಂಭಿಸುವ ತಯಾರಿಯಲ್ಲಿತ್ತು. ಹೀಗಾಗಿ ಭಾರತಕ್ಕೆ ಹಿಂತಿರುಗುವುದೆಂದರೆ ನೇಣಿನ ಕುಣಿಕೆಯನ್ನು ಕೈಯಾರೆ ಕೊರಳಿಗೆ ತೊಡಿಸಿಕೊಂಡಂತೆ. ಸೋತು ಶರಣಾಗತವಾಗಿದ್ದ ಜರ್ಮನಿಯಲ್ಲಿ ನೇತಾಜಿಯವರಿಗೆ ಸ್ಥಳವಿರಲಿಲ್ಲ. ಬ್ರಿಟನ್​ನ ಮಿತ್ರ ಅಮೆರಿಕ ಅವರನ್ನು ಬರಮಾಡಿಕೊಳ್ಳುತ್ತಿರಲಿಲ್ಲ. ಆಗ್ನೇಯ ಏಷ್ಯಾದ ತಮ್ಮೆಲ್ಲ ಮಾಜಿ ವಸಾಹತುಗಳನ್ನು ಜಪಾನೀಯರ ಶರಣಾಗತಿಯ ತರುವಾಯ ಮತ್ತೆ ಕೈವಶ ಮಾಡಿಕೊಳ್ಳಲು ಬ್ರಿಟಿಷ್, ಫ್ರೆಂಜ್, ಡಚ್ ಸೇನೆಗಳು ಮುಂದೊತ್ತಿಬರುತ್ತಿದ್ದವು. ತಾವಿದ್ದ ಸೈಗಾನ್​ಗೆ ಫ್ರೆಂಚ್ ಸೇನೆ ಯಾವ ಕ್ಷಣದಲ್ಲಾದರೂ ಬರಬಹುದಾಗಿದ್ದ ಕಾರಣ ನೇತಾಜಿಯವರು ಅಲ್ಲಿಂದ ತತ್​ಕ್ಷಣ ಓಡಬೇಕಾಗಿತ್ತು. ಅಲ್ಲಿಯವರೆಗೆ ಅವರನ್ನು ಸಲಹಿದ್ದ ಜಪಾನೀಯರು ಅಸಹಾಯಕತೆಯಲ್ಲಿ ಕೇಳಿದ್ದು,‘ ನೀವು ನಮ್ಮಲ್ಲಿಗೆ ಬಂದರೂ ಒಪ್ಪಂದದ ಪ್ರಕಾರ ಜಪಾನ್ ಇನ್ನೊಂದು ವಾರದಲ್ಲಿ ಅಮೆರಿಕದ ಸೇನಾಡಳಿತಕ್ಕೆ ಒಳಪಡಲಿದೆ, ಆಗೇನು ಮಾಡುತ್ತೀರಿ?’ ಎಂಬ ಉತ್ತರವಿಲ್ಲದ ಪ್ರಶ್ನೆ. ಆಗ ನೇತಾಜಿಯವರಿಗೆ ನೆನಪಾದದ್ದು ಸೋವಿಯೆತ್ ಯೂನಿಯನ್.

ಬ್ರಿಟನ್ ಮತ್ತು ಅಮೆರಿಕಗಳ ಬದ್ಧವೈರಿ ಸ್ಟಾ್ಯಲಿನ್ ಯುದ್ಧಕಾಲದಲ್ಲಿ ಅನುಕೂಲಸಿಂಧು ಮಾರ್ಗವನ್ನನುಸರಿಸಿ ಆ ದೇಶಗಳೊಂದಿಗೆ ಸ್ಥಾಪಿಸಿಕೊಂಡಿದ್ದ ಸ್ನೇಹ-ಸಹಕಾರ ಮಹಾಯುದ್ಧ ಮುಗಿದೊಡನೇ ಆವಿಯಂತೆ ಕರಗಿಹೋಗಿ ಹಿಂದಿನ ವೈರ ಮತ್ತೆ ಭುಗಿಲೆದ್ದಿದ್ದ ಕಾರಣದಿಂದಾಗಿ ತಮಗೆ ಸೋವಿಯೆತ್ ಯೂನಿಯನ್​ನಲ್ಲಿ ಆಶ್ರಯ ದೊರೆಯಬಹುದೆಂದು ನೇತಾಜಿ ರ್ತಸಿದ್ದು ಸಹಜವೇ ಆಗಿತ್ತು. ಅವರ ವಿಚಾರಸರಣಿಯನ್ನು ಒಪ್ಪಿದ ಜಪಾನೀಯರು ಅವರನ್ನು ಸೋವಿಯೆತ್ ಗಡಿಯವರೆಗೆ ಅಂದರೆ ಆಗಷ್ಟೇ ರಷಿಯನ್ನರ ವಶವಾಗಿದ್ದ ಉತ್ತರ ಚೀನಾದ ಮಂಚೂರಿಯಾಗೆ ತಲುಪಿಸುವ ಆಶ್ವಾಸನೆ ನೀಡಿದರು. ಪಲಾಯನಕ್ಕೆ ನಿಗದಿಯಾದ ದಿನ ಆಗಸ್ಟ್ 18, 1945.

ಫಿಲಿಪೀನ್ಸ್​ನಿಂದ ಹೊರಟುಬಂದು ಸೈಗಾನ್, ತೈಪೈ, ಟೋಕಿಯೋ ಮೂಲಕ ಮಂಚೂರಿಯಾಗೆ ಹೋಗಲಿದ್ದ ವಿಮಾನವೊಂದರಲ್ಲಿ ಎರಡು ಆಸನಗಳ ವ್ಯವಸ್ಥೆಯಾಯಿತು, ಒಂದು ನೇತಾಜಿಯವರಿಗೆ, ಮತ್ತೊಂದು ಅವರ ನಿಕಟ ಸಹಯೋಗಿ ಹಬೀಬುರ್ ರೆಹಮಾನ್ ಅವರಿಗೆ. ನಂತರ ಜಪಾನೀ ಸರ್ಕಾರ ಹೇಳಿದ ಪ್ರಕಾರ ಸೈಗಾನ್​ನಲ್ಲಿ ನೇತಾಜಿ ಮತ್ತು ರೆಹಮಾನ್ ಅವರನ್ನು ಹತ್ತಿಸಿಕೊಂಡ ವಿಮಾನ ತೈವಾನ್ ದ್ವೀಪದ ತೈಪೈ ನಗರದಲ್ಲಿಳಿದು, ಇಂಧನ ತುಂಬಿಸಿಕೊಂಡು ಮತ್ತೆ ಗಗನಕ್ಕೇರಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಯಿತು. ತೀವ್ರ ಸುಟ್ಟಗಾಯಗಳಿಗೆ ತುತ್ತಾದ ನೇತಾಜಿ ಟೋಕಿಯೋದ ಆಸ್ಪತ್ರೆಯಲ್ಲಿ ನಿಧನಹೊಂದಿದರು. ನಂತರ ಸ್ವತಂತ್ರ ಭಾರತದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕೃತ ದಾಖಲೆಗಳಲ್ಲಿ, ಕಾಂಗ್ರೆಸ್ ಸರ್ಕಾರಿ ಪ್ರಾಯೋಜಿತ ಇತಿಹಾಸಕಾರರು ಪಠ್ಯಪುಸ್ತಕಗಳಲ್ಲಿ ನಮ್ಮ ತಲೆಗೆ ತುಂಬಲು ಪ್ರಯತ್ನಿಸಿದ್ದು ಇದನ್ನೇ. ಆದರೆ ಇದು ನಿಜವಲ್ಲ ಎನ್ನಲು ಆಧಾರಗಳಿಂದು ನಮ್ಮೆದುರಿಗಿವೆ.

ನೇತಾಜಿಯವರ ಜತೆಗೇ ಪ್ರಯಾಣಿಸಿದ ಹಬೀಬುರ್ ರೆಹಮಾನ್ ನಂತರ ಟೋಕಿಯೋದಲ್ಲಿ ಆರೋಗ್ಯವಾಗಿಯೇ ಕಾಣಿಸಿಕೊಂಡ ವರದಿಯಿದೆ. ಅಪಘಾತದಿಂದಾಗಿ ಒಬ್ಬರ ದೇಹ ಸುಟ್ಟುಹೋದರೆ, ಜತೆಯಲ್ಲೇ ಇದ್ದ ಮತ್ತೊಬ್ಬರು ಕೂದಲೂ ಕೊಂಕದಂತೆ ಹೇಗೆ ಪಾರಾದರು? ಈ ಪ್ರಶ್ನೆಯೊಂದಿಗೆ ನಮ್ಮ ಪತ್ತೆದಾರಿಯನ್ನು ಆರಂಭಿಸೋಣ. ನೇತಾಜಿಯವರ ಮರಣದ ಸುದ್ದಿಯನ್ನು ನಂಬದ ಭಾರತೀಯರ ಒತ್ತಾಯದಿಂದಾಗಿ ಸರ್ಕಾರಗಳು ತನಿಖೆಗಾಗಿ ಇದುವರೆಗೆ ಮೂರು ಆಯೋಗಗಳನ್ನು ನೇಮಿಸಿದೆ. ನೆಹರು 1956ರಲ್ಲಿ ನೇಮಿಸಿದ ಮೊದಲ ಶಾ ನವಾಜ್ ಸಮಿತಿ ಅದೇನು ಸಾಧಿಸಿತೆಂದು ಮಾಹಿತಿ ಲಭ್ಯವಿಲ್ಲ. ಆದರೆ ಎರಡನೆಯ ಮತ್ತು ಮೂರನೆಯ ಆಯೋಗಗಳಿಗೆ ಲಭ್ಯವಾದ ಮಾಹಿತಿಗಳು ಆಸಕ್ತಿಕರವಾಗಿವೆ. 1970ರಲ್ಲಿ ನೇಮಕವಾದ ಜಸ್ಟಿಸ್ ಖೊಸ್ಲಾ ಸಮಿತಿಗೆ ನೆಹರುರ ಅಧಿಕೃತ ಸ್ಟೆನೋಗ್ರಾಫರ್ ಆಗಿದ್ದ ಶ್ಯಾಮ್ಾಲ್ ಜೈನ್ ಲಿಖಿತ ಹೇಳಿಕೆಯೊಂದನ್ನು ಸಹಿಯೊಂದಿಗೆ ಸಲ್ಲಿಸಿದ್ದಾರೆ. ಅದರ ಪ್ರಕಾರ, ಡಿಸೆಂಬರ್ 26, 1945ರ ರಾತಿ ಹನ್ನೊಂದು ಗಂಟೆಗೆ ‘ಯಾವ ಸ್ಥಿತಿಯಲ್ಲಿರುವಿರೋ ಆ ಸ್ಥಿತಿಯಲ್ಲೇ’ ತತ್​ಕ್ಷಣ ಟೈಪ್​ರೈಟರ್ ಸಮೇತ ದರಿಯಾ ಗಂಜ್​ನಲ್ಲಿದ್ದ ಅಸಫ್ ಆಲಿಯವರ ಮನೆಗೆ ಹೊರಟುಬರುವಂತೆ ಜೈನ್ ಅವರಿಗೆ ನೆಹರುರಿಂದ ಕರೆಬಂತು. ತರಾತುರಿಯಲ್ಲಿ ಓಡಿದ ಜೈನ್ ಮುಂದೆ ನೆಹರು ಎರಡು ಕಾಗದಗಳನ್ನಿಟ್ಟರು. ರಷಿಯನ್​ನಲ್ಲಿದ್ದ ಪತ್ರವೊಂದರ ಇಂಗ್ಲಿಷ್ ಅನುವಾದವಾದ ಮೊದಲ ಕಾಗದದಲ್ಲಿದ್ದುದು, ‘ನಿಮ್ಮ ಸುಭಾಷ್ ಚಂದ್ರ ಬೋಸ್ ನನ್ನ ಸೆರೆಯಾಳಾಗಿದ್ದಾರೆ, ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂಬ ಬಗ್ಗೆ ನನಗೆ ನಿಮ್ಮ ಅಭಿಪ್ರಾಯದ ಅಗತ್ಯವಿದೆ’ ಎಂದು ಸೋವಿಯೆತ್ ಸರ್ವಾಧಿಕಾರಿ ಸ್ಟಾ್ಯಲಿನ್ ನೆಹರುಗೆ ಬರೆದ ಒಕ್ಕಣೆ. ಎರಡನೆಯ ಪತ್ರ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಆಟ್ಲೀ ಅವರಿಗೆ ನೆಹರು ಬರೆದ ಪತ್ರದ ಕರಡು. ಅದರಲ್ಲಿದ್ದುದು, .‘..ಬೋಸ್ ರಷಿಯನ್ನರ ಸೆರೆಯಲ್ಲಿರುವ ಬಗ್ಗೆ ಸ್ಟಾ್ಯಲಿನ್​ರಿಂದ ಸಂದೇಶ ಬಂದಿದೆ. ಬೋಸ್ ಬ್ರಿಟಿಷ್ ಸರ್ಕಾರದ ವಿರುದ್ಧ ಶಸ್ತ್ರವೆತ್ತಿ ಕಾದಾಡಿದವರು. ಹೀಗಾಗಿ ಅವರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ನಿಮಗೆ ಸೇರಿದ್ದು’.

ಅವೆರಡನ್ನೂ ಟೈಪ್ ಮಾಡಿಕೊಟ್ಟ ನಂತರ ಟೈಪ್​ರೈಟರ್ ಹೊರತಾಗಿ, ಬ್ಯಾಕ್ ಪೇಪರ್, ಕಾರ್ಬನ್ ಸೇರಿದಂತೆ ಅಲ್ಲಿ ಉಪಯೋಗಿಸಿದ ಎಲ್ಲ ಟೈಪಿಂಗ್ ಪರಿಕರಗಳನ್ನೂ ನೆಹರು ತಮ್ಮಿಂದ ತೆಗೆದುಕೊಂಡರೆಂದು ಜೈನ್ ಪ್ರಶ್ನೋತ್ತರದಲ್ಲಿ ಜಸ್ಟಿಸ್ ಖೋಸ್ಲಾ ಅವರಿಗೆ ಹೇಳಿದರು.

ವಾಜಪೇಯಿ ಸರ್ಕಾರ ನೇಮಿಸಿದ ಮೂರನೆಯ, ಜಸ್ಟಿಸ್ ಮುಖರ್ಜಿ ಆಯೋಗ, ತೈಪೈಯಲ್ಲಿ ಘಟಿಸಿದ ವಿಮಾನಾಪಘಾತದ ವಿವರ ನೀಡುವಂತೆ 2003ರಲ್ಲಿ ಅಮೆರಿಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿತು. ಅದಕ್ಕೆ ಬಂದ ಉತ್ತರ, ‘…ಆ ದಿನದಂದಾಗಲೀ, ಅದರ ಹಿಂದಿನ ಮತ್ತು ಮುಂದಿನ ಆರು ತಿಂಗಳುಗಳಲ್ಲಾಗಲೀ ತೈಪೈಯಲ್ಲಿ ಯಾವುದೇ ವಿಮಾನಾಪಘಾತ ಸಂಭವಿಸಿದ ದಾಖಲೆ ಇಲ್ಲ’.

ಜೈನ್​ರ ಹೇಳಿಕೆ ಮತ್ತು ಅಮೆರಿಕನ್ ಸರ್ಕಾರದ ಉತ್ತರದ ಅರ್ಥಗಳು ಎರಡು. 1. ನೇತಾಜಿಯವರಿದ್ದ ವಿಮಾನ ಅಪಘಾತಕ್ಕೀಡಾಗಲಿಲ್ಲ. 2. ವ್ಯವಸ್ಥೆಯಾಗಿದ್ದಂತೆ ನೇತಾಜಿ ಸುರಕ್ಷಿತವಾಗಿ ಮಂಚೂರಿಯಾ ತಲುಪಿ ಅಲ್ಲಿಂದ ಗಡಿ ದಾಟಿ ಸೋವಿಯೆತ್ ನೆಲ ಪ್ರವೇಶಿಸಿದ್ದಾರೆ. ದುರಂತವೆಂದರೆ ಜೈನ್​ರ ಹೇಳಿಕೆಯನ್ನು ಜಸ್ಟಿಸ್ ಖೋಸ್ಲಾ ಸಮಿತಿ ತನ್ನ ಮುಖ್ಯ ವರದಿಯ ಭಾಗವಾಗಿಸದೆ ಅನೆಕ್ಷರ್​ನಲ್ಲಿ ಸೇರಿಸಿದ ಕಾರಣ ಅದು ಬಹುತೇಕ ಅಜ್ಞಾತವಾಗಿಯೇ ಉಳಿದುಹೋಯಿತು. ಹೀಗಾಗಿ ಆ ಆಯೋಗದ ರಚನೆಯ ಉದ್ದೇಶವನ್ನೇ ನಾವು ಪ್ರಶ್ನಿಸಬೇಕಾಗುತ್ತದೆ. ಮತ್ತೆ, 2004ರಲ್ಲಿ ಎನ್​ಡಿಎ ಸರ್ಕಾರ ಬಿದ್ದು, ಯುಪಿಎ ಸರ್ಕಾರ ಬಂದಮೇಲೆ ಜಸ್ಟಿಸ್ ಮುಖರ್ಜಿ ಅಮೆರಿಕದಿಂದ ಪಡೆದುಕೊಂಡ ಮಾಹಿತಿ ಮೂಲೆಗುಂಪಾಯಿತು. ‘ತನಿಖೆಗಳು’ ಹಳ್ಳ ಹಿಡಿದದ್ದು ಹೀಗೆ.

ಇಲ್ಲಿ ನಮಗೆದುರಾಗುವ ಪ್ರಶ್ನೆ, ನೇತಾಜಿ ಬಗ್ಗೆ ಸ್ಟಾ್ಯಲಿನ್ ಆಗಿನ್ನೂ ಯಾವುದೇ ರಾಜಕೀಯ ಅಧಿಕಾರ ಹೊಂದಿಲ್ಲದ ನೆಹರುರ ಸಲಹೆ ಕೇಳಿದ್ದೇಕೆ ಎಂದು. ಭುಗಿಲೆದ್ದಿದ್ದ ವೈರತ್ವದಿಂದಾಗಿ ಬ್ರಿಟಿಷ್ ಸರ್ಕಾರದ ಜತೆ ನೇರವಾಗಿ ವ್ಯವಹರಿಸಲು ಸ್ಟಾ್ಯಲಿನ್ ಮನಸ್ಸು ಮಾಡದಿರಬಹುದು. ಜತೆಗೆ, ‘ಭಾರತೀಯರಾದ’ ನೇತಾಜಿ ಬಗ್ಗೆ, ತನ್ನಂತೇ ಸಮಾಜವಾದಿಯಾಗಿದ್ದು, ಸೋವಿಯೆತ್ ಅಭಿಮಾನಿಯಾಗಿದ್ದ, ಭಾರತದ ಭಾವೀನಾಯಕ ಎಂದು ಬಹುತೇಕ ನಿಶ್ಚಿತವಾಗಿಹೋಗಿದ್ದ ನೆಹರು ಜತೆ ವ್ಯವಹರಿಸುವುದೇ ಸೂಕ್ತ ಎಂದು ಸ್ಟಾ್ಯಲಿನ್ ತೀರ್ವನಿಸಿರಬಹುದು.

ಮುಂದೆ ಏನಾಗಿರಬಹುದೆಂದು ಗೊತ್ತಿಲ್ಲ. ಸೈಬೀರಿಯಾದ ಯಾತನಾಶಿಬಿರವೊಂದರಲ್ಲಿ 1952ರಲ್ಲಿ ನೇತಾಜಿ ಮರಣಹೊಂದಿರಬಹುದೆಂದು ಕೆಲವರು ರ್ತಸುತ್ತಾರೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಮ್ಮ ಮಾವನ ಸಹೋದ್ಯೋಗಿಯಾಗಿದ್ದ ಕೆ. ಆರ್. ದಾಮ್ಲೆ ಎಂಬ ಐಸಿಎಸ್ ಅಧಿಕಾರಿಯೊಬ್ಬರಿಂದ 1978ರಲ್ಲಿ ಅರಿತ ಮಾಹಿತಿಯೊಂದನ್ನು ದಾಖಲಿಸಿದ್ದಾರೆ. ಅದರ ಪ್ರಕಾರ, 1951ರಲ್ಲಿ ಕ್ಯಾಲಿಫೋರ್ನಿಯಾದಲ್ಲಿದ್ದ ದಾಮ್ಲೆ ಅವರಿಗೆ, ತಕ್ಷಣ ಟೋಕಿಯೋಗೆ ಹೊರಡುವಂತೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಸೂಚನೆ ಬಂತು. ಟೋಕಿಯೋ ತಲುಪಿದ ದಾಮ್ಲೆಯವರನ್ನು ಎದುರುಗೊಂಡ ಅಲ್ಲಿದ್ದ ಭಾರತೀಯ ರಾಯಭಾರಿ ಅವರನ್ನು ವಿಮಾನನಿಲ್ದಾಣದಲ್ಲೇ ಮತ್ತೊಂದು ವಿಮಾನಕ್ಕೆ ಹತ್ತಿಸಿದರು. ಅದರಲ್ಲಿ ಮುಂದಿನ ಒಂದೆರಡು ಸಾಲು ಆಸನಗಳನ್ನು ತೆಗೆದುಹಾಕಿ ಅಲ್ಲಿ ದೊಡ್ಡದೊಂದು ಪೆಟ್ಟಿಗೆಯನ್ನಿರಿಸಲಾಗಿತ್ತು. ಅದರ ಕೀಲಿಕೈಯನ್ನು ದಾಮ್ಲೆಯವರ ಕೈಯಲ್ಲಿಟ್ಟ ರಾಯಭಾರಿ, ಪೆಟ್ಟಿಗೆಯನ್ನು ಪ್ರಧಾನಮಂತ್ರಿ ನೆಹರುರಿಗಷ್ಟೇ ಒಪ್ಪಿಸಬೇಕೆಂದು ಹೇಳಿದರು. ಪೆಟ್ಟಿಗೆಯೊಂದಿಗೆ ದೆಹಲಿ ತಲುಪಿದ ದಾಮ್ಲೆಯವರನ್ನು ವಿಮಾನನಿಲ್ದಾಣದಲ್ಲಿ ಎದುರುಗೊಂಡ ವಿದೇಶಾಂಗ ಕಾರ್ಯದರ್ಶಿ ಆರ್. ಕೆ. ನೆಹರು ಅವರನ್ನು ಪೆಟ್ಟಿಗೆಯೊಂದಿಗೆ ನೇರವಾಗಿ ನೆಹರು ನಿವಾಸಕ್ಕೆ ಕರೆದೊಯ್ದರು. ಅಲ್ಲಿ ತೆರೆಯಲಾದ ಪೆಟ್ಟಿಗೆಯಲ್ಲಿ ದಾಮ್ಲೆ ಕಂಡದ್ದು ಚಿನ್ನ, ವಜ್ರ, ಇನ್ನಿತರ ಅಮೂಲ್ಯ ಹರಳುಗಳಿದ್ದ ಆಭರಣಗಳ ರಾಶಿ! ನೇತಾಜಿಯವರಿಗೆ ಸೇರಿದ್ದ ಆ ವಸ್ತುಗಳನ್ನು ಜಪಾನ್ ಸರ್ಕಾರ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಿತ್ತು.

1977ರಲ್ಲಿ ಜನತಾ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸುಬ್ರಮಣಿಯನ್ ಸ್ವಾಮಿ, ನಿಯಮದ ಪ್ರಕಾರ ಪೆಟ್ಟಿಗೆ ಮತ್ತು ಅದರೊಳಗಿದ್ದ ಎಲ್ಲವೂ ದೇಶದ ಸ್ವತ್ತಾಗಿ ನ್ಯಾಷನಲ್ ಆರ್ಕೈವ್ಸ್​ನಲ್ಲಿ ಸಂರಕ್ಷಣೆಗೊಳಗಾಗಿರಬೇಕೆಂದೂ, ಹಾಗೇ ಆಗಿದೆಯೇ ಎಂದು ಪರಿಶೀಲಿಸಬೇಕೆಂದೂ ಪ್ರಧಾನಿ ಮೊರಾರ್ಜಿ ದೇಸಾಯಿಯವರಲ್ಲಿ ಮನವಿ ಮಾಡಿಕೊಂಡರು. ಅದಕ್ಕೆ ಸಮ್ಮತಿಸಿದ ಪ್ರಧಾನಿ ದೇಸಾಯಿ ಖುದ್ದಾಗಿ ಜನಪಥ್​ನಲ್ಲಿರುವ ನ್ಯಾಷನಲ್ ಅರ್ಕೈವ್ಸ್ ಕಟ್ಟಡಕ್ಕೆ ಭೇಟಿ ನೀಡಿ ಗೋಣಿಚೀಲದಲ್ಲಿ ಸುತ್ತಿಟ್ಟಿದ್ದ ಪೆಟ್ಟಿಗೆಯನ್ನು ತೆರೆದರು. ಅಲ್ಲಿ ಅವರಿಗೆ ಕಂಡದ್ದು ಬರೀ ಕಲ್ಲುಗಳು! ಆ ಬಗ್ಗೆ ಸ್ವಾಮಿ, ಸಮರ್ ಗುಹಾ ಮತ್ತು ಎಚ್. ವಿ. ಕಾಮತ್ ಸಂಸತ್ತಿನಲ್ಲಿ ಪ್ರಶ್ನೆಯೆತ್ತಿ ತನಿಖೆಯಾಗಬೇಕೆಂದು ಆಗ್ರಹಿಸಿದರು. ಸರ್ಕಾರ ತನಿಖೆಗೆ ಸಮ್ಮತಿಸಿತು. ಆದರೆ ಕೆಲವೇ ದಿನಗಳಲ್ಲಿ ದೇಸಾಯಿ ಸರ್ಕಾರ ಉರುಳಿತು, ಪೆಟ್ಟಿಗೆ ತನ್ನೊಳಗಿನ ಕಲ್ಲುಗಳೊಂದಿಗೆ ಮತ್ತೆ ಗೋಣಿಚೀಲದೊಳಗೆ ಸೇರಿಹೋಯಿತು. ಸಿಂಗಾಪುರ, ಮಲಯಾ, ಜಪಾನ್ ಮುಂತಾದ ವಿದೇಶಗಳಲ್ಲಿದ್ದ ದೇಶಾಭಿಮಾನಿ ಭಾರತೀಯ ನಾರೀಮಣಿಯರು ಸ್ವಾತಂತ್ರ್ಯಹೋರಾಟಕ್ಕಾಗಿ ನೇತಾಜಿಯವರಿಗೆ ನೀಡಿದ್ದ ತಮ್ಮ ಮೈಮೇಲಿನ ಆಭರಣಗಳಾಗಿರಬಹುದಾದ ಅವೀಗ ಒಂದು ಕುಟುಂಬದ ಸ್ವತ್ತಾಗಿ ಎಲ್ಲೋ ಅಡಗಿರಬಹುದು.

ಇಂದು ಎಷ್ಟೆಲ್ಲ ತನಿಖೆಗಳ ಅಗತ್ಯವಿದೆ!

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

One Reply to “ಎಲ್ಲಿ ಹೋದಿರಿ ನೇತಾಜೀ? ನಿಮಗೇನಾಯಿತು ಹೇಳಿ!”

  1. Bahama rochakavaagide.Yes it needs more investigations and truth has gone unveiled.All patriotic Indians need to know the truth.
    But, who will bell the cat?

Comments are closed.