17.5 C
Bengaluru
Monday, January 20, 2020

ಇಂಡೋ-ಪೆಸಿಫಿಕ್ ಎಂದರೆ ಕೊಡುಕೊಳ್ಳುವಿಕೆಯಾಗಲಿ

Latest News

ಚೆನ್ನೈನಲ್ಲಿ ಎಂಎಸ್ ಧೋನಿ ರಿಟೇನ್!

ಚೆನ್ನೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್​ಗೂ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡದಲ್ಲಿ...

ಯೋಗಕ್ಷೇಮ| ಯೋಗಾಸನಗಳನ್ನು ಯಾರು ಅಭ್ಯಾಸ ಮಾಡಬಹುದು?

ಹೌದು, ಈ ಪ್ರಶ್ನೆ ಸಹಜವೇ. ಯೋಗ ಬರಿ ಋಷಿ ಮುನಿಗಳಿಗೆ, ನಿವೃತ್ತರಿಗೆ, ಸಾಧಕರಿಗೆ ಕಡೆಗೆ ರೋಗಿಗಳಿಗೆ ಎಂಬ ಕಲ್ಪನೆ ಹಬ್ಬಿ ಬಿಟ್ಟಿದೆ. ಯೋಗ...

ಪರೀಕ್ಷಾ ಪೆ ಚರ್ಚಾ 3ನೇ ಆವೃತ್ತಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಜತೆ ಸಂವಹನ ನಡೆಸುವ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಮೂರನೇ ಆವೃತ್ತಿ ಕಾರ್ಯಕ್ರಮ ದೆಹಲಿಯ ತಲ್ಕತೋರಾ...

ರಾಜ್ಯದ 5 ನಗರಕ್ಕೆ ವಿಮಾನ ಸೇವೆ

ಬೆಂಗಳೂರು: ದೇಶದ ವಿಮಾನಯಾನ ಸೇವಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನಪಡೆಯುವತ್ತ ರಾಜ್ಯ ಮುನ್ನುಗುತ್ತಿದ್ದು, ಕಲಬುರಗಿ ನಂತರ ಇದೀಗ ರಾಜ್ಯದ ಐದು ನಗರಗಳಲ್ಲಿ ಮುಂದಿನ 2...

ಮಾಸಾಂತ್ಯಕ್ಕೆ ವಿಸ್ತರಣೆ?: ವಿದೇಶದಿಂದ ವಾಪಸ್ಸಾದ ಬಳಿಕ ಮತ್ತೊಂದು ಸುತ್ತಿನ ಚರ್ಚೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸದ್ಯಕ್ಕೆ ಡೋಲಾಯಮಾನ. ಈ ವಿಷಯವಾಗಿ ವರಿಷ್ಠರ ಮಟ್ಟದಲ್ಲಿ ನಡೆದ ಚರ್ಚೆಯ ಸ್ವರೂಪ ಗಮನಿಸಿದರೆ,...

ಏಷ್ಯಾ-ಪೆಸಿಫಿಕ್ ಅನ್ನು ವಿಸ್ತರಿಸಿ ಇಂಡೋ-ಪೆಸಿಫಿಕ್ ಮಾಡಹೊರಟಿರುವುದು ಪಾಕಿಸ್ತಾನಕ್ಕೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿತುಪ್ಪ. ತನ್ನ ವಿರೋಧಿ ಹೆಸರನ್ನು ಹೊತ್ತ ಹೊಸ ಅರ್ಥಿಕ-ಸಾಮರಿಕ ವಲಯವೊಂದು ಅಸ್ತಿತ್ವಕ್ಕೆ ಬರುತ್ತಿದೆ ಎನ್ನುವುದು ಪಾಕಿಸ್ತಾನಕ್ಕೆ ಇರಿಸುಮುರಿಸು ಉಂಟುಮಾಡುತ್ತಿದೆ. ಇಂಡೋ-ಪೆಸಿಫಿಕ್ ಎಂಬ ಹೆಸರನ್ನೇ ಪಾಕಿಸ್ತಾನ ತನ್ನ ಗಂಟಲಲ್ಲಿ ಇಳಿಸಿಕೊಳ್ಳಲಾರದು.

ಏಷ್ಯಾದ ಎಲ್ಲ ಜವಾಬ್ದಾರಿಯುತ ದೇಶಗಳನ್ನೂ ಒಳಗೊಂಡ ಹೊಸ ಆರ್ಥಿಕ-ಸಾಮರಿಕ ವಲಯವೊಂದರ ಅಗತ್ಯದ ಕುರಿತಾಗಿ ಹನ್ನೆರಡು ವರ್ಷಗಳ ಹಿಂದೆ ಭಾರತದ ಸಂಸತ್ತಿನಲ್ಲಿ ಪ್ರಧಾನಿ ಶಿಂಜೋ ಅಬೆ ಆಡಿದ ಮಾತುಗಳು ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ಆ ದಿನಗಳಲ್ಲಿ ವೇಗವಾಗಿ ಬದಲಾಗುತ್ತಿದ್ದ ಆರ್ಥಿಕ-ಸಾಮರಿಕ ವಾಸ್ತವಗಳಿಗೆ ಜವಾಬ್ದಾರಿಯುತ ವಿಶ್ವನಾಯಕರೊಬ್ಬರ ಕಾಳಜಿಯುಕ್ತ ಪ್ರತಿಕ್ರಿಯೆಯಾಗಿತ್ತು. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆ ದಿನಗಳ ಘಟನಾವಳಿಗಳ ಸ್ಥೂಲ ಪರಿಚಯ ಅಗತ್ಯ.

ಹೊಸ ಶತಮಾನದ ಆರಂಭದೊಂದಿಗೆ ಚೀನಾ ಹೊಸ ಜಾಗತಿಕ ಆರ್ಥಿಕ ಶಕ್ತಿಯಾಗಿ ಉದಯಿಸಿತಷ್ಟೇ. ಆದರೆ ಆ ದೇಶ ತನ್ನ ಆರ್ಥಿಕ ಸಾಮರ್ಥ್ಯನ್ನು ಸುತ್ತಲ ದೇಶಗಳ ಹಿತಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಬಳಸತೊಡಗಿದ್ದು ದುರದೃಷ್ಟಕರ ಬೆಳವಣಿಗೆ. ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್ ಜತೆ, ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಮ್ ಫಿಲಿಪೀನ್ಸ್, ಬ್ರುನೈ, ಮಲೇಷ್ಯಾಗಳ ಜತೆ ಸಮುದ್ರ ಗಡಿ ಕುರಿತಂತೆ ಚೀನಾ ತಂಟೆ ತೆಗೆಯತೊಡಗಿತು. ಅದರಲ್ಲೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಆರಂಭಿಸಿದ ವಿಸ್ತರಣಾ ಚಟುವಟಿಕೆಗಳು ಸುತ್ತಲ ದೇಶಗಳ ಹಿತಾಸಕ್ತಿಗಳನ್ನಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕಾನೂನುಗಳನ್ನೂ ಗಾಳಿಗೆ ತೂರುವಂತಿದ್ದವು.

ಎಲ್ಲ ಸಾಗರ ಸಮುದ್ರಗಳಲ್ಲಿ ಅಲ್ಲಲ್ಲಿ ಬಂಡೆಗಳಿರುವುದು ಸಹಜ. ಅವುಗಳ ಸುತ್ತಲೂ ಹವಳದ ದಿಬ್ಬಗಳು ನಿರ್ವಣವಾಗುವುದೂ ಸಹಜ. ಈ ಬಂಡೆಗಳು ತನ್ನ ಸಾಗರ ಪ್ರದೇಶದ ವ್ಯಾಪ್ತಿಯೊಳಗಿಲ್ಲದಿದ್ದರೆ ಅವುಗಳ ಮೇಲೆ ಯಾವುದೇ ದೇಶ ತನ್ನ ಅಧಿಕಾರ ಸ್ಥಾಪಿಸುವ ಸಂಪ್ರದಾಯವಿಲ್ಲ. ಆದರೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ನೀತಿಗಳು ಈ ಸಂಪ್ರದಾಯಕ್ಕೆ ಸಂಪೂರ್ಣ ವಿರುದ್ಧವಾಗಿವೆ. ಆ ಸಮುದ್ರದಲ್ಲಿನ ದ್ವೀಪಗುಚ್ಛಗಳಾದ ಸ್ಪ್ರಾಟ್ಲಿ ಮತ್ತು ಪರಾಸೆಲ್​ಗಳನ್ನು ಇತರ ದೇಶಗಳ ಪ್ರತಿಭಟನೆಗಳ ನಡುವೆಯೂ ಕಬಳಿಸಿಕೊಳ್ಳುವುದರ ಜತೆಗೆ, ನೀರಿನಿಂದ ಮೇಲೆದ್ದಿರುವ ಬಂಡೆಗಳ ಮೇಲೂ ಚೀನಾ ಅಧಿಕಾರ ಸ್ಥಾಪಿಸಹೊರಟಿದೆ. ಈ ಬಗ್ಗೆ ಚೀನಾದ ಕಾರ್ಯಯೋಜನೆಗಳು ಒಂದು ನಿರ್ದಿಷ್ಟ ಕ್ರಮಕ್ಕನುಗುಣವಾಗಿ ನಡೆಯುತ್ತವೆ. ಹಡಗುಗಳಲ್ಲಿ ಕಲ್ಲು ಮಣ್ಣು ತುಂಬಿ ತಂದು ಬಂಡೆಗೂ, ಸುತ್ತಲ ಹವಳದ ದಿಬ್ಬಕ್ಕೂ ನಡುವಿನ ನೀರಿನಲ್ಲಿ ಸುರಿದು ಅದನ್ನು ‘ನೆಲ’ವನ್ನಾಗಿ ಪರಿವರ್ತಿಸಿ ಬಂಡೆಯನ್ನೊಂದು ಪುಟ್ಟ ದ್ವೀಪವನ್ನಾಗಿ ಮಾರ್ಪಡಿಸುವುದು ಚೀನಾದ ತಂತ್ರ. ಹಾಗೆ ಸೃಷ್ಟಿಯಾದ ‘ದ್ವೀಪ’ ಪುರಾತನ ಕಾಲದಿಂದಲೂ ಚೀನಾಗೆ ಸೇರಿತ್ತೆಂದು ಪ್ರಚಾರ ಮಾಡುತ್ತಲೇ ಸದ್ದಿಲ್ಲದೆ ಕೃತಕ ದ್ವೀಪದಲ್ಲಿ ಚೀನೀ ಧ್ವಜ ಹಾರಾಡತೊಡಗುತ್ತದೆ ಮತ್ತು ಚೀನೀ ಸೈನಿಕರು ಅಲ್ಲಿ ಹಾಜರಾಗುತ್ತಾರೆ, ಇಂತಹ ಕುತಂತ್ರದಿಂದ ಚೀನಾ ಇಂದು ದಕ್ಷಿಣ ಚೀನಾ ಸಮುದ್ರದ 85% ಭಾಗದ ಮೇಲೆ ತನ್ನ ಪರಮಾಧಿಕಾರ ಘೊಷಿಸಿಕೊಂಡಿದೆ.

ಉತ್ತರದಲ್ಲಿ ಚೀನಾ, ದಕ್ಷಿಣದಲ್ಲಿ ಬೋರ್ನಿಯೋ ದ್ವೀಪ, ಪಶ್ಚಿಮದಲ್ಲಿ ವಿಯೆಟ್ನಾಮ್ ಮತ್ತು ಪೂರ್ವದಲ್ಲಿ ಫಿಲಿಪ್ಪೀನ್ಸ್​ಗಳ ತೀರಗಳನ್ನು ತೋಯಿಸುವ ದಕ್ಷಿಣ ಚೀನಾ ಸಮುದ್ರ ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳ ಸಂಪರ್ಕ ಕೊಂಡಿ. ಇದರ ಮೂಲಕ ವಿಶ್ವದ ಎರಡು ಪ್ರಮುಖ ವ್ಯಾಪಾರ ಮಾರ್ಗಗಳು ಸಾಗುತ್ತವೆ ಮತ್ತು ವರ್ಷವೊಂದರಲ್ಲಿ ಇದರಲ್ಲಿ ಮೂರೂವರೆ ಟ್ರಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಸಾಗಾಟ ನಡೆಯುತ್ತದೆ. ಇಂತಹ ಮಹತ್ವದ ಸಾಗರ ಪ್ರದೇಶದ 85% ಭಾಗದ ಮೇಲೆ ಯಾವುದೇ ಒಂದು ದೇಶ ಅಧಿಕಾರ ಸ್ಥಾಪಿಸಿದರೆ ಅದು ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಮುಕ್ತತೆಗೆ ಸಹಜವಾಗಿಯೇ ಧಕ್ಕೆಯುಂಟುಮಾಡುತ್ತದೆ, ಜತೆಗೆ ತೀರದ ಇತರ ದೇಶಗಳ ಆರ್ಥಿಕತೆ ಹಾಗೂ ಸುರಕ್ಷೆಗೆ ಸವಾಲುಗಳನ್ನೊಡ್ಡುತ್ತದೆ. ಚೀನಾ ಮತ್ತು ವಲಯದ ಇತರ ದೇಶಗಳ ನಡುವಿನ ವೈಮನಸ್ಯಕ್ಕೆ ಮೂಲ ಕಾರಣ ಇದು. ಆದರೆ ಯಾವ ದೇಶದ ಪ್ರತಿಭಟನೆಯನ್ನೂ ಚೀನಾ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಚೀನಾ ವಿರುದ್ಧ ಫಿಲಿಫೀನ್ಸ್ ಅಂತಾರಾಷ್ಟ್ರೀಯ ಮಧ್ಯಸ್ತಿಕಾ ನ್ಯಾಯಾಲಯಕ್ಕೆ (ಇಂಟರ್​ನ್ಯಾಷನಲ್ ಕೋರ್ಟ್ ಆಫ್ ಆರ್​ಬಿಟ್ರೇಷನ್) ದೂರು ಒಯ್ದದ್ದುಂಟು ಹಾಗೂ ಮೂರು ವರ್ಷಗಳ ಹಿಂದೆ ನ್ಯಾಯಾಲಯದ ತೀರ್ಪು ಚೀನಾ ವಿರುದ್ಧ ಬಂದದ್ದೂ ಉಂಟು. ಅದೇನೂ ಚೀನಾದ ಕೈಗಳನ್ನು ಕಟ್ಟಿಹಾಕಲಿಲ್ಲ. ಫಿಲಿಪ್ಪೀನ್ಸ್​ನ ಅಧ್ಯಕ್ಷನನ್ನೇ ಅದು ಕೊಂಡುಕೊಂಡುಬಿಟ್ಟಿತು! ಹೀಗೇ, ಪರಭಕ್ಷಕ ಸ್ವಭಾವದ ಚೀನಾ ಇತರ ದೇಶಗಳನ್ನು ಸಾಲಸಂಕೋಲೆಯೊಳಗೆ ಸಿಲುಕಿಸಿಕೊಳ್ಳುವುದರ ಮೂಲಕ, ಆರ್ಥಿಕ-ಸೇನಾ ಧಮಕಿಯ ಮೂಲಕ, ಹಣದ ಅಮಿಷವೊಡ್ಡಿ ರಾಷ್ಟ್ರನಾಯಕರನ್ನೇ ಕೊಂಡುಕೊಳ್ಳುವುದರ ಮೂಲಕ ಇಡೀ ವಲಯವನ್ನು ತನ್ನ ಆರ್ಥಿಕ ಹಾಗೂ ಸೇನಾ ಕಪಿಮುಷ್ಟಿಯೊಳಗೆ ಸಿಲುಕಿಸಿಕೊಳ್ಳಹೊರಟಿದೆ. ತಮ್ಮ ಬಹುತೇಕ ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ದಕ್ಷಿಣ ಚೀನಾ ಸಮುದ್ರ ಮಾರ್ಗವನ್ನು ಅವಲಂಬಿಸಿರುವ ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತಗಳನ್ನು ಕಳವಳಕ್ಕೀಡು ಮಾಡಿರುವ ಸಂಗತಿ ಇದು. ಈ ಕಳವಳ ಮತ್ತು ಪರಿಹಾರೋಪಾಯ ಮೊದಲಿಗೆ ವ್ಯಕ್ತವಾದದ್ದು ಪ್ರಧಾನಿ ಶಿಂಜೋ ಅಬೆಯವರ ಭಾರತ ಭೇಟಿಯಲ್ಲಿ. ಅವರ ಮಾತುಗಳು ದೊಡ್ಡದಾಗಿ ಪ್ರತಿಧ್ವನಿಗೊಳ್ಳಲು ಐದು ವರ್ಷಗಳು ಬೇಕಾದವು. 2012ರ ಅಂತ್ಯದಲ್ಲಿ ಆಸ್ಟ್ರೇಲಿಯಾದ ಜ್ಯೂಲಿಯಾ ಗಿಲಾರ್ಡ್ ಸರ್ಕಾರ ಹೊರಡಿಸಿದ ಶ್ವೇತಪತ್ರವೊಂದರಲ್ಲಿ ‘ಇಂಡೋ-ಪೆಸಿಫಿಕ್’ ಪದಪುಂಜ ವ್ಯಾಪಕವಾಗಿ, ಸ್ಪಷ್ಟರ್ಥದಲ್ಲಿ ಕಾಣಿಸಿಕೊಂಡಿತು. ಅಮೆರಿಕ ಜತೆ ಆಸ್ಟ್ರೇಲಿಯಾ, ಜಪಾನ್, ಇಂಡಿಯಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ ಮತ್ತು ‘ಚೀನಾ’ ಮುಂತಾದ ಏಷ್ಯಾದ ಪ್ರಮುಖ ದೇಶಗಳು ಒಟ್ಟುಗೂಡಿ ಈ ವಲಯವನ್ನು ಮುಕ್ತ, ಸೌಹಾರ್ದಯುತಗೊಳಿಸಲು ಪ್ರಯತ್ನಿಸಬೇಕೆಂಬ ಅಗತ್ಯ, ಅದರಲ್ಲಿ ಆಸ್ಟ್ರೇಲಿಯಾದ ಪಾತ್ರ ಆ ಶ್ವೇತಪತ್ರದಲ್ಲಿ ಬಿಂಬಿತವಾಗಿದ್ದವು. ಪಟ್ಟಿಯಲ್ಲಿ ಚೀನಾವನ್ನು ಸೇರಿಸಿದ್ದು ಆ ದೇಶಕ್ಕೊಂದು ಸಂದೇಶದಂತಿತ್ತು. ಇದರೊಂದಿಗೆ ‘ಇಂಡೋ-ಪೆಸಿಫಿಕ್’ ಪದಪುಂಜ ಈ ವಲಯದಲ್ಲಿ ಸರ್ಕಾರಿ ಮಾನ್ಯತೆ ಪಡೆದುಕೊಂಡಂತಾಯಿತು. ಹಾಗೆಯೇ, ಏಷ್ಯಾ-ಪೆಸಿಫಿಕ್ ಅನ್ನು ಇಂಡೋ-ಪೆಸಿಫಿಕ್ ಆಗಿ ವಿಸ್ತರಿಸುವ, ಅದರಲ್ಲಿ ಭಾರತವನ್ನೂ ಒಳಗೊಳಿಸುವ ಜಪಾನ್ ಮತ್ತು ಆಸ್ಟ್ರೇಲಿಯಾದ ಚಿಂತನೆಗಳು ದ್ವಂದ್ವಕ್ಕೆಡೆಯಿಲ್ಲದಂತೆ ಬಯಲು ಮಾಡಿದ್ದು ಚೀನಾದ ಕುರಿತಾಗಿನ ಅವೆರಡರ ಆತಂಕ. ಹಾಗೆಯೇ, ಭಾರತ ಭವಿಷ್ಯದ ಮಹಾಶಕ್ತಿಯಾಗಲಿದೆ ಎಂಬ ಅವರೆಡರ ನಂಬಿಕೆ, ತಮ್ಮ ಆರ್ಥಿಕ ಹಾಗೂ ರಕ್ಷಣಾ ಅಗತ್ಯಗಳಿಗಾಗಿ ನವದೆಹಲಿಯ ಮೇಲೆ ತಾವು ಅವಲಂಬಿಸಬಹುದು ಎಂಬ ಅವೆರಡರ ನಿರೀಕ್ಷೆಯನ್ನೂ ನಾವು ಗುರುತಿಸಬೇಕು.

ಜಪಾನ್ ಅಥವಾ ಆಸ್ಟ್ರೇಲಿಯಾ ಅಥವಾ ಇನ್ನಾವುದೇ ದೇಶ ಅದೆಷ್ಟೇ ಹೇಳಿಕೊಳ್ಳಲಿ, ಅವುಗಳ ಮಾತಿಗೆ ಬೆಲೆ ಬರುವುದು ‘ದೊಡ್ಡಣ್ಣ’ ಅಮೆರಿಕ ದನಿಗೂಡಿಸಿದಾಗ ಮಾತ್ರ. ಅದಕ್ಕಾಗಿ ಡೊನಾಲ್ಡ್ ಟ್ರಂಪ್ ಶ್ವೇತಭವನ ಪ್ರವೇಶಿಸುವವರೆಗೆ ನಾವು ಕಾಯಬೇಕಾಯಿತು.

ಅಮೆರಿಕ ವಿದೇಶಾಂಗ ನೀತಿಯ ರೆಡಾರ್ ಮತ್ತೆ ಚೀನಾದತ್ತ ಹೊರಳಿಸಿದ ಅಧ್ಯಕ್ಷ ಟ್ರಂಪ್ ಪರಭಕ್ಷಕ ಚೀನಾವನ್ನು ತಡೆಯಲು ಏಷ್ಯಾ-ಪೆಸಿಫಿಕ್ ಸಾಮರಿಕ ವಲಯವನ್ನು ಭಾರತದವರೆಗೆ ವಿಸ್ತರಿಸುವುದು ಸೂಕ್ತ ಎಂದರಿತರು. ಅವರು ದೇಶವಿದೇಶಗಳಲ್ಲಿನ ಭಾಷಣಗಳಲ್ಲಿ ಇಂಡೋ-ಪೆಸಿಫಿಕ್ ಪದಪುಂಜವನ್ನೂ, ಅಮೆರಿಕಗೆ ಭಾರತದ ಮಹತ್ವವನ್ನೂ ಒತ್ತಿಒತ್ತಿ ಹೇಳತೊಡಗಿದರು. ಅಂತಿಮವಾಗಿ 2017ರ ಅಕ್ಟೋಬರ್​ನಲ್ಲಿ ಆಗಿನ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್​ಸನ್ ಭಾರತ-ಅಮೆರಿಕ ಸಂಬಂಧಗಳ ಬಗ್ಗೆ ಮಾತನಾಡುತ್ತ, ‘ಅಮೆರಿಕಕ್ಕೆ ಚೀನಾಗಿಂತಲೂ ಭಾರತ ಹೆಚ್ಚು ನಂಬಿಗಸ್ತ ಸಹಯೋಗಿ’ ಎಂದು ಹೇಳಿದ್ದಲ್ಲದೆ ‘ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸೌಹಾರ್ದಕ್ಕಾಗಿ ಭಾರತ ಮತ್ತು ಅಮೆರಿಕಗಳು ಜಂಟಿಯಾಗಿ ಕಾರ್ಯಪ್ರವೃತ್ತರಾಗಬೇಕು’ ಎಂದು ಕರೆನೀಡಿದರು. ದೊಕ್ಲಾಮ್ ಬಿಕ್ಕಟ್ಟಿನ ಸಮಯದಲ್ಲಿ ಬಂದ ಈ ಹೇಳಿಕೆ ಹಲವು ಅರ್ಥಗಳಲ್ಲಿ ಚೀನಾವನ್ನು ಕಂಗೆಡಿಸುವ, ಅದಕ್ಕೆ ವಿರುದ್ಧವಾಗಿ ಈ ವಲಯದಲ್ಲಿ ಭಾರತವನ್ನು ಬೆಂಬಲಿಸುವ ಅಮೆರಿಕದ ನೀತಿಯನ್ನು ತಣ್ಣಗೆ ಬಯಲು ಮಾಡಿತು.

ಆದರೆ ಅಮೆರಿಕ ಇಂಡೋ-ಪೆಸಿಫಿಕ್ ವಲಯವನ್ನು ಪಶ್ಚಿಮದಲ್ಲಿ ಕೇವಲ ಭಾರತದ ಪಶ್ಚಿಮ ತೀರಕ್ಕಷ್ಟೇ ಸೀಮಿತಗೊಳಿಸುತ್ತದೆ. ಇದು ಮೋದಿಯವರ ಭಾರತಕ್ಕೆ ಸಮ್ಮತವಿಲ್ಲ. ಇಂಡೋ-ಪೆಸಿಫಿಕ್ ವಲಯ ಇಡೀ ಹಿಂದೂ ಮಹಾಸಾಗರವನ್ನು ಒಳಗೊಳ್ಳಬೇಕೆಂದೂ ಅಂದರೆ ಆಫ್ರಿಕಾದ ಪೂರ್ವ ತೀರದವರೆಗಿನ ನೆಲ-ಜಲ ಪ್ರದೇಶಗಳನ್ನೂ ಒಳಗೊಂಡಿರಬೇಕೆಂದೂ ಭಾರತದ ವಾದ. ಇದನ್ನು ಅಧ್ಯಕ್ಷ ಟ್ರಂಪ್​ರಿಗೆ ಪ್ರಧಾನಿ ಮೋದಿ ಒಸಾಕಾದಲ್ಲೂ, ವಿದೇಶಾಂಗ ಕಾರ್ಯದರ್ಶಿ ಮೈಕೇಲ್ ಪಾಂಪಿಯೋ ಅವರಿಗೆ ವಿದೇಶ ಮಂತ್ರಿ ಎಸ್. ಜೈಶಂಕರ್ ನವದೆಹಲಿಯಲ್ಲೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಏಷ್ಯಾ-ಪೆಸಿಫಿಕ್ ಅನ್ನು ಇಂಡೋ-ಪೆಸಿಫಿಕ್ ಆಗಿ ಬದಲಾಯಿಸಿ ಅದರಲ್ಲಿ ಭಾರತವನ್ನು ಒಳಗೊಳಿಸಿದರೂ ಭಾರತದ ಮುಖ್ಯ ರಕ್ಷಣಾಸಮಸ್ಯೆಯಾದ ಪಾಕಿಸ್ತಾನವನ್ನು ಇದರಿಂದ ಹೊರಗಿರಿಸಿದರೆ ಹೊಸ ವ್ಯವಸ್ಥೆಯಿಂದ ಭಾರತಕ್ಕೆ ಹೆಚ್ಚಿನದೇನೂ ಪ್ರಯೋಜನವಾಗಲಾರದು ಎನ್ನುವುದು ಮೋದಿ ಸರ್ಕಾರ ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿರುವ ಕಟುಸತ್ಯ.

ಏಷ್ಯಾ-ಪೆಸಿಫಿಕ್ ಅನ್ನು ವಿಸ್ತರಿಸಿ ಇಂಡೋ-ಪೆಸಿಫಿಕ್ ಮಾಡಹೊರಟಿರುವುದು ಪಾಕಿಸ್ತಾನಕ್ಕೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿತುಪ್ಪ. ತನ್ನ ವಿರೋಧಿ ಹೆಸರನ್ನು ಹೊತ್ತ ಹೊಸ ಅರ್ಥಿಕ-ಸಾಮರಿಕ ವಲಯವೊಂದು ಅಸ್ತಿತ್ವಕ್ಕೆ ಬರುತ್ತಿದೆ ಎನ್ನುವುದು ಪಾಕಿಸ್ತಾನಕ್ಕೆ ಇರಿಸುಮುರಿಸು ಉಂಟುಮಾಡುತ್ತಿದೆ. ಇಂಡೋ-ಪೆಸಿಫಿಕ್ ಎಂಬ ಹೆಸರನ್ನೇ ಪಾಕಿಸ್ತಾನ ತನ್ನ ಗಂಟಲಲ್ಲಿ ಇಳಿಸಿಕೊಳ್ಳಲಾರದು. ತನ್ನ ಬದ್ಧ ವೈರಿ ಇಂಡಿಯಾದ ಹೆಸರನ್ನು ಇಂಡಿಯನ್ ಓಷನ್ (ಹಿಂದೂ ಮಹಾಸಾಗರ) ಹೊತ್ತಿದೆ ಎಂಬ ಕಾರಣಕ್ಕೆ ಆ ಹೆಸರನ್ನೇ ಬದಲಾಯಿಸಲು ಒಂದು ಕಾಲದಲ್ಲಿ ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿತ್ತು. ‘ಜಗತ್ತಿನ ಮೂರನೆಯ ಅತಿ ದೊಡ್ಡ ಸಾಗರಕ್ಕೆ ಕೇವಲ ಒಂದು ದೇಶದ ಹೆಸರನ್ನು ಇಡುವುದು ಸರ್ವಥಾ ಸರಿಯಲ್ಲ, ಈ ಸಾಗರ ಎರಡು ಬೃಹತ್ ಖಂಡಗಳ ತೀರಗಳನ್ನು ತೋಯಿಸುವುದರಿಂದ ಅದನ್ನು ಆ ಖಂಡಗಳ ಹೆಸರಿನಿಂದಲೇ ಕರೆಯುವುದು ಸೂಕ್ತ’ ಎಂಬ ರಾಗವನ್ನು ಪಾಕಿಸ್ತಾನದ ಕೆಲ ರಾಜಕೀಯ ಹಾಗೂ ರಕ್ಷಣಾ ವಿಶ್ಲೇಷಕರು 1970ರ ದಶಕದ ಆರಂಭದಲ್ಲೇ ಹಾಡಲು ಆರಂಭಿಸಿದ್ದರು. ಪಾಕಿಸ್ತಾನದ ಹೊರಗೆ ಯಾರ ಗಮನಕ್ಕೂ ಬಾರದಿದ್ದ ಆ ರಾಗಕ್ಕೆ ದೊಡ್ಡದಾಗಿ ಪ್ರಚಾರ ನೀಡಿ ಇಂಡಿಯನ್ ಓಷನ್ ಅನ್ನು ‘ಆಫ್ರೋ-ಏಷ್ಯನ್ ಓಷನ್’ ಎಂಬ ಹೊಸ ನಾಮಧೇಯದೊಂದಿಗೆ ಕರೆಯುವ ಸರ್ಕಾರಿ ಸಂಪ್ರದಾಯವನ್ನು ಸರ್ವಾಧಿಕಾರಿ ಜಿಯಾ-ಉಲ್-ಹಕ್ ಆರಂಭಿಸಿದರು. ಪಾಕಿಸ್ತಾನದ ಸರ್ಕಾರಿ ಭೂಪಟಗಳಲ್ಲಿ ಮತ್ತು ಅಧಿಕೃತ ಪ್ರಕಟಣೆಗಳಲ್ಲಿ ಇಂಡಿಯನ್ ಓಷನ್ ಎಂಬ ಹೆಸರಿಗೆ ಬದಲಾಗಿ ಆಫ್ರೋ-ಏಷ್ಯನ್ ಓಷನ್ ಎಂಬ ಹೆಸರೇ ರಾರಾಜಿಸುತ್ತಿತ್ತು. ಹೊಸ ಹೆಸರಿನ ಕುರಿತಾದ ತನ್ನ ವಾದವನ್ನು ಆಫ್ರಿಕಾ ಮತ್ತು ಏಷ್ಯಾದ ದೇಶಗಳು ಹೆಮ್ಮೆಯಿಂದ ಸ್ವಾಗತಿಸುತ್ತವೆ ಎಂದು ಜಿಯಾ ಭಾವಿಸಿದ್ದರು. ಆದರೆ ಹೊಸ ಹೆಸರಿಗೆ ಪಾಕಿಸ್ತಾನದಾಚೆಗೆ ಎಲ್ಲೂ ಮಾನ್ಯತೆ ಸಿಗಲೇ ಇಲ್ಲ. ಈಗಲೂ ಪಾಕಿಸ್ತಾನೀಯರು ಲೇಖನಗಳಲ್ಲಿ, ಭಾಷಣಗಳಲ್ಲಿ ಆ ಹೆಸರನ್ನು ಬಳಸುವುದುಂಟು.

ಈ ಹಿನ್ನೆಲೆಯಲ್ಲಿ ಇಂಡೊ-ಪೆಸಿಫಿಕ್ ಎಂಬ ಹೆಸರು ಪಾಕಿಸ್ತಾನೀಯರಿಗೆ ಅಪಥ್ಯ. ಆದರೆ ಅಮೆರಿಕ ಹೊಸ ವಲಯವನ್ನು ಭಾರತದವರೆಗಷ್ಟೇ ಸೀಮಿತಗೊಳಿಸಿ, ಪಾಕಿಸ್ತಾನವನ್ನು ಅದರ ಆರ್ಥಿಕ-ಸಾಮರಿಕ ವ್ಯಾಪ್ತಿಯ ಹೊರಗಿಟ್ಟಿರುವುದು, ಅದರಿಂದಾಗಿ ಚೀನಾದ ಮೇಲಿರುವ ಹದ್ದಿನ ಕಣ್ಣು ತನ್ನ ಕಡೆಗೆ ಬೀಳುತ್ತಿಲ್ಲ ಮತ್ತು ತನಗೆ ಸಂಬಂಧಿಸಿದಂತೆ ಭಾರತಕ್ಕೆ ಅಮೆರಿಕದಿಂದ ಹೆಚ್ಚಿನ ಬೆಂಬಲವೇನೂ ಇರುವುದಿಲ್ಲ ಎಂದು ಇಸ್ಲಾಮಾಬಾದ್ ನೆಮ್ಮದಿಯ ಉಸಿರು ಹಾಕುತ್ತಿದೆ. ಅ ನೆಮ್ಮದಿಯ ಬಲೂನ್​ಗೆ ಸೂಜಿ ಚುಚ್ಚುವುದು ಮೋದಿ ಉದ್ದೇಶ. ಅಮೆರಿಕ ಭಾರತವನ್ನು ಚೀನಾದ ವಿರುದ್ಧ ಬಳಸಿಕೊಳ್ಳುವುದಾದರೆ ಅಮೆರಿಕವನ್ನು ಪಾಕಿಸ್ತಾನದ ವಿರುದ್ಧ ಬಳಸಿಕೊಳ್ಳುವುದು ನ್ಯಾಯ ಎನ್ನುವುದು ಮೋದಿ ಸರ್ಕಾರದ ನಿಲುವು. ಇದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಟ್ರಂಪ್​ರ ಅಮೆರಿಕ ನಿಧಾನ ವಾಗಿಯಾದರೂ ಜಾಣತನ ತೋರುತ್ತಿದೆ ಎನ್ನುವುದು ಆಶಾದಾಯಕ ವಿಷಯ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...