ಇತಿಹಾಸದ ಹೊಸ ಚೀನೀ ಆರ್ಥಿಕ ವ್ಯಾಖ್ಯಾನ

ತಿಯೆನಾನ್​ವೆುನ್ ಚೌಕವನ್ನು ಕಾಲ್ನಡಿಗೆಯಲ್ಲಿ ಹಾಗೂ ಟ್ಯಾಂಕ್​ಗಳಲ್ಲಿ ಪ್ರವೇಶಿಸಿದ ಸೈನಿಕರು ಆಯುಧಗಳನ್ನು ಹೊಂದಿರಲಿಲ್ಲ. ವಿದ್ಯಾರ್ಥಿಗಳ ಕೆಲ ಗುಂಪುಗಳು ಸೈನಿಕರ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಒಂದು ಟ್ಯಾಂಕ್​ಗೆ ಬೆಂಕಿ ಹಚ್ಚಿ ಒಳಗಿದ್ದ ಸೈನಿಕರನ್ನು ಜೀವಂತ ಸುಟ್ಟುಬಿಟ್ಟವು. ಸರ್ಕಾರ ಬಯಸಿದ್ದ ಬೆಳವಣಿಗೆ ಇದು.

ಸೋವಿಯೆತ್ ನಾಯಕ ಮಿಖಾಯಿಲ್ ಗೋರ್ಬಚೆವ್​ರ ಮೇ 16ರ ಬೀಜಿಂಗ್ ಭೇಟಿ ಆ ದಿನದಂದು ಐತಿಹಾಸಿಕವಾಗಿ ಅತ್ಯಂತ ಮಹತ್ವದ್ದಾಗಿತ್ತು. ಆ ಮಹತ್ವ 30 ವರ್ಷಗಳ ನಂತರ ಸೋವಿಯೆತ್ ನಾಯಕರೊಬ್ಬರು ಚೀನೀ ರಾಜಧಾನಿಗೆ ಆಗಮಿಸುತ್ತಿದ್ದರು ಎನ್ನುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. 1959ರಲ್ಲಿ ಸೋವಿಯೆತ್-ಚೀನೀ ಮೈತ್ರಿಯಲ್ಲಿ ಬಿರುಕು, 1969ರಲ್ಲಿ ಸೇನಾ ಘರ್ಷಣೆ, 1979ರಲ್ಲಿ ಮಧ್ಯ ಮತ್ತು ಆಗ್ನೇಯ ಏಷಿಯಾದಲ್ಲಿ ಪ್ರಭಾವಕ್ಕಾಗಿ ಎರಡು ಕಮ್ಯೂನಿಸ್ಟ್ ದೈತ್ಯರ ನಡುವೆ ಸ್ಪರ್ಧೆಯ ಆರಂಭ, ಈಗ 1989ರಲ್ಲಿ ಚೀನಾಗೆ ಸೋವಿಯೆತ್ ನಾಯಕನ ಸ್ನೇಹಾಭಿಲಾಷಿ ಭೇಟಿ! ಗೋರ್ಬಚೆವ್ ಏಕಾಏಕಿಯೇನೂ ಚೀನಾಗೆ ಭೇಟಿ ನೀಡಹೊರಟಿರಲಿಲ್ಲ. ಅದಕ್ಕಾಗಿ ಅವರು ಕಳೆದ ಮೂರು ವರ್ಷಗಳಿಂದಲೂ ತಯಾರಿ ನಡೆಸಿದ್ದರು. ಮೊದಲಿಗೆ ಜುಲೈ 1986ರಲ್ಲಿ ಚೀನೀ ಗಡಿಗೆ ಕಲ್ಲೆಸೆತದ ದೂರದಲ್ಲಿರುವ ವ್ಲಾದಿವೋಸ್ತಾಕ್​ನಲ್ಲಿ ನಿಂತು ಆ ಮಹಾನ್ ರಾಜಕಾರಣಿ ಚೀನಾವನ್ನು ಉದ್ದೇಶಿಸಿ ಅಭೂತಪೂರ್ವ ಮಾತುಗಳನ್ನಾಡಿದ್ದರು. ಮಂಗೋಲಿಯಾದಲ್ಲಿ ಸೋವಿಯೆತ್ ಸೇನೆ ಇರುವುದು, ಅಫ್ಘಾನಿಸ್ತಾನದಲ್ಲಿ ಸೋವಿಯೆತ್ ಸೇನಾ ಕಾರ್ಯಾಚರಣೆ ಮುಂದುವರಿಯುತ್ತಿರುವುದು, ಕಂಪೂಚಿಯಾ(ಕಾಂಬೋಡಿಯಾ)ದಲ್ಲಿ ವಿಯೆಟ್ನಾಂನ ಸೇನಾ ಕಾರ್ಯಾಚರಣೆಗಳನ್ನು ಸೋವಿಯೆತ್ ಯೂನಿಯನ್ ಬೆಂಬಲಿಸುತ್ತಿರುವುದು ಚೀನಾಗೆ ಸಮ್ಮತಿಯೆನಿಸದಿದ್ದರೆ ತಾವು ಅವೆಲ್ಲವನ್ನೂ ನಿಲುಗಡೆಗೆ ತರುವುದಾಗಿ ಗೋರ್ಬಚೆವ್ ಘೊಷಿಸಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಗೋರ್ಬಚೆವ್ ಮಾತಿನಂತೆ ನಡೆದುಕೊಂಡರು. ಪರಿಣಾಮವಾಗಿ, 1988ರಲ್ಲಿ ಕಂಪೂಚಿಯಾದಲ್ಲಿ ವಿಯೆಟ್ನಾಮೀ ಸೇನಾ ಕಾರ್ಯಾಚರಣೆಗಳೂ ನಿಲುಗಡೆಗೆ ಬಂದವು, ಮರುವರ್ಷ ಸೋವಿಯೆತ್ ಯೂನಿಯನ್ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹೊರತೆಗೆಯಿತು. ಅದೇ ಸಮಯದಲ್ಲಿ ಮಂಗೋಲಿಯಾದಲ್ಲೂ ಸೋವಿಯೆತ್ ಸೇನಾ ಹಾಜರಾತಿ ಹಂತಹಂತವಾಗಿ ಕಡಿಮೆಯಾಗುತ್ತಾ ಸಾಗಿತ್ತು.

ಹೀಗೆ ಚೀನಾ ಜತೆಗಿನ ಮೈತ್ರಿಗಾಗಿ ಇಷ್ಟೆಲ್ಲಾ ಸಕಾರಾತ್ಮಕ ನಡೆಗಳನ್ನು ಪ್ರದರ್ಶಿಸಿದ ಗೋರ್ಬಚೆವ್​ಗೆ ಅದ್ದೂರಿ ಸ್ವಾಗತ ನೀಡಿ ಆ ಭೇಟಿಯನ್ನೊಂದು ಮರೆಯಲಾಗದ ಭೇಟಿಯಾಗಿಸಬೇಕೆಂದು ಚೀನೀ ನೇತಾರರು ಹಲವು ತಿಂಗಳುಗಳಿಂದಲೂ ತಯಾರಿ ನಡೆಸಿದ್ದರು. ಹೇಗೂ, ಚೀನೀಯರು ಅದ್ಭುತ ಆತಿಥೇಯರು ಎಂದು ಅಮೆರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ರಾಷ್ಟೀಯ ಸುರಕ್ಷಾ ಸಲಹೆಗಾರ ಹೆನ್ರಿ ಕಿಸಿಂಜರ್ 1972ರಲ್ಲೇ ಜಗತ್ತಿಗೆ ಸಾರಿದ್ದರು. ಸೋವಿಯೆತ್ ನಾಯಕನಿಗೆ ಜಗತ್​ಪ್ರಸಿದ್ಧ ತಿಯನಾನ್​ವೆುನ್ ಚೌಕದಲ್ಲಿ ಭವ್ಯ ಸ್ವಾಗತ ಸಮಾರಂಭವನ್ನೇರ್ಪಡಿಸಲು ಚೀನೀಯರು ಬಯಸಿದ್ದರು. ಆದರಿಂದು ಇಡೀ ಚೌಕದಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿಗಳು, ಅವರಿಗೆ ಬೆಂಬಲವಾಗಿ ಕಾರ್ವಿುಕರು, ಗೃಹಿಣಿಯರು, ವೈದ್ಯರು, ಪ್ರಾಧ್ಯಾಪಕರು, ಅಷ್ಟೇಕೆ ಒಂದಷ್ಟು ಚೀನೀ ನೌಕಾಸೈನಿಕರೂ ಸಹ ಸೇರಿ ಚೀನೀ ಸರ್ಕಾರದ ವಿರುದ್ಧ ಬೃಹತ್ ಪ್ರದರ್ಶನ ನಡೆಸುತ್ತಿದ್ದಾರೆ! ತಮ್ಮ ವಿದೇಶೀ ಅತಿಥಿಯನ್ನು ಅಲ್ಲಿಗೆ ಕರೆದುಕೊಂಡುಹೋದರೆ ಚೀನೀ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ನಿಶ್ಚಿತ. ಅಷ್ಟೇ ಅಲ್ಲ, ಸೋವಿಯೆತ್ ಮತ್ತು ಚೀನೀ ಉಚ್ಚ ನಾಯಕರ ನಡುವೆ ಅಧಿಕೃತ ಭೇಟಿ, ಮಾತುಕತೆ ನಡೆಯಬೇಕಾಗಿದ್ದ ಭವ್ಯ ‘ಗ್ರೇಟ್ ಹಾಲ್ ಆಫ್ ದ ಪೀಪಲ್’ನ ಮುಖ್ಯದ್ವಾರಕ್ಕೆ ತಿಯೆನಾನ್​ವೆುನ್ ಚೌಕದ ಮೂಲಕ ಸಾಗುತ್ತಿದ್ದ ಮಾರ್ಗ ಸಹ ಬಂದ್!

ಕಂಗೆಟ್ಟ ಬಲಾಢ್ಯ ಚೀನೀ ಸರ್ಕಾರ ತಿಯೆನಾನ್​ವೆುನ್ ಚೌಕವನ್ನು ಮರೆತು ಸೋವಿಯೆತ್ ನೇತಾರನಿಗೆ ಬೀಜಿಂಗ್ ವಿಮಾನನಿಲ್ದಾಣದಲ್ಲೇ ತರಾತುರಿಯ ಸ್ವಾಗತ ಸಮಾರಂಭವನ್ನೇರ್ಪಡಿಸಿತು, ಅತಿಥಿಯನ್ನು ಹಿಂಬಾಗಿಲ ಮೂಲಕ ಗ್ರೇಟ್ ಹಾಲ್ ಆಫ್ ದ ಪೀಪಲ್​ಗೆ ಸಾಗಿಸಲಾಯಿತು. ಗೋರ್ಬಚೆವ್​ರ ಬೆನ್ನಹಿಂದೆಯೇ ವಿಶ್ವದ ಎಲ್ಲೆಡೆಯಿಂದಲೂ ಬೀಜಿಂಗ್​ಗೆ ಬಂದಿಳಿದಿದ್ದ ನೂರಾರು ಪತ್ರಕರ್ತರು, ಛಾಯಾಗ್ರಾಹಕರು ಇಡೀ ಪ್ರಕರಣವನ್ನು ಸಚಿತ್ರವಾಗಿ ಜಗತ್ತಿಗೆ ಸಾರಿಬಿಟ್ಟರು. ಚೀನೀ ಸರ್ಕಾರಕ್ಕೆ ಮುಖಭಂಗವಾಗಿಹೋಗಿತ್ತು. ಅದಕ್ಕೆ ಬೆಲೆ ತೆರುವತ್ತ ತಿಯೆನಾನ್​ವೆುನ್​ನಲ್ಲಿ ಬೀಡುಬಿಟ್ಟಿದ್ದ ವಿದ್ಯಾರ್ಥಿಗಳ ಹಣೆಬರಹ ಸಾಗಿದ್ದುದು ಆ ಕ್ಷಣಕ್ಕೆ ಅವರಿಗಾಗಲೀ, ಹೊರಜಗತ್ತಿನ ಇನ್ನಾರಿಗೂ ಆಗಲೀ ತಿಳಿಯುವ ಸಾಧ್ಯತೆಯೇ ಇರಲಿಲ್ಲ.

ಈ ಹಿನ್ನೆಲೆಯಲ್ಲಿ, ಒಂದು ತಿಂಗಳಿಂದಲೂ ಭೇಟಿಗಾಗಿ ಕೋರುತ್ತಿದ್ದ ವಿದ್ಯಾರ್ಥಿಗಳ ನಿಯೋಗವನ್ನು ಮೇ 18ರಂದು ಪ್ರಧಾನಮಂತ್ರಿ ಲಿ ಪೆಂಗ್ ಭೇಟಿಯಾದದ್ದು ಒಂದು ತೋರಿಕೆಯ ಘಟನೆಯಷ್ಟೇ. ಆದರೆ, ಮರುದಿನ ನಸುಗತ್ತಲಿನಲ್ಲೇ ಉಚ್ಚಾಟಿತ ಮಹಾಕಾರ್ಯದರ್ಶಿ ಝಾವೋ ಜಿಯಾಂಗ್ ನಾಟಕೀಯವಾಗಿ ತಿಯೆನಾನ್​ವೆುನ್ ಚೌಕದಲ್ಲಿ ಪ್ರತ್ಯಕ್ಷರಾದರು. ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಲು ಸರ್ಕಾರ ತಡಮಾಡಿದ್ದನ್ನು ತಪ್ಪಿತಸ್ಥ ದನಿಯಲ್ಲಿ ಒಪ್ಪಿಕೊಂಡ ಜಿಯಾಂಗ್ ಉಪವಾಸನಿರತ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿಯ ಮಾತುಗಳನ್ನಾಡಿ, ಮುಷ್ಕರವನ್ನು ನಿಲ್ಲಿಸುವಂತೆ ಭಾವನಾತ್ಮಕವಾಗಿ ಮನವಿ ಮಾಡಿಕೊಂಡರು. ಜಿಯಾಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಅದೇ ಕೊನೆ. ತಿಯೆನಾನ್​ವೆುನ್ ಚೌಕದಲ್ಲಿ ಬೆಳಗಿನ 4-50ರಲ್ಲಿ ಅವರು ಆಡಿದ ಆ ಭಾವನಾತ್ಮಕ, ಕರುಣಾಪೂರ್ಣ ಮಾತುಗಳು ಚೀನೀ ಸರ್ಕಾರದ್ದೇನೂ ಆಗಿರಲಿಲ್ಲ. ಜಿಯಾಂಗ್ ಅದಾಗಲೇ ಸರ್ಕಾರದಿಂದ ಹೊರದಬ್ಬಲ್ಪಟ್ಟ, ಕಳಂಕಿತ ನಾಯಕರಾಗಿಹೋಗಿದ್ದರು. ಆಂದೋಲನನಿರತ ವಿದ್ಯಾರ್ಥಿಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವತ್ತ ಕಮ್ಯೂನಿಸ್ಟ್ ಪಕ್ಷದ ಉಚ್ಚ ನಾಯಕವರ್ಗ ಯೋಜನೆ ರೂಪಿಸುತ್ತಿದ್ದರೆ ಇತ್ತ ತಮ್ಮ ಲೋಕದಲ್ಲಿ ತಾವಿದ್ದ ವಿದ್ಯಾರ್ಥಿಗಳು ಮೇ 30ರಂದು ಥರ್ವೇಕೋಲ್ ಮತ್ತು ಪ್ಲಾಸ್ಟಿಕ್ ಉಪಯೋಗಿಸಿ 30 ಅಡಿಗಳೆತ್ತರದ ಪ್ರತಿಮೆಯೊಂದನ್ನು ನಿರ್ವಿುಸಿದರು. ತಮ್ಮ ಆಂದೋಲನದ ಆಶೋತ್ತರಗಳ ಸಂಕೇತವಾಗಿ, ಅಮೆರಿಕಾದ ಸ್ಟಾ್ಯಚೂ ಆಫ್ ಲಿಬರ್ಟಿಯ ಮಾದರಿಯಲ್ಲಿ ರಚಿಸಲಾದ ಈ ಪ್ರತಿಮೆಗೆ ವಿದ್ಯಾರ್ಥಿಗಳು ಇಟ್ಟ ಅನ್ವರ್ಥ ನಾಮ ‘ಪ್ರಜಾಪ್ರಭುತ್ವ ದೇವತೆ.’ ಅಲ್ಲಿಗೆ ಕಬ್ಬಿಣ ಸರಿಯಾದ ಹದಕ್ಕೆ ಕಾದಂತಾಯಿತು.

ಜೂನ್ 2ರಂದು ಸಭೆ ಸೇರಿದ ಪಾಲಿಟ್​ಬ್ಯೂರೋದ ಉಚ್ಚ ನಾಯಕವರ್ಗ ವಿದ್ಯಾರ್ಥಿಗಳ ಪ್ರಜಾಪ್ರಭುತ್ವವಾದಿ ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆಯನ್ನು ಕಣಕ್ಕಿಳಿಸಲು ಅಧಿಕೃತ ನಿರ್ಣಯ ಕೈಗೊಂಡಿತು. ಅದರಂತೆ ಜೂನ್ 3ರ ಬೆಳಿಗ್ಗೆ ಪೀಪಲ್ಸ್ ಲಿಬರೇಷನ್ ಆರ್ವಿು(ಪಿಎಲ್​ಎ)ಯ 27 ಮತ್ತು 28ನೇ ಡಿವಿಜನ್​ಗಳ ಸೈನಿಕರು ತಿಯೆನಾನ್​ವೆುನ್ ಚೌಕವನ್ನು ಪ್ರವೇಶಿಸಿದರು. ಆ ನಂತರದ ಕೆಲ ತಾಸುಗಳ ಬೆಳವಣಿಗೆಗಳನ್ನು ಗಮನಿಸಿದರೆ ಏಕಾಏಕಿ ರಕ್ತಪಾತದ ಉದ್ದೇಶ ಸರ್ಕಾರಕ್ಕಿರಲಿಲ್ಲವೆನಿಸುತ್ತದೆ. ಅಥವಾ ಮೊದಲ ಹತ್ಯೆ ಸೇನೆಯಿಂದ ಆಗಬಾರದೆಂದು ಸರ್ಕಾರ ಹಂಚಿಕೆ ಹೂಡಿದ್ದಂತೆ ತೋರುತ್ತದೆ. ಇಡೀ ವಿಶ್ವದ ಗಮನ ಚೀನಾದ ಕಡೆಗಿರುವಾಗ ಸರ್ಕಾರ ಆ ಬಗೆಯ ನಿಲುವು ತಳೆದದ್ದರಲ್ಲಿ ಅಚ್ಚರಿಯೇನಿಲ್ಲ. ಹೀಗಾಗಿಯೇ, ತಿಯೆನಾನ್​ವೆುನ್ ಚೌಕವನ್ನು ಕಾಲ್ನಡಿಗೆಯಲ್ಲಿ ಹಾಗೂ ಟ್ಯಾಂಕ್​ಗಳಲ್ಲಿ ಪ್ರವೇಶಿಸಿದ ಸೈನಿಕರು ಆಯುಧಗಳನ್ನು ಹೊಂದಿರಲಿಲ್ಲ. ನಿಶ್ಶಸ್ತ್ರ ಸೈನಿಕರ ಆಗಮನ ವಿದ್ಯಾರ್ಥಿಗಳನ್ನು ಎದೆಗುಂದಿಸುವುದಿರಲಿ, ಮತ್ತಷ್ಟು ಉದ್ರೇಕಿಸಿತು. ವಿದ್ಯಾರ್ಥಿಗಳ ಕೆಲ ಗುಂಪುಗಳು ಸೈನಿಕರ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಒಂದು ಟ್ಯಾಂಕ್​ಗೆ ಬೆಂಕಿ ಹಚ್ಚಿ ಒಳಗಿದ್ದ ಸೈನಿಕರನ್ನು ಜೀವಂತ ಸುಟ್ಟುಬಿಟ್ಟವು. ಸರ್ಕಾರ ಬಯಸಿದ್ದ ಬೆಳವಣಿಗೆ ಇದು. ರಾತ್ರಿ 10-30ರ ಹೊತ್ತಿಗೆ ಚೌಕಕ್ಕೆ ಹಿಂತಿರುಗಿದ ಸೈನಿಕರ ಕೈಯಲ್ಲಿ ಬಯೋನೆಟ್ ಜೋಡಿಸಿದ ರೈಫಲ್​ಗಳಿದ್ದವು. ಅವುಗಳನ್ನು ಎದುರಿಸಲು ವಿದ್ಯಾರ್ಥಿಗಳ ಬಳಿ ಇದ್ದದ್ದು ಪ್ಲಕಾರ್ಡ್​ಗಳು, ಮುರಿದ ಬೈಸಿಕಲ್​ಗಳು ಮತ್ತು… ‘ಪ್ರಜಾಪ್ರಭುತ್ವ ದೇವತೆ.’

ಮರುದಿನದ ಬೆಳಗಿನ ಜಾವದ ಹೊತ್ತಿಗೆ ಇಡೀ ತಿಯೆನಾನ್​ವೆುನ್ ಚೌಕ ಆಕ್ರಂದನಗಳಿಂದ, ಮೃತದೇಹಗಳಿಂದ, ಗಾಯಗೊಂಡವರಿಂದ ತುಂಬಿಹೋಗಿತ್ತು. ಮೃತ ಪ್ರತಿಭಟನಾಕಾರರ ಸಂಖ್ಯೆ ಸುಮಾರು 2,500 ಎಂದು ಘೊಷಿಸಿದ ಚೀನೀ ರೆಡ್​ಕ್ರಾಸ್ ಸರ್ಕಾರದ ಒತ್ತಡಕ್ಕೆ ಸಿಲುಕಿ ಆರೇ ಗಂಟೆಗಳೊಳಗೆ ಆ ವರದಿಯನ್ನು ಹಿಂತೆಗೆದುಕೊಂಡಿತು. ಚೀನೀ ಸರ್ಕಾರ ಹೇಳಿದ್ದು ಮೃತಪಟ್ಟವರು 241 ಜನ, ಅವರಲ್ಲಿ ಬಹಳಷ್ಟು ಸೈನಿಕರು ಸೇರಿದ್ದರು ಎಂದು. ಬೇರೆಬೇರೆ ಮೂಲಗಳು ಮೃತರ ಸಂಖ್ಯೆಯನ್ನು 250ರಿಂದ 10,000ದವರೆಗೆ ಒಯ್ಯುತ್ತವೆ. ಮೊದಲ ಸಂಖ್ಯೆ ತೀರಾ ಕಡಿಯೆಯಿರಬಹುದು, ಹಾಗೆಯೇ ಎರಡನೆಯದು ತೀರಾ ಹೆಚ್ಚಿರಲೂಬಹುದು.

ಚೀನಾದಲ್ಲಿ ಪ್ರಜಾಪ್ರಭುತ್ವವಾದಿ ಆಂದೋಲನ ರಕ್ತಸಿಕ್ತವಾಗಿ ಅಂತ್ಯಗೊಂಡದ್ದು ಹೀಗೆ. ನಂತರದ ಈ ಮೂವತ್ತು ವರ್ಷಗಳಲ್ಲಿ ಕಮ್ಯೂನಿಸ್ಟ್ ಜಗತ್ತು ಹೇಗೆ ಬದಲಾಗಿದೆ?

ಮುಂದಿನ ನಾಲ್ಕು ತಿಂಗಳುಗಳೊಳಗೆ ಪೊಲ್ಯಾಂಡ್​ನಲ್ಲಿ ನಡೆದ ಪ್ರಪ್ರಥಮ ಬಹುಪಕ್ಷೀಯ ಚುನಾವಣೆಗಳಲ್ಲಿ ಸಾಲಿಡ್ಯಾರಿಟಿ ವಿಜಯಿಯಾಗಿ ಅದರ ನಾಯಕ ತಾದಿಯುಸ್ತ್ಜ್ ಮ್ಯಾಜೋವಿಯೇಕಿ ಪ್ರಧಾನಮಂತ್ರಿಯಾದರು. ದ್ವಿತೀಯ ಜಾಗತಿಕ ಸಮರದ ನಂತರ ಪೂರ್ವ ಯೂರೋಪ್ ಕಂಡ ಮೊತ್ತಮೊದಲ ಕಮ್ಯೂನಿಸ್ಟೇತರ ಪ್ರಧಾನಿ ಅವರು. ಅಲ್ಲಿಂದಾಚೆಗೆ ಇಡೀ ಪೂರ್ವ ಯೂರೋಪಿನಲ್ಲಿ ಕಮ್ಯೂನಿಸ್ಟ್ ಸರ್ಕಾರಗಳು ಜನಾಂದೋಲನದ ಹೊಡೆತಕ್ಕೆ ಸಿಲುಕಿ ತಟಪಟನೆ ಉದುರತೊಡಗಿದವು. ಹಂಗೆರಿಯಲ್ಲಂತೂ ಕಮ್ಯೂನಿಸ್ಟರು ತಾವಾಗಿಯೇ ಒಂದು ಬೆಳಿಗ್ಗೆ ತಮ್ಮ ಪಕ್ಷದ ಕಚೇರಿಯ ನಾಮಫಲಕವನ್ನು ಕಿತ್ತೆಸೆದುಬಿಟ್ಟರು. ಕಮ್ಯೂನಿಸ್ಟರು ಒಂದಷ್ಟು ಪ್ರತಿರೋಧ ತೋರಿಸಿದ್ದು ರುಮೇನಿಯಾದಲ್ಲಿ ಮಾತ್ರ. ಪಶ್ಚಿಮದ ತಿಮಿಶೋರಾ ಪಟ್ಟಣದಲ್ಲಿ ಸರ್ವಾಧಿಕಾರಿ ಅಧ್ಯಕ್ಷ ನಿಕೊಲೇ ಚೌಸೆಸ್ಕೂ್ಯನ ಸೇನೆ 3,000 ಪ್ರದರ್ಶನಕಾರರನ್ನು ಬರ್ಬರವಾಗಿ ಕೊಂದದ್ದರಿಂದ ಕೆರಳಿಹೋದ ರುಮೇನಿಯನ್ನರು ಡಿಸೆಂಬರ್ 24ರ ಸಂಜೆ, ‘ಅವನನ್ನು ಕ್ರಿಸ್​ವುಸ್ ಟರ್ಕಿಯನ್ನು ಕತ್ತರಿಸುವಂತೆ ಕತ್ತರಿಸಿಹಾಕಿ’ ಎಂದು ಕೂಗುತ್ತಾ ಅಧ್ಯಕ್ಷನ ಅರಮನೆಯನ್ನು ಮುತ್ತಿದಾಗ ಅಲ್ಲೂ ಕಮ್ಯೂನಿಸಂನ ಅಂತ್ಯ ನಿಶ್ಚಿತವೆನಿಸಿತು. ಗುಂಡುಗಳಿಂದ ಛಿದ್ರಛಿದ್ರವಾದ ಅಧ್ಯಕ್ಷ ಚೌಸೆಸ್ಕೂ್ಯನ ದೇಹ ಮಾರನೆಯ ಬೆಳಿಗ್ಗೆ ಅರಮನೆಯ ಹೊರಗೋಡೆಯೊಂದರ ಬಳಿ ಅನಾಥವಾಗಿ ಬಿದ್ದಿತ್ತು. ಸರಿಯಾಗಿ ಎರಡು ವರ್ಷಗಳ ನಂತರ ಡಿಸೆಂಬರ್ 25, 1991ರಂದು ಒಕ್ಕೂಟವನ್ನು ವಿಸರ್ಜಿಸುವ ಮಸೂದೆಯೊಂದಕ್ಕೆ ಮಹಾಕಾರ್ಯದರ್ಶಿ ಮಿಖಾಯಿಲ್ ಗೋರ್ಬಚೆವ್ ಸಹಿಹಾಕಿದಾಗ ವಿಶ್ವದ 2 ಮಹಾಶಕ್ತಿಗಳಲ್ಲೊಂದಾಗಿದ್ದ ಬಲಾಢ್ಯ ಸೋವಿಯೆತ್ ಯೂನಿಯನ್ ಇತಿಹಾಸವಾಯಿತು. ಅದರೊಂದಿಗೆ ಅದು ಪ್ರತಿಪಾದಿಸುತ್ತಿದ್ದ ಕಮ್ಯೂನಿಸಂ ಸಹ ಅಂತ್ಯಗೊಂಡಿತು. ಪೂರ್ವ ಯೂರೋಪ್​ನ ಈ ಬೆಳವಣಿಗೆಯನ್ನು ಚೀನೀ ಕಮ್ಯೂನಿಸ್ಟರು ಒಂದು ಪಾಠದಂತೆ ತೆಗೆದುಕೊಂಡರು. ತಮ್ಮ ಜನತೆಗೆ ಹೊಸ ಹೊಸ ಆರ್ಥಿಕ ಆಮಿಷಗಳನ್ನೊಡ್ಡುವುದರ ಮೂಲಕ ಮತ್ತು ಅವರನ್ನು ಶಾಶ್ವತವಾಗಿ ಅದರ ಸುಳಿಯೊಳಗೆ ಸಿಲುಕಿಸಿಬಿಡುವ ಮೂಲಕ ಅವರ ಮನಸ್ಸಿನಿಂದ ರಾಜಕೀಯ ಚಿಂತನೆಗಳನ್ನು ಮಂಗಮಾಯ ಮಾಡಲು ಹಂಚಿಕೆ ರೂಪಿಸಿದರು. ಅದರಂತೆ, ರಾಜಕೀಯ ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಪಕ್ಷದ ಏಕಸ್ವಾಮ್ಯವನ್ನು ಉಳಿಸಿಕೊಂಡು, ಆರ್ಥಿಕ ಕ್ಷೇತ್ರದಲ್ಲಿ ಬಂಡವಾಳಶಾಹಿಯನ್ನು ಅಳವಡಿಸಿಕೊಳ್ಳಲು 1994ರಲ್ಲಿ ಜರುಗಿದ ಚೀನೀ ಕಮ್ಯೂನಿಸ್ಟ್ ಪಕ್ಷದ 14ನೇ ಮಹಾ ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು. ಡೆಂಗ್ ಷಿಯಾವೋಪಿಂಗ್ 1978ರಲ್ಲಿ ಜಾರಿಗೆ ತಂದಿದ್ದ ಸೀಮಿತ ಆರ್ಥಿಕ ಸುಧಾರಣೆಗಳನ್ನು ವಿಸ್ತರಿಸಿ, ವಿದೇಶೀ ಹೂಡಿಕೆದಾರರಿಗೆ ವಿಶೇಷ ಸವಲತ್ತುಗಳನ್ನು ವ್ಯಾಪಕವಾಗಿ ಒದಗಿಸುವ ಮೂಲಕ ತ್ವರಿತ ಕೈಗಾರಿಕೀಕರಣಕ್ಕೆ ನಾಂದಿ ಹಾಡಲಾಯಿತು. ಪರಿಣಾಮವಾಗಿ ಹೊಸ ಶತಮಾನದ ಹೊತ್ತಿಗೆ ‘ಜಗತ್ತಿನ ಕಾರ್ಖಾನೆ’ ಎಂದು ಬಿರುದಾಂಕಿತವಾದ ಚೀನಾ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆದುನಿಂತಿತು. ಇದರ ಪರಿಣಾಮ ಚೀನೀ ಯುವಜನತೆಯ ಮೇಲೆ ಏನು? ‘ಇತಿಹಾಸದ ಆರ್ಥಿಕ ವ್ಯಾಖ್ಯಾನ’ ಎನ್ನುವುದು ಕಾರ್ಲ್ ಮಾರ್ಕ್್ಸ ಕಮ್ಯೂನಿಸಂನ ಒಂದು ಬಹುಮುಖ್ಯ ಅಂಶ. ಇತಿಹಾಸವನ್ನು ರೂಪಿಸುವಲ್ಲಿ ಆರ್ಥಿಕತೆಯ ಮುಖ್ಯ ಪಾತ್ರವನ್ನು ಅದು ಗುರುತಿಸುತ್ತದೆ. ಇಂದು ಚೀನಾದಲ್ಲಿ ಸರ್ಕಾರ ಒದಗಿಸಿದ ವಿಪುಲ ಉದ್ಯೋಗಾವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡ ಚೀನೀ ಯುವಜನತೆ ಆದಾಯ, ಅದು ತರುವ ಕೊಳ್ಳುವ ಸಾಮರ್ಥ್ಯ ಅದರಿಂದ ತಾವು ಹೊಂದಬಹುದಾದ ಐಷಾರಾಮಿ ವಸ್ತುಗಳು ಮತ್ತು ಒಂದಕ್ಕಿಂತ ಹೆಚ್ಚು (ಆದರೆ ಕಳಪೆ!) ಮನೆಗಳ ಆಮಿಷದಲ್ಲಿ ಹೊರಬರಲಾರದಂತೆ ಸಿಲುಕಿ ಹೋಗಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಚಿಂತಿಸಲು ಅವರಿಗೀಗ ಸಮಯವಿಲ್ಲ. ಚೀನಾ

ದಲ್ಲಿ ಇತಿಹಾಸವನ್ನು ಆರ್ಥಿಕತೆ ಪ್ರಭಾವಿಸುತ್ತಿರುವುದು ಹೀಗೆ. ಕಾರ್ಲ್ ಮಾರ್ಕ್್ಸ ‘ಇತಿಹಾಸದ ಆರ್ಥಿಕ ವ್ಯಾಖ್ಯಾನ’ಕ್ಕೆ ಚೀನೀಯರು ನೀಡುತ್ತಿರುವ ಹೊಸ ರೂಪ ಇದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *