ಭ್ರಷ್ಟಾಚಾರ, ಕರ್ಮ, ಹುತಾತ್ಮ ಎತ್ತಣದಿಂದೆತ್ತಣ ಸಂಬಂಧ?

ಬೊಫೋರ್ಸ್ ಹಗರಣದ ಬಗ್ಗೆ ಕೊನೆಯ ಮಾತು ಹೇಳುವುದು ಇಂದಿಗೂ ಸಾಧ್ಯವಾಗಿಲ್ಲ. ಆ ಕುರಿತು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಗಳು ನಡೆದುಕೊಂಡಿರುವ ಬಗೆ ನೋಡಿದರೆ ‘ಏನನ್ನೋ’ ಮುಚ್ಚಿಡಲು ಅವೆಲ್ಲವೂ ಶಕ್ತಿಮೀರಿ ಶ್ರಮಿಸಿವೆ ಎನ್ನುವುದು ಸ್ಪಷ್ಟವಾಗುತ್ತದೆ. ಇದೆಲ್ಲವನ್ನೂ ನೋಡಿದರೆ, ರಾಜೀವ್​ರನ್ನು ‘ಭ್ರಷ್ಟಾಚಾರಿ ನಂಬರ್ 1’ ಎಂದು ಮೋದಿ ಬಣ್ಣಿಸಿದ್ದು ಕಡಿಮೆಯಾಯಿತೇನೋ ಅನಿಸುತ್ತದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ‘ಭ್ರಷ್ಟಾಚಾರಿ ನಂಬರ್ 1’ ಎಂದು ಹಾಲಿ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದು ವಾರದಿಂದಲೂ ಪರ-ವಿರೋಧ ವಾಗ್ವಾದಕ್ಕೆ ಕಾರಣವಾಗಿರುವುದನ್ನು ನೋಡುತ್ತಲೇ ಇದ್ದೀರಿ. ಕಾಂಗ್ರೆಸ್ ಮುಖ್ಯವಾಗಿ ರಾಜೀವ್ ಗಾಂಧಿ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಮೋದಿ ವಿರುದ್ಧ ಅತಿ ಎನ್ನುವಷ್ಟು ಟೀಕಾಸ್ತ್ರಗಳನ್ನು ಪ್ರಯೋಗಿಸಿಯಾಗಿದೆ. ‘ನಿಮ್ಮ ಕರ್ಮ ನಿಮ್ಮ ಬೆನ್ನು ಹತ್ತುತ್ತದೆ’ ಎಂದು ರಾಹುಲ್ ಟ್ವೀಟ್ ಮಾಡಿದರೆ, ಪ್ರಿಯಾಂಕಾ ತನ್ನ ತಂದೆಯನ್ನು ‘ಹುತಾತ್ಮ’ ಎಂದು ಬಣ್ಣಿಸಿ ಅಂತಹ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ ಮೋದಿಯನ್ನು ಖಂಡಿಸಿದ್ದಾರೆ. ಮೋದಿ, ರಾಹುಲ್ ಹಾಗೂ ಪ್ರಿಯಾಂಕಾರ ಮಾತುಗಳ ಸತ್ಯಾಸತ್ಯತೆ ಪರಿಶೀಲಿಸುವುದು ಎರಡು ಭಾಗಗಳ ಈ ಲೇಖನದ ವಸ್ತುವಿಷಯ.

ಭ್ರಷ್ಟಾಚಾರ, ಸ್ವಜನಪಕ್ಷಪಾತಗಳು ದೊಡ್ಡದಾಗಿ ಸುದ್ದಿಯಾಗತೊಡಗಿದ್ದು ಇಂದಿರಾ ಗಾಂಧಿ ಕಾಲದಲ್ಲಿ. ಈ ಅನೀತಿಗಳಿಗೆ ತಮ್ಮ ಆಳ್ವಿಕೆಯಲ್ಲಿ ಅವಕಾಶ ಮಾಡಿಕೊಟ್ಟ ದೋಷವನ್ನು ಇಂದಿರಾ ಹೊರಲೇಬೇಕು ಅಂದರೂ ಅವುಗಳಿಂದ ವೈಯಕ್ತಿಕವಾಗಿ ಅವರು ಲಾಭ ಮಾಡಿಕೊಂಡರು ಎಂದು ಹೇಳಲು ಆಧಾರಗಳಿಲ್ಲ. ಅಂತಹ ಬೆಳವಣಿಗೆಗಳು ಆಘಾತಕಾರಿ ಹಾಗೂ ಆತಂಕಕಾರಿ ಪ್ರಮಾಣದಲ್ಲಿ ಕಾಣಿಸಿಕೊಂಡದ್ದು ಆವರ ಪುತ್ರ ರಾಜೀವ್ ಗಾಂಧಿ ಕಾಲದಲ್ಲಿ. ರಾಜೀವ್ ಮತ್ತವರ ಪತ್ನಿ ಸೋನಿಯಾ ಭ್ರಷ್ಟಾಚಾರದಲ್ಲಿ ಸ್ವತಃ ಭಾಗಿಯಾಗಿದ್ದರು ಎಂದು ಅಂತಾರಾಷ್ಟ್ರೀಯ ಮಾಧ್ಯಮದಲ್ಲೇ ಸುದ್ದಿಯಾಗಿತ್ತು. 1991 ನವೆಂಬರ್ 11ರಂದು ಸ್ವಿಸ್ ಪತ್ರಿಕೆ ‘ಶ್ವೀಝುರ್ ಇಲಸ್ತ್ರಿಯೆರ್ತ್’ ಸ್ವಿಸ್ ಬ್ಯಾಂಕ್​ಗಳಲ್ಲಿ ಅಧಿಕ ಮೊತ್ತದ ಕಾಳಧನ ಇಟ್ಟಿರುವ ಹಾಲಿ ಹಾಗೂ ಮಾಜಿ ವಿಶ್ವನಾಯಕರ ಪಟ್ಟಿ ನೀಡಿ, ಅವರೆಲ್ಲರ ಹೆಸರು ಮತ್ತು ಫೋಟೋಗಳನ್ನು ಪ್ರಕಟಿಸಿತು. ಅವರಲ್ಲಿ ಉಗಾಂಡಾದ ಕುಖ್ಯಾತ ನರಭಕ್ಷಕ ಸರ್ವಾಧಿಕಾರಿ ಇದೀ ಅಮೀನ್, ಮಧ್ಯ ಆಫ್ರಿಕಾದ ಕ್ರೂರಿ ಸರ್ವಾಧಿಕಾರಿ ಜೀನ್ ಬೇದಲ್ ಬೊಕಾಸಾ, ಪನಾಮಾದ ಮಾದಕವಸ್ತುಗಳ ಕಳ್ಳಸಾಗಾಣಿಕೆದಾರ-ಅಧ್ಯಕ್ಷ ಮ್ಯಾನುಯೆಲ್ ನೊರಿಯೇಗಾ, ಇರಾಕ್​ನ ಯುದ್ಧಕೋರ ಅಧ್ಯಕ್ಷ ಸದ್ದಾಂ ಹುಸೇನ್ ಮುಂತಾದವರ ಜತೆ ರಾಜೀವ್ ಗಾಂಧಿ ಹೆಸರು ಮತ್ತು ಫೋಟೋ ಇದ್ದವು. ಪತ್ರಿಕೆಯ ಪ್ರಕಾರ ರಾಜೀವ್ ಇಟ್ಟಿದ್ದ ಹಣದ ಮೊತ್ತ ಎರಡು ಬಿಲಿಯನ್ ಅಮೆರಿಕನ್ ಡಾಲರ್​ಗಳು! ಮೂರು ದಶಕಗಳ ಹಿಂದೆ ಅದು ಜನಸಾಮಾನ್ಯರನ್ನು ಬೆಚ್ಚಿಬೀಳಿಸುವಷ್ಟು ಭಾರಿ ಮೊತ್ತ.

ಸ್ವಿಸ್ ಪತ್ರಿಕೆಯ ವರದಿಯ ಬಗ್ಗೆ ಸಿಪಿಐ(ಎಂ) ಸಂಸದ ಅಮೊಲ್ ರಾಯ್ ಲೋಕಸಭೆಯಲ್ಲಿ ಪ್ರಸ್ತಾಪವೆತ್ತಿದಾಗ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಗದ್ದಲವೆಬ್ಬಿಸಿ ರಾಯ್ ಮಾತಿಗೆ ತಡೆಯೊಡ್ಡಿದರು. ಆಮೇಲೇನಾಯಿತೋ, ಆ ಸುದ್ದಿ ತಣ್ಣಗಾಗಿಹೋಯಿತು. ವರ್ಷಗಳ ನಂತರ ಸಿಪಿಐ(ಎಂ) ರಾಜೀವ್​ರ ಪತ್ನಿ ಸೋನಿಯಾ ನಾಯಕತ್ವವನ್ನು ಒಪ್ಪಿಕೊಂಡು ಯುಪಿಎ ಒಕ್ಕೂಟದಲ್ಲಿ ಸಹಭಾಗಿಯಾಗುವ ಚೋದ್ಯವೂ ಘಟಿಸಿಹೋಯಿತು. ಆದರೆ, ಇಂದಿನವರೆಗೂ ಕಾಂಗ್ರೆಸ್ ಆಗಲೀ, ದಿವಂಗತ ರಾಜೀವ್ ಗಾಂಧಿಯ ಅಧಿಕೃತ ಉತ್ತರಾಧಿಕಾರಿಗಳಾಗಲಿ ಸ್ವಿಸ್ ಪತ್ರಿಕೆ ವಿರುದ್ಧ, ನಂತರ ಅದೇ ವರದಿ ಮರುಪ್ರಕಟಿಸಿದ ಆಂಗ್ಲಪತ್ರಿಕೆ ‘ಸಂಡೇ ಮೆಯಿಲ್’ ಮತ್ತು ಹಿಂದಿ ಪತ್ರಿಕೆ ‘ಅಮರ್ ಉಜಾಲಾ’ ವಿರುದ್ಧ ಯಾವುದೇ ಮಾನನಷ್ಟ ಮೊಕದ್ದಮೆ ಹೂಡಲಿಲ್ಲ! ಪತ್ರಿಕೆಗಳು ಸ್ಪೋಟಿಸಿದ ವಿಷಯಗಳು ಸತ್ಯ ಎಂದು ನಂಬಲು ಇದರಿಂದ ಅವಕಾಶವಾಗುತ್ತದೆ. ಸರಿ, ಇಷ್ಟು ಹಣ ರಾಜೀವ್ ಗಾಂಧಿಗೆ ಬಂದದ್ದಾದರೂ ಎಲ್ಲಿಂದ?

ಮೊನ್ನೆ ಹಿಮಾಚಲ ಪ್ರದೇಶದ ಸೋಲನ್​ನಲ್ಲಿ ಚುನಾವಣಾ ಭಾಷಣ ಮಾಡುತ್ತ ಪ್ರಧಾನಿ ಮೋದಿ, ‘ಶಸ್ತ್ರಾಸ್ತ್ರ ಆಮದಿನ ಪ್ರತಿಯೊಂದು ಒಪ್ಪಂದವನ್ನೂ ಕಾಂಗ್ರೆಸ್ ಎಟಿಎಂನಂತೆ ಉಪಯೋಗಿಸಿಕೊಂಡಿದೆ’ ಎಂದರು. ಕಾಂಗ್ರೆಸ್​ನ ಈ ಚಾಳಿ ರಾಜೀವ್ ಕಾಲದಲ್ಲೇ ಆರಂಭವಾಯಿತು ಎನ್ನುವುದಕ್ಕೆ ಪ್ರಬಲ ಸೂಚನೆ ಬೋಫೋರ್ಸ್ ಹಗರಣ. ಅದು ಅಲ್ಲಿಯವರೆಗೆ ದೇಶ ಕಂಡ ದೊಡ್ಡ ಭ್ರಷ್ಟಾಚಾರ ಪ್ರಕರಣ ಮತ್ತದರಲ್ಲಿ ಪ್ರಧಾನಮಂತ್ರಿ ಹೆಸರೂ ಸೇರಿದ್ದೊಂದು ಅಭೂತಪೂರ್ವ ಬೆಳವಣಿಗೆ. ಸ್ವೀಡನ್​ನಿಂದ ಭಾರತ ಬೊಫೋರ್ಸ್ ಫಿರಂಗಿಗಳನ್ನು ಆಮದು ಮಾಡಿಕೊಂಡದ್ದರಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ಘಟಿಸಿದೆ, ಮಧ್ಯವರ್ತಿಗಳಲ್ಲದೆ ಭಾರತೀಯ ನೇತಾರರಿಗೂ ಹಣ ಸಂದಾಯವಾಗಿದೆ ಎಂದು ಮೊದಲು ಸುದ್ದಿ ಮಾಡಿದ್ದು ಸ್ವೀಡಿಷ್ ಪತ್ರಿಕೆ ‘ಎಕ್ಸ್​ಪ್ರೆಸ್ಸೆನ್’. ನಂತರ ಅದನ್ನು ಮತ್ತಷ್ಟು ವಿವರವಾಗಿ, ತನಿಖಾವರದಿಗಳೊಂದಿಗೆ ಸುದ್ದಿಯಾಗಿಸತೊಡಗಿದ್ದು ಭಾರತೀಯ ಆಂಗ್ಲಪತ್ರಿಕೆಗಳಾದ ‘ಇಂಡಿಯನ್ ಎಕ್ಸ್​ಪ್ರೆಸ್’ ಮತ್ತು ‘ದ ಹಿಂದೂ’.

ಬೊಫೋರ್ಸ್ ಹಗರಣದ ಬಗ್ಗೆ ಕೊನೆಯ ಮಾತು ಹೇಳುವುದು ಇಂದಿಗೂ ಸಾಧ್ಯವಾಗಿಲ್ಲ. ಆದಾಗ್ಯೂ, ಆ ಕುರಿತು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಗಳು ನಡೆದುಕೊಂಡಿರುವ ಬಗೆ ನೋಡಿದರೆ ‘ಏನನ್ನೋ’ ಮುಚ್ಚಿಡಲು ಅವೆಲ್ಲವೂ ಶಕ್ತಿಮೀರಿ ಶ್ರಮಿಸಿವೆ ಎನ್ನುವುದು ಸ್ಪಷ್ಟವಾಗುತ್ತದೆ. ಬೊಫೋರ್ಸ್ ಹಗರಣದಿಂದಾಗಿಯೇ ಬಂಡೆದ್ದು, ರಾಜೀವ್ ಮೇಲೆ ಲಂಚದ ಆಪಾದನೆ ಹೊರಿಸಿ ಕಾಂಗ್ರೆಸ್​ನಿಂದ ಹೊರಬಂದ ವಿ.ಪಿ. ಸಿಂಗ್ ಆ ಕುರಿತು ಸಂಸತ್ತಿನ ಒಳಗೆ-ಹೊರಗೆ ಸಾಕಷ್ಟು ಮಾತಾಡಿದರೂ, ಅದಕ್ಕೆ ಮಾಧ್ಯಮ ಪ್ರಚಾರ ನೀಡಿದರೂ ಮುಂದಿನ ಎರಡೂವರೆ ವರ್ಷಗಳವರೆಗೆ ಯಾವುದೇ ಅರ್ಥಪೂರ್ಣ ತನಿಖೆಗೆ ರಾಜೀವ್ ಸರ್ಕಾರ ಅವಕಾಶ ನೀಡಲಿಲ್ಲ. ನಿಜ ಹೇಳಬೇಕೆಂದರೆ, ಬೊಫೋರ್ಸ್ ವರದಿಗಳನ್ನು ದೊಡ್ಡದಾಗಿ ಪ್ರಕಟಿಸುತ್ತಿದ್ದ ಪತ್ರಿಕೆಗಳ ವಿರುದ್ಧ ಅದು ಪ್ರತೀಕಾರ ಕ್ರಮಕ್ಕೆ ಮುಂದಾಯಿತು. ಅರುಣ್ ಶೌರಿ ಅಂದು ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯ ಸಂಪಾದಕ. ಬೊಫೋರ್ಸ್ ಹಗರಣವೊಂದೇ ಅಲ್ಲ, ಶಾ ಬಾನೂ ಪ್ರಕರಣ, ಸೆಟಾನಿಕ್ ವರ್ಸಸ್ ಬಹಿಷ್ಕಾರ, ಸಿಖ್ ನರಮೇಧದಲ್ಲಿ ಕಾಂಗ್ರೆಸ್ಸಿಗರ ಪಾತ್ರ, ಬಂಗಾರಂ ದ್ವೀಪದಲ್ಲಿ ರಾಜೀವ್ ಪರಿವಾರದ ರಜಾಮಜಾ, ಭಾರತೀಯ ನೌಕಾಸೇನೆಯ ವಶದಲ್ಲಿದ್ದು ವಿದೇಶೀಯರಿಗೆ ಪ್ರವೇಶನಿಷೇಧವಿದ್ದ ನಿಕೋಬಾರ್ ದ್ವೀಪ ಸಮುಚ್ಚಯದ ದ್ವೀಪವೊಂದಕ್ಕೆ ರಾಜೀವ್ ವಿದೇಶೀಯರನ್ನು ಕರೆದೊಯ್ದ ಪ್ರಕರಣ- ಮುಂತಾದ ವಿಷಯಗಳ ಬಗ್ಗೆ ‘ಇಂಡಿಯನ್ ಎಕ್ಸ್​ಪ್ರೆಸ್’ ಪತ್ರಿಕೆ ವಿವರವಾಗಿ ಬರೆದು ದಿನನಿತ್ಯವೂ ರಾಜೀವ್ ಸರ್ಕಾರದ ನಿದ್ದೆಗೆಡಿಸುತ್ತಿತ್ತು. ವಕೀಲ ರಾಮ್ ಜೇಠ್ಮಲಾನಿಯವರಂತೂ ಪತ್ರಿಕೆಯ ಮುಖಪುಟದಲ್ಲಿ ರಾಜೀವ್ ಗಾಂಧಿಯವರಿಗೆ ನೇರವಾಗಿ ದಿನಕ್ಕೆ ಹತ್ತು ಪ್ರಶ್ನೆಗಳಂತೆ ಒಂದಿಡೀ ತಿಂಗಳು ಪ್ರಶ್ನೆಗಳ ಮಳೆಗರೆದರು. ಹುಚ್ಚೆದ್ದುಹೋದ ರಾಜೀವ್ ಸರ್ಕಾರ ಮತ್ತು ಕಾಂಗ್ರೆಸ್, ಪತ್ರಿಕೆಯ ವಿರುದ್ಧ ಸಮರ ಸಾರಿದವು. ಒಂದೂವರೆ ತಿಂಗಳಷ್ಟು ಕಾಲ ಪತ್ರಿಕೆಯ ದೆಹಲಿ ಆವೃತ್ತಿ ಪ್ರಕಟವಾಗದಂತೆ ಮಾಡಿದ ಕೆಲಸಗಾರರ ಮುಷ್ಕರದ ಹಿಂದಿದ್ದದ್ದು ಕಾಂಗ್ರೆಸ್ ಪಕ್ಷ. ದೀರ್ಘ ಲಾಕ್​ಔಟ್ ನಂತರ ಪತ್ರಿಕೆ ಮತ್ತೆ ಪ್ರಕಟಣೆ ಆರಂಭಿಸಿದಾಗ ಅರುಣ್ ಶೌರಿ, ‘ಗುಡ್ ಮಾರ್ನಿಂಗ್ ಮಿಸ್ಟರ್ ಗಾಂಧಿ! ವಿ ಆರ್ ಬ್ಯಾಕ್’ ಎಂಬ ತಲೆಬರಹದ ಸಂಪಾದಕೀಯವನ್ನು ಮುಖಪುಟದಲ್ಲೇ ಪ್ರಕಟಿಸಿ, ‘ಕುಯುಕ್ತಿಗಳ ಮೂಲಕ ನೀವೆಷ್ಟೇ ಹೆಣಗಾಡಿದರೂ ನಮ್ಮ ಬಾಯಿ ಮುಚ್ಚಿಸಲಾರಿರಿ’ ಎಂದು ರಾಜೀವ್​ಗೆ ನೇರವಾಗಿ ಹೇಳಿದರು.

ಬೊಫೋರ್ಸ್ ಕಳಂಕದಿಂದಾಗಿಯೇ 1989ರ ಚುನಾವಣೆಗಳಲ್ಲಿ ರಾಜೀವ್​ರ ಕಾಂಗ್ರೆಸ್ ಸೋತು ವಿ.ಪಿ. ಸಿಂಗ್ ಹನ್ನೊಂದು ತಿಂಗಳು ಪ್ರಧಾನಿಯಾಗಿದ್ದರೂ, ಮಂಡಲ್-ಮಸೀದಿ ಗಲಾಟೆಯಲ್ಲದೆ ಉಪಪ್ರಧಾನಿ ದೇವಿಲಾಲ್​ರ ನೌಟಂಕಿಗಳಿಂದಾಗಿ ದಿನನಿತ್ಯದ ಕಾರ್ಯಭಾರ ನಡೆಸುವುದೇ ಕಷ್ಟವಾದ ಕಾರಣ ಬೊಫೋರ್ಸ್ ಬಗ್ಗೆ ತಲೆಕೆಡಿಸಿಕೊಳ್ಳಲು ಅವರಿಗೆ ಆಗಲೇ ಇಲ್ಲ. ಆಮೇಲೆ ಚಂದ್ರಶೇಖರ್ ಆರುತಿಂಗಳು ಪ್ರಧಾನಿಯಾಗಿದ್ದದ್ದೇ ರಾಜೀವ್ ನೇತೃತ್ವದ ಕಾಂಗ್ರೆಸ್​ನ ದಯೆಯಿಂದ. ಅಲ್ಲದೆ, ರಾಜೀವ್-ಚಂದ್ರಶೇಖರ್ ಮೈತ್ರಿ ಏರ್ಪಡಿಸಿದ್ದು ಇಬ್ಬರಿಗೂ ಆತ್ಮೀಯರಾಗಿದ್ದ ಹಾಗೂ ಬೊಫೋರ್ಸ್ ಹಗರಣಕ್ಕೆ ಅರುಣ್ ನೆಹ್ರೂರನ್ನು ದೂಷಿಸಿ ರಾಜೀವ್​ಗೆ ಕ್ಲೀನ್​ಚಿಟ್ ನೀಡಿದ್ದ ಡಾ. ಸುಬ್ರಮಣಿಯನ್ ಸ್ವಾಮಿ! ಬೊಫೋರ್ಸ್ ತನಿಖೆ ಹಳ್ಳ ಹಿಡಿಯಲು ಇಷ್ಟು ಸಾಕಲ್ಲವೇ? ನಂತರ ಐದು ವರ್ಷಗಳ ಕಾಂಗ್ರೆಸ್ ಆಡಳಿತ ಇಡೀ ತನಿಖೆ ಮೇಲೆ ಪರದೆ ಎಳೆದುಬಿಟ್ಟಿತು. ದೇವೇಗೌಡರ ಕಾಲದಲ್ಲಿ ಬೊಫೋರ್ಸ್ ಹಗರಣಕ್ಕೆ ಸಂಬಂಧಿಸಿದ ಕಡತಗಳು ತುಂಬಿದ ಎಂಟು ಸಂದೂಕಗಳು ವಿದೇಶಗಳಿಂದ ಬಂದರೂ ಅವುಗಳಿನ್ನೂ ಮುಚ್ಚಿಯೇ ಇವೆ. ವಾಜಪೇಯಿ ಕಾಲದಲ್ಲಿ ಗೃಹಮಂತ್ರಿಯಾಗಿದ್ದ ಎಲ್.ಕೆ.ಆಡ್ವಾಣಿಯವರಿಗೆ ಸೋನಿಯಾ ಬಗ್ಗೆ ಮೃದುಭಾವನೆಯಿದ್ದ ಕಾರಣ ಹಾಗೂ 2004ರಲ್ಲಿ ಖುದ್ದು ಸೋನಿಯಾ ನೇತೃತ್ವದ ಯುಪಿಎ ಸರ್ಕಾರ ಬಂದದ್ದರಿಂದಾಗಿ ಬೊಫೋರ್ಸ್ ಹಗರಣವನ್ನು ದೇಶ ಮರೆತೇಬಿಡುವಂತಾಯಿತು. ಬೊಫೋರ್ಸ್ ವ್ಯವಹಾರದ ಮಧ್ಯವರ್ತಿ ಅಟ್ಟಾವಿಯೋ ಕ್ವಟರೋಚಿಯನ್ನು ಯುಪಿಎ ಸರ್ಕಾರ ಬಂಧನದಿಂದ ತಪ್ಪಿಸಿಕೊಳ್ಳುವಂತೆ ಮಾಡಿದ್ದಲ್ಲದೆ ನ್ಯಾಯಾಂಗ ಆತನ ಬ್ಯಾಂಕ್ ಖಾತೆಗಳ ಮೇಲೆ ವಿಧಿಸಿದ್ದ ಫ್ರೀಜ್ ಅನ್ನು ತೆಗೆದುಹಾಕಿ ಆತ ಹಣವನ್ನೆಲ್ಲ ಎತ್ತಿಕೊಂಡು ಓಡಿಹೋಗುವಂತೆ ಮಾಡಿತು. ಈಗ ಪ್ರಧಾನಿ ಮೋದಿ ಬೊಫೋರ್ಸ್ ಬಗ್ಗೆ ಮಾತಾಡಿದ್ದಾರೆ. ಈಗಲಾದರೂ ಸತ್ಯಶೋಧನೆಯ ನಿಖರ ಪ್ರಯತ್ನ ಆರಂಭವಾಗುವುದೇ ಎನ್ನುವುದು ಮೇ 23ರ ನಂತರ ನಿರ್ಧಾರವಾಗಲಿದೆ.

ಬೊಫೋರ್ಸ್ ಜತೆ ರಾಜೀವ್ ‘ಆದಾಯ’ದ ಮತ್ತೊಂದು ಮೂಲದ ಸುಳಿವು ಬೇರೆಡೆ ದೊರೆಯುತ್ತದೆ. ಸೋನಿಯಾ ಮತ್ತು ರಾಜೀವ್ ಸೋವಿಯೆತ್ ಗುಪ್ತಚರ ಸಂಸ್ಥೆ ಕೆಜಿಬಿಯೊಂದಿಗೆ ಸಂಪರ್ಕದಲ್ಲಿದ್ದ ಹಾಗೂ ಅವರಿಬ್ಬರೂ ಸ್ಥಾಪಿಸಿದ್ದ ಕಂಪನಿಗಳ ಸ್ವಿಸ್​ಬ್ಯಾಂಕ್ ಖಾತೆಗಳಿಗೆ ಕೆಜಿಬಿಯಿಂದ ನಿಯಮಿತವಾಗಿ ಹಣ ಸಂದಾಯವಾಗುತ್ತಿದ್ದ ಆಘಾತಕಾರಿ ವಿವರಗಳನ್ನು ಫೈಲ್ ಸಂಖ್ಯೆಗಳೊಂದಿಗೆ ಡಾ. ಯೆವ್ಗೆನಿಯಾ ಆಲ್ಬಾತ್ಸ್ ತಮ್ಮ “The State within a State, KGB and its Hold on Russia: Past, Present and Future” ಕೃತಿಯಲ್ಲಿ ನೀಡಿದ್ದಾರೆ. ಕೆಜಿಬಿಯ ವ್ಯವಹಾರಗಳನ್ನು ಪರಿಶೀಲಿಸಲು ಅಧ್ಯಕ್ಷ ಬೊರಿಸ್ ಯೆಲ್ತ್​ಸಿನ್ 1991ರಲ್ಲಿ ನೇಮಿಸಿದ ಕೆಜಿಬಿ ಕಮಿಶನ್​ನ ಸದಸ್ಯೆ ಈ ಆಲ್ಬಾತ್ಸ್. ಹೀಗಾಗಿ ಈ ಪತ್ರಕರ್ತೆ-ವಿದ್ವಾಂಸೆಗೆ ಕೆಜಿಬಿ ರಹಸ್ಯ ಫೈಲ್​ಗಳನ್ನು ಖುದ್ದಾಗಿ ನೋಡುವ ಅವಕಾಶವಿತ್ತು. ಇದೆಲ್ಲವನ್ನೂ ನೋಡಿದರೆ, ರಾಜೀವ್​ರನ್ನು ‘ಭ್ರಷ್ಟಾಚಾರಿ ನಂಬರ್ 1’ ಎಂದು ಮೋದಿ ಬಣ್ಣಿಸಿದ್ದು ಕಡಿಮೆಯಾಯಿತೇನೋ ಅನಿಸುತ್ತದೆ. ಇನ್ನು, ಮೋದಿ ಬಗ್ಗೆ ರಾಹುಲ್ ಪ್ರಸ್ತಾಪಿಸುವ ’ಕರ್ಮ’ ವಾಸ್ತವವಾಗಿ ರಾಜೀವ್​ರನ್ನೇ ಬೆನ್ನುಹತ್ತಿರಬಹುದಾದ ಸುಳಿವನ್ನೂ, ಪ್ರಿಯಾಂಕಾ ಬಳಸುವ ‘ಹುತಾತ್ಮ’ ಪದದ ಅರ್ಥವನ್ನೂ ರಾಜೀವ್ ಗಾಂಧಿ ಮರಣದಲ್ಲಿ ಹುಡುಕುವ ಪ್ರಯತ್ನವನ್ನು ಲೇಖನದ ಎರಡನೆಯ ಭಾಗದಲ್ಲಿ ಮಾಡೋಣ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *