blank

ವಿಜಯವಾಣಿ ಜತೆ ಪಲಿಮಾರು ಸ್ವಾಮೀಜಿ

blank

ಪ್ರಥಮ ಪರ್ಯಾಯದಲ್ಲಿ ಚಿಣ್ಣರ ಸಂತರ್ಪಣೆ ಯೋಜನೆ ಎಂಬ ವಿನೂತನ ಪ್ರಯೋಗದಿಂದ ರಾಷ್ಟ್ರಮಟ್ಟದ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಮುನ್ನುಡಿ ಹಾಡಿದ್ದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ತಮ್ಮ 2ನೇ ಪರ್ಯಾಯದಲ್ಲಿ 40 ಕೋಟಿ ರೂ.ವೆಚ್ಚದ ಸ್ವರ್ಣ ಗೋಪುರ, ನಿತ್ಯ ಲಕ್ಷ ತುಳಸೀ ಅರ್ಚನೆ, ನಿರಂತರ ಹರಿನಾಮ ಸಂಕೀರ್ತನೆ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಿದ ಛಲಯೋಗಿ. ಕೃಷ್ಣನ ಸನ್ನಿಧಿಯಲ್ಲೇ ಮಠಕ್ಕೆ ಉತ್ತರಾಧಿಕಾರಿಯಾಗಿ ವಿದ್ಯಾರಾಜೇಶ್ವರ ತೀರ್ಥರನ್ನು ನಿಯುಕ್ತಿಗೊಳಿಸಿರುವ ಶ್ರೀಗಳು ಸಾಧನೆಯ ಸಾರ್ಥಕತೆಯ ನಿರಾಳ ಭಾವದಲ್ಲಿ ವಿಜಯವಾಣಿ ಜತೆ ಮಾತನಾಡಿದ್ದಾರೆ.

ಪ್ರಥಮ ಪರ್ಯಾಯಕ್ಕೆ ಹೋಲಿಸಿದರೆ ದ್ವಿತೀಯ ಪರ್ಯಾಯ ಹೇಗೆ ಭಿನ್ನ?
16 ವರ್ಷದ ಹಿಂದೆಯೂ ಜನರ ಸಹಕಾರ ವಿಶಿಷ್ಟವಾಗಿತ್ತು. ಇದರಿಂದಾಗಿ 3 ಕೋಟಿ ರೂ. ವೆಚ್ಚದಲ್ಲಿ ಕೃಷ್ಣನಿಗೆ ವಜ್ರದ ಕವಚ ಸಮರ್ಪಿಸಲು ಸಾಧ್ಯವಾಯಿತು. ಈಗ 40 ಕೋಟಿ ರೂ.ವೆಚ್ಚದಲ್ಲಿ ಸ್ವರ್ಣ ಗೋಪುರ ನಿರ್ಮಾಣವಾಗಿದೆ. ವಾರಕ್ಕೊಮ್ಮೆ ನಡೆಯುತ್ತಿದ್ದ ಲಕ್ಷ ತುಳಿಸೀ ಅರ್ಚನೆ ಈ ಪರ್ಯಾಯದಲ್ಲಿ ಪ್ರತಿ ನಿತ್ಯ ನಡೆದಿದೆ. ಕೃಷ್ಣಾನುಗ್ರಹದಿಂದ ಯೋಜನೆಗಳು ಸಾಕಾರಗೊಂಡಿವೆ.

ಪರ್ಯಾಯಕ್ಕೂ ಮುನ್ನ ಸಂಕಲ್ಪ ಮಾಡಿದ ಎಷ್ಟು ಯೋಜನೆಗಳು ಕಾರ್ಯಗತವಾಗಿವೆ?
ಸ್ವರ್ಣ ಗೋಪುರ, ನಿತ್ಯ ಲಕ್ಷ ತುಳಿಸೀ ಅರ್ಚನೆ ಮತ್ತು ನಿರಂತರ ಹರಿನಾಮ ಸಂಕೀರ್ತನೆ ಈ 3 ಯೋಜನೆಗಳು ಪ್ರಮುಖವಾಗಿದ್ದವು. ಅನಂತರ ಕಾಷ್ಟಶಿಲ್ಪದಿಂದ ಸರ್ವಜ್ಞಪೀಠ ಕೊಠಡಿ ನವೀಕರಣ, ಮುಖ್ಯಪ್ರಾಣ ಗುಡಿ ತೀರ್ಥ ಮಂಟಪ ನವೀಕರಣ ಹಾಗೂ ಛಾವಣಿಗೆ ಸ್ವರ್ಣ ಕವಚ ನಿರ್ಮಾಣ, ಮಧ್ವ ಸರೋವರ ಹೂಳೆತ್ತುವಿಕೆ, ಕೃಷ್ಣ ನೈವೇದ್ಯದ ಪಾಕಶಾಲೆ ನವೀಕರಣ, ರಾಜಾಂಗಣದಲ್ಲಿ ಸುದರ್ಶನ ಚಕ್ರ ರಚನೆ, ಸುಬ್ರಹ್ಮಣ್ಯ ಗುಡಿಯಲ್ಲಿ ನಾಗನ ಮೂರ್ತಿ ಸ್ವರ್ಣ ಕವಚ ಸಮರ್ಪಣೆ ಮೊದಲಾದ ಯೋಜನೆಗಳು ಪೂರ್ಣಗೊಂಡಿವೆ.

ಇಷ್ಟು ದೊಡ್ಡ ಮೊತ್ತದ ಸಂಪನ್ಮೂಲ ಕ್ರೋಢೀಕರಣ ಹೇಗೆ ಸಾಧ್ಯವಾಯಿತು?
ಭಕ್ತರು ತಮ್ಮ ಮೈ ಆಭರಣಗಳನ್ನು ಪ್ರೀತಿಯಿಂದ ಉದಾರವಾಗಿ ದಾನ ನೀಡಿದ್ದಾರೆ. ಜನರ ಶ್ರದ್ಧೆ ನೋಡಿ ಆಶ್ಚರ್ಯವಾಗಿದೆ. 1 ಗ್ರಾಂನಿಂದ ಆರಂಭವಾಗಿ ಹಲವು ಪವನ್‌ವರೆಗೆ ದಾನ ಮಾಡಿದವರು ಇದ್ದಾರೆ. ಇವೆಲ್ಲವನ್ನೂ ಕೂಡಿಸಿ ಚಿನ್ನದ ಗೋಪುರ ನಿರ್ಮಾಣವಾಗಿದೆ. ಈ ಯೋಜನೆಯಲ್ಲಿ ಒಂದು ಲಕ್ಷ ಜನರ ಪಾಲುದಾರಿಕೆಯಿದೆ.

ಲಕ್ಷ ತುಳಸೀ ಅರ್ಚನೆ ಮತ್ತು ನಿರಂತರ ಭಜನೆ ಹೇಗೆ ಸಾಕಾರಗೊಂಡಿತು?
ಅರ್ಚನೆಗೆ ತುಳಸಿಗಾಗಿ ಪೆರಂಪಳ್ಳಿಯ 6 ಎಕರೆ ಪ್ರದೇಶದಲ್ಲಿ ಉದ್ಯಾವನ ನಿರ್ಮಾಣ ಮಾಡಲಾಗಿತ್ತು. ಜತೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ತುಳಸಿ ತಂದು ಸಮರ್ಪಿಸಿದ್ದಾರೆ. ಕುಂದಾಪುರ ಭಾಗಗಳಲ್ಲಿ ಕೆಲವರು ಹೊಲದಲ್ಲಿ ತುಳಸಿ ಬೆಳೆದ ಉದಾಹರಣೆಗಳಿವೆ. ಭಜನೆಗೆ ಅಯೋಧ್ಯೆ ಸ್ಫೂರ್ತಿ. 90ರ ದಶಕದಲ್ಲಿ ಅಲ್ಲಿ ಅಖಂಡ ಭಜನೆ ಫಲವಾಗಿ ರಾಮಜನ್ಮಭೂಮಿ ಚಳುವಳಿ ಉಚ್ಛ್ರಾಯ ಸ್ಥಿತಿ ತಲುಪಿತ್ತು. ರಾಮಮಂದಿರವೂ ಶೀಘ್ರ ನಿರ್ಮಾಣವಾಗಲಿ ಎಂದು ಆಶಿಸಿ ಕೃಷ್ಣ ಮಠದಲ್ಲಿ ಭಜನೆಗೆ ಚಾಲನೆ ನೀಡಲಾಗಿತ್ತು. ಬಯಕೆ ಈಡೇರಿದೆ. ದಾಸ ಸಾಹಿತ್ಯ ಬೆಳವಣಿಗೆಗೂ ಕಾರಣವಾಗಿದೆ.

ಭಾವೀ ಪರ್ಯಾಯ ಶ್ರೀಗಳು ನಿಮ್ಮ ಶಿಷ್ಯರಾಗಿದ್ದಾರೆ. ಅವರಿಗೆ ಪಾಠಗಳನ್ನು ಹೇಗೆ ಮುಂದುವರಿಸುತ್ತೀರಿ?
ಶ್ರೀಗಳು ಸಹಜವಾಗಿ ಬುದ್ಧಿವಂತರು. ಸಹೃದ್‌ಗ್ರಾಹಿಗಳು. ಒಮ್ಮೆ ಹೇಳಿದ ಪಾಠವನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಶಾಸ್ತ್ರೀಯವಾಗಿ ನ್ಯಾಯಸುಧಾ, ವ್ಯಾಸತ್ರಯ ಗ್ರಂಥ ಪಾಠ ಮಾಡುತ್ತಿದ್ದೇವೆ. ಪರ್ಯಾಯ ನಿರ್ಗಮನ ಬಳಿಕ ಮಠದ ವಿವಿಧ ಸಂಸ್ಥೆಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕಾಗುತ್ತದೆ. ಕೆಲವೆಡೆ ನಮ್ಮ ಉಪಸ್ಥಿತಿ ಅತೀ ಅಗತ್ಯವಿದೆ. ಈ ಮಧ್ಯೆ ಸಮಯ ಮಾಡಿಕೊಂಡು ಪಾಠ ಮಾಡುತ್ತೇವೆ.

ಪರ್ಯಾಯ ನಿರ್ಗಮನ ಬಳಿಕ ನಿಮ್ಮ ಪ್ರಥಮ ಕೆಲಸ ಕಾರ್ಯಗಳೇನು?
ಪಲಿಮಾರು ಮೂಲಕ್ಕೆ ತೆರಳಿ ಗುರು ವಿದ್ಯಾಮಾನ್ಯರ ವೃಂದಾವನ ದರ್ಶನ, ಜ.24ರಂದು ತಿರುಪತಿಯಲ್ಲಿ ಶ್ರೀನಿವಾಸ ದೇವರ ದರ್ಶನ ಮಾಡಿ ಪುರಂದರ ದಾಸರ ಆರಾಧನೆಯಲ್ಲಿ ಪಾಲ್ಗೊಳ್ಳಲಿದ್ದೇವೆ. ನಂತರ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ತೆರಳಿ ಪೇಜಾವರ ಶ್ರೀಗಳ ವೃಂದಾವನ ದರ್ಶನ ಮಾಡಲಿದ್ದೇವೆ.

ಮಠದ ಮುಂದಿನ ಯೋಜನೆಗಳೇನು?
ಕುಂಜಾರುಗಿರಿಯಲ್ಲಿ ಮಧ್ವಾಚಾರ್ಯರ ಏಕಶಿಲಾ ವಿಗ್ರಹ ಪ್ರತಿಷ್ಠೆ ಪರ್ಯಾಯಕ್ಕೆ ಮುನ್ನ ನಡೆದಿದೆ. ಅದನ್ನು ಪ್ರೇಕ್ಷಣೀಯ ಮತ್ತು ಸಾಧಕರಿಗೆ ಸಾಧನೆಗೆ ಯೋಗ್ಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕಿದೆ. 80 ಸೆಂಟ್ಸ್ ಜಾಗದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿ ಉದ್ಯಾನವನ ನಿರ್ಮಾಣ ಮಾಡುವ ಯೋಜನೆ ಇದೆ.

ಪೇಜಾವರ ಶ್ರೀಗಳ ಅಗಲಿಕೆ ನಿರ್ವಾತವನ್ನು ಸೃಷ್ಟಿಸಿದೆ. ಈ ಬಾರಿ ಪರ್ಯಾಯಕ್ಕೆ ಅವರಿಲ್ಲ.
ಪೇಜಾವರ ಶ್ರೀಗಳಿಗೆ ಅವರೇ ಸಾಟಿ. ಎಷ್ಟೇ ದೂರದಲ್ಲಿದ್ದರೂ ಸಮಯ ಮಾಡಿಕೊಂಡು ಕೃಷ್ಣ ಮಠದ ಪ್ರತೀ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಿದ್ದರು. ಆಹ್ವಾನ ಇರಲಿ, ಇಲ್ಲದಿರಲಿ ಮಠಕ್ಕೆ ಆಗಮಿಸಿ ಸಭೆಯ ಮುಂಚೂಣಿಯಲ್ಲಿದ್ದರು. ಸಹಜ ಪ್ರೀತಿಯಿಂದ ಪಾಲ್ಗೊಳ್ಳುತ್ತಿದ್ದರು. 80 ವರ್ಷದ ಸಂನ್ಯಾಸ ಜೀವನದಲ್ಲಿ 40ಕ್ಕೂ ಹೆಚ್ಚು ಪರ್ಯಾಯದಲ್ಲಿ ಅವರು ಭಾಗವಹಿಸಿದ್ದಾರೆ. ಈ ಬಾರಿ ಅನುಪಸ್ಥಿತಿ ಎದ್ದು ಕಾಣಲಿದೆ.

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…