ತಾಯಿಕನಸನ್ನು ನೆರವೇರಿಸಿದ ರೋಶನ್​ಲಾಲ್ ಮೆಹ್ರಾ

‘ಕ್ರಾಂತಿಕಾರಿಗಳ ಹಾದಿಯನ್ನು ಹಿಡಿಯುವ ಧೈರ್ಯ ನಿನ್ನಲ್ಲಿದೆಯೇ?’ ಎಂದು ಬಾಲ್ಯದಲ್ಲಿ ಪ್ರಶ್ನಿಸಿದ್ದ ತಾಯಿಯ ಮಾತನ್ನು ಮನದಾಳದಲ್ಲಿ ನೆಟ್ಟುಕೊಂಡಿದ್ದ ರೋಶನ್​ಲಾಲ್, ಆ ಗುರಿಸಾಧನೆಗೆಂದು ಕ್ರಾಂತಿಕಾರಿಗಳ ಸಾಂಗತ್ಯ ಬೆಳೆಸಿದ. ಬ್ರಿಟಿಷರ ಬಿಗಿಮುಷ್ಟಿಯಿಂದ ಭಾರತವನ್ನು ಬಿಡಿಸುವ ಯತ್ನದ ಭಾಗವಾಗಿ ಬಾಂಬ್ ತಯಾರಿಯಲ್ಲಿ ತೊಡಗಿ ಕೊನೆಗೆ ಅದರ ಪ್ರಯೋಗದ ವೇಳೆಯೇ ಹುತಾತ್ಮನಾದ.

‘ನನಗೆ ನಾಲ್ವರು ಗಂಡುಮಕ್ಕಳು. ದೊಡ್ಡವನು ಆಗಲೇ ಸಂಸಾರದ ಜಂಜಾಟದಲ್ಲಿ ಮುಳುಗಿದ್ದಾನೆ. ಕೊನೆಯ ಇಬ್ಬರು ಬಹಳ ಚಿಕ್ಕವರು. ಆದರೆ ನನ್ನ ಎರಡನೆಯ ಮಗ ರೋಶನ್​ಲಾಲ್ ವಯಸ್ಸಿಗೆ ಬಂದಿದ್ದಾನೆ, ಲೋಕಜ್ಞಾನ ಅರಿಯುತ್ತಿದ್ದಾನೆ. ಅವನ ಮೇಲೆ ಇನ್ನೂ ಯಾವ ಭಾರವೂ ಬಿದ್ದಿಲ್ಲ. ನನ್ನ ಇಚ್ಛೆ ಇಷ್ಟೇ- ನನ್ನ ಮಗ ದೇಶಕ್ಕೆ ಉಪಯೋಗಿ ಆಗಲಿ’- ಇದು ಪಂಜಾಬಿನ ಅಮೃತಸರದ ನೈಲ್​ಸುಖ್ ರಸ್ತೆಯಲ್ಲಿದ್ದ ಒಂದು ಮನೆಯಲ್ಲಿ ಒಬ್ಬ ತಾಯಿ ಹೇಳಿದ ಮಾತು. ಕೇಳಿದವರು ಸೂರತ್ತಿನ ಕ್ರಾಂತಿಕಾರಿ ದಯಾಶಂಕರ್. ಆ ತಾಯಿಯ ಹೆಸರು ಲಲಿತಾದೇವಿ. ಆಕೆಯ ಪತಿ ಭಾರಿ ಶ್ರೀಮಂತ, ಧನಿರಾಮ್ ಮೆಹ್ರಾ. ರೇಷ್ಮೆಬಟ್ಟೆಗಳ ಸಗಟು ವ್ಯಾಪಾರಿ. ಅವರಿಗೆ ಜೀವನವೆಂದರೆ ಕೇವಲ ಧನಸಂಗ್ರಹವೆಂದೇ ಅರ್ಥ. ಧನ ಗಳಿಸುವ ಜೀವನ ಬಿಟ್ಟರೆ ಮಿಕ್ಕೆಲ್ಲವೂ ನಿರರ್ಥಕ.

ಲಲಿತಾದೇವಿ ಗಂಡನಂತಲ್ಲ. ಆಕೆ ಆದರ್ಶಗಳನ್ನುಳ್ಳ ಸ್ತ್ರೀ. ರಾಷ್ಟ್ರದಲ್ಲಿ ನಡೆಯುತ್ತಿದ್ದ ಹೋರಾಟವನ್ನು ಬಿಚ್ಚುಗಣ್ಣಿನಿಂದ ನೋಡುತ್ತಿದ್ದಳು. ಬಂಗಾಲದ ಕ್ರಾಂತಿಕಾರಿ ಸಂಘಟನೆಯಾದ ಅನುಶೀಲನ ಸಮಿತಿಯೊಂದಿಗೆ ಆಕೆಯ ಸಂಪರ್ಕವಿತ್ತು. ಅನುಶೀಲನ ಸಮಿತಿಯ ಅನೇಕ ಕ್ರಾಂತಿಕಾರಿಗಳು ಪಂಜಾಬಿಗೆ ಬಂದು ಆಕೆಯನ್ನು ಭೇಟಿಮಾಡಿ ಹೋಗುತ್ತಿದ್ದರು. ಕ್ರಾಂತಿಕಾರಿಗಳಿಗೆ ಗುಪ್ತವಾಗಿ ಧನಸಹಾಯವನ್ನೂ ಮಾಡುತ್ತಿದ್ದಳಾಕೆ.

ತನ್ನ ಮಗನನ್ನು ಕ್ರಾಂತಿಕಾರಿಯನ್ನಾಗಿ ಮಾಡುತ್ತೇನೆಂದು ಬಾಯಲ್ಲಿ ಹೇಳಿ ಸುಮ್ಮನೆ ಕೂರಲಿಲ್ಲ ಲಲಿತಾದೇವಿ. ತಾನೇ ಅವನಿಗೆ ಕ್ರಾಂತಿಪಾಠಗಳನ್ನು ನೀಡಿ ದೀಕ್ಷೆ ಕೊಟ್ಟಳು. ಆ ಕಂಟಕಮಯ ಕ್ರಾಂತಿಪಥದಲ್ಲಿ ಕೈಯಾರ ಅವನನ್ನು ಕರೆದೊಯ್ದಳು. ಕ್ರಾಂತಿಕಾರಿಗಳ ಜೀವನಗಳನ್ನು, ಘಟನೆಗಳನ್ನು ಓದುತ್ತಿದ್ದಳು. ಕತೆಯ ರೂಪದಲ್ಲಿ ಮಗನಿಗೆ ಹೇಳುತ್ತಿದ್ದಳು. ಪೂರ್ತಿಯಾದ ಮೇಲೆ ‘ರೋಶನ್, ನೀನು ಈ ಹಾದಿಯನ್ನು ಹಿಡಿಯಬಲ್ಲೆಯಾ? ಧೈರ್ಯವಿದೆಯೇ?’ ಎಂದು ಪ್ರಶ್ನಿಸುತ್ತಿದ್ದಳು.

1928ರಲ್ಲಿ ಲಲಿತಾದೇವಿ ತೀರಿಹೋದಳು. 1930ರಲ್ಲಿ ರೋಶನ್​ಲಾಲ್ ಕ್ರಾಂತಿಕಾರಿಗಳೊಂದಿಗೆ ಗೆಳೆತನ ಸಂಪಾದಿಸಿದ. ಕ್ರಾಂತಿಕಾರಿಗಳ ಸಂಘಟನೆಯ ಶಂಭುನಾಥ್ ಆಜಾದ್ ಮತ್ತು ರೋಶನ್​ಲಾಲನ ಭೇಟಿಯಾಗಿ ಅವನು ಸಂಸ್ಥೆಯ ಕ್ರಿಯಾಶೀಲ ಸದಸ್ಯನಾದ. ಆಗ ಅವನ ವಯಸ್ಸು 17 ಮಾತ್ರ. ಆ ವೇಳೆಗೆ ಅಲ್ಲಿ ಕ್ರಾಂತಿಕಾರಿಗಳ ಸಂಘಟನೆ ತುಸು ಬೆಳೆದಿತ್ತು. ದಯಾಶಂಕರ್, ವೃತ್ತಪತ್ರಿಕೆಗಳ ಏಜೆಂಟ್ ಉಮಾಶಂಕರ್, ರಾಮ್ರಣ ಲಾಲ್, ಗೋವಿಂದರಾಮ ವರ್ಮ ಮತ್ತು ರೋಶನ್​ಲಾಲ್ ಮುಂತಾದ ಪ್ರಮುಖರು ಜೀವಸುರಿದು ಅದನ್ನು ಸುಭದ್ರಗೊಳಿಸಿದ್ದರು. ತರುಣ ರೋಶನ್​ದು ಯಾವಾಗಲೂ ಉತ್ಸಾಹದ ಪ್ರವೃತ್ತಿ. ಮುನ್ನುಗ್ಗುವ ಎದೆಗಾರಿಕೆ. ಕೊಟ್ಟ ಕೆಲಸ ಪೂರೈಸುವ ಏಕನಿಷ್ಠೆ.

1930-31ರಲ್ಲಿ ನಡೆದ ಕಾಂಗ್ರೆಸ್ ಚಳವಳಿಯ ಸಂದರ್ಭದಲ್ಲಿ ಅಮೃತಸರದ ಪೊಲೀಸ್​ಠಾಣೆಗೆ ಒಂದು ವಿಶೇಷ ಹೆಸರು ಬಂದಿತ್ತು- ‘ಕಸಾಯಿ ಖಾನೆ’. ಇಲ್ಲಿ ಒಳಹೊಕ್ಕ ಸತ್ಯಾಗ್ರಹಿಗಳು ಹಿಂದಿರುಗುತ್ತಿದ್ದುದು ಜಜ್ಜರಿತರಾಗಿ. ಅಮೃತಸರದ ಕ್ರಾಂತಿಕಾರರು ಈ ‘ಕಸಾಯಿ ಖಾನೆ’ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಅದರ ಮೇಲೆ ಬಾಂಬ್ ಪ್ರಯೋಗಿಸಲು ನಿಶ್ಚಯಿಸಿದರು. ಅದಕ್ಕೆ ತರುಣ ರೋಶನ್​ಲಾಲ್ ಮತ್ತು ಉಮಾಶಂಕರ್ ಎಂಬಿಬ್ಬರನ್ನು ಆರಿಸಲಾಯಿತು. ಇವರಿಬ್ಬರೂ ಒಪ್ಪಿಕೊಂಡ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಹಿಂದಿರುಗಿದರು.

1932ನೇ ವರ್ಷ. ಆ ವೇಳೆಗೆ ಭಾರತದ ಕ್ರಾಂತಿಕಾರಿ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟ ನಡೆದುಹೋಗಿತ್ತು. ಭಗತ್ ಸಿಂಗ್, ರಾಜಗುರು, ಸುಖದೇವ್​ರ ಫಾಸಿ ಆಗಿತ್ತು. ಚಂದ್ರಶೇಖರ ಆಜಾದ್ ಹುತಾತ್ಮನಾಗಿದ್ದ. ಆಗ ತಾನೆ ಶಂಭುನಾಥ ಆಜಾದ್, ಸರ್ದಾರ್ ಬಂಟಾ ಸಿಂಗರು ಬಿಡುಗಡೆಯಾಗಿ ಹೊರಬಂದಿದ್ದರು. ಮುಂದಿನ ಕಾರ್ಯಯೋಜನೆಯ ಬಗ್ಗೆ ರೋಶನ್​ಲಾಲ್, ಗೋವಿಂದರಾಮ ಮುಂತಾದವರೊಂದಿಗೆ ಚರ್ಚೆ ನಡೆಯಿತು. ದಕ್ಷಿಣ ಭಾರತದಲ್ಲೂ ಕ್ರಾಂತಿಕಾರಿ ಚಟುವಟಿಕೆಯನ್ನು ಹಬ್ಬಿಸುವ ನಿರ್ಣಯ ಕೈಗೊಳ್ಳಲಾಯಿತು.

ಆದರೆ ಹಣದ ಪ್ರಶ್ನೆ ಉದ್ಭವಿಸಿತು. ಸಾಮಾನ್ಯರ ಮನೆಗಳನ್ನು ದರೋಡೆ ಮಾಡುವ ಯೋಜನೆಯ ಬದ್ಧವಿರೋಧಿ ರೋಶನ್​ಲಾಲ್. ಆದ್ದರಿಂದ ಹಣ ಕೂಡಿಸಲು ತಂತಮ್ಮೊಳಗೆ ವ್ಯವಸ್ಥೆ ಮಾಡಿಕೊಂಡರು. ಗೋವಿಂದರಾಮ್ ಮನೆಯಿಂದ ಸ್ವಲ್ಪ ಹಣ ತಂದ. ರೋಶನ್​ಲಾಲನಿಗೂ ಹಣ ತರಲು ಸೂಚನೆ ಹೋಯಿತು. ತಂದೆ ಧನಿರಾಮ್ ಅಂಗಡಿಯಲ್ಲಿ ಗಳಿಸಿದ ಹಣವನ್ನು ಮನೆಯಲ್ಲಿ ಕಬ್ಬಿಣದ ಪೆಟ್ಟಿಗೆಯಲ್ಲಿ ಇಡುತ್ತಿದ್ದುದು ರೋಶನನಿಗೆ ಚೆನ್ನಾಗಿ ಗೊತ್ತು.

ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ರೋಶನ್​ಲಾಲ್. ಅಂದು ರಾತ್ರಿ ಮನೆಯಲ್ಲಿ ಎಲ್ಲರ ಊಟವಾಯಿತು. ಒಬ್ಬೊಬ್ಬರಾಗಿ ಮಲಗಲಾರಂಭಿಸಿದರು. ದೀಪ ಆರಿತು. ತುಸು ಸಮಯ ಕಳೆಯಿತು. ಮೆಲ್ಲನೆ ರೋಶನ್​ಲಾಲ್ ಮೇಲಕ್ಕೆದ್ದ. ತಂದೆ ಮಂಚದ ಮೇಲೆ ಮಲಗಿ ಗೊರಕೆ ಹೊಡೆಯುತ್ತಿದ್ದರು. ಅವರ ಜೇಬಿನಿಂದ ಕಬ್ಬಿಣದ ಪೆಟ್ಟಿಗೆಯ ಬೀಗದ ಕೈ ತೆಗೆದ. ಕತ್ತಲಲ್ಲೇ ಪೆಟ್ಟಿಗೆಯ ಬಳಿಗೆ ತೆವಳಿದ. ಪೆಟ್ಟಿಗೆಯ ಬಾಗಿಲು ತೆರೆದು, ರೂಪಾಯಿ ಕಟ್ಟುಗಳನ್ನು ಕೈಯಲ್ಲಿ ಎತ್ತಿಕೊಂಡ.

ಅಷ್ಟರಲ್ಲೇ ಒಂದು ಇಲಿ ಎಲ್ಲಿಂದಲೋ ತಗಡಿನ ಡಬ್ಬಿಗಳನ್ನು ಬೀಳಿಸಿತು. ದೊಡ್ಡಶಬ್ದ. ಮನೆಮಂದಿ ಎಲ್ಲರಿಗೂ ಎಚ್ಚರ. ಕೂಡಲೇ ರೋಶನ್​ಲಾಲ್ ಬೀಗದ ಕೈ, ರೂಪಾಯಿ ಕಟ್ಟು ಎಲ್ಲ ಬಿಟ್ಟು ಅವಸರವಸರವಾಗಿ ಅಲ್ಲಿಂದ ಜಾರಿಕೊಂಡು ತನ್ನ ಹಾಸಿಗೆಯಲ್ಲಿ ಬಂದು ಮಲಗಿಕೊಂಡ. ಧನಿರಾಮರು ಬೀಗದ ಕೈ ನೋಡಿಕೊಂಡರು. ಮಂಗಮಾಯ! ಬೊಬ್ಬಿಟ್ಟರು. ಎಲ್ಲರೂ ಕಬ್ಬಿಣದ ಪೆಟ್ಟಿಗೆಯ ಬಳಿ ಓಡಿದರು. ಅಲ್ಲಿ ಹಣ ಕೆಳಗೆ ಚೆಲ್ಲಿದೆ. ಬೀಗದ ಕೈ ಅಲ್ಲೇ ಇದೆ. ಇಡೀ ಮನೆಯ ಮೂಲೆಮೂಲೆಯನ್ನು ಹುಡುಕಿಹಾಕಿದರು. ಆದರೆ ಕಳ್ಳ ಪತ್ತೆ ಇಲ್ಲ. ಕೊನೆಗೆ ಅವರ ಅನುಮಾನ ಹಿರಿಯ ಮಕ್ಕಳಿಬ್ಬರ ಕಡೆ ತಿರುಗಿತು. ಅವರನ್ನು ಮನೆಯಿಂದ ಹೊರಹಾಕಲು ನಿಶ್ಚಯಿಸಿದರು. ಅದರಿಂದ ಮನೆಯಲ್ಲಿ ಸಂಘರ್ಷ. ಇದರ ವಿರುದ್ಧ ರೋಶನ್​ಲಾಲ್​ನಿಂದ ನಾಲ್ಕು ದಿನಗಳ ಉಪವಾಸ. ಇವನ ತಾತ ಮತ್ತು ಅಜ್ಜಿ ಮನೆಗೆ ಬಂದು ಎಲ್ಲರನ್ನೂ ತರಾಟೆಗೆ ತೆಗೆದುಕೊಂಡ ಮೇಲೆ ಇದಕ್ಕೆ ಪೂರ್ಣವಿರಾಮ.

ಕೆಲದಿನ ಕಳೆಯಿತು. ಒಮ್ಮೆ ಧನಿರಾಮ್ ಮತ್ತು ಅವರ ಹೆಂಡತಿ ಮನೆಬಿಟ್ಟು ಯಾವುದೋ ಕೆಲಸಕ್ಕೆ ಲಾಹೋರಿಗೆ ಹೋದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ರೋಶನ್​ಲಾಲ್ ತಂದೆಯ ಕಬ್ಬಿಣದ ಪೆಟ್ಟಿಗೆಯಿಂದ 5800 ರೂ. ಹಾರಿಸಿದ. ಅದರಲ್ಲಿ 5000 ರೂ.ಗಳನ್ನು ಶಂಭುನಾಥ್ ಆಜಾದನಿಗೆ ಕೊಟ್ಟು 800 ರೂ. ತೆಗೆದುಕೊಂಡು ಮನೆಬಿಟ್ಟು ಹೊರಟುಹೋದ.

ಲಾಹೋರಿನಿಂದ ಹಿಂದಿರುಗಿದ ಧನಿರಾಮರಿಗೆ ಸುದ್ದಿ ತಿಳಿದು ಕೂಡಲೇ ಪೊಲೀಸ್ ಸ್ಟೇಷನ್ನಿಗೆ ಓಡಿದರು. ರೋಶನ್​ಲಾಲ್​ನ ಹೆಸರಿನಲ್ಲಿ ಪೊಲೀಸ್ ವಾರಂಟ್ ಹೊರಡಿಸಿದರು. ಪೊಲೀಸ್ ಅಧಿಕಾರಿಗೆ ರೋಶನ್​ಲಾಲ್ ಕ್ರಾಂತಿಕಾರಿ ಎಂದು ಅವನಿಗೂ ಶಂಭುನಾಥ ಆಜಾದ್​ನಿಗೂ ಸಂಪರ್ಕವಿತ್ತೆಂದೂ ತಿಳಿಸಿದರು. ಇದರ ಫಲ ಪಂಜಾಬಿನ ಎಲ್ಲೆಡೆಗಳಲ್ಲಿ ರೋಶನ್​ಲಾಲನ ಭಾವಚಿತ್ರ ಸಹಿತ ಭಿತ್ತಿಪತ್ರಗಳನ್ನು ಹಚ್ಚಲಾಯಿತು. ಹಿಡಿದು ಕೊಟ್ಟವರಿಗೆ 500 ರೂಪಾಯಿಗಳ ಬಹುಮಾನ ಸಾರಲಾಯಿತು. ಅಮೃತಸರ, ಲಾಹೋರ್, ದೆಹಲಿಗಳಲ್ಲಿ ಎಡೆಬಿಡದೆ ಹುಡುಕಾಟ ಆರಂಭವಾಯಿತು.

ಆದರೆ ಮೊದಲು ನಿಶ್ಚಿತವಾದಂತೆ ರೋಶನ್​ಲಾಲ್ ಪೊಲೀಸ್ ವ್ಯೂಹ ಭೇದಿಸಿಕೊಂಡು ಶಂಭುನಾಥ ಆಜಾದ್​ರೊಡನೆ ದಕ್ಷಿಣ ಭಾರತಕ್ಕೆ ಬಂದ. ಉದಕಮಂಡಲದಲ್ಲಿ ಕೆಲಕಾಲ ತಂಗಿದ್ದ. ನಂತರ ಕ್ರಾಂತಿಕಾರಿಗಳೆಲ್ಲರೂ ಮದರಾಸಿಗೆ ಹೋದರು. ರಾಯಪೇಟದಲ್ಲಿ ಕೂಲಿಗಳ ಗುಡಿಸಲುಗಳ ಬಳಿ ಒಂದು ಚಿಕ್ಕ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು ವಾಸಿಸಲಾರಂಭಿಸಿದರು. ಶಂಭುನಾಥ ಆಜಾದ್, ಸರ್ದಾರ್ ಬಂಟಾಸಿಂಹ, ಇಂದ್ರಸಿಂಹ, ಖುಷಿರಾಮ್ ಮೆಹ್ತಾ, ರೋಶನ್​ಲಾಲ್ ಮೆಹ್ರಾ, ಗೋವಿಂದರಾಮ ವರ್ಮ, ಬಚ್ಚೂಲಾಲ್, ಹೀರಾನಂದ್ ವಾತ್ಸಾ್ಯಯನ್, ಹೀರಾಲಾಲ್ ಕಪೂರ್, ಶ್ರೀರತ್ನಂ ಮುಂತಾದವರು ಆಗ ಅಲ್ಲಿದ್ದ ಕ್ರಾಂತಿಕಾರಿಗಳು.

ಮದರಾಸಿನ ಗವರ್ನರ್ ಮೇಲೆ ಬಾಂಬು ಎಸೆಯಬೇಕೆಂಬುದು ಇವರ ಯೋಜನೆ. ಕೆಲದಿನಗಳಲ್ಲಿ ಬಂಗಾಲದ ಗವರ್ನರ್ ಕೂಡ ಮದರಾಸಿಗೆ ಬರುವವನಿದ್ದ. ಇಬ್ಬರನ್ನೂ ಒಟ್ಟಿಗೆ ಮುಗಿಸಿಹಾಕುವುದೆಂದು ನಿರ್ಧರಿಸಿದರು. ಆದರೆ ಆ ವೇಳೆಗೆ ಹಣದ ಅಭಾವ ತಲೆದೋರಿತ್ತು. ಆದ್ದರಿಂದ ಹಣ ಕೂಡಿಸಲು 1933ರ ಏಪ್ರಿಲ್ ಕಡೆಯ ವಾರದಲ್ಲಿ ಶಂಭುನಾಥ್ ಆಜಾದರ ನೇತೃತ್ವದಲ್ಲಿ ಉದಕಮಂಡಲ ಬ್ಯಾಂಕಿನ ದರೋಡೆ ಮಾಡಲಾಯಿತು. ಈ ದರೋಡೆಯಲ್ಲಿ ರೋಶನ್​ಲಾಲ್, ಗೋವಿಂದರಾಮ ವರ್ಮ ಇರಲಿಲ್ಲ. ನಂತರ ಶಂಭುನಾಥ ಆಜಾದರನ್ನು ಬಿಟ್ಟು ಮಿಕ್ಕವರೆಲ್ಲ ಸಿಕ್ಕಿಬಿದ್ದರು. ಏಪ್ರಿಲ್ 29ರಂದು ಊಟಿ ಬ್ಯಾಂಕಿನಿಂದ ತಂದ ಹಣದೊಂದಿಗೆ ಶಂಭುನಾಥ್ ಆಜಾದ್ ಮದರಾಸಿಗೆ ಬಂದರು. ಕೂಡಲೆ ಹಳೆಯ ಕೊಠಡಿಯನ್ನು ಬದಲಾಯಿಸುವ ಯೋಚನೆ ಮಾಡಿದರು. ಆ ವೇಳೆಗೆ ನಿತ್ಯಾನಂದ ಹೀರಾಲಾಲ್ ಸರ್ಕಾರದ ಪರ ತಿರುಗಿಕೊಂಡ. ಆದ್ದರಿಂದ 30ನೇ ದಿನಾಂಕ ಸಂಜೆ ಅವರು ತಮ್ಮ ನಿವಾಸವನ್ನು ತಂಬೂಚೆಟ್ಟಿ ರಸ್ತೆಗೆ ಬದಲಾಯಿಸಬೇಕಾಯಿತು.

ತಂಬೂಚೆಟ್ಟಿ ರಸ್ತೆಗೆ ಹೋದಮೇಲೆ ಅವರ ಪ್ರಥಮ ನಿರ್ಣಯ ಉದಕಮಂಡಲ ಬ್ಯಾಂಕ್ ದರೋಡೆ ಸಂಬಂಧದಲ್ಲಿ ಬಂದಿಗಳಾಗಿದ್ದ ತಮ್ಮ ಸಹ ಕ್ರಾಂತಿಕಾರಿಗಳನ್ನು ಬಿಡುಗಡೆ ಮಾಡಬೇಕೆಂಬುದು. ಅದಕ್ಕಾಗಿ ಬಾಂಬುಗಳನ್ನು ತಯಾರಿಸಲಾರಂಭಿಸಿದರು. ಮಸಾಲೆಯೇನೋ ತಯಾರಾಯಿತು, ಆದರೆ ಕವಚಗಳೆಲ್ಲಿ? ಅದನ್ನು ಮಾಡಿಸುವುದು ಅಪರಿಚಿತ ಮದರಾಸಿನಲ್ಲಿ ಸಾಧ್ಯವಿರಲಿಲ್ಲ. ಆದ್ದರಿಂದ ಹಿತ್ತಾಳೆ ಲೋಟಗಳನ್ನು ಕೊಂಡು ಅವನ್ನೇ ಕವಚದಂತೆ ಉಪಯೋಗಿಸಲು ನಿಶ್ಚಯಿಸಿದರು. ಅಂತೆಯೇ ಮೇ 1ರಂದು ರೋಶನ್​ಲಾಲ್ ಒಂದು ಬಾಂಬನ್ನು ಸಿದ್ಧಪಡಿಸಿದ. ಅಂದು ರಾತ್ರಿ ಅದರ ಪರೀಕ್ಷೆಗೆ ತಾನೇ ಹೋಗಬೇಕೆಂಬುದು ಅವನ ಹಠ.

ಮದರಾಸು ಬಂದರಿನ ಪೂರ್ವ ದಿಕ್ಕಿನಲ್ಲಿ ಒಂದು ಕಡೆ ಸಮುದ್ರದ ಅಲೆಗಳ ಹೊಡೆತವನ್ನು ತಡೆಯಲು ಕಲ್ಲುಬಂಡೆಗಳನ್ನು ಹಾಕಿದ್ದರು. 8 ಗಂಟೆಗೆ ಮೊದಲೇ ನಾಲ್ವರು ಗೆಳೆಯರು ಆ ಸ್ಥಳಕ್ಕೆ ಹೋದರು. ಇಂದ್ರಸಿಂಹ ಮತ್ತು ಗೋವಿಂದರಾಮ ವರ್ಮ ತುಸುದೂರದ ಗೋಡೆಯೊಂದರ ಬಳಿ ಪಹರೆ ಹಾಕುತ್ತ ನಿಂತರು. ಇದು ಪಶ್ಚಿಮ ದಿಕ್ಕಿನಲ್ಲಿತ್ತು. ಪೂರ್ವ ದಿಕ್ಕಿನಲ್ಲಿ ಶಂಭುನಾಥ ಆಜಾದ್ ನಿಂತಿದ್ದರು. ಬಾಂಬ್ ಪರೀಕ್ಷೆಯ ನಂತರ ಸುರಕ್ಷಿತವಾಗಿ ರೋಶನ್​ಲಾಲ್​ನನ್ನು ಕರೆದೊಯ್ಯುವುದು ಇವರ ಜವಾಬ್ದಾರಿಯಾಗಿತ್ತು.

ರಾತ್ರಿ ಗಂಟೆ 8. ಸಮುದ್ರದ ದಡದಲ್ಲಿ ಗಲಭೆ ಇರಲಿಲ್ಲ. ಕತ್ತಲು ದಟ್ಟವಾಗಿತ್ತು. ಹತ್ತಿರದ ವಸ್ತುಗಳು ಕಾಣುವುದೂ ಕಷ್ಟವಾಗಿತ್ತು. ಅಂಧಕಾರದಲ್ಲಿ ರೋಶನ್​ಲಾಲ್ ಮೆಲ್ಲನೆ ಮುಂದೆ ನಡೆಯುತ್ತ ಹೋದ. ಕೈಯಲ್ಲಿ ಬಾಂಬು. ಸಮುದ್ರದ ದಡದಲ್ಲಿ ಹಾಕಿದ್ದ ಅಸಂಖ್ಯಾತ ಬೃಹದಾಕಾರದ ಕಲ್ಲುಬಂಡೆಗಳ, ಚಪ್ಪಡಿಗಳ ಮೇಲೆ, ಬಂಡೆಗಳನ್ನು ಹತ್ತುತ್ತ, ಇಳಿಯುತ್ತ ಮುಂದೆ ಸಾಗುತ್ತಿದ್ದ. ಇತ್ತ ಗೆಳೆಯರು ಈ ಕ್ಷಣವೋ ಆ ಕ್ಷಣವೋ ಬಾಂಬು ಸಿಡಿಯುವುದೆಂದು ತವಕದಿಂದ ಕಾಯುತ್ತಿದ್ದರು.

ಇದ್ದಕ್ಕಿದ್ದಂತೆ ಶಬ್ದ. ಅಂಧಕಾರವನ್ನು ಸೀಳಿಕೊಂಡು ಕಣ್ಕೋರೈಸುವ ಬೆಳಕು. ಆಕಾಶದ ಕಡೆ ಹೋಗುತ್ತಿದ್ದ ಹೊಗೆ. ಗೆಳೆಯರು ಬೆರಗುಗಣ್ಣುಗಳಿಂದ ನೋಡಲಾರಂಭಿಸಿದರು. ಕೆಲಕ್ಷಣದಲ್ಲೇ ಬೆಳಕು ಕತ್ತಲಿನಲ್ಲಿ ವಿಲೀನವಾಯಿತು. ಶಬ್ದವು ಸಾಗರತರಂಗಗಳ ಅಬ್ಬರದಲ್ಲಿ ಮುಚ್ಚಿಹೋಯಿತು.

ಮೂವರೂ ರೋಶನ್​ಲಾಲನಿಗಾಗಿ ಕಾದರು. ಆದರೆ ಎಷ್ಟು ಸಮಯವಾದರೂ ಅವನ ಸುಳಿವಿಲ್ಲ. ಶಬ್ದ ಕೇಳಿದ ಪೊಲೀಸರು ಠಾಣೆಯಿಂದ ಆ ಕಡೆಗೆ ಧಾವಿಸಲಾರಂಭಿಸಿದರು. ಜನರು ಓಡಿ ಬರಲಾರಂಭಿಸಿದರು. ಎಲ್ಲ ಚೆಲ್ಲಾಪಿಲ್ಲಿ.

ಇತ್ತ ಶಂಭುನಾಥ ಆಜಾದ್ ಬಹುಶಃ ರೋಶನ್​ಲಾಲ್, ಗೋವಿಂದರಾಮ, ಇಂದ್ರಸಿಂಹರೊಂದಿಗೆ ತಪ್ಪಿಸಿಕೊಂಡಿರಬೇಕೆಂದುಕೊಂಡು ಕೊಠಡಿಗೆ ಹಿಂದಿರುಗಿದ. ಅಲ್ಲಿಯೇ ಗೋವಿಂದರಾಮನ ಭೇಟಿಯಾಯಿತು. ರೋಶನ್ ಮಾತ್ರ ಇಲ್ಲ. ಕೂಡಲೇ ವಿಷಯವನ್ನು ಅರಿತು ಬರಲು ಇಂದ್ರಸಿಂಹನನ್ನು ಕಳಿಸಿದರು.

ಇಂದ್ರಸಿಂಹ ಘಟನಾಸ್ಥಳಕ್ಕೆ ಧಾವಿಸಿದ. ಬಳಿಯಲ್ಲಿದ್ದ ರ್ಚಚಿನ ಹತ್ತಿರ ಜನ ಸೇರಿತ್ತು. ಪೊಲೀಸರು ಕೂಡಿದ್ದರು. ಅವರ ಮಧ್ಯೆ ರೋಶನ್​ಲಾಲ್ ಬಿದ್ದಿದ್ದ- ಅಲ್ಲ, ಅವನ ಹೆಣ ಬಿದ್ದಿತ್ತು. ಹೃದಯವಿದ್ರಾವಕ ದೃಶ್ಯ. ಇಡೀ ಶರೀರ ನಜ್ಜುಗುಜ್ಜಾಗಿತ್ತು. ಶರೀರದ ತುಂಬ ಬಾಂಬಿನ ತುಣುಕುಗಳು. ಅವುಗಳಿಂದ ಆದ ಗಾಯಗಳು. ಗಾಯಗಳಿಂದ ಸೋರಿ ಹೆಪ್ಪುಗಟ್ಟಿದ ರಕ್ತ. ಬಾಂಬಿನ ತುಣುಕುಗಳು ಮೂಳೆಗಳವರೆಗೂ ಒಳಹೊಕ್ಕಿದ್ದವು. ಬಲಗೈ ಶರೀರದಿಂದ ಬೇರ್ಪಟ್ಟಿತ್ತು. ಹುತಾತ್ಮನ ದರ್ಶನಕ್ಕಾಗಿ ನಾಲ್ಕು ಕಡೆಗಳಿಂದಲೂ ಜನ ಧಾವಿಸುತ್ತಿದ್ದರು. ಪೊಲೀಸರು ಲಾಠಿ ಬೀಸುತ್ತಿದ್ದರು. ಜನ ಏಟುತಿಂದು ಅಲ್ಲೇ ನಿಂತಿದ್ದರು. ನಂತರ ರೋಶನ್​ಲಾಲನ ಶವದ ಅಂತ್ಯಕ್ರಿಯೆಯಾಯಿತು.

ನ್ಯಾಯಾಲಯದಲ್ಲಿ ಸರ್ಕಾರಿ ರಾಸಾಯನಿಕ ತಜ್ಞನು, ‘ಬಹುಶಃ ರೋಶನ್​ಲಾಲ್ ಕಲ್ಲುಬಂಡೆಗಳ ಮೇಲೆ ನಡೆಯುವಾಗ ಸಮತೋಲ ತಪ್ಪಿ ಬಿದ್ದಿರಬೇಕು. ಆಗ ಕೈಯಲ್ಲಿದ್ದ ಸಿಡಿಗುಂಡು ಆಸ್ಪೋಟವಾಗಿ ದುರಂತ ಸಂಭವಿಸಿರಬೇಕು’ ಎಂದು ಹೇಳಿಕೆ ನೀಡಿದ.

ರೋಶನ್ ಹುತಾತ್ಮನಾದ. ತನಗೆ ಆಶೀರ್ವಾದ ಮಾಡಿ, ರಣವೀಳ್ಯ ನೀಡಿ ಕಳಿಸಿಕೊಟ್ಟ ತನ್ನ ತಾಯಿಯ ಆಸೆಯನ್ನು ಪೂರೈಸಿದ.

(ಲೇಖಕರು ಹಿರಿಯ ಪತ್ರಕರ್ತರು)