ಬ್ರಿಟಿಷರ ಜಂಘಾಬಲ ಉಡುಗಿಸಿದ ಮಹಾವೀರ ಸಿಂಹ

ಆಜಾದ್, ಭಗತ್ ಸಿಂಗ್, ರಾಜಗುರು-ಮೂವರೂ ಸೇರಿ ಲಾಹೋರಿನಲ್ಲಿ ಸ್ಯಾಂಡರ್ಸ್​ನನ್ನು ಮುಗಿಸಿದರು. ಆನಂತರ ಪೊಲೀಸರು ಮೂವರನ್ನೂ ಅಟ್ಟಿಸಿಕೊಂಡು ಬಂದಾಗ ಆಜಾದ್ ತಪ್ಪಿಸಿಕೊಂಡ. ಕಾರಿನಲ್ಲಿ ಭಗತ್ ಸಿಂಗ್-ರಾಜಗುರು ಪಾರಾದರು. ಅವರನ್ನು ಬುದ್ಧಿವಂತಿಕೆಯಿಂದ ಪೊಲೀಸರ ವಾಹನಗಳಿಂದ ಪಾರುಮಾಡಿ ಕರೆದುಕೊಂಡು ಹೋದ ಮೋಟಾರ್ ಚಾಲಕ ಮಹಾವೀರನೇ!

ಅವು 1921-22ರ ದಿನಗಳು. ಉತ್ತರ ಪ್ರದೇಶದ ಏಟಾ ಜಿಲ್ಲೆಯ ಕಾಸ್​ಗಂಜ್ ತಾಲ್ಲೂಕು ಕೇಂದ್ರದ ಸರ್ಕಾರಿ ಅಧಿಕಾರಿಗಳಲ್ಲಿ ಎಲ್ಲಿಲ್ಲದ ಉತ್ಸಾಹ. ಜಿಲ್ಲಾ ಕಲೆಕ್ಟರ್, ಜಿಲ್ಲಾ ನ್ಯಾಯಾಧೀಶ, ಪೊಲೀಸ್ ಅಧಿಕಾರಿ, ಶಾಲಾ ಇನ್ಸ್​ಪೆಕ್ಟರ್, ಮುಂತಾದ ಸರ್ಕಾರಿ ಕೃಪಾಪೋಷಿತರು ಕಾಸ್​ಗಂಜ್​ನಲ್ಲಿ ಸಭೆ ಸೇರಲಿದ್ದಾರೆ. ‘ಸ್ವರಾಜ್ಯ, ಕ್ರಾಂತಿ’ ಮುಂತಾಗಿ ಹುಯಿಲೆಬ್ಬಿಸುತ್ತಿರುವ ‘ಹುಚ್ಚು ಹುಡುಗರನ್ನು’ ಮನಸಾರೆ ಜರಿದು ಅಸೀಮ ರಾಜನಿಷ್ಠೆಯನ್ನು ಪ್ರದರ್ಶಿಸಲಿದ್ದಾರೆ. ಕೆಲವರೇ ಸಭಿಕರಾದರೆ ಕಳೆ ಎಲ್ಲಿ? ಆದ್ದರಿಂದ ಶಾಲಾ ಬಾಲಕರನ್ನೂ ಅಲ್ಲಿ ಕೂಡಿಹಾಕಿ ಅವರ ಬಾಯಿಂದಲೂ ‘ಬ್ರಿಟಿಷ್ ಸಾರ್ವಭೌಮರಿಗೆ ಉಘೕ ಉಘೕ’ ಅನ್ನಿಸುವ ಪ್ರಯತ್ನ ನಡೆದಿದೆ. ಬ್ರಿಟಿಷ್ ಸರ್ಕಾರಿ ಋಣಕ್ಕೆ ಸಿಕ್ಕಿದ್ದ ಬಡ ಉಪಾಧ್ಯಾಯರು ವಿಧಿ ಇಲ್ಲದೆ ಈ ಕೆಲಸಕ್ಕೆ ಕೈ ಹಾಕಿದ್ದಾರೆ.

ಜತೆಗೆ ಇಲ್ಲಿ ಇನ್ನೊಂದು ಸಿದ್ಧತೆ. 15-16 ವರ್ಷದ, ಚುರುಕುಬುದ್ಧಿಯ, ಮಿಂಚಿನಂಥ ತೇಜಸ್ವಿ ಬಾಲಕನೊಬ್ಬ ತನ್ನ ಗೆಳೆಯರ ಮನೆಗಳಿಗೆ ಬಿರುಗಾಳಿಯಂತೆ ನುಗ್ಗಿದ್ದಾನೆ; ಅವರ ಕಿವಿಯಲ್ಲಿ ಏನೋ ಪಿಸುಗುಟ್ಟಿದ್ದಾನೆ. ಒಬ್ಬರಿಂದೊಬ್ಬರಿಗೆ ಗುಪ್ತಸುದ್ದಿ ವಾಯುವೇಗದಲ್ಲಿ ಹರಡಿದೆ; ಅದೇನೋ ವ್ಯಾಪಾರ ಗುಟ್ಟಾಗಿ ನಡೆದಿದೆ.

ಸಭೆ ಪ್ರಾರಂಭವಾಯಿತು. ಒಬ್ಬೊಬ್ಬ ಸರ್ಕಾರಿ ಬಾಲಬಡಕನೂ ತನ್ನ ವಾಗ್ಝರಿಯಿಂದ ಸಾರ್ವಭೌಮನನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾನೆ; ಸ್ವರಾಜ್ಯವಾದಿಗಳನ್ನು ಹೀನಾಮಾನ ಬೈದು ತುಚ್ಛೀಕರಿಸುತ್ತಿದ್ದಾನೆ.

ಅಷ್ಟರಲ್ಲೇ ರಾಜಭಕ್ತರ ಆ ಸಭೆಯ ಯಾವುದೋ ಮೂಲೆಯಿಂದ ಸಭೆಯನ್ನು ನಡುಗಿಸುವಂತೆ ಗರ್ಜನೆ; ‘ಗಾಂಧಿಕಿ ಜೈ!’ ‘ಬ್ರಿಟಿಷ್​ಶಾಹಿ ನಾಶವಾಗಲಿ!’ ಅಲ್ಲಿದ್ದ ಹುಡುಗರೆಲ್ಲರೂ ಎದ್ದು ನಿಂತು ಒಕ್ಕೊರಲಿನಿಂದ ಗರ್ಜಿಸುತ್ತಿದ್ದಾರೆ; ರಾಜಭಕ್ತರೆಲ್ಲರೂ ಗಾಬರಿ ಬಿದ್ದು ಗಡಗಡನೆ ನಡುಗಲಾರಂಭಿಸಿದ್ದಾರೆ. ಕ್ರಾಂತಿಕಾರಿಗಳು ಬಂದರೇನೋ ಎಂದು ಹೆದರಿ ಕೆಲವು ರಾಜಭಕ್ತರು ಪಲಾಯನ ಮಾಡಿದರು! ವಾನರ ಸೇನೆಯ ಕೈಗೆ ಸಿಕ್ಕಿ ಅಲ್ಲಿದ್ದ ಮೇಜು, ಕುರ್ಚಿಗಳೆಲ್ಲ ದಿಕ್ಕಾಪಾಲು.

ಅನಂತರ ಪೊಲೀಸರು ಉಪಾಧ್ಯಾಯರ ಸಹಕಾರದೊಂದಿಗೆ ಒಬ್ಬ ಹುಡುಗನನ್ನು ಹಿಡಿದು ತಂದರು. ‘ನೀನೇ ಈ ಗಲಭೆಗಳಿಗೆ ಮೂಲ’ ಎಂದರು. ‘ಹೌದು’ ಎಂದ ಅವನು. ‘ನೀನು ಯಾರು?’ ಎಂದಾಗ ‘ಕುಂವರ್ ದೇವೀಸಿಂಹರ ಮಗ ಕುಂವರ್ ಮಹಾವೀರ ಸಿಂಹ’ ಎಂದು ಉತ್ತರ ಬಂತು. ಒಂದು ಕ್ಷಣ ಪೊಲೀಸರು ಆ ಹೆಸರು ಕೇಳಿಯೇ ಬೆಚ್ಚಿಬಿದ್ದರು! ರಾಜದ್ರೋಹದ ಆಪಾದನೆ ಮೇಲೆ ಮಹಾವೀರ ಸಿಂಹನಿಗೆ ಶಿಕ್ಷೆಯಾಯಿತು.

ಮಹಾವೀರ ಸಿಂಹನ ತಂದೆ ದೇವೀಸಿಂಹ ನಿಜಕ್ಕೂ ಸತ್ಪುರುಷ. ಮಗನಿಗೆ ಸ್ವಂತ ಕೈಯಿಂದ ಕ್ರಾಂತಿ-ಹೋರಾಟಗಳ ದೀಕ್ಷೆ ನೀಡಿ ಹೆಜ್ಜೆ ಹೆಜ್ಜೆಗೂ ಅವನ ಕಾರ್ಯವನ್ನು ಮೆಚ್ಚಿ ಬೆನ್ನುತಟ್ಟಿ ಹುರಿದುಂಬಿಸುತ್ತಿದ್ದ ಪುರುಷ ಪುಂಗವ. ತಾಯಿ ಶಾರದಾದೇವಿ ಮಹಾದೈವಭಕ್ತಳು. ಮಹಾವೀರ ಸಿಂಹ 1904ರ ಸೆಪ್ಟೆಂಬರ್ 6ನೇ ದಿನಾಂಕ ಏಟಾ ಜಿಲ್ಲೆಯ ಶಹಪುರದಲ್ಲಿ ಜನ್ಮ ತಳೆದ.

ಮಹಾವೀರ ಸಿಂಹ ಪ್ರೌಢಶಾಲೆ ಶಿಕ್ಷಣ ಮುಗಿಸಿ 1925ರಲ್ಲಿ ಕಾನ್ಪುರದ ಡಿ.ಎ.ವಿ. ಕಾಲೇಜಿಗೆ ದಾಖಲಾದ. ಆ ವೇಳೆಗೆ ಗಾಂಧಿಯವರ ಅಸಹಕಾರ ಆಂದೋಲನ ಮುರಿದುಬಿದ್ದಿತ್ತು. ನಾಯಕಮಣಿಗಳ ಹೃದಯದ ಬೆಂಕಿ ತಣ್ಣಗಾಗಿತ್ತು. ತಾರುಣ್ಯದ ಹೊಸ್ತಿಲಲ್ಲಿದ್ದ ಮಹಾವೀರ ಸಿಂಹನ ಮನಸ್ಸು ಹೋರಾಟಕ್ಕಾಗಿ ಹಾತೊರೆಯುತ್ತಿತ್ತು. ಹಿಂದುಸ್ಥಾನ ಪ್ರಜಾತಂತ್ರ ಸೇನೆಯ ಸದಸ್ಯನಾದ; ಕ್ರಾಂತಿಕಾರಿಯಾದ.

ಹೀಗೆ ಅವನು ಕಾರ್ಯಮಗ್ನನಾಗಿದ್ದಾಗಲೇ ಅವನ ಮನಸ್ಸಿನಲ್ಲಿ ತೂಫಾನು ಎಬ್ಬಿಸುವ ಪತ್ರ ಒಂದನ್ನು ಅವನ ತಂದೆ ಬರೆದರು. ಮಹಾವೀರ ಸಿಂಹನನ್ನು ಚಿಂತೆ ಕವಿಯಿತು. ಕೂಡಲೇ ಗೆಳೆಯ ಕ್ರಾಂತಿಕಾರಿ ಶಿವವರ್ಮನ ಕೊಠಡಿಗೆ ಓಡಿದ. ತಂದೆ ವಿವಾಹಕ್ಕೆ ಎಲ್ಲವನ್ನೂ ಅಣಿಗೊಳಿಸಿದ್ದೇ ಆ ಪತ್ರ ತಂದ ಸುದ್ದಿ. ‘ನಾನು ಕಾಲೇಜನ್ನೇ ತೊರೆದು ಎಲ್ಲಾದರೂ ಹೊರಟುಹೋಗುತ್ತೇನೆ. ಇಲ್ಲದಿದ್ದರೆ ಈ ಮದುವೆಯ ಸುಳಿಯಲ್ಲಿ ಸಿಕ್ಕಿಬಿದ್ದರೆ ಮುಗಿಯಿತು. ಇನ್ನು ಕ್ರಾಂತಿಕಾರಿ ಜೀವನಕ್ಕೆ ತಿಲಾರ್ಪಣ ಕೊಡಬೇಕಾಗುತ್ತದೆ’ ಎಂದ. ಶಿವವರ್ಮ ತಂದೆಗೆ ಪತ್ರ ಬರೆದು ನಿಜಸ್ಥಿತಿಯನ್ನು ತಿಳಿಸುವಂತೆ ಸಲಹೆ ಮಾಡಿದ. ಅಂತೆಯೇ ಮಾಡಿದ. ಆದರೆ ಅವನು ಒಂದೆರಡು ದಿನಗಳಲ್ಲೇ ಮತ್ತೆ ಧಾವಿಸಿ ಬಂದ. ಕಿಸೆಯಿಂದ ಒಂದು ಪತ್ರ ತೆಗೆದು ಶಿವವರ್ಮನ ಕೈಯಲ್ಲಿಟ್ಟ. ಅದನ್ನು ಓದುತ್ತ ಶಿವವರ್ಮನ ಹೃದಯ ತುಂಬಿಬಂತು; ಕಣ್ಣುಗಳು ಮಂಜಾದವು-‘ಮಗೂ ಮಹಾವೀರ, ನೀನು ನಿನ್ನ ಜೀವನವನ್ನು ರಾಷ್ಟ್ರಕಾರ್ಯಕ್ಕಾಗಿ ಮುಡುಪಿಡುವ ನಿರ್ಧಾರ ಕೈಗೊಂಡದ್ದು ಕೇಳಿ ನನಗೆ ಬಹಳ ಆನಂದವಾಯಿತು. ನಮ್ಮ ವಂಶದಲ್ಲಿ ಪೂರ್ವಜರ ರಕ್ತ ಈಗ ಹರಿಯುತ್ತಿಲ್ಲ; ಅದು ಗುಲಾಮಿತನವನ್ನು ಒಪ್ಪಿಕೊಂಡುಬಿಟ್ಟಿದೆ ಎಂದು ಚಿಂತಾಕ್ರಾಂತನಾಗಿದ್ದೆ. ಇಂದು ನಿನ್ನ ಪತ್ರ ಕಂಡು ನಾನು ಬಹಳ ಭಾಗ್ಯಶಾಲಿಯೆಂದು ಉಬ್ಬಿಹೋಗುತ್ತಿದ್ದೇನೆ. ನಿನ್ನ ವಿವಾಹದ ಮಾತುಕತೆಗಳು ಯಾರ ಜತೆ ನಡೆಯುತ್ತಿತ್ತೋ ಅವರಿಗೆ ಪತ್ರ ಬರೆದು ವಿಷಯವನ್ನು ಸಮಾಪ್ತಿಗೊಳಿಸಿದ್ದೇನೆ. ನಿನ್ನ ಮಾರ್ಗದಲ್ಲಿ ಬಾಧಕವಾಗುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ ಎಂಬ ಭರವಸೆಯನ್ನು ಕೊಡುತ್ತೇನೆ. ನೀನು ಸ್ವೀಕರಿಸಿರುವ ದೇಶಸೇವಾ ಮಾರ್ಗಕ್ಕೆ ಕಠಿಣ ತಪಸ್ಸು ಆವಶ್ಯಕ; ಬಹು ದುರ್ಗಮವಾದ ದಾರಿ ಅದು. ಆದರೆ ಒಮ್ಮೆ ನೀನು ನಿರ್ಧರಿಸಿ ಆ ದಿಕ್ಕಿನಲ್ಲಿ ಪ್ರಯಾಣ ಪ್ರಾರಂಭಿಸಿದ್ದಾದ ಮೇಲೆ ಎಂದೆಂದಿಗೂ ಹಿನ್ನಡೆಯ ಬೇಡ; ಗೆಳೆಯರಿಗೆ ದ್ರೋಹ ಬಗೆಯಬೇಡ. ನಿನ್ನ ವೃದ್ಧ ತಂದೆಯ ಹೆಸರನ್ನು ಸದಾ ನೆನೆಯುತ್ತಿರು. ನೀನು ಎಲ್ಲೇ ಇರು, ನನ್ನ ಆಶೀರ್ವಾದ ನಿನ್ನನ್ನು ಹಿಂಬಾಲಿಸುತ್ತದೆ. ಇತಿ ನಿನ್ನ ತಂದೆ ದೇವೀಸಿಂಹ’.

ಮಹಾವೀರ ಸಿಂಹ ಎಲ್ಲ ಕ್ರಾಂತಿಕಾರ್ಯಗಳಲ್ಲೂ ಮುಂದು. ನಾಯಕರ ಅಚ್ಚುಮೆಚ್ಚಿನ ಸಾಥಿ. 1927ರಲ್ಲಿ ಕೆಲವರನ್ನು ಮೋಟರ್ ಚಾಲನೆಯ ಶಿಕ್ಷಣ ನಿಮಿತ್ತ ಸಂಸ್ಥೆ ಆರಿಸಿ ಕಳಿಸಿತು. ಅದರಲ್ಲಿ ಇವನೂ ಒಬ್ಬ. ಆಗಲೇ ಓದಿಗೆ ಪೂರ್ಣವಿರಾಮ ಹಾಕಿ ಲಾಹೋರಿಗೆ ಹೊರಟುಹೋದ.

ಭಗತ್ ಸಿಂಗ್-ಬಟುಕೇಶ್ವರದತ್ತರು ಅಸೆಂಬ್ಲಿಯಲ್ಲಿ ಬಾಂಬು ಎಸೆದ ಮೇಲೆ ಆದ ಬಂಧನಗಳಲ್ಲಿ ಮಹಾವೀರ ಸಿಂಹನದೂ ಒಂದು. ಬಂಧನವಾದ ಒಂದೆರಡು ದಿನಗಳಲ್ಲಿಯೇ ಪೊಲೀಸರಿಗೂ ಕ್ರಾಂತಿಕಾರಿಗಳಿಗೂ ಬಿಸಿಬಿಸಿ ಮಾತು-ಪೊಲೀಸರ ಹುಣ್ಣಿಗೆ ಖಾರ ಹಚ್ಚಿದ ಹಾಗೆ. ಪೊಲೀಸರು ಕೋಪವನ್ನು ತೀರಿಸಿಕೊಳ್ಳಲು ಕೆಲವು ಬಲಶಾಲಿಗಳನ್ನೇ ಆರಿಸಿಹೊಡೆದು ಚಚ್ಚಿಹಾಕುತ್ತಿದ್ದರು. ಅವರಿಗೆ ಪ್ರೀತಿಪಾತ್ರವಾದ ಆಹಾರವೆಂದರೆ ಭೀಮಕಾಯದ ಮಹಾವೀರ ಸಿಂಹ.

1929ರ ಜುಲೈ 13ರಂದು ಕ್ರಾಂತಿಕಾರಿಗಳ ಪ್ರಥಮ ಉಪವಾಸ ಸತ್ಯಾಗ್ರಹ. ಹತ್ತು ದಿನ ಕಳೆದರೂ ಉಪವಾಸ ನಿಲ್ಲಲಿಲ್ಲ. ಒಬ್ಬೊಬ್ಬರಾಗಿ ಹಾಸಿಗೆ ಹಿಡಿದರು. ನೀರು ಬಿಟ್ಟು ಮಿಕ್ಕಿದ್ದೆಲ್ಲ ಅಸ್ಪಶ್ಯ. ಬಲಾತ್ಕಾರದಿಂದ ಸತ್ಯಾಗ್ರಹಿಗಳಿಗೆ ಹಾಲು ಕುಡಿಸಲು ಸಜ್ಜು ಆಯಿತು. ಡಾಕ್ಟರರು, ಜೈಲಿನ ಅಧಿಕಾರಿಗಳೇ ಇದರ ಕಾರ್ಯನಿರ್ವಾಹಕರು.

ದೂರದಲ್ಲಿ ಜೈಲಧಿಕಾರಿ-ಹತ್ತಾರು ಮಂದಿ ಪೈಲ್ವಾನರು ಬರುವುದನ್ನು ನೋಡುತ್ತಿದ್ದಂತೆಯೇ ಮಹಾವೀರ ಸಿಂಹನೂ ತಯಾರು. ಕಬ್ಬಿಣದ ಸಲಾಕೆಗಳ ಬಾಗಿಲನ್ನು ಅಡ್ಡಹಿಡಿದು ನಿಲ್ಲುತ್ತಿದ್ದ. ಹತ್ತು ಹದಿನೈದು ನಿಮಿಷ ಹೋರಾಟ ಮಾಡಿದ ಹೊರತು ಬಾಗಿಲು ತೆರೆಯಲು ಬಿಡುತ್ತಲೇ ಇರಲಿಲ್ಲ. ಆನಂತರ ಅವನನ್ನು ವಶಪಡಿಸಿಕೊಳ್ಳಬೇಕಾದರೆ ಮಲ್ಲಯುದ್ಧ!

ಮಹಾವೀರ ಬ್ರಿಟಿಷ್ ನ್ಯಾಯಾಲಯವನ್ನು ಧಿಕ್ಕರಿಸಿದ ಧೀರ. ಅದು ನ್ಯಾಯಪೀಠವೇ ಅಲ್ಲ. ಅದು ಭ್ರಷ್ಟಪೀಠ ಎಂದ ಎದೆಗಾರ. ಅವನು ತನ್ನ ನಾಲ್ವರು ಗೆಳೆಯರೊಂದಿಗೆ ಒಂದು ದೀರ್ಘ ಹೇಳಿಕೆ ಕೊಟ್ಟ. ಅದರಲ್ಲಿ ಬ್ರಿಟಿಷ್ ಸರ್ಕಾರವನ್ನು ಖಂಡಿಸಿ, ಕ್ರಾಂತಿಕಾರಿ ಮಾರ್ಗದ ಮೇಲೆ ಬೆಳಕು ಹರಿಸಿ, ತನ್ನ ಸ್ವೀಕೃತ ಮಾರ್ಗದ ನ್ಯಾಯಪರತೆಯನ್ನು ದೃಢೀಕರಿಸಿ, ಕೊನೆಯಲ್ಲಿ, ನಮ್ಮನ್ನು ಬ್ರಿಟಿಷರ ವಿರುದ್ಧ ಯುದ್ಧ ಹೂಡಿದರೆಂದು ಆಪಾದಿಸಲಾಗಿದೆ. ನಾವು ಬ್ರಿಟಿಷರ ಯಾವುದೇ ನ್ಯಾಯಾಲಯದಲ್ಲಿ ನ್ಯಾಯ ತೀರ್ವನವನ್ನು ನಿರೀಕ್ಷಿಸುತ್ತಿಲ್ಲ. ಆದ್ದರಿಂದ ಈ ನ್ಯಾಯನಾಟಕದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ತಿಳಿಸಿದ.

ವಿಚಾರಣೆಯ ನಾಟಕ ಪರ್ಯವಸಾನದಲ್ಲಿ ಮಹಾವೀರ ಸಿಂಹನಿಗೆ ಏಳು ಮಂದಿ ಸಂಗಡಿಗರ ಜತೆ ಜೀವನಪೂರ್ತಿ ಕಾರವಾಸದ ಶಿಕ್ಷೆ. ಶಿಕ್ಷೆಯ ಕೆಲಕಾಲದ ಅನಂತರ ಮಹಾವೀರಸಿಂಹನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಿದರು. ಅಲ್ಲೊಬ್ಬ ಜೈಲು ಅಧಿಕಾರಿ ಇದ್ದ. ಮುಷ್ಟಿಯುದ್ಧ ನಿಪುಣ. ಬೇಡಿ ಹಾಕಿದ ಕೈದಿಗಳನ್ನು ಸಾಲಾಗಿ ನಿಲ್ಲಿಸಿ ಒಬ್ಬೊಬ್ಬರ ಮೇಲೂ ಅರ್ಧಗಂಟೆ ಮುಷ್ಟಿಪ್ರಯೋಗ ಮಾಡುವ ಮಹಾಚಟ ಇವನದು.

ಒಂದು ದಿನ ಈತ ಮಹಾವೀರ ಸಿಂಹನ ಕೋಣೆಯ ಬಳಿ ಬಂದು ಅವನನ್ನು ಆಚೆ ಕರೆಸಿದ. ನಾಲ್ವರು ಪೊಲೀಸರು ಅವನನ್ನು ಹಿಡಿದಿದ್ದರು. ಮುಷ್ಟಿಯುದ್ಧ ನಿಪುಣ ರಭಸದಿಂದ ಮಹಾವೀರ ಸಿಂಹನ ಮೇಲೆ ಆಘಾತ ಮಾಡಲಾರಂಭಿಸಿದ. ಸರಕ್ಕನೆ ಒಂದೇ ಏಟಿಗೆ ಬಲಗೈ ಕೊಸರಿಕೊಂಡ ಮಹಾವೀರ ಸಿಂಹ ಜೈಲು ಅಧಿಕಾರಿಯ ಮೂತಿಗೆ ಬಲವಾದ ಒಂದು ಪೆಟ್ಟು ಕೊಟ್ಟ! ಆ ಅಧಿಕಾರಿಗೆ ನಕ್ಷತ್ರಮಂಡಲ ದರ್ಶನ; ಮಹಾವೀರ ಸಿಂಹನಿಗೆ ಮೂವತ್ತು ಛಡಿ ಏಟುಗಳ ಶಿಕ್ಷೆ.

ಮರದ ತ್ರಿಪಾದಿಗೆ ಇವನನ್ನು ಬಿಗಿದು ಏಟು ಹೊಡೆದರು. ಚರ್ಮದ ಸುಲಿತ; ರಕ್ತದ ಧಾರೆ. ಮಹಾವೀರ ಸಿಂಹನ ಬಾಯಿಂದ ‘ಇಂಕಿಲಾಬ್ ಜಿಂದಾಬಾದ್’ ‘ವಂದೇ ಮಾತರಂ’ ಉಚ್ಚಾರ. ಆನಂತರ ಇವನನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದಾಗ ಅವರನ್ನು ಧಿಕ್ಕರಿಸಿ, ಎದೆ ಎತ್ತಿ, ತನ್ನಷ್ಟಕ್ಕೆ ತಾನೇ ನಡೆದುಹೋದ ಮಹಾವೀರಸಿಂಹ!

1933ರ ಜನವರಿಯಲ್ಲಿ ಅವನನ್ನು ಇತರ ಕೆಲವರೊಂದಿಗೆ ಅಂಡಮಾನಿಗೆ ಅಟ್ಟಿದರು. ಅಲ್ಲಿಂದ ಆತ ತಂದೆಗೆ ಒಂದು ಪತ್ರ ಬರೆದಿದ್ದ; ‘ನಾನು ಅಂಡಮಾನಿಗೆ ಬಂದೆ. ಯಾವ ತಾಯಿಯ ಒಡಲಿನಲ್ಲಿ ಹುಟ್ಟಿದೆನೋ, ಧೂಳಿನಲ್ಲಿ ಹೊರಳಾಡಿದೆನೋ ಆಕೆಯಿಂದ ದೂರವಾಗಿದ್ದೇನೆ. ನಿಮ್ಮ ಪಾದಾರವಿಂದಗಳ ಕಣಗಳಿಂದಲೂ ದೂರವಾಗಿದ್ದೇನೆ. ಇಂತಹ ಸ್ಥಿತಿಯಲ್ಲಿ ತಾಯ್ನಾಡನ್ನು ತೊರೆಯುತ್ತಿರುವ ನನಗೆ ಅದೆಷ್ಟು ದುಃಖವಾಗುತ್ತಿದೆಯೋ ಹೇಗೆ ಹೇಳಲಿ? ಆದರೆ ಜತೆಗೆ ಒಂದು ಸಮಾಧಾನವೂ ಇದೆ. ಕ್ರಾಂತಿಕಾರಿಗಳ ತೀರ್ಥಕ್ಷೇತ್ರ ಅಂಡಮಾನಿನ ದರ್ಶನವೇ ಅದು. ಬಂಗಾಲಿ, ಸಿಖ್ ಮುಂತಾದ ಸಹಸ್ರಾರು ದೇಶಭಕ್ತರ ತಪೋಭೂಮಿ’.

ಅದಕ್ಕೆ ತಂದೆ ಹೀಗೆ ಬರೆದರು- ‘ಮಗೂ, ಈ ಸರ್ಕಾರ ದೇಶದ ಎಲ್ಲೆಲ್ಲೂ ಹರಡಿರುವ ಹೊಳೆಹೊಳೆಯುತ್ತಿರುವ ರತ್ನಗಳನ್ನು ಈ ದ್ವೀಪದಲ್ಲಿ ಒಂದುಗೂಡಿಸಿದೆ. ನಿನಗೂ ಆ ರತ್ನಗಳ ಜತೆಗೆ ಇರುವ ಅವಕಾಶ ಸಿಕ್ಕಿರುವುದರಿಂದ ನನಗೆ ಹೆಮ್ಮೆಯಾಗುತ್ತಿದೆ. ಆ ರತ್ನಗಳ ಮಧ್ಯೆ ನೀನು ಮತ್ತಷ್ಟು ಪ್ರಭೆಯನ್ನು ಪಸರಿಸು. ಇದೇ ನನ್ನ ಇಚ್ಛೆ. ಆಶೀರ್ವಾದ’.

ಅಂಡಮಾನಿನ ಕತ್ತಲ ಕೂಪದಲ್ಲಿ ಹೋರಾಟದ ಇನ್ನೊಂದು ಪರ್ವಕ್ಕೆ ಅಂಕುರಾರ್ಪಣ. ಜೈಲು ಸುಧಾರಣೆಯನ್ನು ಮಾಡುವಂತೆ ಉಪವಾಸ ಸತ್ಯಾಗ್ರಹದ ಇನ್ನೊಂದು ಅಧ್ಯಾಯಕ್ಕೆ ನಾಂದಿ. 1933ರ ಮೇ 12ರಂದು ಆರಂಭ.

ಆರನೆಯ ದಿವಸ ಬಲವಂತವಾಗಿ ಹಾಲು ಕುಡಿಸಲು ಜೈಲು ಅಧಿಕಾರಿಗಳು ನಿಶ್ಚಯಿಸಿದರು. ಹತ್ತು ಹನ್ನೆರಡು ಪೈಲ್ವಾನರು ಬಂದರು. ವಜ್ರನಿರ್ಧಾರದ ಕ್ಷತ್ರಿಯ ಕುಂವರ ಮಹಾವೀರ ಅಂತಿಮ ಹೋರಾಟಕ್ಕೆ ಎದ್ದು ನಿಂತ. ಅರ್ಧಗಂಟೆ ಕಾಲ ಸೆಣಸಾಡಿದ. ಹನ್ನೆರಡು ಮಂದಿ ಅವನನ್ನು ನೆಲಕ್ಕೆ ಕೆಡವಿ ಎದೆಯ ಮೇಲೆ ಕೈಕಾಲುಗಳ ಮೇಲೆ ಕುಳಿತು ಮಿಸುಕಾಡದಂತೆ ಹಿಡಿದರು. ಮೂಗಿನಲ್ಲಿ ದಪ್ಪ ರಬ್ಬರ್ ನಳಿಕೆ ಇಳಿಬಿಟ್ಟರು. ಅದು ದಾರಿ ತಪ್ಪಿತು. ಹೊಟ್ಟೆಗೆ ಬದಲಾಗಿ ಶ್ವಾಸಕೋಶಗಳಿಗೆ ನುಗ್ಗಿತು. ಅಪಾರ ಯಾತನೆ.

ಅಧಿಕಾರಿಗಳು ನಳಿಕೆಯ ಮೂಲಕ ಹಾಲು ಸುರಿಯಲು ಆರಂಭಿಸಿದರು. ಒಂದು ಸೇರಿಗೂ ಹೆಚ್ಚು ಇವನ ಶ್ವಾಸಕೋಶದೊಳಗೆ ನುಗ್ಗಿ ಉಗ್ರ ಪ್ರತಿಕ್ರಿಯೆಯನ್ನಾರಂಭಿಸಿತು. ಮಹಾವೀರ ಸಿಂಹ ನರಳಾಡಹತ್ತಿದ. ಉಸಿರಾಟಕ್ಕೇ ಆತಂಕ; ಹಿಂಸೆ ಸಹಾನಾತೀತ. ಅಂದು 1933ರ ಮೇ 17.

ಸುತ್ತಮುತ್ತಲೂ ಜೈಲು ಸರಳುಗಳ ಹಿಂದೆ ನಿಂತಿದ್ದ ಗೆಳೆಯರು ಇವನ ಘೊರ ಅವಸ್ಥೆ ಕಂಡರು. ಬೊಬ್ಬೆಯೆಬ್ಬಿಸಿದರು. ಡಾಕ್ಟರ್ ಬಂದ. ಆದರೆ ಆ ವೇಳೆಗೆ ಮಹಾವೀರ ಸಿಂಹನ ಶ್ವಾಸಕೋಶ ಒಡೆದುಹೋಗಿತ್ತು. ಅಸಿಧಾರಾವ್ರತದ ಭೀಷ್ಮಪ್ರತಿಜ್ಞೆ ಮಾಡಿದ ಮಹಾವೀರ ಸಿಂಹ ಅನಂತದಲ್ಲಿ ಲೀನವಾಗಿ ಹೋಗಿದ್ದ. ಆಗ ನಟ್ಟಿರುಳು ಒಂದು ಗಂಟೆ.

ಅನಂತರ ಜೈಲಧಿಕಾರಿಗಳು ಅವನ ನಿರ್ಜೀವ ದೇಹವನ್ನು ಕದ್ದು ಮುಚ್ಚಿ ಅಂಡಮಾನಿನ ಸಾಗರ ಗರ್ಭಕ್ಕೆ ತಳ್ಳಿದರು. ಭಾರತಮಾತೆ ತನ್ನ ಮತ್ತೊಬ್ಬ ಮಗನನ್ನು ಗಂಗಾಮಾತೆಗೆ ನೀಡಿದಳು!

(ಲೇಖಕರು ಹಿರಿಯ ಪತ್ರಕರ್ತರು)