ಲಾಲಾ ಕೊಲೆಗೆ ಕ್ರಾಂತಿಕಾರಿಗಳ ಪ್ರತೀಕಾರ

ಸ್ಯಾಂಡರ್ಸ್​ನ ಜತೆಗಿದ್ದ ಪೇದೆ ಚನ್ನನ್ ಸಿಂಗ್ ಭಗತ್ ಸಿಂಗನನ್ನು ಅಟ್ಟಿಸಿಕೊಂಡು ಓಡಿದ. ಇನ್ನೇನು ಅವನನ್ನು ಹಿಡಿಯಬೇಕು. ಎಲ್ಲಿಂದಲೋ ಕೂಗು ಕೇಳಿ ಬಂತು-‘ಖಬರ್​ದಾರ್’. ಚನ್ನನ್ ಸಿಂಗ್ ಗಕ್ಕನೆ ನಿಂತ. ಹಿಂದಿರುಗುವಂತೆ ಹೇಳಿದರೂ ಆತ ಒಪ್ಪಲಿಲ್ಲ. ಆಜಾದನ ರಿವಾಲ್ವರ್ ಗುಂಡು ಉಗುಳಿ, ಚನ್ನನ್ ಪ್ರಾಣ ಕಳೆದುಕೊಂಡ.

ಲಾಹೋರಿನ ಕ್ರಾಂತಿಕಾರಿಗಳ ಅಡ್ಡಾ ‘ಬೋಝುಂಗ್ ಹೌಸ್’ನಲ್ಲಿ 1928ರ ಡಿಸೆಂಬರ್ 10ರಂದು ರಹಸ್ಯ ಸಭೆ ನಡೆಯಿತು. ಆಜಾದ್, ಭಗತ್ ಸಿಂಗ್, ಸುಖದೇವ್, ರಾಜಗುರು, ಮಹಾವೀರ ಸಿಂಹ ಮುಂತಾದ ಕ್ರಾಂತಿಕಾರಿಗಳು ಸೇರಿದ್ದ ಸಭೆ. ಲಜ್​ಪತ್​ರಾಯರ ಕೊಲೆಗೆ ಸೇಡು ತೀರಿಸಿಕೊಳ್ಳಬೇಕೆಂಬ ವಿಷಯವನ್ನು ಭಗತ್ ಸಿಂಗ್ ಸಭೆಯಲ್ಲಿ ಮಂಡಿಸಿದ. ಎಲ್ಲರೂ ಅದಕ್ಕೆ ಒಪ್ಪಿಗೆ ಸೂಚಿಸಿದರು. ಅವರ ಗುರಿ ಪೊಲೀಸ್ ಸೂಪರಿಂಟೆಂಡೆಂಟ್ ಸ್ಕಾಟ್. ಈ ಅಭಿಪ್ರಾಯ ಬಂದ ಕೂಡಲೇ ತಾನೇ ಈ ಕೆಲಸ ಮಾಡುತ್ತೇನೆಂದು ಮುಂದೆ ಬಂದವನು ಪುಣೆಯಿಂದ ಬಂದ ಕ್ರಾಂತಿಕಾರಿ ಶಿವರಾಮ್ ರಾಜಗುರು. ಸಂಸ್ಕೃತ ಕಲಿಯಬೇಕೆಂದು ಕಾಶಿಗೆ ಬಂದಿದ್ದ ಇವನು ಆಜಾದನಂತೆಯೇ ಸ್ವಾತಂತ್ರ್ಯ ಹೋರಾಟಕ್ಕೆ ಸೆಳೆಯಲ್ಪಟ್ಟವನು. ಅವನನ್ನು ಸೆಳೆದವನು ಆಜಾದನೇ.

ಲಜ್​ಪತ್​ರಾಯರು ಅಸುನೀಗಿದ್ದು ನವೆಂಬರ್ 17ರಂದು. ಅವರ ಮಾಸಿಕ ತಿಥಿಯಾದ ಡಿಸೆಂಬರ್ 17ರಂದೇ ಅವರಿಗೆ ರಕ್ತತರ್ಪಣ ನೀಡಬೇಕೆಂದೂ ನಿರ್ಧಾರವಾಯಿತು. ಭಗತ್ ಸಿಂಗ್ ಮತ್ತು ರಾಜಗುರು ಕಾರ್ಯಾಚರಣೆ ನಡೆಸಬೇಕೆಂದೂ ನೇತೃತ್ವ ಆಜಾದನದೆಂದೂ ನಿರ್ಣಯವಾಯಿತು. ಆಜಾದ್ ಕ್ರಾಂತಿಕಾರಿಗಳೆಲ್ಲರಿಗೂ ಅವರವರ ಕೆಲಸಗಳನ್ನು ಹಂಚಿದ. ಎಲ್ಲರ ರಕ್ಷಣೆ ಹಾಗೂ ಕಾರ್ಯಾಚರಣೆ ಯಶಸ್ಸಿನ ಜವಾಬ್ದಾರಿ ಆಜಾದನದೇ ಎಂದೂ ತೀರ್ವನವಾಯಿತು.

1928 ಡಿಸೆಂಬರ್ 17. ಸಂಜೆ 4 ಗಂಟೆ. ಸ್ಕಾಟ್​ನ ಚಲನವಲನ ಗಮನಿಸಲು ನೇಮಕವಾಗಿದ್ದ ಕ್ರಾಂತಿಕಾರಿ ಜಯಗೋಪಾಲ್, ಇತರೆ ಕ್ರಾಂತಿಕಲಿಗಳು ಅವರವರಿಗೆ ಸೂಚಿತವಾಗಿದ್ದ ಜವಾಬ್ದಾರಿ ನಿರ್ವಹಿಸಲಾರಂಭಿಸಿದರು.

ಸ್ಟೇಷನ್ನಿನ ಮುಂದೆ ಮೋಟರ್​ಬೈಕ್ ಇತ್ತು. ಅದು ಸೂಪರಿಂಟೆಂಡೆಂಟ್ ಸ್ಕಾಟನದೆಂದೇ ಜಯಗೋಪಾಲನ ನಂಬಿಕೆ. ಅದಕ್ಕೆ ಸನಿಹದಲ್ಲೇ ತನ್ನ ಸೈಕಲ್ ಚೈನನ್ನು ಸರಿಮಾಡುವವನಂತೆ ನಟಿಸುತ್ತ ಕುಕ್ಕರ ಕಾಲಿನಲ್ಲಿ ಕುಳಿತಿದ್ದ. ಅದಕ್ಕೆ ಹತ್ತಿರವೇ ಇದ್ದ ಒಂದು ಮರದ ಹಿಂದೆ ಭಗತ್ ಸಿಂಗ್. ಇನ್ನೊಂದು ಮರದ ಹಿಂದೆ ರಾಜಗುರು. ಇಬ್ಬರೂ ಪಿಸ್ತೂಲು ಮತ್ತು ರಿವಾಲ್ವರ್​ಗಳೊಂದಿಗೆ ಸಂಸಿದ್ಧರಾಗಿ ಸೂಕ್ತ ಸಮಯಕ್ಕಾಗಿ ಕಾಯುತ್ತ ಕಟ್ಟೆಚ್ಚರದಿಂದ ನಿಂತಿದ್ದರು. ಸ್ಟೇಷನ್ನಿನಿಂದ ಒಬ್ಬ ಪೊಲೀಸ್ ಅಧಿಕಾರಿ ಸರಸರನೆ ನಡೆದು ಮೋಟರ್ ಬೈಕ್ ಬಳಿಗೆ ಬಂದ. ಅವನ ಹಿಂದೆ ಒಬ್ಬ ಪೊಲೀಸ್ ಪೇದೆ.

ಜಯಗೋಪಾಲ್ ಅವನೇ ಸ್ಕಾಟ್​ನೆಂದು ಭಾವಿಸಿದ. ಭಗತ್ ಸಿಂಗ್ ಮತ್ತು ರಾಜಗುರುಗಳಿಗೆ ಕೈ ಎತ್ತಿ ಸಂಜ್ಞೆ ಮಾಡಿದ. ಆ ಅಧಿಕಾರಿಯನ್ನು ನೋಡಿದ ಕೂಡಲೇ ಭಗತ್ ಸಿಂಗ್​ಗೆ ಜಯಗೋಪಾಲ್ ತಪ್ಪು ಮಾಡಿದ್ದಾನೆ ಎಂಬುದು ಅರಿವಾಯಿತು. ಏಕೆಂದರೆ ಆತ ಸ್ಕಾಟ್ ಆಗಿರಲಿಲ್ಲ. ಲಜ್​ಪತ್​ರಾಯರನ್ನು ಹಿಗ್ಗಾಮುಗ್ಗಾ ಲಾಠಿಯಿಂದ ಥಳಿಸಿದ್ದ ಪೊಲೀಸ್ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಜೆ.ಪಿ. ಸ್ಯಾಂಡರ್ಸ್ ಆಗಿದ್ದ.

ತಪ್ಪು ನಡೆದುಹೋಗಿತ್ತು. ಏನು ಮಾಡುವುದು. ಸ್ಯಾಂಡರ್ಸನೂ ಅಪರಾಧಿಯೇ. ಅವನೇ ಲಜ್​ಪತ್​ರಾಯರ ಸಾವಿಗೆ ಮುಖ್ಯ ಕಾರಣಕರ್ತ. ಅವನನ್ನು ಬಲಿ ಪಡೆಯುವುದೂ ಸೂಕ್ತವೇ.

ಜಯಗೋಪಾಲನ ಸೂಚನೆ ದೊರೆತ ಕೂಡಲೇ ಯೋಜನೆಯಂತೆ ಮೊದಲು ವೇಗವಾಗಿ ಮುಂದೆ ಬಂದವನು ರಾಜಗುರು. ಅವನನ್ನು ಹಿಂಬಾಲಿಸಿ ಒಂದೇ ಹೆಜ್ಜೆ ಹಿಂದೆ ಇದ್ದವನು ಭಗತ್ ಸಿಂಗ್. ಮೊದಲ ಗುಂಡು ಬಂದಿದ್ದು ರಾಜಗುರುವಿನ ರಿವಾಲ್ವರ್​ನಿಂದ. ಆಗ ಸಮಯ 4-37 ನಿಮಿಷ. ಗುಂಡು ಕುತ್ತಿಗೆಗೆ ಬಡಿಯಿತು. ಕಿಟಾರನೆ ಕಿರುಚುತ್ತ ಕೆಳಕ್ಕೆ ಬಿದ್ದ ಸ್ಯಾಂಡರ್ಸ್. ರಾಜಗುರುವಿನ ಹಿಂದೆಯೇ ಇದ್ದ ಭಗತ್ ಆಟೋಮ್ಯಾಟಿಕ್ ಪಿಸ್ತೂಲಿನಿಂದ ಒಂದರ ಹಿಂದೆ ಒಂದರಂತೆ ಆರು ಗುಂಡುಗಳನ್ನು ಹಾರಿಸಿದ. ಆರೂ ಸ್ಯಾಂಡರ್ಸ್​ನ ದೇಹವನ್ನು ಹೊಕ್ಕು ಆತ ಕೊನೆಯುಸಿರೆಳೆದ.

ಕೆಲಸ ಮುಗಿದಿತ್ತು. ಇಬ್ಬರೂ ಅಲ್ಲಿಂದ ಕಾಲ್ತೆಗೆದರು. ಈ ಕೃತ್ಯ ಗಮನಿಸಿದ ಟ್ರಾಫಿಕ್ ಇನ್ಸ್​ಪೆಕ್ಟರ್ ಫರ್ನ್ ಎಂಬುವನು ರಾಜಗುರುವನ್ನು ಅಟ್ಟಿಸಿಕೊಂಡು ಹೋದ. ಆದರೆ ರಾಜಗುರು ಒಂದು ಹೊಡೆತಕೊಟ್ಟು ಫರ್ನ್ ಕೆಳಕ್ಕೆ ಉರುಳುವಂತೆ ಮಾಡಿ ಓಟ ಮುಂದುವರಿಸಿದ. ಸ್ಯಾಂಡರ್ಸ್​ನ ಜತೆಗಿದ್ದ ಪೇದೆ ಚನ್ನನ್ ಸಿಂಗ್ ಭಗತ್​ನನ್ನು ಅಟ್ಟಿಸಿಕೊಂಡು ಓಡಿದ. ಇನ್ನೇನು ಅವನನ್ನು ಹಿಡಿಯಬೇಕು. ಎಲ್ಲಿಂದಲೋ ಕೂಗು ಕೇಳಿ ಬಂತು-‘ಖಬರ್​ದಾರ್’. ಚನ್ನನ್ ಗಕ್ಕನೆ ನಿಂತ. ಆ ಕೂಗು ಆಜಾದನದು. ಭಗತ್ ಸಿಂಗ್ ಮುಂದಕ್ಕೆ ಓಡಿದ. ಆಜಾದ್ ಚನ್ನನ್ ಸಿಂಗ್​ಗೆ ‘ಹಿಂದಕ್ಕೆ ಹೋಗು. ಹೋಗದಿದ್ದರೆ ಗುಂಡು ಹಾರಿಸುವೆ’ ಎಂದು ಕೂಗಿ ಹೇಳಿದ. ಆತ ಕೇಳಲಿಲ್ಲ. ಆಜಾದನ ರಿವಾಲ್ವರ್ ಗುಂಡು ಉಗುಳಿತ್ತು. ಚನ್ನನ್ ಸಿಂಗ್​ನ ಹಣೆಗೆ ಬಡಿದು ನೆಲಕ್ಕೆ ಬಿದ್ದ. ಮರುಕ್ಷಣವೇ ದಿವಂಗತನಾದ!

ದಿ ಗ್ರೇಟ್ ಎಸ್ಕೇಪ್: ಈಗ ಅವರ ಮುಂದಿದ್ದಿದು ಘಟನಾ ಸ್ಥಳದಿಂದ ಮಾಯವಾಗುವುದು. ಪೊಲೀಸ್ ಸ್ಟೇಷನ್ ಎದುರೇ ಇತ್ತು ದಯಾನಂದ ಆಂಗ್ಲೋ ವೇದಿಕ್ ಕಾಲೇಜ್. ಕಾಲೇಜಿನ ಹಿಂಭಾಗದಲ್ಲಿ ಮೊದಲೇ ಎರಡು ಬೈಸಿಕಲ್ಲುಗಳನ್ನು ರೆಡಿ ಮಾಡಿ ಇರಿಸಲಾಗಿತ್ತು. ಆಜಾದ್ ಓಡಿ ಹೋಗಿ ಸೈಕಲ್ ಹತ್ತಿಕೊಂಡು ಗಾಳಿವೇಗದಲ್ಲಿ ಪಲಾಯನ ಮಾಡಿದ. ರಾಜಗುರುವಿಗೆ ಸೈಕಲ್ ಓಡಿಸಲು ಬರುತ್ತಿರಲಿಲ್ಲ. ಭಗತ್ ಸಿಂಗ್ ಅವನನ್ನು ತನ್ನ ಸೈಕಲ್ ಬಾರ್ ಮೇಲೆ ಕೂರಿಸಿಕೊಂಡು ಡಬ್ಬಲ್ ರೈಡ್ ಮಾಡುತ್ತ ಮಂಗಮಾಯವಾದ.

ಲಾಹೋರ್ ಪೊಲೀಸ್ ಠಾಣೆಯಲ್ಲಿ ಗುಲ್ಲೋ ಗುಲ್ಲು! ಹಾಡುಹಗಲಿನಲ್ಲಿ ದೇಶದ ಅಪಮಾನಕ್ಕೆ ಪ್ರತೀಕಾರ ತೀರಿಸಿಕೊಂಡ ಧೀರರ ಗುಣಗಾನ. ಅದಕ್ಕೆ ಕಾರಣ ಲಾಹೋರ್​ನ ಕೆಲವೆಡೆಗಳಲ್ಲಿ ಗೋಡೆಗಳಿಗೆ ಅಂಟಿಸಿದ್ದ ಭಿತ್ತಿಪತ್ರಗಳು. ಅದರಲ್ಲಿ ಆ ಪ್ರಕರಣದ ರೂವಾರಿಗಳು ತಾವೇ ಎಂದು ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ವಿುಯ ಪ್ರಧಾನ ದಂಡನಾಯಕ ಆಜಾದ್ ‘ಬಲರಾಜ್’ ಎಂಬ ಹೆಸರಿನಲ್ಲಿ ಘೊಷಿಸಿದ್ದ. ಈಗ ಹಂತಕರು ಯಾರೆಂಬುದು ಪೊಲೀಸರಿಗೆ ನಿಚ್ಚಳವಾಗಿದ್ದರೂ ಅವರನ್ನು ಪತ್ತೆ ಹಚ್ಚುವುದಾದರೂ ಎಲ್ಲಿ? ಹೇಗೆ? ಇಡೀ ಲಾಹೋರ್ ಷಹರಿನ ಸುತ್ತ ಪೊಲೀಸ್ ಮತ್ತು ಗುಪ್ತಚರರ ಸರ್ಪಗಾವಲು. ಹಂತಕರ ಪೈಕಿ ಒಬ್ಬ ಕೇಶಧಾರಿ ಸಿಖ್ ಇದ್ದನೆಂಬ ಮಾಹಿತಿ ಆಧರಿಸಿ ಪೊಲೀಸರು 30-40 ಸಿಖ್ ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಈ ಸುದ್ದಿ ತಿಳಿದ ಕೂಡಲೇ ಕೇಶಧಾರಿ ಸಿಖ್ ತರುಣ ಭಗತ್ ಸಿಂಗ್ ಕ್ಷೌರ ಮಾಡಿಸಿಕೊಂಡು ನವಯುವಕನಂತೆ ತಯಾರಾದ. ಮುಂದಿನ ಪ್ರಶ್ನೆ- ಈ ಪೊಲೀಸ್ ಚಕ್ರವ್ಯೂಹವನ್ನು ಭೇದಿಸಿಕೊಂಡು ಲಾಹೋರ್​ನಿಂದ ಹೊರ ಹೋಗುವುದು ಹೇಗೆ?

ಲಾಹೋರಿನ ರಹಸ್ಯತಾಣದಲ್ಲಿ ಅಡಗಿಕೊಂಡಿದ್ದ ಆಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್ ಮುಂತಾದವರು ಅಲ್ಲಿ ಸುಮ್ಮನೆ ಕಾಲಯಾಪನೆ ಮಾಡುತ್ತಿರಲಿಲ್ಲ. ಲಾಹೋರ್ ತೊರೆಯುವುದಕ್ಕೆ ಉಪಾಯಗಳನ್ನು ಹುಡುಕುತ್ತಿದ್ದರು. ಅದಕ್ಕೊಂದು ದಾರಿಯೂ ಹೊಳೆಯಿತು.

ಭಗವತಿ ಚರಣನ ಹೆಂಡತಿ ದುರ್ಗಾದೇವಿ. ಅವರಿಗೊಂದು ಮಗು ಮೂರು ವರ್ಷದ ಶಚಿ. ಭಗತ್ ಸಿಂಗ್ ಒಬ್ಬ ವರಿಷ್ಠ ಅಧಿಕಾರಿಯಂತೆ ಸೂಟು ಬೂಟು ಧರಿಸಿ, ದುರ್ಗಾದೇವಿ ಅವನ ಹೆಂಡತಿಯಂತೆ, ಶಚಿ ಅವರಿಬ್ಬರ ಮಗುವಿನಂತೆ ನಟಿಸುತ್ತ ರೈಲು ಮೂಲಕ ಲಾಹೋರ್​ನಿಂದ ಹೊರಟು ಹೋಗುವುದೆಂದು ಯೋಜನೆ ತಯಾರಾಯಿತು. ಮತ್ತೆ ರಾಜಗುರು? ಅವನೇ ತಾನೇ ಸ್ಯಾಂಡರ್ಸ್ ಮೇಲೆ ಮೊದಲ ಗುಂಡು ಹಾರಿಸಿದವನು. ಈ ನಾಟಕದಲ್ಲಿ ಅವನಿಗೆ ಸಿಕ್ಕ ಪಾತ್ರ ಆ ಶ್ರೀಮಂತ ದಂಪತಿಯ ಸಾಮಾನುಗಳನ್ನು ಹೊರುವ ಹಮಾಲಿಯದು. ಮತ್ತೆ ಅವರ ನಾಯಕ ಹಾಗೂ ಇಡೀ ಘಟನಾವಳಿಯ ಸೂತ್ರಧಾರಿ ಆಜಾದ್​ನ ಪಲಾಯನ ಮಾರ್ಗ ಯಾವುದು? ಅವನು ಸಾಧುವಿನ ವೇಷ ಧರಿಸಿದ. ಕೃಷ್ಣಾಜಿನದ ಪೆಟ್ಟಿಗೆಯಲ್ಲಿ ಪಿಸ್ತೂಲು, ಬುಲೆಟ್ಟುಗಳು ಹಾಗೂ ಮ್ಯಾಗಜಿನ್ ಡಬ್ಬಿಗಳು!

ಭಗತ್ ಸಿಂಗ್​ನ ‘ಪತ್ನಿ’ ದುರ್ಗಾದೇವಿ!: ಭಗತ್ ಸಿಂಗ್​ನ ಹೆಂಡತಿಯಾಗಿ ನಟಿಸುವುದು ಆ ದಿನಗಳಲ್ಲಿ ಅಷ್ಟು ಸುಲಭವಿರಲಿಲ್ಲ. ಆದರೆ ಧೈರ್ಯದಿಂದ ಮುಂದೆ ಬಂದ ದುರ್ಗಾದೇವಿ ತನ್ನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದಳು. ಲಾಹೋರ್​ನಿಂದ ಸುರಕ್ಷಿತವಾಗಿ ಹೊರಕ್ಕೆ ಬಂದ ಭಗತ್ ಮತ್ತು ದುರ್ಗಾಭಾಭಿ ಲಖನೌಗೆ ಹೋಗಿ ಅಲ್ಲಿಂದ ರೈಲು ಬದಲಾಯಿಸಿ ಕಲ್ಕತ್ತೆ ಸೇರಿದರು.

ಭಗವತಿ ಚರಣ್ ಕಲ್ಕತ್ತೆಯ ಹೌರಾ ರೈಲು ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದ. ಅವನಿಗೆ ತನ್ನ ಹೆಂಡತಿ, ಮಗನನ್ನು ಕಂಡು ಸಂತೋಷವಾಗಿತ್ತು. ಭಗತ್ ಸಿಂಗ್​ನ ಹೊಸ ರೂಪ ಕಂಡು ಅಚ್ಚರಿಯಾಗಿತ್ತು. ಭಗತ್ ಹೋಟೆಲಿನಲ್ಲಿ ರೂಮು ಮಾಡಿದ. ಅದರ ಮೇಲೂ ಪೊಲೀಸರ ದಾಳಿಯಾಯಿತಾದರೂ ಅವನು ಜಾಣತನದಿಂದ ಜಾರಿಕೊಂಡ. ಆಗ ಕಲ್ಕತ್ತೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ಹೋಗಿ ನಿರ್ಭೀತಿಯಿಂದ ಅಲ್ಲೆಲ್ಲ ಓಡಾಡಿ ಅನೇಕರನ್ನು ಮಾತನಾಡಿಸಿದ. ಕಲ್ಕತ್ತೆಯಲ್ಲಿ ಅವನ ಪಾಲಿನ ಇನ್ನೂ ಒಂದು ಕೆಲಸವಿತ್ತು. ಅದೇ ಒಬ್ಬ ಬಾಂಬ್ ತಜ್ಞನ ಹುಡುಕಾಟದ ಕೆಲಸ. ಅವನು ಬಂಗಾಳದ ಹಲವರು ಕ್ರಾಂತಿಕಾರಿಗಳನ್ನು ಭೇಟಿ ಮಾಡಿ ಕ್ರಾಂತಿ ಚಟುವಟಿಕೆಗಳ ಕುರಿತು ಮಾತುಕತೆ ನಡೆಸಿದ. ಈ ಹುಡುಕಾಟದಲ್ಲಿ ದೊರೆತವನೇ ಯತೀಂದ್ರ ನಾಥ್ ದಾಸ್. ಅವನು ಅಪ್ರತಿಮ ಬಾಂಬ್ ತಜ್ಞನಾಗಿದ್ದ. ಆದರೆ ಅವನ ಅನುಶೀಲನ ಸಮಿತಿಯ ಅನುಮತಿ ಇಲ್ಲದೆ ಎಚ್.ಎಸ್.ಆರ್.ಎ ಜೊತೆ ಸೇರುವಂತಿರಲಿಲ್ಲ. ಭಗತ್ ಸಿಂಗ್​ನ ಮನವೊಲಿಕೆ ಬಳಿಕ ತಾನು ಅವರ ಜೊತೆ ಸೇರಿ ಬಾಂಬ್ ತಯಾರಿಕೆಯನ್ನು ಕಲಿಸುವುದಾಗಿ ಮಾತುಕೊಟ್ಟ. ಭಗತ್ ಸಿಂಗ್​ನ ಈ ಒಡಂಬಡಿಕೆ ಮುಂದಿನ ಒಂದು ಮಹತ್ವದ ಘಟನೆಗೆ ನಾಂದಿ ಹಾಡಿತು.

ಇನ್ನು ರಾಜಗುರು ಮತ್ತು ಸುಖದೇವರ ಪರಿಸ್ಥಿತಿ ಏನಾಯಿತು ಎಂಬ ಪ್ರಶ್ನೆ. ಸುಖದೇವ್ ಸ್ಯಾಂಡರ್ಸ್ ವಧಾ ಪ್ರಕರಣದಲ್ಲಿ ಹಿನ್ನೆಲೆಯಲ್ಲಿದ್ದುದರಿಂದ ಅವನು ಲಾಹೋರ್​ನಲ್ಲೇ ತಲೆಮರೆಸಿಕೊಂಡಿರಲು ಸಾಧ್ಯವಾಯಿತು.

ರಾಜಗುರುವಿನದು ಭಿನ್ನ ಪರಿಸ್ಥಿತಿ. ಅವನು ಭಗತ್ ಸಿಂಗ್-ದುರ್ಗಾವತಿ ಜತೆಯಲ್ಲಿ ರೈಲು ಹತ್ತಿದವನು ಕಾನ್​ಪುರದಲ್ಲಿ ಇಳಿದುಬಿಟ್ಟ. ನಂತರ ಅವನೂ ಕಲ್ಕತ್ತೆಗೆ ಹೋಗಿ ಭಗತ್ ಜೊತೆಗೂಡಿ ಕಾಂಗ್ರೆಸ್ ಅಧಿವೇಶನದಲ್ಲಿ ಸುತ್ತಾಡಿದ. ಅಲ್ಲಿ ಅವನು ಸ್ವಾತಂತ್ರ್ಯವೀರ ಸಾವರ್ಕರ್ ಅಣ್ಣ ಕ್ರಾಂತಿಕಾರಿ ಬಾಬಾರಾವ್ ಸಾವರ್ಕರ್ ಹಾಗೂ ಅವರ ಜೊತೆಯಲ್ಲಿದ್ದ ಡಾ. ಕೇಶವ ಬಲಿರಾಮ ಹೆಡ್ಗೆವಾರರನ್ನು ಭೇಟಿ ಮಾಡಿದ. ಹೆಡ್ಗೆವಾರ್ ರಾಜಗುರುವಿಗೆ ಅಪರಿಚಿತರೇನಲ್ಲ.

ವೇದಾಧ್ಯಯನದ ಸಲುವಾಗಿ ಕಾಶಿಗೆ ಹೋಗುವ ಮೊದಲು ನಾಗಪುರದ ಬೋಂಸ್ಲೆ ವೇದಶಾಲೆಯಲ್ಲಿ ಕೆಲ ಸಮಯ ಅಧ್ಯಯನ ಮಾಡುತ್ತಿದ್ದ. ಆಗ ಹೆಡ್ಗೆವಾರ್​ರ ಪರಿಚಯವೂ ಆಗಿ ಅವರು ಸ್ಥಾಪಿಸಿದ್ದ ಆರೆಸ್ಸೆಸ್​ನ ಮೋಹಿತೆವಾಡೆ ಎಂಬಲ್ಲಿನ ಅದರ ಶಾಖೆಗೆ ಹೋಗುತ್ತಿದ್ದ. ಒಮ್ಮೆ ಭಗತ್ ಸಿಂಗನೂ ನಾಗಪುರಕ್ಕೆ ಹೋಗಿ ಅಲ್ಲಿ ಹಿಂದೂ ಯುವಕರ ಸಂಘಟನಾ ಕಾರ್ಯದಲ್ಲಿ ನಿರತರಾಗಿದ್ದ ಹೆಡ್ಗೆವಾರರನ್ನು ಸಂಧಿಸಿ ದೇಶದ ಆಗುಹೋಗುಗಳ ಕುರಿತು ರ್ಚಚಿಸಿದ್ದನೆಂದು ಹೆಡ್ಗೆವಾರರ ಜೀವನ ಚರಿತ್ರೆ ಹೇಳುತ್ತದೆ.

(ಮುಂದುವರಿಯುವುದು)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *