ಸ್ವಾತಂತ್ರ್ಯ ಆಂದೋಲನಕ್ಕೆ ಶಕ್ತಿ ತುಂಬಿದ ಜಲಿಯನ್​ವಾಲಾ ಬಾಗ್

ಅಂದು ಬೈಶಾಖಿ (ವೈಶಾಖ) ಹಬ್ಬ (1919 ಏಪ್ರಿಲ್ 13). ಅದು ಸಿಖ್ ಮತಸ್ಥರಿಗೆ ಸಂಭ್ರಮದ ದಿನ. ಅದು ಅವರ ನೂತನ ವರ್ಷಾರಂಭವೂ ಹೌದು. ಅದೇ ದಿವಸ ಸಿಖ್ಖರ ಹತ್ತನೆ ಗುರು ಗೋವಿಂದ ಸಿಂಹರು ಖಾಲ್ಸಾ ಪಂಥ ಎಂಬ ಯೋಧಗಣವನ್ನು ನಿರ್ವಿುಸಿದ್ದು. ಗುರು ತೇಗ ಬಹದ್ದೂರ್ ಇಸ್ಲಾಮ್ೆ ಮತಾಂತರವಾಗುವುದಿಲ್ಲವೆಂದು ತಿಳಿಸಿದ ಕಾರಣ ಮತಾಂಧ ಮೊಗಲ್ ದೊರೆ ಔರಂಗ್​ಜೇಬ್ ಅವರನ್ನು ಚಿತ್ರಹಿಂಸೆ ಮಾಡಿ ಕೊಲ್ಲಿಸಿದಾಗ ಸಿಖ್ಖರಿಗೆ ಕ್ಷಾತ್ರದ ಹಾದಿ ಹಿಡಿಯುವುದು ಅನಿವಾರ್ಯವೆಂದು ನಿರ್ಧರಿಸಿ ಗುರು ಗೋವಿಂದ ಸಿಂಹರು ಖಾಲ್ಸಾ ಯೋಧಗಣವನ್ನು ಹುಟ್ಟು ಹಾಕಿದ ಆ ದಿವಸ ಸಿಖ್ಖರಿಗೆ ಅತ್ಯಂತ ಪವಿತ್ರವಾದ ದಿವಸ.

ಅಮೃತಸರದ ಹಂಗಾಮಿ ಸೈನಿಕ ಕಮಾಂಡರ್ ಸ್ಥಾನದಲ್ಲಿದ್ದವನು ಬ್ರಿಗೇಡಿಯರ ರೀಗ್ನಾಲ್ಡ್ ಡಯರ್, ಅಂದು ಬೆಳಗ್ಗೆಯೇ ಅವನು ನಗರದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿ, ‘ಎಲ್ಲ ಸಭೆ, ಮೆರವಣಿಗೆಗಳನ್ನು ನಿಷೇಧಿಸಲಾಗಿದೆ’ ಎಂದು ಘೊಷಿಸುತ್ತ ಸ್ವತಃ ಅಮೃತಸರದ ಬೀದಿಗಳಲ್ಲಿ ಸುತ್ತಾಡಿದ. ಆದರೆ ಅಮೃತಸರದ ಜನ ಅದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಈ ನಡುವೆ ನಗರದ ಎಲ್ಲೆಡೆ ಹಬ್ಬಿಕೊಂಡಿದ್ದ ಗುಪ್ತಚರ ಜಾಲ ಸಂಜೆಯ ಸಭೆಯ ವಿಷಯವನ್ನು ಮಧ್ಯಾಹ್ನ ಹನ್ನೆರಡು ಮುಕ್ಕಾಲಿಗೆ ಡಯರ್​ಗೆ ತಿಳಿಸಿತು. ಒಂದೂವರೆಯ ವೇಳೆಗೆ ಡಯರ್ ಸಭೆಯ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಣಯ ತಳೆದು ತನ್ನ ಸೈನಿಕ ಪಡೆಗಳಿಗೆ ಸಿದ್ಧರಿರುವಂತೆ ಆದೇಶ ಕಳಿಸಿದ.

ಜಲಿಯನ್​ವಾಲಾ ಬಾಗ್ ಅಮೃತಸರದ ಸಿಖ್ಖರ ಪವಿತ್ರ ಸ್ವರ್ಣಮಂದಿರದ ಸನಿಹದ ಸುಮಾರು ಆರೇಳು ಎಕರೆಯ ವಿಶಾಲ ಮೈದಾನ. ಅದರ ಸುತ್ತಲೂ ಹತ್ತು ಅಡಿ ಎತ್ತರದ ಗೋಡೆಗಳು. ಮೈದಾನಕ್ಕೆ ಐದು ಕಿರಿದಾದ ದ್ವಾರಗಳಿದ್ದರೂ ಎಲ್ಲವನ್ನು ಬೀಗ ಹಾಕಿ ಮುಚ್ಚಲಾಗಿತ್ತು. ಒಂದು ಮುಖ್ಯವಾದ ದೊಡ್ಡ ಗೇಟೂ ಇತ್ತು.

ಅಂದು ವೈಶಾಖ ಪರ್ವವಾದುದರಿಂದ ಸುತ್ತಮುತ್ತಲ ಹಳ್ಳಿಗಳಿಂದಲೂ ಸಾವಿರಾರು ಸಿಖ್ಖರು ಸ್ವರ್ಣಮಂದಿರ ದರ್ಶನಕ್ಕೆ ಬಂದಿದ್ದರು. ಆ ಕಾರಣ ಜನಜಂಗುಳಿ ಹೆಚ್ಚಿತ್ತು. ಹೀಗಾಗಿ ಜನಪ್ರವಾಹ ಜಲಿಯನ್​ವಾಲಾ ಬಾಗ್ ಕಡೆ ಹರಿದಿತ್ತು. ಹೀಗೆ ನಾಲ್ಕರ ವೇಳೆಗೆ ಜಲಿಯನ್​ವಾಲಾ ಬಾಗ್​ನಲ್ಲಿ ಜನಸಂದಣಿ ತುಂಬಿ ತುಳುಕುತ್ತಿತ್ತು. ಡಯರ್ ಒಂದು ವಿಮಾನದ ಮೂಲಕ ಅಲ್ಲಿ ಸೇರಿರುವ ಜನರ ಸಂಖ್ಯೆಯನ್ನು ಅಂದಾಜಿಸಿದ. ಹಂಟರ್ ಸಮಿತಿ ಪ್ರಕಾರ ಅಲ್ಲಿ ನೆರೆದಿದ್ದವರ ಸಂಖ್ಯೆ ಹತ್ತಿರ ಹತ್ತಿರ ಇಪ್ಪತ್ತು ಸಾವಿರ! ಜನ ನೆರೆಯುತ್ತಿದ್ದದರ ಕ್ಷಣಕ್ಷಣದ ವರದಿ ತಲುಪುತ್ತಿದ್ದರೂ ಡಯರ್ ಆಗಲಿ, ಅಮೃತಸರದ ಡೆಪ್ಯೂಟಿ ಕಮೀಷನರ್ ಇರ್ವಿಂಗ್ ಆಗಲಿ ಜನರನ್ನು ಎಚ್ಚರಿಸುವ ಅಥವಾ ಚದುರಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಹೀಗಾಗಿ ಸಭೆಯ ಸಂಯೋಜಕರಿಗಾಗಲಿ, ಸಭಿಕರಿಗಾಗಲಿ ಮುಂದೆ ನಡೆಯುವುದರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಎಲ್ಲರೂ ಸಭೆಯನ್ನು ನಡೆಸುವುದರ ಕಡೆ ಗಮನ ಹರಿಸಿದ್ದರು.

ಬೈಶಾಖಿಯ ಆ ಸಂಜೆ…: ಸಂಜೆ 4-30ಕ್ಕೆ ಸರಿಯಾಗಿ ಸಂಯೋಜಕರು ಸಭೆಯನ್ನು ಪ್ರಾರಂಭಿಸಿದರು. ತೊಂಬತ್ತು ಮೆಷಿನ್​ಗನ್​ಗಳಿಂದ ಸುಸಜ್ಜಿತವಾಗಿದ್ದ ಎರಡು ಮಿಲಿಟರಿ ವಾಹನಗಳು, ನಲವತ್ತು ಖುಕ್ರಿ (ಘೂರ್ಖಾ ಕತ್ತಿ) ಧರಿಸಿದ್ದ ಘೂರ್ಖಾ ಸೈನಿಕರು, ಇಪ್ಪತೆôದು ಬಂದೂಕುಧಾರಿ ಬಲೂಚಿ ಸೈನಿಕರು, ಇಪ್ಪತೆôದು ಬಂದೂಕುಧಾರಿ ಘೂರ್ಖಾಗಳ ಪಡೆಯೊಂದಿಗೆ ಬ್ರಿಗೇಡಿಯರ್ ಜನರಲ್ ಡಯರ್ ಅಲ್ಲಿಗೆ ಆಗಮಿಸಿದ. ಇದ್ದಕ್ಕಿದ್ದಂತೆ ಎರಡು-ಮೂರು ನಿಮಿಷಗಳಲ್ಲಿ ಮೈದಾನವನ್ನು ತೆರವು ಮಾಡಬೇಕೆಂದು ಘೊಷಣೆ ಮಾಡಿದ. ಇಪ್ಪತ್ತು ಸಾವಿರ ಮಂದಿ ದಟ್ಟವಾಗಿ ನೆರೆದಿದ್ದ ಸಭೆ. ಹೊರ ಹೋಗಲು ನಾಲ್ಕೈದು ಗೇಟುಗಳಿದ್ದರೂ ಎಲ್ಲವೂ ಬೀಗ ಜಡಿದು ಬಂದ್! ಒಂದೇ ಒಂದು ಕಿರುದ್ವಾರದ ಮೂಲಕವೇ ಹೊರ ಹೋಗಬೇಕು. ಆ ಕಿರುದ್ವಾರದಲ್ಲಿ ಎಷ್ಟು ಜನ ಹೊರ ಹೋಗಲು ಸಾಧ್ಯ? ಒಂದು ದೊಡ್ಡಗೇಟ್ ಇತ್ತಾದರೂ ಅಲ್ಲಿ ಶಸ್ತ್ರಧಾರಿ ಸೈನಿಕರು ಸಾಲುಗಟ್ಟಿ ನಿಂತಿದ್ದರು!

ಎರಡು-ಮೂರು ನಿಮಿಷ ಕಳೆಯುತ್ತಿದ್ದಂತೆ ದುಷ್ಟ ಡಯರ್ ಗೋಲಿಬಾರ್ ಆಜ್ಞೆ ಕೊಟ್ಟೇ ಬಿಟ್ಟ! ಶುರವಾಯಿತು ನೋಡಿ ಗುಂಡುಗಳ ಸುರಿಮಳೆ! ಬಂದೂಕುಗಳಿಂದ ಒಂದೇ ಸಮ ಗುಂಡುಗಳ ಹಾರಾಟ!

1600 ಸುತ್ತು ಗುಂಡು ಹಾರಿಸಲಾಗಿತ್ತು! ಹಂಟರ್ ಸಮಿತಿ ಪ್ರಕಾರ 379 ಸಾವು. 1500 ಜನ ಗಾಯಗೊಂಡರು. ಪ್ರಾಣಭಯದಿಂದ ಹೊರಕ್ಕೆ ಹೋಗುವ ಪ್ರಯತ್ನದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಸತ್ತವರು ಎಷ್ಟೋ! ಸತ್ತವರ ಪೈಕಿ ಬಾಲಕ-ಬಾಲಕಿಯರು 42 ಮಂದಿ. ಒಂದು 7 ತಿಂಗಳ ಮಗುವೂ ಬಲಿಯಾಗಿತ್ತು!ಮೈದಾನದಲ್ಲೊಂದು ಬಾವಿ ಇತ್ತು. ಓಡುತ್ತಿದ್ದ ಜನ ಗಾಬರಿಯಿಂದ ಆ ಬಾವಿಯಲ್ಲಿ ಧುಮುಕಿದರು. ಒಬ್ಬರ ಹಿಂದೆ ಒಬ್ಬರಂತೆ ಬಾವಿಯಲ್ಲಿ ಬಿದ್ದು ಸತ್ತವರ ಸಂಖ್ಯೆ 120! ಅವರಲ್ಲಿ ಮುದುಕರು, ಹೆಂಗಸರು, ಗಂಡಸರು, ಮಕ್ಕಳ ಶವಗಳೂ ದೊರೆತವು. ಆ ಶವಗಳನ್ನು ಬಾವಿಯಿಂದ ಹೊರತೆಗೆಯ ಬೇಕಾದರೆ ಅದೆಷ್ಟು ಕಷ್ಟವಾಯಿತೋ!

ಜಲಿಯನ್​ವಾಲಾ ಬಾಗ್ ದುರ್ಘಟನೆ ಆಕಸ್ಮಿಕವಾಗಿ ಆಗಿದ್ದಲ್ಲ. ಹೇಡಿಗಳು, ದುಷ್ಟರು, ಅಮಾನುಷರೂ ಆದ ಬ್ರಿಟಿಷರು ಭಾರತೀಯರ ವಿರುದ್ಧ ದೃಢನಿರ್ಧಾರ ಮಾಡಿ ಸೇಡು ತೀರಿಸಿಕೊಂಡ ವಿಧಾನ ಇದು.

ಜಲಿಯನ್​ವಾಲಾ ಬಾಗ್ ನಮ್ಮ ಸ್ವಾತಂತ್ರ್ಯ ಆಂದೋಲನಕ್ಕೆ ಅಪಾರ ಇಂಧನ ಒದಗಿಸಿದ ಘಟನೆ. ಇದರಿಂದ ಭಾರತೀಯ ಯುವಜನಾಂಗದಲ್ಲಿ ಸುಪ್ತವಾಗಿದ್ದ ಕ್ಷಾತ್ರತೇಜ ಹೆಚ್ಚಿನ ಪ್ರಮಾಣದಲ್ಲಿ ಹೊರ ಹೊಮ್ಮಲಾರಂಭಿಸಿತು. ಇದು ಅಸಹಕಾರ ಆಂದೋಲನಕ್ಕೆ ದಾರಿ ಮಾಡಿತು. ‘ಹಿಂದೂಸ್ಥಾನ್ ಪ್ರಜಾತಾಂತ್ರಿಕ ಸಂಘ’ ಮತ್ತು ‘ಹಿಂದೂಸ್ಥಾನ್ ಸೋಷಲಿಸ್ಟಿಕ್ ರಿಪಬ್ಲಿಕನ್ ಆರ್ವಿು’ಗಳ ಹುಟ್ಟಿಗೆ ಕಾರಣವಾಯಿತು. ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎಂಬ ಧೋರಣೆಯ ಕಾಂಗ್ರೆಸ್​ನಲ್ಲಿ ಸ್ಪಷ್ಟವಾಗಿ ಸ್ವರಾಜ್ಯದ ಗುರಿಯನ್ನು ಹೊಂದಲು ಇಂಬು ನೀಡಿದ ಘಟನೆ ಇದಾಯಿತು.

ಇಷ್ಟೆಲ್ಲ ಅನಾಹುತದ ನಂತರ ನರಾಧಮ ಬ್ರಿಗೇಡಿಯರ್ ಡಯರ್ ತನ್ನ ಮೇಲಿನವರಿಗೆ ‘ಕ್ರಾಂತಿಕಾರಿಗಳ ಸೈನ್ಯ ಒಂದು ಆಕ್ರಮಿಸಿದುದರಿಂದ ನಾನು ಪ್ರತಿಕ್ರಿಯಿಸಬೇಕಾಗಿ ಬಂತು’ ಎಂದು ಹೇಳಿದಾಗ ಹಿರಿಯ ಅಧಿಕಾರಿ ಮೇಜರ್ ಜನರಲ್ ವಿಲಿಯಂ ಬೇನಾನ್ ‘ನೀನು ಮಾಡಿದ್ದು ಸರಿಯಾಗಿದೆ. ಇದಕ್ಕೆ ಲೆಫ್ಟಿನೆಂಟ್ ಗವರ್ನರ್​ರ ಸಂಪೂರ್ಣ ಒಪ್ಪಿಗೆ ಇದೆ’ ಎನ್ನುತ್ತಾನೆ.

ಹಂಟರ್ ಸಮಿತಿಯ ಮುಂದೆ ಹೇಳಿಕೆ ನೀಡುತ್ತ ಡಯರ್ ಉಚ್ಚರಿಸಿದ ಮಾತುಗಳು ಅವನ ಸೊಕ್ಕನ್ನು ತೋರಿಸುತ್ತದೆ- ‘ನಾನು ಜಲಿಯನ್​ವಾಲಾ ಬಾಗ್​ನಲ್ಲಿ ಸೇರಿದ್ದ ಜನರ ಗುಂಪಿನ ಮೇಲೆ ಉದ್ದೇಶಪೂರ್ವಕವಾಗಿಯೇ ಗೋಲಿಬಾರು ನಡೆಸಲು ಹೋಗಿದ್ದುಂಟು. ನಾನು ಜನಸಂದಣಿಯನ್ನು ಚದುರಿಸಬಹುದಿತ್ತು. ಆದರೆ ಆ ಜನ ಮತ್ತೆ ಹಿಂದಕ್ಕೆ ಬಂದು ನನ್ನನ್ನು ನೋಡಿ ನಗುತ್ತಿದ್ದರು. ಹಾಗಾಗಿದ್ದರೆ ನಾನೊಬ್ಬ ಮೂರ್ಖನೆನಿಸುತ್ತಿದ್ದೆ. ಆದ್ದರಿಂದ ಅವರ ಬಾಯಿ ಮುಚ್ಚಿಸಲು ಗೋಲಿಬಾರು ಮಾಡಿದೆ. ಅಲ್ಲಿ ಸೇರಿದ್ದವರೆಲ್ಲ ಕ್ರಾಂತಿಕಾರಿಗಳು. ನನ್ನನ್ನೂ ನನ್ನ ಸೇನಾಪಡೆಯನ್ನೂ ಬೇರೆ ಬೇರೆ ಮಾಡಿ ಆಕ್ರಮಿಸುವ ಉದ್ದೇಶವಿದ್ದವರೆಂದು ನನ್ನ ನಂಬಿಕೆ. ಆದ್ದರಿಂದ ಅವರ ಮೇಲೆ ಗುಂಡು ಹಾರಿಸುವುದು ನನ್ನ ಕರ್ತವ್ಯವೆಂದು ಭಾವಿಸಿದೆ’.

ಇನ್ನೊಂದು ಪ್ರಶ್ನೆಗೆ ಬ್ರಿಗೇಡಿಯರ್ ಡಯರ್, ‘ನಾನು ಗೋಲಿಬಾರು ಮಾಡಿದ್ದು ಜನರನ್ನು ಹೆದರಿಸಿ ಓಡಿಸುವ ಉದ್ದೇಶ ಮಾತ್ರದಿಂದಲ್ಲ. ನಾನು ಅವರಿಗೆ ಸರಿಯಾದ ಬುದ್ಧಿ ಕಲಿಸಬೇಕಿತ್ತು. ಆಗ ತೀವ್ರವಾದ ಗುಂಡಿನ ಸುರಿಮಳೆ ಮಾಡಬೇಕೆಂಬುದು ನನ್ನ ಖಚಿತ ಅಭಿಪ್ರಾಯವಾಗಿತ್ತು’ ಎಂದು ನಿರ್ಲಜ್ಜನಾಗಿ ನುಡಿದ.

ಮೊದಲು ಕಾಂಗ್ರೆಸ್ ಒಂದು ಸಮಿತಿ ನೇಮಿಸಿ ಜಲಿಯನ್​ವಾಲಾ ಬಾಗ್ ಕಾಂಡದ ಅಧ್ಯಯನ ನಡೆಸಿತು. ಆನಂತರ ಬ್ರಿಟಿಷ್ ಸರ್ಕಾರ ಮಾಜಿ ಸಾಲಿಸಿಟರ್ ಜನರಲ್ ಲಾರ್ಡ್ ವಿಲಿಯಂ ಹಂಟರ್ ಅಧ್ಯಕ್ಷತೆಯಲ್ಲಿ ಏಳು ಸದಸ್ಯರ ಸಮಿತಿ ನೇಮಿಸಿತು. ನಾಲ್ವರು ಇಂಗ್ಲಿಷರಿದ್ದ ಆ ಸಮಿತಿಯಲ್ಲಿ ಬಿರುನ್​ಲಾಲ್ ಸೆಟ್ಲ್​ವಾಡ್, ಲಾಲಾ ಜಗತ್​ನಾರಾಯಣ್ ಮತ್ತು ಸರ್ದಾರ್ ಸುಲ್ತಾನ ಅಹಮದ್ ಖಾನ್ ಎಂಬ ಮೂವರು ಭಾರತೀಯ ಸದಸ್ಯರಿದ್ದರು. ಹಂಟರ್ ಸಮಿತಿ ತನ್ನ ವರದಿ ಪ್ರಕಟಿಸುವ ಮೊದಲೇ ಕಾಂಗ್ರೆಸ್ ತನ್ನ ವರದಿ ಪ್ರಕಟಿಸಿ ಡಯರ್​ನ ಕೃತ್ಯ ಅಮಾನವೀಯವೆಂದೂ ಪಂಜಾಬ್​ನಲ್ಲಿ ಸೈನಿಕ ಆಡಳಿತ ಪ್ರವೇಶ ಪಡಿಸಿದ್ದು ಅನಾವಶ್ಯಕವೆಂದೂ ಹೇಳಿತು.

ಹಂಟರ್ ಸಮಿತಿ ಬ್ರಿಗೇಡಿಯರ್ ಡಯರ್​ನ ಕ್ರಮವನ್ನು ಅಲ್ಲಲ್ಲಿ ಖಂಡಿಸಿತಾದರೂ ಪಂಜಾಬ್​ನಲ್ಲಿ ಸೈನಿಕ ಆಡಳಿತ ಜಾರಿಯಾದುದನ್ನು ಅದು ಸಮರ್ಥಿಸಿತು. ಗಾಂಧೀಜಿ ಅನುಸರಿಸಿದ ‘ಸತ್ಯಾಗ್ರಹ’ ಕಾರ್ಯಕ್ರಮವು ಪಂಜಾಬಿನ ಸ್ಥಿತಿ ಹದಗೆಡಲು ಭಾಗಶಃ ಕಾರಣವೆಂದು ಉಲ್ಲೇಖಿಸಿತು.

ಒಟ್ಟಾರೆ ಫಲಶ್ರುತಿ ಎಂದರೆ ಡಯರ್​ನನ್ನು ಅಧಿಕಾರ ಲಾಂಛನಗಳಿಂದ ಮುಕ್ತಗೊಳಿಸಿ ಇಂಗ್ಲೆಂಡಿಗೆ ಹಿಂದಕ್ಕೆ ಕಳಿಸಲಾಯಿತು. ಅಲ್ಲಿ ಅವನಿಗೆ ಹಾರತುರಾಯಿಗಳ ವಿಜೃಂಭಣೆಯ ಸ್ವಾಗತ ದೊರೆಯಿತು. ಆದರೆ ಭಾರತದಲ್ಲಿ ಮಾತ್ರ ದೇಶಾದ್ಯಂತ ಆಕ್ರೋಶದ ಜ್ವಾಲೆಗಳೇ ಹಬ್ಬಿಕೊಂಡವು. ರವೀಂದ್ರನಾಥ್ ಟಾಗೋರರು ತಮಗೆ ಬ್ರಿಟಿಷ್ ಸರ್ಕಾರ ನೀಡಿದ ‘ಸರ್’ ಎಂಬ ಖಿಲ್ಲತ್ತನ್ನು ಹಿಂದಿರುಗಿಸುತ್ತ ಅಂದಿನ ವೈಸ್ರಾಯ್ ಲಾರ್ಡ್ ಚೆಮ್್ಸ ಫರ್ಡ್​ಗೆ ಸುದೀರ್ಘ ಪತ್ರ ಬರೆದರು.

ಜಲಿಯನ್​ವಾಲಾ ಬಾಗ್ ಹತ್ಯಾಕಾಂಡ ಒಂದು ಹೊಸ ಹೋರಾಟದ ಪರ್ವಕ್ಕೆ ನಾಂದಿ ಹಾಡಿತು. ಚಂದ್ರಶೇಖರ್ ಆಜಾದ್, ರಾಮ್್ರಸಾದ್ ಬಿಸ್ಮಿಲ್, ಅಶ್ಛಾಖ್ ಉಲ್ಲಾಖಾನ್, ಭಗತ್ ಸಿಂಗ್ ಮುಂತಾದ ಸಹಸ್ರಾರು ಮಂದಿ ಸ್ವಾತಂತ್ರ್ಯ ಯೋಧರನ್ನು ಹೋರಾಟದ ಮುಂಚೂಣಿಗೆ ತಂದಿತು.

ಪ್ರತೀಕಾರ: 1919ರ ಜಲಿಯನ್​ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಬ್ರಿಗೇಡಿಯರ್ ಡಯರ್ ಆದರೂ ಅದರ ಮಸ್ತಿಷ್ಕ ಗವರ್ನರ್ ಮೈಕೆಲ್ ‘ಓ’ ಡ್ವೈರ್. ಇಪ್ಪತ್ತು ವರ್ಷಗಳ ನಂತರ 1940 ಮಾರ್ಚ್ 13ರಂದು ಲಂಡನ್ನಿನ ಕ್ಯಾಕ್ಸ್​ಟನ್ ಹಾಲ್​ನಲ್ಲಿ (ಮದನ್​ಲಾಲ್ ಧಿಂಗ್ರಾ ಕರ್ಜನ್ ವಾಯಲಿಯನ್ನು ಸಂಹರಿಸಿದ ಸ್ಥಳ) ಊಧಮ್ ಸಿಂಗ್ ಎಂಬ ಕ್ರಾಂತಿಯೋಧ ಓಡ್ವೈರ್​ನನ್ನು ಗುಂಡಿಟ್ಟು ಕೊಂದು ಜಲಿಯನ್​ವಾಲಾ ಬಾಗ್ ನರಮೇಧಕ್ಕೆ ಸೇಡು ತೀರಿಸಿಕೊಂಡ.

ನಿಖರ ಸಂಖ್ಯೆ ಇಲ್ಲ

ಜಲಿಯನ್​ವಾಲಾ ಬಾಗ್ ಹತ್ಯಾಕಾಂಡದಲ್ಲಿ ಮೃತಪಟ್ಟವರ ಸಂಖ್ಯೆ ಸ್ಪಷ್ಟವಾಗಿಲ್ಲ. ಆಗಿನ ಬ್ರಿಟಿಷ್ ಸರ್ಕಾರ ವಾಸ್ತವವನ್ನು ಅದುಮಿಡಲು ಸುಳ್ಳು ಸಂಖ್ಯೆಗಳನ್ನು ಹರಡಿತು.

ಹಂಟರ್ ಸಮಿತಿ ಪ್ರಕಾರ 379 ಜನರು ಮೃತಪಟ್ಟು, 1500 ಜನ ಗಾಯಗೊಂಡರು. ಸ್ವಾಮಿ ಶ್ರದ್ಧಾನಂದರು ಗಾಂಧೀಜಿಗೆ ಬರೆದ ಪತ್ರದಲ್ಲಿ ಸತ್ತವರ ಸಂಖ್ಯೆ 1500 ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸಮಿತಿ ಸಾವಿನ ಸಂಖ್ಯೆ 1000 ಎಂದು ದಾಖಲಿಸಿತು.

(ಲೇಖಕರು ಹಿರಿಯ ಪತ್ರಕರ್ತರು)