More

    ಮಕ್ಕಳಲ್ಲಿ ನಾಯಕತ್ವ ಲಕ್ಷಣಗಳನ್ನು ಬೆಳೆಸುವ ಬಗೆ

    ಇನ್ನೂ ಓದುತ್ತಿರುವ ಮಕ್ಕಳು ಎಂದು ಅವರನ್ನು ಹೂವಿನಲ್ಲಿಟ್ಟು ಬಹಳ ಮುತುವರ್ಜಿ ತೋರಿಸುವ ಅಗತ್ಯವಿಲ್ಲ. ಕೆಲಸದಾಳು ಬರದಿದ್ದಾಗ ಕೆಲವು ಮನೆಕೆಲಸಗಳನ್ನು ಅವರಿಂದ ಮಾಡಿಸಿ. ಸಣ್ಣಪುಟ್ಟ ಎಲೆಕ್ಟ್ರಿಕ್ ರಿಪೇರಿ, ಷೂ ಪಾಲೀಷ್ ಮುಂತಾದ ಕೆಲಸಗಳು ಮಕ್ಕಳಲ್ಲಿ ಸ್ವಾವಲಂಬನೆ ಪ್ರಜ್ಞೆ ಬೆಳೆಸುತ್ತವೆ.

    ಸ್ವಯಂ ನಿರ್ಧಾರದ ಅಧಿಕಾರ ಎಂದರೆ ಜವಾಬ್ದಾರಿಗಳನ್ನು ಹೆಗಲ ಮೇಲೆ ಹಾಕಿಕೊಳ್ಳುವುದು. ಈ ಪ್ರಕ್ರಿಯೆಯನ್ನು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಕಲಿಸಬೇಕು. ಮಕ್ಕಳ ಎಲ್ಲ ಜವಾಬ್ದಾರಿಗಳನ್ನು ತಾವೇ ಹೊರುವ ಪಾಲಕರು ತಮಗೇ ಗೊತ್ತಿಲ್ಲದೆ ಮಕ್ಕಳಿಗೆ ದ್ರೋಹ ಮಾಡುತ್ತಾರೆ. ತಂಗಿ ಅಳುತ್ತಿರುವಾಗ ಸಮಾಧಾನ ಮಾಡುವುದು, ಸೂಪರ್ ಮಾರ್ಕೆಟ್ಟಿನಲ್ಲಿ ಕೊಂಡ ವಸ್ತುಗಳನ್ನು ಮನೆಗೆ ತರುವುದು, ತಮ್ಮನಿಗೆ ಪಾಠ ಹೇಳುವುದು, ಬಟ್ಟೆಗಳನ್ನು ಒಣಹಾಕುವುದರಲ್ಲಿ ತಾಯಿಗೆ ಸಹಾಯ ಮಾಡುವುದು, ಇವೆಲ್ಲವೂ ಜವಾಬ್ದಾರಿಗಳೇ.

    ಮಕ್ಕಳಲ್ಲಿ ನಾಯಕತ್ವ ಲಕ್ಷಣಗಳನ್ನು ಬೆಳೆಸುವ ಬಗೆಜವಾಬ್ದಾರಿ ಮಾತ್ರವಲ್ಲದೆ ಅವರ ಅಭಿರುಚಿ, ಆಸೆಗಳಿಗೂ ಮಹತ್ವ ಕೊಡಬೇಕು. ಆಗ ಸ್ವಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಇರುವ ಸಂತೋಷ ಅವರಿಗೆ ಅರ್ಥವಾಗುತ್ತದೆ. ಉದಾಹರಣೆಗೆ ತನ್ನ ಕೋಣೆಯಲ್ಲಿ ಯಾವ ಗೋಡೆಗೆ ಯಾವ ಬಣ್ಣ ಇರಬೇಕು ಎನ್ನುವುದನ್ನು ಅವನ/ಅವಳ ನಿರ್ಧಾರಕ್ಕೆ ಬಿಟ್ಟರೆ, ಮುಂದಿನ ಎರಡು ವರ್ಷ ಆ ಕೋಣೆಯನ್ನು ಅವನು ಮೆಚ್ಚಿಕೊಳ್ಳುತ್ತಾನೆ. ತನ್ನ ನಿರ್ಧಾರಗಳ ಬಗ್ಗೆ ಆತನಲ್ಲಿ ನಂಬಿಕೆ ಬೆಳೆಯುತ್ತದೆ. ಸ್ವಯಂ ನಿರ್ಧಾರದ ಅಧಿಕಾರ ಎರಡು ರೀತಿಯಲ್ಲಿ ಇರುತ್ತದೆ. ಬಾಹ್ಯ ಮತ್ತು ಆಂತರಿಕ! ಒಂದು ಮಾರ್ಗದರ್ಶನದಿಂದ ಬಂದಿದ್ದು, ಇನ್ನೊಂದು ಅಭಿರುಚಿ-ಪೂರ್ವಕವಾದದ್ದು. ಈ ಎರಡೂ ನಮ್ಮ ಅರಿವಿಗೇ ಬಾರದೆ ಇವನ್ನು ಬದುಕಿನಲ್ಲಿ ಜಾರಿ ಮಾಡುತ್ತ ಇರುತ್ತೇವೆ.

    ನಾಲ್ಕೈದು ಕುಟುಂಬಗಳ ಗ್ರೂಪ್ ಪಿಕ್ನಿಕ್​ಗಳನ್ನು ‘ಮಕ್ಕಳಿಂದ’ ಆರ್ಗನೈಸ್ ಮಾಡಿಸಿದರೆ, ಅವರಲ್ಲಿರುವ ನಾಯಕತ್ವ ಗುಣಗಳು ಪ್ರಕಟಗೊಳ್ಳುತ್ತವೆ. ನಲವತ್ತು ವರ್ಷಗಳ ಹಿಂದೆ ಆರು ಕುಟುಂಬಗಳು ಊಟಿಗೆ ಹೋಗಿದ್ದಾಗ ಬೈಸಿಕಲ್​ಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿ ಎಲ್ಲರಿಗೂ ತಿಂಡಿ ಪಾರ್ಸಲ್ ಮಾಡಿಸಿಕೊಂಡು ಬನ್ನಿ ಎಂದು ಇಬ್ಬರು ಹುಡುಗರನ್ನು, ಬೋಟಿಂಗ್ ವಿವರಗಳನ್ನು ತಿಳಿದುಕೊಂಡು ಬನ್ನಿ ಎಂದು ಇಬ್ಬರು ಹುಡುಗರನ್ನು ಕಳಿಸಿದೆ. ‘ಪರಿಚಯವಿಲ್ಲದ ಊರು’ ಎಂದು ಆ ಮಕ್ಕಳ ತಾಯಂದಿರು ಭಯಪಟ್ಟರು. ಮಕ್ಕಳನ್ನು ಹೊರಗೆ ಕೆಲಸದ ಮೇಲೆ ಕಳಿಸುವುದಕ್ಕಿಂತಲೂ ದೊಡ್ಡ ತಲೆನೋವು ಆ ಮಕ್ಕಳ ತಾಯಂದಿರನ್ನು ಸಮಾಧಾನಪಡಿಸುವುದಾಗಿತ್ತು. ಮಕ್ಕಳು ಸಂತೋಷದಿಂದಲೇ ಹೋಗಿ ಕೆಲಸ ಪೂರೈಸಿಕೊಂಡು ಹೆಮ್ಮೆಯಿಂದ ಮರಳಿ ಬಂದರು.

    ಟೀನ್ಸ್ ಮಕ್ಕಳು ಮಾನಸಿಕವಾಗಿ ಮೆಚ್ಯೂರ್ ಆಗಿದ್ದರೆ, ಆರ್ಥಿಕ ವೈಯಕ್ತಿಕ ಸಮಸ್ಯೆಗಳ ಕುರಿತು ಅವರ ಜೊತೆ ಮಾತನಾಡಿ. ಸ್ವಲ್ಪ ದೊಡ್ಡವರಾದಾಗ, ಮನೆಯ ತಿಂಗಳ ಬಜೆಟ್ ಹೇಗೆ ಪ್ಲಾನ್ ಮಾಡಬೇಕೆಂದು ಹೇಳಿಕೊಡಿ. ನಿಮ್ಮ ಸಂಪಾದನೆ, ಆಸ್ತಿಪಾಸ್ತಿ, ಸಾಲಗಳ ಬಗ್ಗೆ ಅವರಿಗೆ ಹೇಳಿರಿ. ದೀರ್ಘಕಾಲದ ಇನ್ವೆಸ್ಟ್​ಮೆಂಟ್ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿ. ಇಂಥ ಸಣ್ಣ ಸಣ್ಣ ಕೆಲಸಗಳೇ ಅವರಿಗೆ ‘ನಾವೂ ಕೂಡ ಮನೆ ನಡೆಸುತ್ತಿದ್ದೇವೆ’ ಎಂಬ ಭಾವನೆಯನ್ನು, ಅಪಾರ ಸಂತೋಷವನ್ನು ಕೊಡುತ್ತದೆ. ಹನ್ನೆರಡನೆಯ ತರಗತಿ ದಾಟಿದ ನಂತರ ಅವರ ಪಾಕೆಟ್​ವುನಿ ಅವರೇ ಸಂಪಾದಿಸಿಕೊಳ್ಳಲಿಕ್ಕೆ ದಿನಕ್ಕೆ ಒಂದು ಗಂಟೆ ಅಥವಾ ವಾರಾಂತ್ಯದಲ್ಲಿ ಕೆಲವು ಗಂಟೆ ಅಥವಾ ಬೇಸಿಗೆ ರಜೆಯಲ್ಲಿ ಕೆಲಸ ಮಾಡಲು ಪ್ರೋತ್ಸಾಹ ಕೊಡಿ. ಎಂಟನೆಯ ತರಗತಿಯಲ್ಲಿದ್ದಾಗ, ನಾಲ್ಕನೆಯ ತರಗತಿಯ ಹುಡುಗರಿಗೆ ಟ್ಯೂಷನ್ ಹೇಳಿಕೊಡಲು ನಮ್ಮ ತಂದೆ ಸಲಹೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿ ತಿಂಗಳಿಗೆ ಹತ್ತು ರೂಪಾಯಿ ಫೀಸ್ ಕೊಡುತ್ತಿದ್ದ. ಅದು ನನ್ನ ಖರ್ಚಿಗೆ ಸಾಕಾಗುತ್ತಿತ್ತು. ಬಿತ್ತನೆ ಹಾಕಿದರೆ ಸಾಲದು, ಅದಕ್ಕೆ ಗೊಬ್ಬರ, ನೀರೂ ಹಾಕಿದಾಗ ಗಿಡಗಳು ಫಲಭರಿತವಾಗುತ್ತವೆ.

    ಇನ್ನೂ ಓದುತ್ತಿರುವ ಮಕ್ಕಳು ಎಂದು ಅವರನ್ನು ಹೂವಿನಲ್ಲಿಟ್ಟು ಬಹಳ ಮುತುವರ್ಜಿ ತೋರಿಸುವ ಅಗತ್ಯವಿಲ್ಲ. ಕೆಲಸದಾಳು ಬರದಿದ್ದಾಗ ಕೆಲವು ಮನೆಕೆಲಸಗಳನ್ನು ಅವರಿಂದ ಮಾಡಿಸಿ. ರೆಂಚ್, ಸ್ಕ್ರೂಡ್ರೖೆವರ್ ಮೊದಲಾದವುಗಳನ್ನು ಉಪಯೋಗಿಸಿ ಸಣ್ಣಪುಟ್ಟ ಎಲೆಕ್ಟ್ರಿಕ್ ರಿಪೇರಿ, ಷೂ ಪಾಲೀಷ್, ಪಾತ್ರೆ ತೊಳೆಯುವುದು, ಇಸ್ತ್ರೀ ಮಾಡುವುದು ಮುಂತಾದ ಕೆಲಸಗಳು ಮಕ್ಕಳಲ್ಲಿ ಸೆಲ್ಪ್ ಡಿಪೆಂಡೆನ್ಸಿ ಬೆಳೆಸುತ್ತವೆ.

    ಮೂರು ತಿಂಗಳಿಗೆ ಒಮ್ಮೆಯಾದರೂ ಮಕ್ಕಳ ಸ್ನೇಹಿತರಿಗೆ ನಿಮ್ಮ ಮನೆಯಲ್ಲಿ ಪಾರ್ಟಿ ಅಥವಾ ಡಿನ್ನರ್ ಕೊಡಿ. ಆ ಪಾರ್ಟಿಯ ‘ಮೆನು’ ಏನಿರಬೇಕೆಂದು ಮಕ್ಕಳೊಂದಿಗೆ ರ್ಚಚಿಸಿ, ಸಾಧ್ಯವಾದರೆ ಒಂದೆರಡು ಪದಾರ್ಥಗಳನ್ನು ಅವರಿಂದಲೇ ಮಾಡಿಸಿ, ಅದರಿಂದ ಆ ಪಾರ್ಟಿಯಲ್ಲಿ ಅವರ ಇನ್​ವಾಲ್ವ್​ಮೆಂಟ್ ಬೆಳೆಯುತ್ತದೆ. ತಾನು ಸ್ವತಃ ವ್ಯವಸ್ಥೆ ಮಾಡಿದ ಪಾರ್ಟಿಗೆ ಸ್ನೇಹಿತರೆಲ್ಲ ಬರುತ್ತಿದ್ದಾರೆ ಎಂಬ ಭಾವನೆ ಅವರಿಗೆ ಅಮಿತವಾದ ಸಂತೋಷವನ್ನು ಕೊಡುತ್ತದೆ.

    ಜವಾಬ್ದಾರಿಯುತ ಪೇರೆಂಟ್ ಅಗಿ ಬದುಕುವುದು ಈ ದಿನಗಳಲ್ಲಿ ಬಹಳ ಕಷ್ಟ. ಅರು ತಿಂಗಳಿಗೊಂದು ಟೂರ್​ಗೆ ಕರೆದೊಯ್ದು, ತಿಂಗಳಿಗೊಮ್ಮೆ ಹೋಟೆಲ್​ನಲ್ಲಿ ಡಿನ್ನರ್ ಕೊಡಿಸಿದರೆ ಅದೇ ಉತ್ತಮ ಪೋಷಣೆ ಎಂದುಕೊಂಡರೆ ಅದು ಪಲಾಯನವಾದದ ಪರಾಕಾಷ್ಠೆ. ಒಬ್ಬ ಹುಡುಗನಿಗೆ ಗಣಿತದಲ್ಲಿ ಬಹಳ ಆಸಕ್ತಿ. ಗಣಿತದಲ್ಲಿ ಪಿಎಚ್.ಡಿ ಮಾಡಿ ಗಣಿತವನ್ನು ಆಸ್ವಾದಿಸುತ್ತ, ತಿಂಗಳಿಗೆ ಹತ್ತು ಲಕ್ಷ ಸಂಬಳದೊಂದಿಗೆ ಬದುಕಿನಲ್ಲಿ ಸ್ಥಿರಗೊಂಡ. ಇದು ತನ್ನಾಸೆಯ ವೃತ್ತಿಯಲ್ಲಿ ಸಂತೋಷದಿಂದ ಕೆಲಸ ಮಾಡುವುದು! ಮತ್ತೊಬ್ಬ ಹುಡುಗನಿಗೆ ಐಐಟಿ ಓದಬೇಕೆಂದು ಆಸೆ. ಬಾಲ್ಯದಿಂದ ಕಷ್ಟಪಟ್ಟು ಓದಿ ಓಳ್ಳೇ ಮಾರ್ಕ್ಸ್ ಗಳಿಸಿ ಐಐಟಿ ಸೇರಿದ. ಒಂದು ಕಂಪನಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತ ತಿಂಗಳಿಗೆ ಹತ್ತು ಲಕ್ಷ ಸಂಬಳದ ಹಂತ ತಲುಪಿದ.

    ಮೇಲಿನ ಎರಡು ಉದಾಹಣೆಗಳನ್ನು ಗಮನಿಸಿದರೆ ನಿಮಗೆ ಎರಡನೆ ಉದಾಹಣೆಯಲ್ಲಿ ‘ಕಷ್ಟಪಟ್ಟು’ ಎಂಬ ಪದ ಎದ್ದು ಕಾಣಿಸುತ್ತದೆ. ವ್ಯತ್ಯಾಸ ಅದೇ! ಮೇಲೆ ಹೇಳಿದ ಇಬ್ಬರು ಮಕ್ಕಳು ಗುರಿ ತಲುಪಿದರೂ ಎರಡನೆಯವನು ವಿದ್ಯೆಯನ್ನು ತನ್ನ ‘ಹೊಣೆ’ ಎಂದು ಸ್ವೀಕರಿಸಿದ್ದ. ಇದಕ್ಕೆ ಇನ್ನೊಂದು ಉದಾಹರಣೆ ಏನೆಂದರೆ, ನೀವೊಂದು ಷಾಪ್​ಗೆ

    ಹೋದಿರಿ. ಒಂದು ಪುಸ್ತಕ ಕಣ್ಣಿಗೆ ಬಿತ್ತು. ಮತ್ತೇನೂ ಯೋಚಿಸದೆ ಅದನ್ನು ತಕ್ಷಣ ಕೊಂಡೇಬಿಟ್ಟಿರಿ. ಏಕೆಂದರೆ ನಿಮ್ಮ ಅಭಿರುಚಿಗೆ ಹೊಂದುವ ಪುಸ್ತಕವದು. ಇನ್ನೊಂದು ಪುಸ್ತಕ ಕಣ್ಣಿಗೆ ಬಿತ್ತು. ಒಂದು ಸಬ್ಜೆಕ್ಟ್​ನಲ್ಲಿ ಪಾಸಾಗಬೇಕೆಂದರೆ ಆ ಪುಸ್ತಕ ಅವಶ್ಯ. ಅದಕ್ಕೇ ಕೊಂಡಿರಿ. ಮೊದಲ ಉದಾಹರಣೆಯಲ್ಲಿ ‘ಆನಂದ’. ಎರಡನೆ ಉದಾಹರಣೆಯಲ್ಲಿ ‘ಅವಶ್ಯಕತೆ’, ಇದುದೇ ವ್ಯತ್ಯಾಸ.

    ಎಂದಿಗಾದರೂ ಸರಿಯೇ ಅಭಿರುಚಿಪೂರ್ವಕ ಅಭಿವೃದ್ಧಿ ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ ಬಲಶಾಲಿಗಳಾಗಿ ಮಾಡುತ್ತದೆ. ಮಾಡುತ್ತಿರುವ ಕೆಲಸದಲ್ಲಿಯೆ (ನಿಮ್ಮ ನಿರಂತರ ಅಭಿವೃದ್ಧಿಯಲ್ಲಿಯೇ) ಆನಂದ ಹೊಂದುವುದನ್ನು ‘ಇಂಟ್ರೆನ್ಸಿಕ್’ ಆನಂದ ಎನ್ನುತ್ತಾರೆ. ಹಾಗಲ್ಲದೆ ಮಾಡುವ ಕೆಲಸಗಳಿಂದ ಆಗುವ ಪರಿಣಾಮಗಳಿಂದ ಆನಂದ ಪಡೆಯುವುದನ್ನು ‘ಎಕ್ಸ್​ಟ್ರೆನ್ಸಿಕ್’ ಸಂತೋಷ ಎನ್ನುತ್ತಾರೆ. ಎರಡು ಮಾರ್ಗಗಳೂ ಗುರಿ ತಲುಪಿಸುತ್ತವೆ. ಅದರೆ ಮೊದಲನೆಯದು ಟಾರ್ ರಸ್ತೆಯಾದರೆ, ಎರಡನೆಯದು ಹಳ್ಳಗುಂಡಿಗಳು ಬಿದ್ದ ಹಾಳು ರಸ್ತೆ.

    ಕಂಬೈನ್ಡ್ ಸ್ಟಡೀಸ್: ಪರೀಕ್ಷೆಗಳು ಹತ್ತಿರ ಬಂದಾಗ ಕಂಬೈನ್ಡ್ ಸ್ಟಡೀಸ್ ಎಂದು ಹೇಳುತ್ತ ನಾಲ್ಕೈದು ಮಕ್ಕಳು ಒಂದೆಡೆ ಸೇರುವುದು ಸರ್ವೆಸಾಮಾನ್ಯ. ಛಲದಿಂದ ತದೇಕ ಮನಸ್ಸಿನಿಂದ ಓದುವ ಸ್ನೇಹಿತರ ಕಂಪನಿಯಾದರೆ ಪರವಾಗಿಲ್ಲ. ಆದರೆ ‘ಚಲ್ತೀ ಕಾ ನಾಮ್ ಗಾಡಿ’ ಅಂದುಕೊಂಡು ಪುಸ್ತಕಗಳನ್ನೆಲ್ಲ ಮುಂದೆ ಗುಡ್ಡೆ ಹಾಕಿಕೊಂಡು ಹರಟೆ ಕೊಚ್ಚುವ ಬಾಬ್ತಿನ ಹುಡುಗರಾದರೆ ಕೇಡು ತಪ್ಪದು. ಇದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಒಂದು ಏರಿಯಾದವರೂ, ಸ್ನೇಹಿತರೂ ಒಟ್ಟಿಗೆ ಓದಿದರೆ ನಿದ್ದೆ ಮಾಡುವುದಿಲ್ಲವೆಂದೂ, ಒಬ್ಬರ ಜೊತೆ ಒಬ್ಬರು ಸಂವಹನ ಮಾಡುತ್ತ ಚೆನ್ನಾಗಿ ಓದುತ್ತಾರೆ ಎನ್ನುವುದು ಒಂದು ಅಭಿಪ್ರಾಯ. ಆದರೆ ಓದಿಗಿಂತ ಮಾತೇ ಜಾಸ್ತಿ ಆಗದ ಹಾಗೆ ಹುಡುಗರನ್ನು ಗಮನಿಸುತ್ತ ಇರಬೇಕು. ಇದು ನನ್ನಂತಹ ಹಲವರ ಅಭಿಪ್ರಾಯ.

    ಮಕ್ಕಳು ಕೆಲಬಾರಿ ಷಾಕ್ ಕೊಡುತ್ತಾರೆ. ಅಂಥ ಪರಿಸ್ಥಿತಿಯನ್ನು ನಿಭಾಯಿಸುವುದು ಮನೆಯ ಹಿರಿಯರಿಗೆ ಕತ್ತಿಯ ಮೇಲಿನ ವ್ಯಾಯಾಮವೇ. ಸಿನಿಮಾ ಹಾಲ್​ನಲ್ಲಿ ಬಾಯ್/ಗರ್ಲ್ಸ್ ಫ್ರೆಂಡ್ಸ್ ಜೊತೆ ಸಲುಗೆಯಿಂದ ಇರುವುದನ್ನು ಕಂಡಾಗ, ಸಿಗರೇಟ್ ಸೇದಿದ್ದು ಕಂಡಾಗ ದೊಡ್ಡವರ ಬಿ.ಪಿ ಏರುತ್ತದೆ. ಮೊದಲು ಸಿಗರೇಟ್ ಕುರಿತು ರ್ಚಚಿಸೋಣ. ನ್ಯಾಷನಲ್ ನ್ಯೂಟ್ರಿಷನ್ ಇನ್ಸ್​ಟಿಟ್ಯೂಟ್ ಸರ್ವೆ ಪ್ರಕಾರ ದೇಶದಲ್ಲಿ ಪ್ರತಿದಿನ ಸಾವಿರ ಮಂದಿ ಹುಡುಗರು ಹೊಸದಾಗಿ, ಅಂದರೆ ಜೀವನದಲ್ಲಿ ಮೊದಲ ಬಾರಿ ಸ್ಮೋಕ್ ಮಾಡಲು ಪ್ರಾರಂಭಿಸುತ್ತಾರಂತೆ. ಪ್ರತಿ ಆರು ಯುವಕರಲ್ಲಿ ಒಬ್ಬನಿಗೆ ತಂಬಾಕು ಅಥವಾ ಮದ್ಯದ ಅಭ್ಯಾಸವಿದೆ. ಹನ್ನೆರಡು-ಹದಿಮೂರರಲ್ಲಿ ಸ್ಮೋಕಿಂಗ್ ಅಭ್ಯಾಸ ಆಗುತ್ತದೆ. ಅವರಲ್ಲಿ ನಾಲ್ವರಲ್ಲಿ ಒಬ್ಬರು ಮುಂದುವರಿಸಿದರೆ ಉಳಿದವರು ಆ ಅಭ್ಯಾಸ ತೊರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಏರ್​ಪೋರ್ಟ್​ಗಳಲ್ಲಿ ಸ್ಮೋಕ್ ಮಾಡುವವರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ ಎನಿಸುತ್ತದೆ.

    ಸಾಧಾರಣವಾಗಿ ಮಕ್ಕಳಲ್ಲಿ ಈ ದುರಭ್ಯಾಸವು ಸ್ನೇಹಿತರಿಂದ ಬರುತ್ತದೆ. ಪ್ರಾರಂಭದಲ್ಲಿ ಅದು ‘ಥ್ರಿಲ್ಲಿಂಗ್’ ವ್ಯವಹಾರವಾಗಿದ್ದು, ನಂತರ ‘ಹೀರೋಯಿಸಂ’ಗೆ ನಿದರ್ಶನವಾಗಿ ನಿಂತು ಮುಂದೆ ದುಶ್ಚಟವಾಗುತ್ತದೆ. ಮಗ ಸಿಗರೇಟ್ ಸೇದಿದ್ದು ಕಣ್ಣಿಗೆ ಬಿದ್ದರೆ ಊರೆಲ್ಲ ಪ್ರಚಾರ ಮಾಡಬೇಕಾಗಿಲ್ಲ. ಆ ವಿಷಯವನ್ನು ನಿಮ್ಮ ತಂದೆ, ಅಂಕಲ್ ಅಥವಾ ಬಹಳ ನಂಬಿಕಸ್ಥರಾದವರ ಜೊತೆ ಚರ್ಚೆ ಮಾಡಿ. ಇಂತಹ ಸಮಸ್ಯೆಗಳಿಗೆ ಸರ್ವಸಮ್ಮತ ಪರಿಹಾರಗಳಿರುವುದಿಲ್ಲ. ಆ ಹುಡುಗನ ಮನಸ್ಥಿತಿ ಎಂತಹುದು? ಒಳ್ಳೆಯದು/ಕೆಟ್ಟದ್ದು ಹೇಳಿದರೆ ಕೇಳುತ್ತಾನೆಯೇ?- ಮೊದಲಾದ ಎಷ್ಟೋ ಅಂಶಗಳ ಮೇಲೆ ಇದು ಅವಲಂಬಿಸಿರುತ್ತದೆ. ಧೂಮಪಾನದಿಂದಾಗುವ ದುಷ್ಪರಿಣಾಮಗಳನ್ನು ಮಕ್ಕಳಿಗೆ ವಿವರಿಸಿ ಹೇಳಿ. ಒಂದು ವೇಳೆ ನೀವು ಧೂಮಪಾನ ಮಾಡುವವರಾಗಿದ್ದು, ಮಗನನ್ನು ಅದೇ ಸ್ಥಿತಿಯಲ್ಲಿ ನೋಡಿದರೆ ಸ್ವಲ್ಪ ಇರಿಸುಮುರಿಸಾಗುತ್ತದೆ. ಮುಖಾಮುಖಿಯಾಗಿ ಚರ್ಚೆ ಮಾಡುವುದು ಸಾಧ್ಯವಾಗದಿದ್ದರೆ ಆ ಜವಾಬ್ದಾರಿಯನ್ನು ಹಿರಿಯರಿಗೆ ಒಪ್ಪಿಸಿರಿ. ಅವರು ಈ ರೀತಿ ವಿವರಿಸಲಿ: ‘ಸಿಗರೇಟ್​ನಲ್ಲಿರುವ ನಿಕೊಟಿನ್ ತಾತ್ಕಾಲಿಕ ಉತ್ತೇಜನ ನೀಡುತ್ತದೆಯಾದರೂ, ದೀರ್ಘಕಾಲದಲ್ಲಿ ಅದು ವ್ಯಕ್ತಿಯನ್ನು ನಿತ್ರಾಣಗೊಳಿಸುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ಕ್ಲಾಸ್​ನಲ್ಲಿ ಕುಳಿತಿರಬೇಕಾದಾಗ ಒಂದು ತಾಸು ಕಳೆದಾಗ ಮನಸ್ಸು ಅತ್ತ ಹೋಗಿ ವಿದ್ಯೆಯ ಕಡೆಗೆ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಸಿಗರೇಟುಗಳು ಗೇಮ್ಸ್​ಗೆ ಆಜನ್ಮ ಶತ್ರುಗಳು. ಸ್ವಲ್ಪ ಓಡಿದರೂ ದಣಿದು ಹೋಗುವ ಹುಡುಗ ಸ್ಪೋರ್ಟ್ಸ್​ನಲ್ಲಿ ಹೇಗೆ ಮೇಲೆ ಬಂದಾನು? ಸಿಗರೇಟ್ ಸೇದಿದಂತೆಲ್ಲ ಶ್ವಾಸವು ಸ್ವಚ್ಛತೆ, ಪರಿಮಳ ಕಳೆದುಕೊಂಡು ದುರ್ವಾಸನೆ ಆವರಿಸುತ್ತದೆ. ಹಲ್ಲುಗಳು ಹಳದಿಯಾಗುತ್ತವೆ’. ಸೌಂದರ್ಯಕ್ಕೆ ಪ್ರಾಮುಖ್ಯ ಕೊಡುವ ವಯಸ್ಸು ಅದಾಗಿರುವುದರಿಂದ ನಿಮ್ಮ ಸಲಹೆ ಪರಿಣಾಮ ಬೀರುತ್ತದೆ.

    ವಾಸ್ತವ ಬದುಕಿನ ಕಥೆಗಳನ್ನು ಮಕ್ಕಳಿಗೆ ಹೇಳಿದರೆ (ಅಥವಾ ತೋರಿಸಿದರೆ) ಅವರು ಅರ್ಥಮಾಡಿಕೊಳ್ಳಬಹುದು. ಹತ್ತಿರದ ಬಂಧುಗಳಲ್ಲಿ ಯಾರಿಗಾದರೂ ಶ್ವಾಸಕೋಶಗಳ ಸಮಸ್ಯೆಯಿದ್ದರೆ ಆ ಉದಾಹರಣೆಯನ್ನು ತೋರಿಸಿರಿ. ಮಕ್ಕಳು ಸ್ಮೋಕ್ ಮಾಡುತ್ತಿರುವ ವಿಷಯವನ್ನೇ ಎಷ್ಟೋ ತಂದೆ-ತಾಯಿ ಗುರುತಿಸುವುದಿಲ್ಲ. ಬಟ್ಟೆಗಳ ವಾಸನೆ, ಮನೆಗೆ ಬಂದ ಕೂಡಲೇ ಮುಖ ತೊಳೆಯುವ ಅಭ್ಯಾಸ, ಮೊದಲಾದ ಸಣ್ಣ ಸಣ್ಣ ವಿಷಯಗಳ ಮೂಲಕ ಇದನ್ನು ಗ್ರಹಿಸಬಹುದು. ಮಕ್ಕಳ ಸ್ನೇಹಿತರೇ ನಿಮ್ಮ ಇನ್ಪಾರ್ಮರ್​ಗಳು. ಅವರನ್ನು ಉಬ್ಬಿಸಿದರೆ ‘ಲವ್’ ಒಂದನ್ನು ಬಿಟ್ಟು ಸಿಗರೇಟ್ ಇತ್ಯಾದಿ ಎಲ್ಲ ಅಭ್ಯಾಸಗಳನ್ನು ತಿಳಿದುಕೊಳ್ಳುವ ಅವಕಾಶ ಇರುತ್ತದೆ.

    (ಲೇಖಕರು ಖ್ಯಾತ ಕಾದಂಬರಿಕಾರರು, ವ್ಯಕ್ತಿತ್ವ ವಿಕಸನ ತರಬೇತುದಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts