ಸ್ಮಶಾನ್-ಕಬರಿಸ್ತಾನ್ ಬಳಿಕ ಈಗ ಅಲಿ ಬಜರಂಗಬಲಿ!

| ರಾಘವ ಶರ್ಮ ನಿಡ್ಲೆ

ಲಖನೌ: ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಬಿಜೆಪಿ ಮತ್ತು ಮಹಾಮೈತ್ರಿ ನಡುವಿನ ಹೇಳಿಕೆ-ಪ್ರತಿ ಹೇಳಿಕೆಗಳ ಕಾಳಗ ಜೋರಾಗಿಯೇ ಧ್ವನಿಸುವ ಮೂಲಕ ಚುನಾವಣಾ ಪ್ರಚಾರದ ನಿರೂಪಣೆಯೇ ಬದಲಾಗತೊಡಗಿದೆ.

2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಮಶಾನ್ ವರ್ಸಸ್ ಕಬರಿಸ್ತಾನ್ ಹೇಳಿಕೆ ಭಾರಿ ಸದ್ದು ಮಾಡಿತ್ತು. ಫತೇಹ್​ಪುರ ರ್ಯಾಲಿಯಲ್ಲಿ ಸಮಾಜವಾದಿ ಸರ್ಕಾರದ ವಿರುದ್ಧ ಗುಡುಗಿದ್ದ ಮೋದಿ, ಹಳ್ಳಿಗಳಲ್ಲಿ ಕೇವಲ ಕಬರಿಸ್ತಾನ ಗಳನ್ನಷ್ಟೇ (ಮುಸ್ಲಿಮರ ಸ್ಮಶಾನ) ನಿರ್ಮಾಣ ಮಾಡುವುದಲ್ಲ. ಹಿಂದುಗಳ ರುದ್ರಭೂಮಿಗೂ (ಸ್ಮಶಾನ) ಆದ್ಯತೆ ನೀಡಿ ಎಂದು ಕಿಡಿಕಾರಿದ್ದರು. ಹಿಂದು-ಮುಸ್ಲಿಂ ಮತಗಳ ಧ್ರುವೀಕರಣಕ್ಕಾಗಿಯೇ ಈ ನಿರೂಪಣೆಯನ್ನು ತೇಲಿಬಿಡಲಾಗಿತ್ತು. ವಿಪಕ್ಷಗಳು ಈ ವಿಷಯ ರ್ಚಚಿಸಿದಷ್ಟು ಹಿಂದು ಮತಗಳು ಕ್ರೋಡೀಕರಣಗೊಳ್ಳುತ್ತವೆ ಎಂಬುದು ಬಿಜೆಪಿಗೆ ಗೊತ್ತಿಲ್ಲದೇನಿಲ್ಲ. ಒಟ್ಟಿನಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿಂದುಗಳು ಮಾತ್ರವಲ್ಲ, ಕೆಲವೊಂದಿಷ್ಟು ಮುಸ್ಲಿ ಧರ್ಮದವರೂ ಮತ ಹಾಕಿದ್ದ ಐತಿಹಾಸಿಕ ಬೆಳವಣಿಗೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿತ್ತು.

ಈ ಬಾರಿ ಬಿಎಸ್​ಪಿ ನಾಯಕಿ ಮಾಯಾವತಿ ಕೋಮು ಧ್ರುವೀಕರಣದ ಹೆಸರಲ್ಲಿ ಮಾಡಿರುವ ಸಣ್ಣ ಎಡವಟ್ಟನ್ನೇ ಬಿಜೆಪಿ ಲಾಭವನ್ನಾಗಿ ಪರಿವರ್ತಿಸಲು ಮುಂದಾಗಿದೆ. ಸಹರಾನ್​ಪುರ ಕ್ಷೇತ್ರದಲ್ಲಿ ಬಿಎಸ್​ಪಿಯಿಂದ ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸಿದ್ದರೂ ಕಾಂಗ್ರೆಸ್ ಇಮ್ರಾನ್ ಮಸೂದ್ ಎಂಬ ಪ್ರಭಾವಿ ಮುಸ್ಲಿಂಗೆ ಟಿಕೆಟ್ ನೀಡಿದ್ದರಿಂದ ಮುಸ್ಲಿಮರ ಮತಗಳು ವಿಭಜನೆಗೊಂಡಿದೆ. ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪರ ಪ್ರಚಾರ ಭರಾಟೆ ಜೋರಾಗಿರುವುದರಿಂದ ಬೇರೆ ಕ್ಷೇತ್ರಗಳಲ್ಲೂ ಒಂದಿಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ ಪರ ಬೀಳಲಿವೆ. ಇದು ಮಹಾಮೈತ್ರಿ ಪರವಾದ ಮತ ಪರಿವರ್ತನೆಗೆ ಹಾನಿ ಮಾಡುತ್ತಿದೆ. ಹೀಗಾಗಿಯೇ, ಮುಸ್ಲಿಮರೆಲ್ಲರೂ ಮಹಾಮೈತ್ರಿಗೆ ಮತ ಹಾಕಬೇಕೆಂದು ಮಾಯಾವತಿ ಹೇಳಿದ್ದರು.

ಮಾಯಾವತಿಯಿಂದ ಬಿಜೆಪಿಗೆ ಲಾಭ ಹೆಚ್ಚು!

ಕೋಮು ಧ್ರುವೀಕರಣಗೊಂಡಷ್ಟು ಬಿಜೆಪಿಗೆ ಲಾಭ. ಹೀಗಾಗಿಯೇ, ತಮ್ಮ ಎಡವಟ್ಟಿನಿಂದ ಎಚ್ಚೆತ್ತುಕೊಂಡ ಮಾಯಾವತಿ ಏ.13ರ ಸುದ್ದಿಗೋಷ್ಠಿಯಲ್ಲಿ, ‘ಬಿಜೆಪಿ ಸೋಲಿಸಲು ಅಲಿ-ಬಜರಂಗಬಲಿ ಇಬ್ಬರೂ ನಮ್ಮ ಜತೆಗಿರಬೇಕು’ ಎಂದು ನಿಲುವು ಬದಲಿಸಿದ್ದರು. ಆದರೆ, ತಮ್ಮ ಎಡವಟ್ಟನ್ನು ಮಾಯಾವತಿ ಸರಿಪಡಿಸುವ ಮುನ್ನವೇ ಬಿಜೆಪಿ ನಾಯಕರು ಮಹಾಮೈತ್ರಿ ಧರ್ವಧಾರಿತ ಮತ ಪ್ರಚಾರಕ್ಕಿಳಿದಿದೆ ಎಂದು ದೂರುತ್ತಾ, ಹಿಂದು ಮತಗಳ ಒಗ್ಗೂಡುವಿಕೆಗೆ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಆಯೋಗದ ಕ್ರಮದ ಹೊರತಾಗಿಯೂ ಜನರ ಮಧ್ಯೆ ಈ ವಿಚಾರ ಚುನಾವಣೆ ಮುಗಿಯುವ ತನಕವೂ ಜೀವಂತವಾಗಿರಲಿದೆ. ಬಿಜೆಪಿ ಕೂಡ ಅದನ್ನೇ ಬಯಸಿದೆ.

ಯೋಗಿ ತಿರುಗೇಟು

ಮಹಾಮೈತ್ರಿ ನಾಯಕರ ಎಡವಟ್ಟಿಗೆ ಕಾದಿದ್ದ ಸಿಎಂ ಯೋಗಿ ಆದಿತ್ಯನಾಥ್, ‘ಅಲಿಯ ಹೆಸರಲ್ಲಿ ಮತ ಕೇಳುತ್ತಿರುವ ಮಹಾಮೈತ್ರಿ ಬಣ್ಣ ಬಯಲಾಗಿದೆ. ಅವರು ಅಲಿಯ ಪರ ನಾವು ಬಜರಂಗಬಲಿಯ ಪರ’ ಎನ್ನುವ ಮೂಲಕ ಹಿಂದು ಮತಗಳ ಕ್ರೋಡೀಕರಣಕ್ಕೆ ಗಾಳ ಹಾಕಿದ್ದಾರೆ. ಅಲಿಯವರು ಮಹಮ್ಮದ್ ಪೈಗಂಬರರ ಉತ್ತರಾಧಿಕಾರಿ ಎಂದು ಶಿಯಾ ಮುಸ್ಲಿಮರು ನಂಬಿದ್ದರೆ, ಸುನ್ನಿ ಮುಸ್ಲಿಮರ ಪ್ರಕಾರ ಖಲೀಫರಲ್ಲಿ ಅತ್ಯಂತ ಗೌರವಾನ್ವಿತರು ಎಂದು ಭಾವಿಸಿದ್ದಾರೆ. ಹಿಂದುಗಳಿಗೆ ಬಜರಂಗಬಲಿ ಎಂದರೆ ಭಗವಾನ್ ಹನುಮಂತ. ಒಟ್ಟಿನಲ್ಲಿ, ಮೂಲ ವಿಷಯಗಳನ್ನು ಪಕ್ಕಕ್ಕಿಟ್ಟು ಧರ್ಮದ ಆಧಾರದಲ್ಲಿ ಮತ ಕೀಳುವ ಪರಂಪರೆಗೆ ಮತ್ತೊಮ್ಮೆ ಉತ್ತರ ಪ್ರದೇಶ ಸಾಕ್ಷಿಯಾಗುತ್ತಿದೆ. ಸಮಾಜವಾದಿ ಮತ್ತು ಬಿಜೆಪಿಗೆ ಮುನ್ನ ಬಿಎಸ್​ಪಿಯೇ ಈ ಬಾರಿ ಇದಕ್ಕೆ ನಾಂದಿ ಹಾಡಿದೆ.