More

    ಅದಕ್ಕ ಹೇಳೋದ, ಕಲತೊಕಿನ್ನ ಮಾಡ್ಕೋಬೇಕು ಅಂತ

    ಇದ ಒಂದ ನಾಲ್ಕ ವರ್ಷದ ಹಿಂದಿನ ಮಾತ, ನನ್ನ ಹೆಂಡ್ತಿಗೆ ನಾ ಸಿಂಡಿಕೇಟ್ ಮೆಂಬರ್ ಆಗೋದ ತಡಾ ತಾನೂ ಡಿಗ್ರಿ ಮಾಡ್ಬೇಕ ಅಂತ ಅನಸಲಿಕತ್ತ. ಹಂಗ MBA from symbiosis ಕಲತ ಸಿಂಡಿಕೇಟ್ ಮೆಂಬರ್ ಹೆಂಡ್ತಿ ಅಂದ ಮ್ಯಾಲೆ ಒಂದ ಡಿಗ್ರಿನರ ಇರಲಿ ಅಂತ ಅನಸ್ತ ಕಾಣ್ತದ. ಅಲ್ಲಾ, ನಂಗೂ ಅಕಿ ಕಲಿಲಿಕ್ಕೆ ಇಂಟರೆಸ್ಟ್ ತೋರಿಸ್ಯಾಳ ಅಂತ ಖುಷಿ ಆಗಿ at least ಕಲತೊಕಿನ್ನ ಲಗ್ನಾ ಮಾಡ್ಕೊಳಿಲ್ಲಾಂದರೂ ಮಾಡ್ಕೊಂಡೊಕಿಗೆ ಕಲಿಸಿದ್ದ ಪುಣ್ಯಾನರ ಹತ್ತಲಿ, ಮ್ಯಾಲೆ ಸಿಂಡಿಕೇಟ್ ಮೆಂಬರ್ ಆಗಿ ಹೆಂಡ್ತಿಗೆ ಒಂದ ಡಿಗ್ರಿ ಮಾಡಸಲಿಲ್ಲಾ ಅಂದರ ಹೆಂಗ ಅಂತ ‘ಹೂಂ’ ಅಂದೆ.

    ಸರಿ, ನಾ ಅಕಿ ಪಿಯುಸಿ ಮಾರ್ಕ್ಸ್​ಕಾರ್ಡ್ ಹಿಡಕೊಂಡ ಕಾಲೇಜ್ ಅಡ್ಮಿಶನ್ ಮಾಡಸಲಿಕ್ಕೆ ಹೋದೆ. ಇನ್ನ ಮಾರ್ಕ್ಸ್ ಕಾರ್ಡ್ ಒಳಗ ಅಕಿ ಹೆಸರ ‘ಸರ್ವಮಂಗಲಾ ಕುಲಕರ್ಣಿ’ ಅಂತ ಇತ್ತ. ಹಿಂಗಾಗಿ ಜಾಬಿನ ಕಾಲೇಜ್ ಹೊರಕೇರಿ ಸರ್ ‘ನಾವು ಅದ ಹೆಸರಿಲೇ ಅಡ್ಮಿಶನ್ ಮಾಡ್ಕೋತೇವಿ, ಗಂಡನ ಮನಿ ಹೆಸರ ‘ಪ್ರೇರಣಾ ಆಡೂರ’ ವ್ಯಾಲಿಡ್ ಅಲ್ಲಾ’ ಅಂತ ಅಂದ ಬಿಟ್ಟರು. ‘ಸರ್, ರೊಕ್ಕಾ ನಾ ಕೊಟ್ಟ ಕಲಸಲಿಕತ್ತೇನ್ರಿ ಅವರಪ್ಪಲ್ಲಾ, ಮ್ಯಾಲೆ ಅಕಿದ change of nameದ affidavit ಕೋಡ್ತೇನಿ, ಬೇಕಾರ ಮ್ಯಾರೇಜ್ ಸರ್ಟಿಫಿಕೇಟ್ ಕೋಡ್ತೇನಿ, ಆಧಾರ ಕೋಡ್ತೆನಿ’ ಅಂತ ಅಂದ್ರು ಅವರೇನ ಕೇಳಲಿಲ್ಲಾ.

    ’’Education will be as per SSLC/PUC marks card name only’ ಅಂತ ಕ್ಲೀಯರ್ ಆಗಿ ಹೇಳಿ ಬಿಟ್ಟರ. ನಾ ತಲಿಕೆಟ್ಟ ಆ ಹೆಸರಿಲೇ ಕಲಿಯೋದಿದ್ದರ ಕಲಸೋದ ಬ್ಯಾಡ ನಡಿ, ಏನ ಇಕಿ ಕಲತ ಗಂಡಗ ದುಡದ ಹಾಕೋದು ಅಷ್ಟರಾಗ ಅದ, ಮನ್ಯಾಗಿನ ಕೆಲಸಾ-ಬೊಗಸಿ ಮಾಡ್ಕೊಂಡ ಹೋದರ ಸಾಕ ಅಂತ ಅಕಿಗೆ ಮುಂದ ಕಲಸೋ ವಿಚಾರ ಬಿಟ್ಟ ಬಿಟ್ಟೆ.

    ಇನ್ನ ಇಕಿ ಸರ್ವಮಂಗಲಾ ಕುಲಕರ್ಣಿಯಿಂದ ಪ್ರೇರಣಾ ಆಡೂರ ಆಗಿದ್ದ ಒಂದ ದೊಡ್ಡ ಕಥಿ. ಹಂಗ ನಮ್ಮಲ್ಲೇ ಲಗ್ನ ಆದಮ್ಯಾಲೆ ಸಹಜ ಎಲ್ಲಾ ಹೆಣ್ಣಮಕ್ಕಳ ಹೆಸರು ಗಂಡನ ಮನಿಗೆ ಬಂದ ಮ್ಯಾಲೆ ಚೇಂಜ್ ಆಗೆ ಆಗ್ತಾವ. ಇನ್ನ ಇಕಿದ ತವರಮನಿ ಹೆಸರ ಅಗದಿ ಅಕಿ ತಕ್ಕ ಪ್ರಾಚೀನ ಇತ್ತ, ಹಿಂಗಾಗಿ ನಾ ಎಂಗೇಜಮೆಂಟ್ ಆಗಿ ಒಂದ ಐದ ದಿವಸಕ್ಕ ಅಕಿಗೆ ಫೋನ್ ಹೊಡದ ಒಂದ ಐದ ‘ಪ್ರ’ ಒಳಗ ಶುರು ಆಗೋ ಹೆಸರ ಆಪ್ಶನ್ಸ್ ಕೊಟ್ಟ ‘ಇದರಾಗ ಯಾ ಹೆಸರ ನಿಂಗ ಲೈಕ್ ಆಗ್ತದ ಹೇಳ. ಆ ಹೆಸರ ನಾ ಮದುವಿ ಆದ ಮ್ಯಾಲೆ ಇಡ್ತೇನಿ?’ ಅಂತ ಹೇಳಿದೆ.

    ಅಕಿ ಗಾಬರಿ ಆಗಿ, ‘ಇನ್ನು ದಣೇಯಿನ ಎಂಗೇಜಮೆಂಟ್ ಆಗಿಲ್ಲ, ಲಗ್ನ ನೋಡಿದರ ಒಂಬತ್ತ ತಿಂಗಳ ಬಿಟ್ಟ ಅದ ಈಗ ಹೆಸರ ಚೇಂಜ್ ಮಾಡಲಿಕತ್ತಿರಲಾ’ ಅಂದ್ಲು. ನಾ ಅಕಿಗೆ ‘ಏ ನೀ ಭಾಳ ತಲಿಕೆಡಸಿಗೋಬ್ಯಾಡ, ನಿಮ್ಮಪ್ಪ ಸಹಿತ ನಿನ್ನ ಹೆಸರ ಇಡಬೇಕಾರ ನಿನ್ನ ಕೇಳಿ ಇಟ್ಟಿಲ್ಲಾ, ಹಂತಾದ ನಾ ಕೇಳಿ ಇಡ್ಲಿಕತ್ತೇನಿ, ನೀ ಒಂದ ಹೆಸರ್ ಡಿಸೈಡ್ ಮಾಡ’ ಅಂತ ಅಂದೆ. ‘ಏನೋ ನನ್ನ ಪುಣ್ಯಾ ಮುಂದ ಹುಟ್ಟೋ ಮಕ್ಕಳಿಗೆ ಯಾ ಹೆಸರ ಇಡೋಣ ಅಂತ ಈಗ ಆಪ್ಶನ್ ಕೊಡಲಿಲ್ಲಾ’ ಅಂತ ಅಂದ ಕಡಿಕೆ ‘ಪ್ರೇರಣಾ’ ಇರಲಿ ಅಂದ್ಲು. ಹಿಂಗಾಗಿ ಆವಾಗಿಂದ ಅಕಿ ಪ್ರೇರಣಾ ಆಗಿ, ನನ್ನ ಜೀವನಕ್ಕ ಪ್ರೇರಣೆಯಾಗಿ ಜೀವಾ ತಿನ್ನಲಿಕತ್ತಿದ್ದ ನಿಮಗೇಲ್ಲಾ ಗೊತ್ತ ಅದ. ಹಂಗ ನಂಗ ಇಕಿ ಹೆಸರಿಂದ ಮೊದ್ಲ ಪ್ರಾಬ್ಲೇಮ್ ಆಗಿದ್ದ ಲಗ್ನಾಗಿ ಒಂದ್ಯಾರಡ ತಿಂಗಳಕ್ಕ.

    ನಮ್ಮ LIC ದೋಸ್ತ್ ಲಗ್ನ ಆಗೋ ಪುರಸತ್ತ ಇಲ್ಲದ ಹೆಂಡ್ತಿದ ಒಂದ ಪಾಲಿಸಿ ಮಾಡಸ ಅಂತ ಗಂಟ ಬಿದ್ದಾ, ನಾ ದಣೇಯಿನ ಲಗ್ನ ಆಗೇದ ಇನ್ನ ಹೊಸಾ ಪಾಲಿಸಿ ಮಾಡಿಸಿ ಅವ್ವನ ಬಿಟ್ಟ ಹೆಂಡ್ತಿಗೆ ನಾಮಿನೀ ಮಾಡಿದರ ನಮ್ಮವ್ವ ಬೇಜಾರ ಆಗ್ತಾಳ ಅಂತ ಹೇಳಿ ಹೆಂಡ್ತಿ ಪಾಲಿಸಿ ಮಾಡಿಸಿ ನಾ ನಾಮೀನೀ ಆಗಬೇಕು ಅಂತ ವಿಚಾರ ಮಾಡಿದೆ. ಅವಂಗೇನ ಒಟ್ಟ ಪಾಲಿಸಿ ಸಿಕ್ಕರ ಸಾಕಾಗಿತ್ತ, ಸರಿ ನಿನ್ನ ಹೆಂಡ್ತಿ ಮಾರ್ಕ್ಸ್ ಕಾರ್ಡ್ ತರಸ ಅಂತ ಹೇಳಿದಾಗ ಅವರ ಮನಿಯಿಂದ ಎಸ್ಸೆಸ್ಸೆಲ್ಸಿ ಮಾರ್ಕ್ಸ್​ಕಾರ್ಡ್ ತರಸಿದೆ. ಆವಾಗ ಫಸ್ಟ್ ಟೈಮ್ ಹೆಸರಿನ ಪ್ರಾಬ್ಲೇಮ್ ಸ್ಟಾರ್ಟ್ ಆತ, ಅಕಿ

    ಮಾರ್ಕ್ಸ್​ಕಾರ್ಡ್ ಒಳಗ ‘ಸರ್ವಮಂಗಲಾ ಕುಲಕರ್ಣಿ’ ಅಂತ ಇದ್ದದ್ದಕ್ಕ ಪಾಲಿಸಿ ಒಳಗೂ ಹಂಗ ಬಂತ.

    ‘ಏ, ಇದೇನ ಹಿಂಗ್ಯಾಕ’ ಅಂತ ಕೇಳಿದರ ಮಾರ್ಕ್ಸ್

    ಕಾರ್ಡ್ ಒಳಗ ಯಾ ಹೆಸರ ಇರ್ತದ ಆ ಹೆಸರಿಂದ ಪಾಲಿಸಿ ಮಾಡೋದ ಅಂತ ಅಂದಾ. ನಾ ಭಾಳ ತಲಿಗೆಡಸಿಗೊಂಡಿದ್ದಕ್ಕ ‘ಏ, ಪಾಲಿಸಿ ಯಾ ಹೆಸರಿಲೇ ಇದ್ದರ ಏನ ಮಾಡೋಂವಾ, ನಾಮಿನೀ ನೀ ಇದ್ದಿ ಇಲ್ಲೊ.. ಸಾಕ ಸುಮ್ಮನೀರ’ ಅಂತ ಅಂದಾ, ನಂಗೂ ಅದ ಖರೇ ಅನಿಸಿ ಸುಮ್ಮನಾಗಿದ್ದೆ. ಅದರಾಗ ನಾ ಅಕಿದ ಮನಿಬ್ಯಾಕ್ ಪಾಲಿಸಿ ಮಾಡ್ಸಿದ್ದೆ, ಅಲ್ಲಾ ನಂಗೊತ್ತಿತ್ತ, ಒಮ್ಮೆ ಅತ್ತಿ ಮನೇಯವರ ವರದಕ್ಷಿಣಾ ಕೊಟ್ಟ ಮದ್ವಿ ಮಾಡಿ ಕೊಟ್ಟರಂದರ ಮತ್ತ ತಿರಗಿ ಅಳಿಯಾಗ ಮೂಸ ನೋಡಂಗಿಲ್ಲಾ, ಭಾಳಂದರ ಒಂದ ಬಿಟ್ಟ ಎರಡ ಬಾಣಂತನ ಮಾಡಬಹುದು, ಇನ್ನ ಹಗಲಗಲಾ ಕ್ಯಾಶ್ ಅಂತೂ ಬರಂಗಿಲ್ಲಾ ಅಂತ ಮನಿಬ್ಯಾಕ್ ಪಾಲಿಸಿ ಮಾಡಿಸಿದ್ದೆ. ಹಂಗ ಪ್ರಿಮಿಯಮ್ ನಾನ ತುಂಬತಿದ್ದೆ ಆ ಮಾತ ಬ್ಯಾರೆ.

    ಮುಂದ ಐದ ವರ್ಷಕ್ಕ ಅಕಿ ಹೆಸರಿಲೇ ಇಪ್ಪತ್ತ ಸಾವಿರದ್ದ ಚೆಕ್ ಬಂತ, ಅಕಿ ಹೆಸರಿಲೇ ಅಂದರ ‘ಸರ್ವಮಂಗಲಾ ಕುಲಕರ್ಣಿ’ ಅಂತ ಬಂತ. ಇನ್ನ ಆ ಹೆಸರಿಲೇ ಬ್ಯಾಂಕ್ ಅಕೌಂಟ್ ಇರಲಿಲ್ಲಾ. ನಾ ಅಕಿ ಅತ್ತಿಮನಿಗೆ ಬರೋ ಪುರಸತ್ತ ಇಲ್ಲದ ವೋಟರ್ಸ್ ಐ.ಡಿ. ಮಾಡಿಸಿಸಿ ‘ಪ್ರೇರಣಾ ಆಡೂರ’ ಅಂತ ಅಕೌಂಟ್ ಓಪನ್ ಮಾಡಸಿದ್ದೆ.

    ಇನ್ನ ಈ ಚೆಕ್ ಹೆಂಗ ಪಾಸ್ ಆಗಬೇಕ? ಅದರಾಗ ಇಪ್ಪತ್ತ ಸಾವಿರ ರೂಪಾಯಿ ಬ್ಯಾರೆ, ಪಾಪ ಕಡಿಕೆ ಬ್ಯಾಂಕನವರ ಮ್ಯಾರೇಜ್ ಸರ್ಟಿಫಿಕೇಟ್ ಇದ್ದರ ಕೊಡ್ರಿ ಅಂದರು ಖರೆ ಆದರ ಆವಾಗ ನನ್ನ ಕಡೆ ಅದು ಇದ್ದಿದ್ದಿಲ್ಲಾ. ನಾ ಲಗ್ನಾಗಿ ಒಂದ ಏಳೆಂಟ ವರ್ಷ ನೋಡಿ ಆಮ್ಯಾಲೆ ಸೆಟ್ ಆದರ ರೆಜಿಸ್ಟ್ರೇಶನ್ ಮಾಡಸಬೇಕ ಅಂತ ಸುಮ್ಮನ ಬಿಟ್ಟಿದ್ದೆ, ಕಡಿಕೆ ಇನ್ನ ರೆಜಿಸ್ಟ್ರೇಶನ್ ಅರ್ಜೆಂಟ್ ಆಗಿ ಅಂತೂ ಆಗಂಗಿಲ್ಲಾ, ಹಿಂಗಾಗಿ ಸರ್ವಮಂಗಲಾ ಕುಲಕರ್ಣಿ ಉರ್ಫ್ ಪ್ರೇರಣಾ ಆಡೂರ ಅಂತ ಒಂದ change of nameದ ಕೋರ್ಟ್ ಅಫಿಡವಿಟ್ ಮಾಡಿಸಿಸಿ ಅದರ ಬೇಸ್ ಮ್ಯಾಲೆ ಚೆಕ್ ಕ್ಲೀಯರ್ ಮಾಡಿಸ್ಗೊಂಡೆ. ಅಲ್ಲಾ ನಾ ಕಷ್ಟ ಪಟ್ಟ ಪ್ರೀಮಿಯಮ್ ತುಂಬಿದ್ದ ಅದನ್ನ ಹೆಂಗ ಬಿಡಲಿಕ್ಕ ಬರತದ? ಆದರೂ ಏನ ಅನ್ನರಿ ಹಿಂಗ ಹೆಣ್ಣಮಕ್ಕಳ ಲಗ್ನಾಗಿ ಗಂಡನ ಮನಿಗೆ ಬಂದ ಹೆಸರು-ಅಡ್ರೇಸ್ ಚೆಂಜ್ ಆದ ಮ್ಯಾಲೆ ಆ ಹೆಸರಿಲೆ ಕಲಿಲಿಕ್ಕೆ ಆಗಂಗಿಲ್ಲಾ ಅಂದರ ತಪ್ಪ ಬಿಡ್ರಿ. ಅದಕ್ಕ ಹೇಳೊದ ನಾವು ಮಾಡ್ಕೋಬೇಕಾರ ಕಲತೊಕಿನ್ನ ಮಾಡ್ಕೋಬೇಕು ಅಂತ.

    ನನ್ನ ಹೆಂಡ್ತಿ ನೋಡಿದರ ನಂಗ ‘ನೀವು ನನ್ನ ಹೆಸರ ಚೇಂಜ್ ಮಾಡ್ಸಿದ್ದಕ್ಕ ನಂದ ಹೈಯರ್ ಎಜುಕೇಶನ್ ಆಗಲಿಲ್ಲಾ, ನೀವು ಸಿಂಡಿಕೇಟ್ ಮೇಂಬರ್ ಇದ್ದಾಗ ಇರೋ ಒಂದ ಹೆಂಡ್ತಿಗೆ ಡಿಗ್ರಿ ಮಾಡಸಲಿಕ್ಕೆ ಆಗಲಿಲ್ಲಾ’ ಅಂತ ಹಂಗಸ್ತಾಳ. ಅದಕ್ಕ ಈಗ ನಾ ಏನ ಮಾಡೇನಿ ಹೇಳ್ರಿ? ಹೆಂಗಿದ್ದರೂ ಮಗಳದ ಇನ್ನೂ ಆನ್​ಲೈನ್ ಕ್ಲಾಸ್ ನಡದಾವ, ಅಕಿ ಜೊತಿ ಇಕಿಗೂ ಕ್ಲಾಸಿಗೆ ಕೂಡಸಿರ್ತೇನಿ. ಅದರಾಗ ಮೊಬೈಲನಾಗ ಕ್ಲಾಸ್ ಬ್ಯಾರೆ, ಏನಿಲ್ಲದ ತಲಿದಿಂಬ ಬುಡಕ್ ಮೊಬೈಲ್ ಇಟ್ಕೊಂಡ ಮಲ್ಕೋಳೊಕಿ ಇನ್ನ ಮೊಬೈಲನಾಗ ಕಲಿಯೋದ ಅಂದರ ಬಿಡ್ತಾಳ? ಈಗ ಮಗಳ ಜೊತಿ ಮುಲ್ಕಿ ಪರೀಕ್ಷಾಕ್ಕ ರೆಡಿ ಆಗಲಿಕತ್ತಾಳ. ಅಲ್ಲಾ ಹಂಗ knowledge is important not certificate ಅಂತ ನಾನು ಸುಮ್ಮನ ಇದ್ದೇನಿ. ಹಂಗ ನನ್ನ ಅರ್ಥಾ ಮಾಡ್ಕೊಂಡ ಇಷ್ಟ ವರ್ಷಾ ಜೀವನಾ ಮಾಡ್ಯಾಳ ಅಂದರ ಅದೇನ ಯಾ ಡಿಗ್ರಿಕ್ಕಿಂತಾ ಕಡಿಮೇನ ಅಲ್ಲಾ, ಅದಕ್ಕ ಅಕಿಗೆ honorary doctorate ಕೊಡಬೇಕ ಆ ಮಾತ ಬ್ಯಾರೆ. ನೋಡ್ರಿ, ಇನ್ನಮ್ಯಾಲೆ ಲಗ್ನಾ ಮಾಡ್ಕೋಳೊರ ಒಂದ ಸರತೆ ವಿಚಾರ ಮಾಡ್ರಿ, ಒಂದೂ ಕಲತೊಕ್ಕಿನ್ನ ಮಾಡ್ಕೋರಿ ಇಲ್ಲಾ… ಮುಂದಿಂದ ನಾ ಹೇಳಂಗಿಲ್ಲಾ, ಅದ ನಿಮಗ ಬಿಟ್ಟದ್ದ.

    (ಲೇಖಕರು ಹಾಸ್ಯ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts