1 ಕ್ಷೇತ್ರಕ್ಕೆ 1800 ಬೋರ್​ವೆಲ್!

ಬೆಂಗಳೂರು: ಬಡ ರೈತರಿಗಾಗಿ ಜಾರಿಗೆ ಬಂದಿರುವ ‘ಗಂಗಾ ಕಲ್ಯಾಣ’ಯೋಜನೆಯಲ್ಲಿನ ಅಕ್ರಮಗಳು ಅಗೆದಷ್ಟೂ ಹೊರಬರುತ್ತಿವೆ. ಕೊಳವೆಬಾವಿ ಹೆಸರಿನಲ್ಲಿ ನಡೆಯುತ್ತಿರುವ ಗೋಲ್ಮಾಲನ್ನು ವಿಜಯವಾಣಿ ಬಯಲಿಗೆಳೆದ ನಂತರ, ಪತ್ರಿಕೆಯ ಓದುಗ, ಹೈಕೋರ್ಟ್ ವಕೀಲ ವೇಣುಗೋಪಾಲ್ ಯೋಜನೆಯಲ್ಲಿ ನಡೆದಿರುವ ಮತ್ತಷ್ಟು ಅವ್ಯವಹಾರದ ದಾಖಲೆಗಳನ್ನು ಪತ್ರಿಕೆಗೆ ತಲುಪಿಸಿದ್ದಾರೆ. ಒಂದೇ ಕ್ಷೇತ್ರಕ್ಕೆ 1800 ಕೊಳವೆಬಾವಿ ಕೊರೆಯಲು ಅನುಮತಿ ನೀಡಿರುವುದನ್ನು ದೃಢಪಡಿಸಿರುವ ಈ ದಾಖಲೆಗಳನ್ನು ಪರಿಶೀಲಿಸಿ ವಿಶೇಷ ವರದಿ ಸಿದ್ಧಪಡಿಸಲಾಗಿದೆ.

ಹೇಗೆ ಅಕ್ರಮ?: 2016-2017 ಹಾಗೂ 2017-18ರ ಸಾಲಿನಲ್ಲಿ ಟೆಂಡರ್ ಕರೆಯದೆ ಹೊಳಲ್ಕೆರೆ ಕ್ಷೇತ್ರಕ್ಕೆ 36 ಕೋಟಿ ರೂ. ವೆಚ್ಚದ 1800 ಕೊಳವೆಬಾವಿ ಕೊರೆಸಲು 15 ಗುತ್ತಿಗೆದಾರರಿಗೆ ಕಾನೂನು ಬಾಹಿರವಾಗಿ ಅನುಮತಿ ನೀಡಲಾಗಿದೆ. ಹೊಳಲ್ಕೆರೆ ಅಂದಿನ ಸಮಾಜ ಕಲ್ಯಾಣ ಖಾತೆ ಸಚಿವ ಎಚ್. ಆಂಜನೇಯ ಪ್ರತಿನಿಧಿಸುವ ಕ್ಷೇತ್ರ. ವಾಸ್ತವವಾಗಿ 1 ಕ್ಷೇತ್ರಕ್ಕೆ (ಜನಸಂಖ್ಯೆ ಆಧರಿಸಿ) 25ರಿಂದ 50 ಕೊಳವೆಬಾವಿ ಕೊರೆಸಬೇಕೆಂಬ ಸ್ಪಷ್ಟ ನಿಯಮವಿದೆ. ಆದರೆ, ಗುತ್ತಿಗೆದಾರರೊಂದಿಗೆ ಶಾಮೀಲಾಗಿ 1800 ಕೊಳವೆಬಾವಿಗೆ ಅನುಮತಿ ನೀಡಿದ್ದಲ್ಲದೆ ಕೊಳವೆಬಾವಿಗಳನ್ನು ಶೀಘ್ರವಾಗಿ ಕೊರೆಸಲು 18 ತಾಲೂಕು ಅಭಿವೃದ್ಧಿ ಅಧಿಕಾರಿಗಳನ್ನೂ ಹೆಚ್ಚುವರಿ ಕೆಲಸದ ಹೆಸರಲ್ಲಿ 2018 ಜ.25ರಿಂದ ಹೊಳಲ್ಕೆರೆ ಉಸ್ತುವಾರಿಗೆ ನಿಯೋಜನೆ ಮಾಡಿರುವುದು ದಾಖಲೆ ಸಮೇತ ಬಹಿರಂಗವಾಗಿದೆ.

1.80 ಕೋಟಿ ಕಿಕ್​ಬ್ಯಾಕ್?: ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಲು ಮತ್ತು ಪ್ರಧಾನ ವ್ಯವಸ್ಥಾಪಕ ಟಿ.ಕುಮಾರ್ ವಿರುದ್ಧ ನೇರವಾಗಿ ಅಕ್ರಮದ ಆರೋಪ ಮಾಡಲಾಗಿದೆ. ಟೆಂಡರ್ ಕರೆಯದೆ 36 ಕೋಟಿ ರೂ. ವೆಚ್ಚದಲ್ಲಿ 1800 ಬೋರ್​ವೆಲ್​ಗಳನ್ನು ಕೊರೆಯಲು 2018 ಜ.22ರಂದು ಒಂದೇ ದಿನ ಎಲ್ಲ ಕಾರ್ಯಾದೇಶ ಹೊರಡಿಸಿದ್ದಾರೆ. ಪ್ರತಿ ಕೊಳವೆಬಾವಿಗೆ 10 ಸಾವಿರ ರೂ. ಕಮಿಷನ್​ನಂತೆ 1.80 ಕೋಟಿ ರೂ. ಕಿಕ್​ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ದೇವರಾಜ ಅರಸು ನಿಗಮದಿಂದ ಅನುಮತಿ ಪಡೆದಿರುವ 800 ಕೊಳವೆಬಾವಿಗಳನ್ನು ಇನ್ನೂ ಕೊರೆಸಿಲ್ಲ ಎನ್ನಲಾಗಿದೆ.

ತನಿಖೆ ಪ್ರಗತಿ: ನಿಯಮ ಉಲ್ಲಂಘಿಸಿ 1800 ಕೊಳವೆಬಾವಿ ಕೊರೆಯಲು ಅನುಮತಿ ನೀಡಿರುವ ಕುರಿತು ಎಸಿಬಿಯಲ್ಲಿ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಅಧಿಕಾರಿಗಳು ನಿಗಮದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಟೆಂಡರ್ ನಿಯಮದಂತೆ ಹೊಳಲ್ಕೆರೆ ಕ್ಷೇತ್ರಕ್ಕೆ ಶೇ.25 ಹೆಚ್ಚುವರಿ ಬೋರ್​ವೆಲ್ ಕೊರೆಯಲು ಆದೇಶಿಸಿರುವುದು ನಿಜ. ಕೆಲವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ತಪು್ಪ ಸಾಬೀತಾದರೆ ರಾಜೀನಾಮೆ ನೀಡಲು ಸಿದ್ಧ.

| ಶ್ರೀನಿವಾಸಲು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಂಡಿ

ವಿಜಯವಾಣಿ ಬಯಲಿಗೆಳೆದಿತ್ತು

ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್​ವೆಲ್ ಏಜೆನ್ಸಿ ಮತ್ತು ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಅನುದಾನ ವಂಚಿಸುತ್ತಿದ್ದಾರೆ. ನಕಲಿ ಭೂಗರ್ಭ ಸರ್ವೆಕ್ಷಣಾ ವರದಿ (ಜಲಬಿಂದು ಗುರುತು ಪ್ರಮಾಣಪತ್ರ) ತಯಾರಿಸಿ ಮತ್ತು ಫಲಾನುಭವಿಗಳನ್ನು ಹೆದರಿಸಿ ಹಣ ಸುಲಿಗೆ ಮಾಡುತ್ತಿರುವುದನ್ನು ಬಯಲಿಗೆಳೆದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಇದಕ್ಕಾಗಿ ಪ್ರತ್ಯೇಕ ಸಹಾಯವಾಣಿ ಕೇಂದ್ರವನ್ನೂ ಆರಂಭಿಸಿತ್ತು. ಆದರೀಗ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವೇ ಆರೋಪ ಕೇಳಿಬಂದಿದೆ.

ಹೇಗೆಲ್ಲ ನಡೆಯುತ್ತೆ ಅಕ್ರಮ?

  • ಜಲಬಿಂದು ಗುರುತಿನ ಪ್ರಮಾಣಪತ್ರ ಪಡೆಯದೆಯೇ ಶೇ.75 ಕೊಳವೆಬಾವಿ ಕೊರೆತ
  • ಶೇ.75 ಕೇಸಲ್ಲಿ ನಕಲಿ ಪ್ರಮಾಣಪತ್ರದ ಮೂಲಕ ಹಣ ಬಿಡುಗಡೆ ಮಾಡಿಸಿಕೊಂಡ ಗುತ್ತಿಗೆದಾರರು
  • ಜಿಲ್ಲಾ, ತಾಲೂಕು ವ್ಯವಸ್ಥಾಪಕರ ಸಹಿ ಇಲ್ಲದೆಯೆ ಶೇ.60 ಪ್ರಮಾಣಪತ್ರಗಳ ಪಾಸು
  • ಕೊಳೆವೆಬಾವಿ ಕೊರೆದ ವೇಳೆ ರೀಗ್ ಸಮೇತ ಫಲಾನುಭವಿ, ಅಧಿಕಾರಿ ಭಾವಚಿತ್ರ ಇಲ್ಲ
  • ಫಲಾನುಭವಿ ಬದಲು ಬೇರೆ ವ್ಯಕ್ತಿಯ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ರಿಲೀಸ್
  • ಕೇಸಿಂಗ್ ಪೈಪ್, ಇತರೆ ವೆಚ್ಚ ಕೊಡಬೇಕೆಂದು ಫಲಾನುಭವಿಗಳಿಂದಲೇ ಹಣ ವಸೂಲಿ
  • ಬೋರ್​ವೆಲ್ ಕೊರೆಯುವ ಸ್ಥಳದಲ್ಲಿ ನೀರಿನ ಲಭ್ಯತೆ ಬಗ್ಗೆ ಅವೈಜ್ಞಾನಿಕ ದೃಢೀಕರಣ
  • ವಿತರಿಸಿರುವ ಪಂಪ್​ಸೆಟ್, ಪೂರಕ ಸಾಮಗ್ರಿಗಳಿಗೆ ಥರ್ಡ್ ಪಾರ್ಟಿ ಪರೀಕ್ಷೆ ಪತ್ರ ಇಲ್ಲ

 

ಕ್ಷೇತ್ರದಲ್ಲಿ ಕೆಲವೆಡೆ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ, ಕೆಲವೆಡೆ ಕೊರೆದಿದ್ದೇವೆ ಎಂದು ಬಿಲ್ ಮಾಡಿಸಿಕೊಂಡಿದ್ದಾರೆ. ಈ ಕುರಿತು ಸದನದಲ್ಲಿ ಪ್ರಶ್ನೆ ಕೇಳಿದ್ದು, 21ರಂದು ಸರ್ಕಾರ ಉತ್ತರ ನೀಡಲಿದೆ.

| ಎಂ.ಚಂದ್ರಪ್ಪ, ಹೊಳಲ್ಕೆರೆ ಬಿಜೆಪಿ ಶಾಸಕ

ಗಂಗಾ ಕಲ್ಯಾಣ ಗೋಲ್ಮಾಲ್!

ಗಂಗಾ ಕಲ್ಯಾಣ ಅಕ್ರಮ ಸಹಿಸಲ್ಲ

ಗಂಗಾ ಕಲ್ಯಾಣದಲ್ಲಿ ಭಾರೀ ಭ್ರಷ್ಟಾಚಾರ