ಬಗರ್ಹುಕುಂ ಸಮಸ್ಯೆಯ ಪರಿಹಾರಕ್ಕೆ ರಾಜ್ಯದ ಲಕ್ಷಾಂತರ ರೈತರು ಕಾಯುತ್ತಿದ್ದು, 40 ಲಕ್ಷ ಎಕರೆ ಸಕ್ರಮಕ್ಕೆ ಎದುರು ನೋಡುತ್ತಿದ್ದಾರೆ. ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬ ಮಾತಿನಂತೆ ಅಕ್ರಮ-ಸಕ್ರಮಕ್ಕಾಗಿ ಬಗರ್ಹುಕುಂ ಸಮಿತಿಗಳನ್ನು ರಚಿಸಲು ಸರ್ಕಾರ ಸೂಚಿಸಿದ್ದರೂ, ಶಾಸಕರ ನಿರ್ಲಕ್ಷ್ಯ, ವಿಳಂಬಧೋರಣೆಯಿಂದ ಸಮಸ್ಯೆ ನನೆಗುದಿಗೆ ಬಿದ್ದಿದೆ. ಹೀಗಾಗಿ, ಶಾಸಕರಿಗೆ ಖಡಕ್ ಎಚ್ಚರಿಕೆ ರವಾನಿಸಿರುವ ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸುವ ಸ್ಪಷ್ಟ ಸಂದೇಶ ರವಾನಿಸಿದೆ. ಅಲ್ಲದೆ, ತಾಲೂಕುಗಳಲ್ಲಿ ಬಗರ್ಹುಕುಂ ಸಮಿತಿಗಳನ್ನು ರಚನೆ ಮಾಡಲು ಹೆಸರು ನೀಡುವಂತೆ ಕಂದಾಯ ಸಚಿವರು ಎಲ್ಲ ಶಾಸಕರಿಗೂ ಪತ್ರ ಬರೆದಿದ್ದಾರೆ. 231 ತಾಲೂಕುಗಳಲ್ಲಿ ಇನ್ನೂ ಸಮಿತಿ ರಚನೆ ಆಗಬೇಕಿದೆ.
ಅಲ್ಲದೆ, ನಮೂನೆ 57ರಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ನಂತರ 2 ಲಕ್ಷ ಹೊಸ ಅರ್ಜಿಗಳು ಸಲ್ಲಿಕೆಯಾಗಿವೆ ಎಂಬುದು ಗಮನಾರ್ಹ. ಸರ್ಕಾರ ಬಗರ್ಹುಕುಂ ಸಮಿತಿಗಳನ್ನು ಆದಷ್ಟು ಬೇಗ ರಚಿಸಬೇಕು ಎಂದು ರೈತ ಮುಖಂಡರು ಆಗ್ರಹಿಸುತ್ತಲೇ ಬಂದಿದ್ದು, ಕಂದಾಯ ಕಾಯ್ದೆ ತಿದ್ದುಪಡಿಗೂ ಒತ್ತಾಯಿಸಿದ್ದಾರೆ. ಯಾವ ಶಾಸಕರು ಹೆಸರು ಗಳನ್ನು ಕಳುಹಿಸವುದಿಲ್ಲವೋ ಅಂತಹ ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳಿಂದಲೇ ಪಟ್ಟಿ
ತರಿಸಿಕೊಂಡು, ಸಮಿತಿಗಳನ್ನು ರಚನೆ ಮಾಡಲು ಸರ್ಕಾರ ನಿರ್ಧರಿಸುವುದು ಸೂಕ್ತ ವಾಗಿಯೇ ಇದೆ. ಹಲವು ವರ್ಷಗಳಿಂದ ಈ ಸಮಸ್ಯೆ ಜೀವಂತವಾಗಿದ್ದು, ರೈತರು ಪರಿಹಾರಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಅಕ್ರಮ-ಸಕ್ರಮ ಪ್ರಕ್ರಿಯೆ ಪೂರ್ಣಗೊಂಡಿದ್ದೇ ಆದಲ್ಲಿ 40 ಲಕ್ಷ ಎಕರೆ ಭೂಮಿ ರೈತರಿಗೆ ಸಿಗಲಿದೆ. ಈ ಮೂಲಕ ಸೊರಗುತ್ತಿರುವ ಕೃಷಿರಂಗ ಮತ್ತು ನಷ್ಟವನ್ನೇ ಎದುರಿಸುತ್ತಿರುವ ರೈತರಿಗೆ ಸಂಜೀವಿನಿಯಾಗಿ ಪರಿಣಮಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ನಿಯಮಗಳಲ್ಲಿನ ಗೊಂದಲ, ಅಧಿಕಾರಶಾಹಿಯ ವರ್ತನೆ, ಜನಪ್ರತಿನಿಧಿಗಳ ನಿಷ್ಕಾಳಜಿ ಮತ್ತು ಕೆಲ ತಾಂತ್ರಿಕ ಕಾರಣಗಳೂ ಸೇರಿ ಬಗರ್ಹುಕುಂ ಪ್ರಕ್ರಿಯೆ ಹಾಗೇ ಉಳಿದುಕೊಂಡಿದೆ. ಪ್ರಸಕ್ತ ನಗರ ಹಾಗೂ ಪಟ್ಟಣದ ಹೊರವಲಯಗಳಲ್ಲಿ ಅಕ್ರಮ ಸಾಗುವಳಿ ಸಕ್ರಮಕ್ಕೆ ಕೆಲ ನಿರ್ಬಂಧವಿದೆ. ಅದನ್ನು ತೆರವು ಮಾಡಬೇಕು ಎಂಬ ಬೇಡಿಕೆ ಇದೆ. ಅಲ್ಲದೆ, ಈ ಹಿಂದೆ ಗೋಮಾಳ ಜಮೀನಿನ ವಿಲೇವಾರಿಗೆ ಒಂದು ಅವಧಿಗೆ ಅವಕಾಶ ನೀಡಲಾಗಿತ್ತು.
ಆದರೆ, ಹೊಸದಾಗಿ ಸಾಗುವಳಿ ಮಾಡುತ್ತಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ. ಈ ತಿಂಗಳ ಅಂತ್ಯದೊಳಗೆ ಸಮಿತಿಗಳನ್ನು ರಚನೆ ಮಾಡಿ, ಅದರ ಮಾಹಿತಿಯನ್ನು ನ್ಯಾಯಾಲಯಕ್ಕೂ ನೀಡಬೇಕಿದೆ. ಹಾಗಾಗಿಯೇ, ಸರ್ಕಾರ ತಡವಾಗಿಯಾದರೂ ಎಚ್ಚೆತ್ತಿದೆ. ಅಕ್ರಮ-ಸಕ್ರಮಕ್ಕಾಗಿ ಬಗರ್ಹುಕುಂ ಸಮಿತಿಗಳನ್ನು ರಚಿಸಲು ಮುಂದಾಗಿದೆ. ಈ ಪ್ರಕ್ರಿಯೆಯಲ್ಲಿ ಗೊಂದಲಗಳಿಗೆ ಆಸ್ಪದ ನೀಡದಂತೆ, ನೈಜ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಮತ್ತು ರೈತರು ಅನಗತ್ಯ ತೊಂದರೆ ಎದುರಿಸದಂತೆ ಜಾಗ್ರತೆ ವಹಿಸಬೇಕು. ಶಾಸಕರು
ತಮ್ಮ ತಾಲೂಕುಗಳಲ್ಲಿನ ಸಂಬಂಧಿತ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಕಾಳಜಿ ವಹಿಸಬೇಕು. ಈ ಪ್ರಕ್ರಿಯೆಯಲ್ಲಿನ ತೊಡಕುಗಳು ಶೀಘ್ರ ನಿವಾರಣೆ ಆಗಬೇಕು.