ರಕ್ಷಣೆ ಮರೀಚಿಕೆಯಾಗದಿರಲಿ

ರ್ನಾಟಕದಲ್ಲಿ ಮಹಿಳೆಯರ ನಾಪತ್ತೆ, ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆಯೆಂಬ ಅಂಕಿ-ಅಂಶ ನಿಜಕ್ಕೂ ಆಘಾತಕಾರಿ. ವೇಶ್ಯಾವಾಟಿಕೆ ಜಾಲ, ಕೌಟುಂಬಿಕ ಕಲಹ, ಪ್ರೀತಿ-ಪ್ರೇಮದ ಸುಳಿಗೆ ಸಿಲುಕಿರುವಿಕೆ ಹೀಗೆ ವೈವಿಧ್ಯಮಯ ಕಾರಣಗಳಿಂದಾಗಿ ರಾಜ್ಯದಲ್ಲಿ ಪ್ರತಿನಿತ್ಯ 40 ಹೆಣ್ಣುಮಕ್ಕಳು ಕಾಣೆಯಾಗುತ್ತಿರುವುದು ಒಂದೆಡೆಯಾದರೆ, ಸರಾಸರಿ ಮೂರು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಮಾಹಿತಿ ನಮ್ಮ ಸಮಾಜವು ಎತ್ತ ಸಾಗುತ್ತಿದೆ ಎಂಬುದನ್ನು ಅವಲೋಕಿಸಿ ತಿದ್ದಿಕೊಳ್ಳುವುದಕ್ಕೆ ಅನುವುಮಾಡಿಕೊಡಬೇಕು.

ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು ಸೇರಿದಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಅಭಿವೃದ್ಧಿಯ ದಾಪುಗಾಲಿಟ್ಟು ಸಿದ್ಧಿ ಮತ್ತು ಪ್ರಸಿದ್ಧಿಯನ್ನು ಪಡೆದುಕೊಂಡಿರುವ, ತನ್ಮೂಲಕ ಜಾಗತಿಕ ನಕ್ಷೆಯಲ್ಲಿ ತನ್ನದೇ ಆದ ಸ್ಥಾನವನ್ನು ಗುರುತಿಸಿಕೊಂಡಿರುವ ಕರ್ನಾಟಕ ಹೀಗೆ ಕಾರಣವಲ್ಲದ ಕಾರಣಕ್ಕೆ ಕಳಂಕ ತಗುಲಿಸಿಕೊಳ್ಳುವಂತಾಗುವುದನ್ನು ಸರ್ವಥಾ ಸ್ವೀಕರಿಸಲಾಗದು. ಕಾರಣ, ಅಭಿವೃದ್ಧಿಪಥದಲ್ಲಿ ಇರಿಸಿರುವ ಹೆಜ್ಜೆ ಅದೆಷ್ಟೇ ಸುಸ್ಥಿರವಾಗಿದ್ದರೂ, ಸಾಮಾಜಿಕ ಸುರಕ್ಷತೆ ಎಂಬ ಪರಿಕಲ್ಪನೆಯ ನೆಲೆಗಟ್ಟೇ ಕುಸಿಯುತ್ತಿದೆ ಎಂದಾದಲ್ಲಿ ಸಾಮಾಜಿಕ ವ್ಯವಸ್ಥೆ ಮತ್ತು ಅಸ್ಮಿತೆ ಅಪಾಯದ ಹೊಸ್ತಿಲಲ್ಲಿವೆ ಎಂದೇ ಅರ್ಥ. ಸಮಾನತೆ ಮತ್ತು ಆಧುನಿಕ ಚಿಂತನೆಗಳಿಗೆ ಒಡ್ಡಿಕೊಂಡಿರುವ ಕಾಲಘಟ್ಟದಲ್ಲೂ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡ ದೌರ್ಜನ್ಯ-ಕಿರುಕುಳ- ಅಪರಾಧಗಳು ಏರುಗತಿಯಲ್ಲಿವೆಯೆಂದರೆ, ಸಂಬಂಧಪಟ್ಟವರು ‘ತಪ್ಪಾಗಿರುವುದೆಲ್ಲಿ?’ ಎಂಬ ಪ್ರಶ್ನೆ ಕೇಳಿಕೊಳ್ಳುವ, ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಬಂದಿದೆ. ಇಂಥ ಅಪರಾಧಗಳನ್ನು ಮಟ್ಟಹಾಕುವಂಥ ಕಾನೂನು-ಕಟ್ಟಳೆಗಳು ನಮ್ಮ ವ್ಯವಸ್ಥೆಯಲ್ಲಿ ಬಹಳ ಕಾಲದಿಂದ ಅಸ್ತಿತ್ವದಲ್ಲಿದ್ದರೂ, ದುರುಳರಿಗೆ ಕಡಿವಾಣ ಹಾಕಲಾಗುತ್ತಿಲ್ಲ ಎಂದರೆ ಅದನ್ನು ವ್ಯವಸ್ಥೆಯ ಸೋಲು, ಸಾಮಾಜಿಕ ಹೊಣೆಗಾರಿಕೆಯಿಂದ ವಿಮುಖತೆ ಎಂದೇ ಹೇಳಬೇಕಾಗುತ್ತದೆ.

ಹಾಗಂತ, ಇದಕ್ಕೊಂದು ಪರಿಹಾರದ ಮಾರ್ಗ ಕಂಡುಕೊಳ್ಳುವುದು ಸರ್ಕಾರದ ಹೊಣೆಯಷ್ಟೇ ಎಂದು ಮಿಕ್ಕವರು ಕೈಕೊಡವಿಕೊಳ್ಳುವಂತಿಲ್ಲ; ಕಾನೂನಿನ ಪ್ರಯತ್ನಗಳ ಹೊರತಾಗಿಯೂ ಸಮುದಾಯ, ಸಂಘ-ಸಂಸ್ಥೆಗಳು, ಮಕ್ಕಳ ಪಾಲಕರು ಹಾಗೂ ಕುಟುಂಬದ ಮಿಕ್ಕ ಸದಸ್ಯರು ಸಮಾನವಾಗಿ ಹೊರಬೇಕಾದ ಹೊಣೆಗಾರಿಕೆಯ ನೊಗವಿದು. ಪರಿಚಿತರೆಂಬ ವಿಶ್ವಾಸದ ಮೇಲೆ ಮಕ್ಕಳನ್ನು, ಅದರಲ್ಲೂ ನಿರ್ದಿಷ್ಟವಾಗಿ ಹೆಣ್ಣು ಮಕ್ಕಳನ್ನು ಅವರ ಸುಪರ್ದಿಯಲ್ಲಿ ಇರಿಸಿಹೋಗುವ ಪರಿಪಾಠ ಕೆಲವರಲ್ಲಿದೆ, ಇದು ತಪ್ಪೇನಲ್ಲ. ಆದರೆ ಅಂಥ ವಿಶ್ವಾಸದ ತಳಹದಿ ಎಷ್ಟರಮಟ್ಟಿಗೆ ಗಟ್ಟಿಯಾಗಿದೆ ಎಂಬುದರ ತಾಳೆನೋಡುವ ಹಾಗೂ ಅವರ ರಕ್ಷಣೆಗೆ ಹೆಚ್ಚಿನ ಒತ್ತುನೀಡುವ ಅಗತ್ಯವೂ ಬದಲಾದ ಕಾಲಘಟ್ಟದಲ್ಲಿ ಹೆಚ್ಚುತ್ತಿದೆ ಎಂದು ಅನಿವಾರ್ಯವಾಗಿ ಹೇಳಲೇಬೇಕಾಗಿದೆ.

ಇನ್ನು ಯುವತಿಯರ ನಾಪತ್ತೆಯ ವಿಷಯಕ್ಕೆ ಬರುವುದಾದರೆ, ಪ್ರಸಕ್ತ ವರ್ಷದ ಅ. 15ರವರೆಗಿನ ಅಂಕಿ-ಅಂಶಗಳೇ ಹೇಳುವಂತೆ, ನಾಪತ್ತೆಯಾಗಿದ್ದ 10,693 ಯುವತಿಯರ ಪೈಕಿ 6,256 ಮಂದಿಯಷ್ಟೇ ಪತ್ತೆಯಾಗಿದ್ದು, ಮಿಕ್ಕ 4,427 ಯುವತಿಯರ ಜಾಡು ಇನ್ನೂ ಸಿಕ್ಕಿಲ್ಲ ಎಂಬುದು ಮಹಿಳಾ ಸುರಕ್ಷತೆಯ ಪರಿಕಲ್ಪನೆಗೆ ಮೆತ್ತಿಕೊಂಡಿರುವ ಕಪು್ಪಚುಕ್ಕೆ ಎಂದೇ ಹೇಳಬೇಕು. ಭರಪೂರ ಸಂಬಳದ ಉದ್ಯೋಗ ಅಥವಾ ಸಿನಿಮಾ/ಧಾರಾವಾಹಿಗಳಲ್ಲಿನ ನಟನೆಯ ಅವಕಾಶಗಳ ಆಮಿಷವೊಡ್ಡಿ ಯುವತಿಯರನ್ನು ಸೆಳೆಯುವ ಜಾಲಗಳು ಇನ್ನೂ ಸಕ್ರಿಯವಾಗಿರುವುದು ಮಹಿಳಾ ಸುರಕ್ಷತೆಗೆ ಒದಗಿರುವ ಸಂಚಕಾರಗಳಲ್ಲೊಂದು. ಆದ್ದರಿಂದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿ, ಅವರು ಮುಕ್ತ ವಾತಾವರಣದಲ್ಲಿ ಉಸಿರಾಡಿಕೊಂಡಿರುವಂತೆ ನೋಡಿಕೊಳ್ಳಬೇಕಾಗಿದೆ.