Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಸ್ತ್ರೀಶಕ್ತಿಗೆ ಬೆಂಬಲ

Wednesday, 14.02.2018, 3:02 AM       No Comments

ದುವೆಯಾದ ಕೆಲವೇ ತಿಂಗಳಲ್ಲಿ ಹೆಂಡತಿಯನ್ನು ತೊರೆಯುವ ಅನಿವಾಸಿ ಭಾರತೀಯ (ಎನ್​ಆರ್​ಐ) ಪತಿಯನ್ನು ‘ಪರಾರಿ ವ್ಯಕ್ತಿ’ ಎಂದು ಪರಿಗಣಿಸಿ, ನ್ಯಾಯಾಲಯದ ವಿಚಾರಣೆಗೆ ಒಳಪಡಿಸುವಂತಾಗಲೆಂದು ಅಪರಾಧ ಸಂಹಿತೆಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಕೇಂದ್ರ ಗೃಹ ಮತ್ತು ಕಾನೂನು ಸಚಿವಾಲಯವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೋರಿದೆ. ಇದು ನಿಜಕ್ಕೂ ಸದಾಶಯದ ಆಗ್ರಹ ಎಂಬುದರಲ್ಲಿ ಎರಡು ಮಾತಿಲ್ಲ. ಕಾರಣ, ಮಗಳಿಗೊಬ್ಬ ಎನ್​ಆರ್​ಐ ವರ ಸಿಕ್ಕಿದಾಕ್ಷಣ ಸಂಭ್ರಮಿಸುವ ಪಾಲಕರು, ಆತನ ಹಿನ್ನೆಲೆ ಮತ್ತು ಸ್ವಭಾವವನ್ನು ಸಮರ್ಥವಾಗಿ ಅರಿಯದೆ ಭರ್ಜರಿ ವರದಕ್ಷಿಣೆ ನೀಡಿ ಮಗಳನ್ನು ಮದುವೆ ಮಾಡಿಕೊಟ್ಟು ವಿದೇಶಕ್ಕೆ ಕಳಿಸುವ, ತರುವಾಯದಲ್ಲಿ ನಿಜಸಂಗತಿ ಬಯಲಾಗಿಯೋ ಅಥವಾ ಬೇರೇನಾದರೂ ಕಾರಣದಿಂದಲೋ ಆಕೆ ಪತಿಯಿಂದ ವಿಚ್ಛೇದನ ಪಡೆಯುವಂತಾದಾಗ, ಅಲ್ಲಿನ ಕಾಯ್ದೆ-ಕಾನೂನುಗಳ ಸೂಕ್ಷ್ಮತೆಗಳನ್ನು ಅರಿಯದೆ ದಿಕ್ಕೆಟ್ಟು ಕೂರುವಂಥ ಪ್ರಕರಣಗಳು ಗಣನೀಯವಾಗಿವೆ. ಹೆಣ್ಣಿಗೆ ಮತ್ತು ಹೆಣ್ಣು ಹೆತ್ತವರಿಗೆ ಹೀಗೆ ಒದಗುವ ಆಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂಥದೊಂದು ಲಗಾಮಿನ ಅಗತ್ಯ ಇದ್ದೇ ಇದೆ. ಆದರೆ, ಇದರ ಸಕಾರಾತ್ಮಕ ಆಯಾಮಗಳ ಜತೆಜತೆಗೆ, ಅಪರಾಧ ಸಂಹಿತೆಯಲ್ಲಿನ ನ್ಯೂನತೆಗಳನ್ನು ಬಳಸಿಕೊಂಡು ನಿಯಮದ ದುರುಪಯೋಗ ಮಾಡಿಕೊಳ್ಳುವಂಥ ಇಲ್ಲವೇ ಕಾನೂನಿನ ಭಯವೊಡ್ಡಿ ಅಮಾಯಕರನ್ನು ಶೋಷಿಸುವಂಥ ಅನಪೇಕ್ಷಿತ ಬೆಳವಣಿಗೆಯ ಸಾಧ್ಯತೆಯ ಕುರಿತೂ ಚಿಂತನೆ ನಡೆಸುವ ಅಗತ್ಯವಿದೆ.

ಇಂಥದೊಂದು ಅಭಿಪ್ರಾಯಕ್ಕೆ ಕಾರಣಗಳೂ ಇಲ್ಲದಿಲ್ಲ. ವರದಕ್ಷಿಣೆ ವಿರೋಧಿ ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಗಳು ಬಹುತೇಕ ಇಂಥದೇ ಆಶಯವನ್ನು ಹೊಂದಿರುವಂಥವು. ವರದಕ್ಷಿಣೆಯಂಥ ಪಿಡುಗು ಮತ್ತು ಮನೆಗೆ ಸೊಸೆಯಾಗಿ ಬರುವವಳ ಮೇಲೆ ನಡೆಯಬಹುದಾದ ಕೌಟುಂಬಿಕ ದೌರ್ಜನ್ಯದಂಥ ವಿಕೃತ ವರ್ತನೆಯನ್ನು ತಡೆಗಟ್ಟುವಲ್ಲಿ ಇವು ಸಶಕ್ತವಾಗಿವೆ ಎಂಬುದೇನೋ ಸರಿಯೇ. ಆದರೆ, ಅವನ್ನೇ ಗುರಾಣಿಯಾಗಿಸಿಕೊಂಡು ಮತ್ತು ದುರುಪಯೋಗಪಡಿಸಿಕೊಂಡು ಅತ್ತೆ-ಮಾವಂದಿರನ್ನು ಸೊಸೆಯಂದಿರು (ಮತ್ತು ಅವರ ಮನೆಯವರು) ಬೆದರಿಸುವಂತಾದ ನಿದರ್ಶನಗಳಿಗೇನೂ ಕಮ್ಮಿಯಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸವೋಚ್ಚ ನ್ಯಾಯಾಲಯವು, ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯದ ಪ್ರಕರಣ ದಾಖಲಾಗುತ್ತಿದ್ದಂತೆ ಗಂಡ ಮತ್ತು ಆತನ ಮನೆಯವರನ್ನು ಸಾರಾಸಗಟಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಬಂಧಿಸುವಂಥ ಕ್ರಮಕ್ಕೆ ಮುಂದಾಗದೆ, ಯುಕ್ತಾಯುಕ್ತ ವಿವೇಚನೆಯ ನಂತರವೇ ನಿರ್ಣಾಯಕ ಕ್ರಮಕ್ಕೆ ಮುಂದಾಗಬೇಕಿರುವುದರ ಅಗತ್ಯದ ಕುರಿತು ಒತ್ತಿಹೇಳಿತ್ತು ಎಂಬುದಿಲ್ಲಿ ಸ್ಮರಣಾರ್ಹ.

ಆದ್ದರಿಂದ, ಕಾಯ್ದೆ-ಕಾನೂನಿನ ದುರುಪಯೋಗವಾಗಿರುವಂಥ ಪೂರ್ವನಿದರ್ಶನಗಳನ್ನು ಗಮನದಲ್ಲಿಟ್ಟುಕೊಂಡು, ವಂಚಕ ಎನ್​ಆರ್​ಐ ಪತಿಯನ್ನು ಕಾನೂನುಕ್ರಮಕ್ಕೆ ಒಳಪಡಿಸುವುದಕ್ಕೆ ಸಂಬಂಧಿಸಿದ ಅಪರಾಧ ಸಂಹಿತೆಗೆ ತಿದ್ದುಪಡಿಯಾಗುವಂತಾಗಬೇಕು. ತನ್ಮೂಲಕ, ಪಕ್ಷಪಾತಕ್ಕೆ ಆಸ್ಪದವಿಲ್ಲದೆ ಎರಡೂ ಪಕ್ಷಸ್ಥರ ಅಳಲನ್ನೂ ಸಮಾನವಾಗಿ ಪರಿಗಣಿಸುವಂಥ ಭೂಮಿಕೆ ಒದಗುವಂತಾಗಬೇಕು. ‘ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಎಂಬುದು ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಆಶಯ. ಇದು ಯಾವುದೇ ವಿಷಯ/ಕ್ಷೇತ್ರ ಸಂಬಂಧಿತ ಕಾಯ್ದೆ-ಕಾನೂನು ಮತ್ತು ಅದರ ಕ್ರಮಕ್ಕೆ ಒಳಪಡುವವರಿಗೆ ಅನ್ವಯವಾಗುವಂತಾಗಬೇಕು. ಕಾನೂನು ತಜ್ಞರು, ಸಮಾಜವಿಜ್ಞಾನ ಕ್ಷೇತ್ರದ ಪರಿಣತರು ಮತ್ತಿತರ ಚಿಂತಕರೊಂದಿಗೆ ಕೇಂದ್ರ ಸರ್ಕಾರ ಸಮಾಲೋಚಿಸಿ ಲೋಪಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಅಪರಾಧ ಸಂಹಿತೆಗೆ ತಿದ್ದುಪಡಿ ತರುವಂತಾಗಲಿ.

Leave a Reply

Your email address will not be published. Required fields are marked *

Back To Top