Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಉತ್ತಮ ಉಪಕ್ರಮ

Thursday, 20.09.2018, 3:02 AM       No Comments

ತ್ರಿವಳಿ ತಲಾಕ್ ಪದ್ಧತಿಯ ರದ್ದತಿಗೆ ಕಟಿಬದ್ಧವಾಗಿರುವ ಕೇಂದ್ರ ಸರ್ಕಾರ, ಈ ಸಂಬಂಧ ಮಂಡಿಸಿದ ಮಸೂದೆಗೆ ಲೋಕಸಭೆಯಲ್ಲಿ ಹಸಿರು ನಿಶಾನೆ ದಕ್ಕಿದ್ದರೂ, ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣದಿಂದಾಗಿ ಹಾಗೂ ಅಲ್ಲಿ ಕೆಲ ತಾಂತ್ರಿಕ ಕಾರಣಗಳನ್ನು ಮುಂದುಮಾಡಿ ಮಸೂದೆ ಅಂಗೀಕಾರಕ್ಕೆ ಅಸಹಕಾರ ಹೊಮ್ಮಿದ್ದರಿಂದಾಗಿ ಸುಗ್ರೀವಾಜ್ಞೆಯ ಮಾರ್ಗವನ್ನು ಆಯ್ದುಕೊಂಡಿದೆ. ಬಹುರ್ಚಚಿತ ಹಾಗೂ ವಿವಾದಿತ ತ್ರಿವಳಿ ತಲಾಕ್ ಪದ್ಧತಿಯನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಈ ಚಾರಿತ್ರಿಕ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಸಮ್ಮತಿಸಿ ಅಂಕಿತಕ್ಕೆಂದು ರಾಷ್ಟ್ರಪತಿಗಳಿಗೆ ರವಾನಿಸಿದ್ದು, ಅವರ ಅನುಮೋದನೆಯ ಬಳಿಕ ದೇಶಾದ್ಯಂತ ಜಾರಿಯಾಗಲಿದೆ. ಇದು ಮುಸ್ಲಿಂ ಮಹಿಳೆಯರ ಹಿತರಕ್ಷಕ ಮಾತ್ರವಲ್ಲದೆ, ಮಹಿಳಾ ಸಮಾನತೆಯೆಡೆಗೆನ ಮತ್ತೊಂದು ಹೆಜ್ಜೆಯೂ ಹೌದು ಎಂದರೆ ಅತಿಶಯೋಕ್ತಿಯಾಗಲಾರದು.

ಈ ಸುಗ್ರೀವಾಜ್ಞೆಯಲ್ಲಿ ಅಂತರ್ಗತವಾಗಿರುವ ಆಶಯದ ಅನುಸಾರ, ತ್ರಿವಳಿ ತಲಾಕ್ ನೀಡುವವರು 3 ವರ್ಷದ ಸೆರೆವಾಸದ ಜತೆಗೆ ಯಥೋಚಿತ ದಂಡವನ್ನೂ ಪಾವತಿಸಬೇಕಾಗುತ್ತದೆ ಹಾಗೂ ಪತ್ನಿ-ಮಕ್ಕಳ ನಿರ್ವಹಣಾ ವೆಚ್ಚವನ್ನೂ ಭರಿಸಬೇಕಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಮುಸ್ಲಿಂ ಸಮುದಾಯದ ಮಹಿಳೆಯರ ಹಿತಕಾಯುವ ಇಂಥದೊಂದು ಮಸೂದೆ ಮಂಡಿಸುವುದರ ಕುರಿತಾಗಿ ಚಿಂತನ-ಮಂಥನ ನಡೆಯುತ್ತಿರುವ ವೇಳೆಯಲ್ಲೇ ಈ ಚಟುವಟಿಕೆಗೆ ಮಿಶ್ರ ಪ್ರತಿಕ್ರಿಯೆ ಒದಗಿತ್ತು; ಈ ಪೈಕಿ ಸಕಾರಾತ್ಮಕ ಹಿಮ್ಮಾಹಿತಿ/ಪ್ರತಿಕ್ರಿಯೆ ನೀಡಿದವರಲ್ಲಿ ಸಹಜವಾಗಿಯೇ ಮುಸ್ಲಿಂ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು, ಪ್ರಜ್ಞಾವಂತ ಪುರುಷರೂ ಇದರಲ್ಲಿ ಸೇರಿದ್ದರು ಎಂಬುದು ವಿಶೇಷ. ಇದು ತ್ರಿವಳಿ ತಲಾಕ್​ನಂಥ ಅನಪೇಕ್ಷಿತ ಬಾಬತ್ತಿನಿಂದ ಬಿಡಿಸಿಕೊಳ್ಳಬೇಕು ಎಂಬ ತುಡಿತಕ್ಕೆ ಹಿಡಿದ ಕನ್ನಡಿಯಲ್ಲದೆ ಮತ್ತೇನು? ಮುಸ್ಲಿಂ ಸಮುದಾಯದ ಮಹಿಳೆಯರು ಸರ್ಕಾರದ ಈ ನಿಲುವಿಗೆ ಹೀಗೆ ದನಿಗೂಡಿಸಿದ್ದರಿಂದಲೇ, ‘ಸಾಂಪ್ರದಾಯಿಕ ವೋಟ್​ಬ್ಯಾಂಕ್’ ಹಣೆಪಟ್ಟಿಯಿಂದ ಬಿಡಿಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗಳಿಗೆ ಒಲವು ತೋರಿದ್ದಾರೆ ಎಂಬುದಕ್ಕೆ ಪೂರಕ ಸಾಕ್ಷಿಗಳಿವೆ, ಇರಲಿ.

ಮುಖಾಮುಖಿ ತಲಾಕ್ ಹೇಳುವುದಿರಲಿ, ವಾಟ್ಸ್​ಆಪ್, ಎಸ್​ಎಂಎಸ್, ದೂರವಾಣಿ ಕರೆ, ಫೇಸ್​ಬುಕ್ ಮಾಧ್ಯಮಗಳ ಮೂಲಕವೂ ತಲಾಕ್ ಹೇಳಿ ವಿಚ್ಛೇದನ ಪಡೆದ-ಪಡೆಯುತ್ತಿರುವ ಎಷ್ಟೋ ನಿದರ್ಶನಗಳಿವೆ. ಇಂಥ ಸಂದರ್ಭಗಳ ಬಲಿಪಶುವಾಗುವವರು ಮಾನಸಿಕವಾಗಿ ಅದೆಷ್ಟು ಕುಗ್ಗುತ್ತಾರೆ, ಸಾಮಾಜಿಕವಾಗಿ ಅದೆಂಥ ಅನಿಶ್ಚಿತತೆಯಲ್ಲಿ ಸಿಲುಕಬೇಕಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ, ಈ ಅರಿವಿದ್ದಾಗಲೂ ಸ್ವಹಿತಾಸಕ್ತಿಯನ್ನೋ ಮತಬ್ಯಾಂಕ್ ರಾಜಕಾರಣವನ್ನೋ ಮುಂದುಮಾಡಿಕೊಂಡು, ತ್ರಿವಳಿ ತಲಾಕ್ ಪರವಾಗಿ ನಿಲ್ಲುವವರಿಗೆ ಏನನ್ನಬೇಕು. ಇಂಥವರು ಮಹಿಳಾ ಹಕ್ಕುಗಳು ಮತ್ತು ಸಮಾನತೆಯ ಕುರಿತು ಮಾತಾಡುವುದೇ ನಗೆಪಾಟಲಿನ ಸಂಗತಿಯಲ್ಲವೇ? ‘ಈ ಸುಗ್ರೀವಾಜ್ಞೆ ಸಂವಿಧಾನವಿರೋಧಿಯಾಗಿದ್ದು, ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ’ ಎಂಬ ಸಂಸದ ಓವೈಸಿ ಮಾತು ಏನನ್ನು ಧ್ವನಿಸುತ್ತದೆ? ಸುಪ್ರೀಂ ಕೋರ್ಟ್ ಕೂಡ ಈ ಹಿಂದೆ ತ್ರಿವಳಿ ತಲಾಕನ್ನು ತಾತ್ಪೂರ್ತಿಕವಾಗಿ ನಿಷೇಧಿಸಿದ್ದು ಇಲ್ಲಿ ಸ್ಮರಣಾರ್ಹ. ಪ್ರಸ್ತುತ, ಸುಗ್ರೀವಾಜ್ಞೆಯ ಮಾಗೋಪಾಯದಲ್ಲಿ ತ್ರಿವಳಿ ತಲಾಕ್ ರದ್ದತಿಗೆ ಬಾಣ ಹೂಡಲಾಗಿದೆಯಾದರೂ, ಮುಂದೊಮ್ಮೆ ಇದಕ್ಕೊಂದು ಅಧಿಕೃತ ಕಾನೂನಿನ ಸ್ವರೂಪವೇ ಸಿಕ್ಕುವಂತಾಗಲಿ ಎಂಬುದು ಪ್ರಜ್ಞಾವಂತರ ಹಾರೈಕೆ. ಜತೆಗೆ ಇಂಥದೊಂದು ಉಪಕ್ರಮವನ್ನು ಸುಖಾಸುಮ್ಮನೆ ವಿರೋಧಿಸುವವರು, ಈ ನಡೆಯ ಹಿಂದಿರುವುದು ಜನಹಿತದ ಆಶಯವೇ ಎಂಬುದನ್ನು ಮನಗಾಣುವಂತಾಗಲಿ.

Leave a Reply

Your email address will not be published. Required fields are marked *

Back To Top