More

    ಸಂಪಾದಕೀಯ: ಆಡಳಿತ ಚುರುಕಾಗಲಿ

    ಹಲವು ದಿನಗಳ ಕುತೂಹಲ, ಕಾಯುವಿಕೆ ನಂತರ ರಾಜ್ಯ ಸಚಿವ ಸಂಪುಟ ಗುರುವಾರ ವಿಸ್ತರಣೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಗೆದ್ದು ಎರಡು ತಿಂಗಳಾದ ಬಳಿಕ 10 ಶಾಸಕರಿಗೆ ಮಂತ್ರಿಭಾಗ್ಯ ದಕ್ಕಿದೆ. ಈ ವಿಸ್ತರಣೆಯಿಂದಾಗಿ ಯಡಿಯೂರಪ್ಪ ಸಂಪುಟದ ಬಲ 28ಕ್ಕೇರಿದ್ದು, ಎಲ್ಲರಿಗೂ ಕ್ಯಾಬಿನೆಟ್ ದರ್ಜೆಯೇ ಸಿಕ್ಕಿದೆ.

    ನಿಯಮಾನುಸಾರ ಇನ್ನೂ 6 ಸಚಿವ ಸ್ಥಾನಗಳನ್ನು ತುಂಬಲು ಅವಕಾಶವಿದೆ. ಇತರ ಪಕ್ಷಗಳಿಂದ ಬಂದು ಗೆದ್ದ ಎಷ್ಟು ಮಂದಿಯನ್ನು ಮಂತ್ರಿಗಳನ್ನಾಗಿಸಬೇಕು, ಸೋತವರಿಗೆ ಯಾವ ಸ್ಥಾನಮಾನ ಮುಂತಾದ ವಿಚಾರಗಳು ಹಲವು ಸಮಯದಿಂದ ಜಿಜ್ಞಾಸೆ ಉಂಟುಮಾಡಿದ್ದವು. ವಲಸೆ ಬಂದವರಿಗೆಲ್ಲ ಸಚಿವಗಿರಿ ಪಕ್ಕಾ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರಿಂದ ಆ ಮಾತು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಅವರಿಗಿತ್ತು. ಇನ್ನು ಸಚಿವರಿಗೆ ಆದಷ್ಟು ಬೇಗ ಖಾತೆ ಹಂಚಿಕೆಯಾಗಿ ಅವರು ಕಾರ್ಯಭಾರದಲ್ಲಿ ತೊಡಗುವಂತಾಗಬೇಕು. ಈ ನಡುವೆ, ಮೂಲ ಬಿಜೆಪಿಗರಲ್ಲಿ ಎಷ್ಟು ಜನರಿಗೆ ಮಂತ್ರಿಸ್ಥಾನ ಎಂಬ ವಿಚಾರವೂ ಮುನ್ನೆಲೆಗೆ ಬಂದು ವಿಸ್ತರಣೆ ವಿಷಯವನ್ನು ಕಗ್ಗಂಟಾಗಿಸಿತ್ತು. ಇದೀಗ ಎಲ್ಲ ಒಂದು ಮಟ್ಟಿಗೆ ಸರಿಹೋಗಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದ್ದರೂ, ಬಿಜೆಪಿಯಲ್ಲಿಯೇ ಕೆಲವರಲ್ಲಿ ಮುನಿಸು, ಅಸಮಾಧಾನ ಇದ್ದೇ ಇದೆ.

    ಇದು ಯಾವ ಮಟ್ಟಕ್ಕೆ ಹೋಗುತ್ತದೆಂಬುದನ್ನು ಈಗಲೇ ಹೇಳಲಾಗದು. ಇದನ್ನೆಲ್ಲ ಸಿಎಂ ಬಿಎಸ್​ವೈ ಹೇಗೆ ಸರಿಹೋಗಿಸುತ್ತಾರೆಂಬುದು ಅವರ ರಾಜಕೀಯ ಅನುಭವಕ್ಕೆ ಬಿಟ್ಟ ವಿಚಾರವಾದರೂ, ಸದ್ಯಕ್ಕೆ ಅವರು ಮೇಲುಗೈ ಸಾಧಿಸಿರುವುದು ಸ್ಪಷ್ಟ. ಹೀಗಾಗಿ ರಾಜಕೀಯ ಜಂಜಡಗಳನ್ನು ಹೆಚ್ಚು ಹಚ್ಚಿಕೊಳ್ಳಲು ಹೋಗದೆ ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳು ಆಡಳಿತಾತ್ಮಕ ಸಂಗತಿಗಳಿಗೆ ಆದ್ಯತೆ ನೀಡಿ ಆಡಳಿತಯಂತ್ರವನ್ನು ಚುರುಕುಗೊಳಿಸಬೇಕಾದುದು ಮತ್ತು ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಂಬಿಸಬೇಕಾದುದು ಸದ್ಯದ ತುರ್ತ. ಕೆಲ ದಿನಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಜನರ ಮನದಾಳವೂ ಇದೇ ಬಗೆಯಲ್ಲಿತ್ತು; ಸ್ಥಿರತೆಗೆ ಅವರು ಒಲವು ವ್ಯಕ್ತಪಡಿಸಿದ್ದರು ಎಂಬುದನ್ನು ಮರೆಯಬಾರದು.

    ಈ ಸಲದ ಪ್ರವಾಹ ರಾಜ್ಯಕ್ಕೆ ಅನೇಕ ಸಂಕಟ, ಸವಾಲುಗಳನ್ನು ತಂದಿಟ್ಟಿದೆ. ಪರಿಹಾರ ಕಾರ್ಯಗಳು ನಡೆಯುತ್ತಿವೆಯಾದರೂ ರಾಜ್ಯದ ಹಣಕಾಸಿನ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ. ರಾಜ್ಯದ ತೆರಿಗೆ ಸಂಗ್ರಹ ನಿರೀಕ್ಷೆಯಷ್ಟು ಪ್ರಮಾಣ ತಲುಪುವುದು ಕಷ್ಟ. ಅತ್ತ ಕೇಂದ್ರದಿಂದ ಬರಬೇಕಾದ ತೆರಿಗೆ, ಅನುದಾನದಲ್ಲಿಯೂ ಇಳಿಕೆಯಾಗುವ ಸನ್ನಿವೇಶವಿದೆ. ಇದರಿಂದಾಗಿ ಅನೇಕ ಇಲಾಖೆಗಳಿಗೆ ಅನುದಾನ ಕಡಿತವಾದರೂ ಅಚ್ಚರಿಯಿಲ್ಲ. ಹೀಗಾದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಕಷ್ಟವಾಗುತ್ತದೆ. ಅಲ್ಲದೆ, ಆಡಳಿತವನ್ನು ಜನರ ಹತ್ತಿರಕ್ಕೆ ಕೊಂಡೊಯ್ಯಬೇಕಾದ ಸವಾಲೂ ಇದೆ. ತಂತ್ರಜ್ಞಾನದ ಸಹಾಯದಿಂದ ಈ ಕೆಲಸವನ್ನು ತ್ವರಿತಗೊಳಿಸಬೇಕಿದೆ. ಈ ಸರ್ಕಾರಕ್ಕೆ ಇನ್ನೂ ಸುಮಾರು ಮೂರೂಕಾಲು ವರ್ಷಗಳ ಅಧಿಕಾರಾವಧಿಯಿದೆ. ಅದರಲ್ಲಿ ಕೊನೆಯ ವರ್ಷ ಚುನಾವಣಾ ವರ್ಷವಾಗಿ ಕೆಲಸಕ್ಕೆ ಸಮಯ ಸಿಗುವುದಿಲ್ಲ. ಆ ಲೆಕ್ಕದಲ್ಲಿ ಗಟ್ಟಿಯಾಗಿ ಸಿಗುವುದು ಎರಡು ವರ್ಷ ಮಾತ್ರ. ಆ ಅವಧಿಯನ್ನೇ ಸದುಪಯೋಗಪಡಿಸಿಕೊಂಡು ತಮ್ಮ ಛಾಪೊತ್ತುವಲ್ಲಿ ಮಂತ್ರಿಗಳು ಎಷ್ಟು ಯಶಸ್ವಿಯಾಗುತ್ತಾರೆ ಎಂಬುದರ ಮೇಲೆ ಸರ್ಕಾರದ ಇಮೇಜ್ ಕೂಡಾ ನಿಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts