Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ವಿವಾದ ಬಗೆಹರಿಯಲಿ

Friday, 16.11.2018, 6:20 AM       No Comments

ನಾಡಗೀತೆ, ನಾಡಧ್ವಜ ಇವೆಲ್ಲ ಭಾಷಾಭಿಮಾನದ ದ್ಯೋತಕಗಳು ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡಿಗರ ಸ್ವಾಭಿಮಾನ, ಅಸ್ಮಿತೆಯ ಪ್ರತೀಕವಾಗಿ ನಮ್ಮಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಗೀತೆಯನ್ನು ನಾಡಗೀತೆಯಾಗಿಸಿಕೊಂಡಿದ್ದೇವೆ. ಆದರೆ, ನಾಡಗೀತೆ ಹಾಡುವ ಸಮಯ ಮತ್ತು ಧಾಟಿಯ ವಿಚಾರದಲ್ಲಿ ಹಲವು ಗೊಂದಲಗಳು ಉದ್ಭವಿಸಿ, ನಾನಾ ಬಗೆಯ ಅಭಿಪ್ರಾಯಗಳು ಎದುರಾಗಿದ್ದವು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ವಿಜಯವಾಣಿ’ ‘ದಿಗ್ವಿಜಯ 24ಗಿ7 ನ್ಯೂಸ್’ ಆಯೋಜಿಸಿದ್ದ ಕನ್ನಡ ಸಂವಾದ ಕಾರ್ಯಕ್ರಮದಲ್ಲೂ ತಜ್ಞರ ಸಮ್ಮುಖದಲ್ಲಿ ಈ ವಿಚಾರ ಚರ್ಚೆಯ ಮುನ್ನೆಲೆಗೆ ಬಂದು, ನಾಡಗೀತೆಗೆ ಸಮಯ ನಿಗದಿಪಡಿಸಲು ತಜ್ಞರ ಸಭೆ ಕರೆಯುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದರು.

ನಾಡಗೀತೆಯನ್ನು ಕೆಲವು ಕಾರ್ಯಕ್ರಮಗಳಲ್ಲಿ 8-9 ನಿಮಿಷದವರೆಗೂ ಹಾಡಲಾಗುತ್ತದೆ. ಇದರಿಂದ ಗರ್ಭಿಣಿಯರು, ವೃದ್ಧರು, ಮಕ್ಕಳು ಹಾಗೂ ರೋಗಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಕಳವಳ ಕೇಳಿಬರುತ್ತಿತ್ತಾದರೂ, ನಾಡಗೀತೆಯನ್ನು ನಿಗದಿತವಾಗಿ ಎಷ್ಟು ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂಬ ಬಗ್ಗೆ ಒಮ್ಮತ ಮೂಡಿರಲಿಲ್ಲ. ಸಂವಾದ ಕಾರ್ಯಕ್ರಮದ ವೇಳೆ ಕಸಾಪ ಅಧ್ಯಕ್ಷರು ನೀಡಿದ ಆಶ್ವಾಸನೆಯಂತೆ ಬುಧವಾರ ಈ ಸಂಬಂಧ ತಜ್ಞರ ಸಭೆ ನಡೆಸಿದ್ದು, ನಾಡಗೀತೆಗೆ 2.20 ನಿಮಿಷ ಸಮಯವನ್ನು ನಿಗದಿ ಪಡಿಸಲಾಗಿದೆ. 33 ಕಲಾವಿದರು ವಿವಿಧ ಧಾಟಿಯಲ್ಲಿ ನಾಡಗೀತೆಯನ್ನು ಸಭೆಯಲ್ಲಿ ಪ್ರಸ್ತುತ ಪಡಿಸಿದಾಗ ಅಂತಿಮವಾಗಿ ನಾಡಗೀತೆಗೆ ಯಾವುದೇ ಚ್ಯುತಿ ಬರದಂತೆ 2.20 ನಿಮಿಷದಲ್ಲಿ ಹಿನ್ನೆಲೆ ಸಂಗೀತ ಸಹಿತ ಹಾಡಲು ಸಾಧ್ಯ ಎಂಬುದು ಮನವರಿಕೆಯಾಗಿದೆ. ಹಿರಿಯ ಸಾಹಿತಿಗಳು, ಚಿಂತಕರು, ಬುದ್ಧಿಜೀವಿಗಳು, ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದ ಈ ಸಭೆ ಸಮಯ ನಿಗದಿಗೆ ಸಮ್ಮತಿ ವ್ಯಕ್ತಪಡಿಸಿರುವುದು ಉತ್ತಮ ಬೆಳವಣಿಗೆ. ‘ಸರ್ಕಾರಕ್ಕೆ ಈ ನಿರ್ಣಯವನ್ನು 48 ಗಂಟೆಗಳ ಒಳಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ’ ಎಂದು ಕಸಾಪ ಅಧ್ಯಕ್ಷರು ಬುಧವಾರವೇ ಹೇಳಿರುವುದರಿಂದ ಈಗ ಈ ನಿರ್ಣಯ ಅನುಷ್ಠಾನದ ಚೆಂಡು ರಾಜ್ಯ ಸರ್ಕಾರದ ಅಂಗಳಕ್ಕೆ ತಲುಪಿದೆ.

ನಾಡಗೀತೆ ಕುರಿತ ಸಮಯ ಮತ್ತು ಧಾಟಿ ವಿವಾದ ಸಾಕಷ್ಟು ಸಮಯದಿಂದ ಚಾಲ್ತಿಯಲ್ಲಿದೆ. ಒಮ್ಮತಕ್ಕೆ ಬರುವಾಗ ಭಿನ್ನಭಿನ್ನ ಅಭಿಪ್ರಾಯಗಳು ಸಹಜವಾದರೂ ಇಂಥ ವಿವಾದಗಳನ್ನು ಯಾವುದೇ ಕಾರಣಕ್ಕೂ ದೀರ್ಘಾವಧಿಗೆ ಕೊಂಡೊಯ್ಯಬಾರದು. ಅದರಿಂದ, ನಾಡು-ನುಡಿ ಪ್ರೀತಿಸುವವರ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆಯೂ ಉಂಟು. ಅಲ್ಲದೆ, ನಾಡಗೀತೆ ಧಾಟಿ ಬಗ್ಗೆ ಹಲವು ಸಮಿತಿಗಳು ನೀಡಿದ ವರದಿಗಳು ನನೆಗುದಿಗೆ ಬಿದ್ದಿವೆ. ಈಗ ಈ ಸಮಯನಿಗದಿಯ ವರದಿಗೂ ಅದೇ ಸ್ಥಿತಿ ಉಂಟಾಗಬಾರದು. ಹಾಗಾಗಿ, ‘ಕನ್ನಡಮಾಸ’ವೆಂದೇ ಜನಜನಿತವಾಗಿರುವ ನವೆಂಬರ್​ನಲ್ಲಿ ಸರ್ಕಾರ ಈ ಕುರಿತು ಸೂಕ್ತ ನಿರ್ಣಯಕ್ಕೆ ಬರಬೇಕು, ತಜ್ಞರ ಸಭೆಯ ವರದಿ ಮತ್ತು ನಿರ್ಣಯವನ್ನು ಗಂಭೀರವಾಗಿ ಅವಲೋಕಿಸಿ ನಾಡಗೀತೆಗೆ ಸಮಯ ನಿಗದಿ ಮಾಡುವ ಅಧಿಕೃತ ನಿರ್ಧಾರ ತಳೆದು ಹಳೇ ಸಮಸ್ಯೆಗೆ ಇತಿಶ್ರೀ ಹಾಡಬೇಕು. ವಿದ್ವಾಂಸರ ಸಹಮತಿ ಈಗಾಗಲೇ ಪ್ರಾಪ್ತ ಆಗಿರುವುದರಿಂದ ಸರ್ಕಾರ ಒಂದಿಷ್ಟು ಇಚ್ಛಾಶಕ್ತಿ ತೋರಿದಲ್ಲಿ ವಿವಾದ ಬಗೆಹರಿಯುವುದರಲ್ಲಿ ಅನುಮಾನವಿಲ್ಲ.

Leave a Reply

Your email address will not be published. Required fields are marked *

Back To Top