Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಸಮರ್ಪಕ ನಿರ್ಧಾರ

Friday, 07.12.2018, 6:10 AM       No Comments

ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ ದಯನೀಯ ಸ್ಥಿತಿಯು ರಾಜ್ಯದ ಶೈಕ್ಷಣಿಕ ವಾತಾವರಣದಲ್ಲಿ ಅಷ್ಟೇ ಅಲ್ಲದೆ ಪ್ರಜ್ಞಾವಂತರಲ್ಲೂ ತೀವ್ರ ಕಳವಳ ಮೂಡಿಸಿತ್ತು. ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಶಾಲೆಗಳ ವಿಲೀನ ಪ್ರಕ್ರಿಯೆಯೂ ಚರ್ಚೆಗೂ ಗ್ರಾಸವಾಯಿತು. ಆದರೆ, ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಸುಧಾರಿಸುವ ಬದಲು ಸರ್ಕಾರವೇ ಕೋಟ್ಯಂತರ ರೂಪಾಯಿ ಶುಲ್ಕ ತುಂಬಿ ಮಕ್ಕಳನ್ನು ಆರ್​ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಏಕೆ ಓದಿಸುತ್ತಿದೆ? ಇದು ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೇ ಸಂಚಕಾರ ತರುವುದಿಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿತ್ತಾದರೂ ಇದಕ್ಕೆ ಸಮಾಧಾನಕರ ಉತ್ತರ ದೊರೆತಿರಲಿಲ್ಲ. ಕಡೆಗೂ, ಒಂದಿಷ್ಟು ಇಚ್ಛಾಶಕ್ತಿ ಪ್ರದರ್ಶಿಸಿರುವ ಸರ್ಕಾರ ಆರ್​ಟಿಇ ನಿಯಮಗಳಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಹೊಸ ನಿಯಮದಂತೆ, ಸರ್ಕಾರಿ ಶಾಲೆ ಇರುವ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳಿದ್ದಲ್ಲಿ ವಿದ್ಯಾರ್ಥಿಗಳು ಆರ್​ಟಿಇ ಅಡಿ ಆ ಶಾಲೆಗಳಿಗೆ ಸೇರುವಂತಿಲ್ಲ. ಬದಲಾಗಿ ಸರ್ಕಾರಿ ಶಾಲೆಯಲ್ಲಿ ಕಲಿಕೆ ಮುಂದುವರಿಸಬೇಕಾಗುತ್ತದೆ. ಕೇರಳದಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದ್ದು, ಈಗ ಕರ್ನಾಟಕದಲ್ಲೂ ಅನುಷ್ಠಾನಕ್ಕೆ ಬರಲಿದೆ.

ಇದೊಂದು ಸಮಯೋಚಿತ ಮತ್ತು ಸೂಕ್ತ ನಿರ್ಧಾರವೇ ಹೌದು. ಸರ್ಕಾರಿ ಶಾಲೆಯಿದ್ದರೂ ಆರ್​ಟಿಇ ಅನ್ವಯ ಹತ್ತಿರದ ಖಾಸಗಿ ಶಾಲೆಗೆ ಪ್ರವೇಶ ಪಡೆಯುವುದರಿಂದ ವಿದ್ಯಾರ್ಥಿಗಳ ಕೊರತೆ ಎದುರಿಸುವ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಅಲ್ಲದೆ, ತಲಾ ವಿದ್ಯಾರ್ಥಿಗೆ ಕನಿಷ್ಠ 12 ಸಾವಿರದಂತೆ ವಾರ್ಷಿಕವಾಗಿ 1600 ಕೋಟಿ ರೂಪಾಯಿಗಳಷ್ಟು ಭಾರಿ ಶುಲ್ಕವನ್ನು ರಾಜ್ಯ ಸರ್ಕಾರವೇ ಆರ್​ಟಿಇ ಅಡಿ ಭರಿಸುತ್ತಿದೆ. ಇದೇ ಮೊತ್ತವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸುವಂತಾದರೆ ಆಮೂಲಾಗ್ರ ಬದಲಾವಣೆಯನ್ನೇ ಕಾಣಬಹುದು. ಸರ್ಕಾರಿ ಶಾಲೆಗಳು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವುದರಿಂದಲೇ ಬಡ ಕುಟುಂಬದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂಬ ಆಶಯದಿಂದ ಆರ್​ಟಿಇ ಜಾರಿಗೆ ಬಂದಿದೆ. ಈ ಆಶಯ ಉತ್ತಮವಾಗಿದೆಯಾದರೂ, ಇದರಿಂದ ಕ್ರಮೇಣ ಸರ್ಕಾರಿ ಶಾಲೆಗಳು ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬರಬಾರದಲ್ಲವೇ?

ಇಂದಿನ ಸ್ಪರ್ಧಾತ್ಮಕ ಕಾಲಘಟ್ಟಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳನ್ನು ರೂಪಿಸಬೇಕಿದೆ. ಮೂಲ ಸೌಕರ್ಯದ ಜತೆಗೆ ಗುಣಮಟ್ಟದ ಶಿಕ್ಷಣ ಒದಗಿಸಿದರೆ ಈ ಶಾಲೆಗಳು ಪ್ರಗತಿಯತ್ತ ಮುಖಮಾಡುವುದು ದೊಡ್ಡ ಸವಾಲೇನಲ್ಲ. ಉತ್ತಮ ಸಾಧನೆ ಮಾಡಿರುವ ಎಷ್ಟೋ ಮಾದರಿ ಸರ್ಕಾರಿ ಶಾಲೆಗಳು ನಮ್ಮ ನಡುವೆ ಇವೆ. ಹೀಗಾಗಿ, ಸರ್ಕಾರ ಈ ಸಂಬಂಧ ಶಿಕ್ಷಣತಜ್ಞರು, ವಿಚಾರವಂತರೊಂದಿಗೆ ಚರ್ಚೆ ನಡೆಸಿ ಸರ್ಕಾರಿ ಶಾಲೆಗಳನ್ನು ನಿಜಾರ್ಥದಲ್ಲಿ ಜ್ಞಾನದ ದೇಗುಲವಾಗಿಸುವ, ಅಲ್ಲಿನ ಶಿಕ್ಷಣವನ್ನು ಉತ್ತಮವಾಗಿಸುವ ಸಂಕಲ್ಪ ತಳೆಯಬೇಕಿದೆ. ಇದು ಸಾಧ್ಯವಾದಲ್ಲಿ ಸ್ವಾಭಾವಿಕವಾಗಿಯೇ ಪಾಲಕರು ಖಾಸಗಿ ಶಾಲೆಗಳ ಒಲವು ಕಡಿಮೆ ಮಾಡಿಕೊಂಡು ಮಕ್ಕಳನ್ನು ಸೇರಿಸಲು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಾರೆ. ಇದೇ ವೇಳೆ, ಪಿಯುನಿಂದ ಸ್ನಾತಕೋತ್ತರ ಪದವಿವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದ್ದು, ಸ್ವಾಗತಾರ್ಹ. ಒಟ್ಟಾರೆ, ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳು ಹೊಸ ಬಲ ಪಡೆದುಕೊಂಡು ಗುಣಮಟ್ಟದ ಶಿಕ್ಷಣ ನೀಡುವ ಚಿಮ್ಮುಹಲಗೆಗಳಾಗಿ ಪರಿವರ್ತಿತವಾಗಲಿ. ಇದಕ್ಕೆ ಸರ್ಕಾರ ಮತ್ತು ಸಮುದಾಯ ಅಗತ್ಯವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸುವಂತಾಗಲಿ.

Leave a Reply

Your email address will not be published. Required fields are marked *

Back To Top