ಜನರಿಗೆ ಅನುಕೂಲವಾಗಲಿ

ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಅನ್ವಯ ರಾಜ್ಯದಲ್ಲೂ ಈ ಸವಲತ್ತು ನೀಡಲು ಸರ್ಕಾರ ಮುಂದಾಗಿದೆ. ಕೆಲ ರಾಜ್ಯಗಳಿಗೆ ಹೋಲಿಸಿದರೆ ಈ ಕ್ರಮ ಸ್ವಲ್ಪ ತಡವಾದರೂ ಸಕಾರಾತ್ಮಕ ಹೆಜ್ಜೆ ಎನ್ನಲಡ್ಡಿಯಿಲ್ಲ. ಈ ಕಾಯ್ದೆ ಅನ್ವಯ, ಮೀಸಲಾತಿ ಪಡೆಯಲು ಅಗತ್ಯವಾದ ಸ್ವತ್ತು ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವುದಕ್ಕೆ ಸಂಬಂಧಿಸಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೇ 14ರಂದೇ ಆದೇಶ ಹೊರಡಿಸಿದೆ. ಆ ಪ್ರಕಾರ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪಡೆಯುವುದಕ್ಕೆ ಬೇಕಾದ ಆದಾಯ ಹಾಗೂ ಸ್ವತ್ತು ಪ್ರಮಾಣಪತ್ರಗಳನ್ನು ವಿತರಿಸಲು ಮಾನದಂಡಗಳನ್ನು ಪ್ರಕಟಿಸಲಾಗಿದೆ. ಹೀಗಾಗಿ ಅರ್ಹತೆ ಇರುವವರು ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ಪಡೆದು ಮೀಸಲಾತಿ ಸವಲತ್ತು ಪಡೆಯಲು ಅನುವಾಗಲಿದೆ.

ಆರ್ಥಿಕ ಅಶಕ್ತರು ಮೇಲ್ವರ್ಗದಲ್ಲಿಯೂ ಇದ್ದಾರೆ. ಹೀಗಾಗಿ ಕೇವಲ ಜಾತಿಪರಿಗಣನೆ ಮೇಲೆ ಮೀಸಲಾತಿ ನೀಡದೆ ಆರ್ಥಿಕ ಸ್ಥಿತಿಗತಿಯನ್ನು ನೋಡಬೇಕು ಎಂಬ ವಾದ ನಮ್ಮ ದೇಶದಲ್ಲಿ ಬಹಳ ವರ್ಷಗಳಿಂದ ಇದೆ. ರಾಜಕೀಯ ಪಕ್ಷಗಳಲ್ಲಿ ಕೂಡ ಈ ಬಗ್ಗೆ ಬಹಳವೇನೂ ಭಿನ್ನಾಭಿಪ್ರಾಯಗಳಿರದಿದ್ದರೂ ಕಾಲಾನುಕ್ರಮದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಈ ಕುರಿತು ಧೈರ್ಯದ ಹೆಜ್ಜೆ ಇಡಲು ಮುಂದಾಗಿರಲಿಲ್ಲ. ಮೋದಿ ಸರ್ಕಾರ ತನ್ನ ಮೊದಲ ಅವಧಿಯ ಅಧಿಕಾರದ ಕೊನೆಯ ಚರಣದಲ್ಲಿ ಇಂಥದೊಂದು ದಿಟ್ಟ ನಿರ್ಣಯ ಕೈಗೊಂಡು ಬಹುವರ್ಷಗಳ ಬೇಡಿಕೆಗೆ ಕಿವಿಗೊಟ್ಟಿತು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ನಿರ್ಣಯ ಈಗಾಗಲೇ ಜಾರಿಗೆ ಬಂದಿದ್ದು, ಆ ಪ್ರಕಾರ ನೇಮಕಾತಿ ನಡೆಯುತ್ತಿದೆ. ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬೇಕಾಗುತ್ತದೆ. ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಕೆಲ ತಿಂಗಳ ಹಿಂದೆಯೇ ಈ ಕಾಯ್ದೆ ಜಾರಿಗೆ ಬಂದಿದೆ. ಕರ್ನಾಟಕದಲ್ಲಿ ಇದೀಗ ಆದೇಶ ಹೊರಬಿದ್ದಿದೆ. ಇಲ್ಲಿ ಒಂದು ಅಂಶ ಗಮನಿಸಬೇಕು. ಈ ಮೀಸಲಾತಿ ನಿಯಮ ಸದ್ಯಕ್ಕೆ ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗಷ್ಟೆ ಅನ್ವಯಿಸುತ್ತದೆ. ರಾಜ್ಯ ಸರ್ಕಾರಿ ನೌಕರಿಗಳಲ್ಲೂ ಈ ಸವಲತ್ತು ಸಿಗಬೇಕೆಂದರೆ ಅದಕ್ಕೆ ಪ್ರತ್ಯೇಕ ಆದೇಶ ಮಾಡಬೇಕಾಗುತ್ತದೆ. ಈಗ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೀಸಲಾತಿ ಪಡೆಯಲು ಬೇಕಾದ ಪ್ರಮಾಣಪತ್ರಗಳನ್ನು ವಿತರಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಗೆ ಸೂಚನೆಯನ್ನೇನೋ ನೀಡಿದೆ ಎಂಬುದು ಖರೆ. ನಮ್ಮಲ್ಲಿ ಸರ್ಕಾರಿ ಆದೇಶಗಳು ನೋಡಲು ಚೆಂದವಾಗಿರುತ್ತವೆ; ಅನುಷ್ಠಾನದ ಹಂತದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ದಾಖಲೆಗಳ ವಿಚಾರದಲ್ಲಿ ಏನೇನೋ ಸಬೂಬುಗಳನ್ನು ಹೇಳುವುದು, ಸಣ್ಣಪುಟ್ಟ ತಾಂತ್ರಿಕ ಕಾರಣಕ್ಕೆ ಜನರ ಅರ್ಜಿ ವಿಳಂಬ ಮಾಡುವುದು, ಲಂಚಕ್ಕಾಗಿ ಆಗ್ರಹ ಈ ಮುಂತಾದ ರಗಳೆಗಳು ಎಲ್ಲರ ಅನುಭವಕ್ಕೂ ಬರುವುದೇ ಆಗಿವೆ. ಹೀಗಾಗಿ ಮೀಸಲಾತಿ ವಿಷಯದಲ್ಲಿ ಇಂಥ ತೊಂದರೆಗಳು ಆಗದಂತೆ ನೋಡಿಕೊಂಡು ಜನರಿಗೆ ಸರಿಯಾದ ಸಮಯಕ್ಕೆ ಪ್ರಮಾಣಪತ್ರಗಳು ದೊರಕುವಂತೆ ಮಾಡಿ, ಅವರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಹೊಣೆಗಾರಿಕೆ. ಹಾಗಾಗದಿದ್ದಲ್ಲಿ ಜನರಿಗೆ ವ್ಯವಸ್ಥೆಯ ಮೇಲಿನ ಬೇಸರ ಮತ್ತಷ್ಟು ಹೆಚ್ಚಬಹುದು.

Leave a Reply

Your email address will not be published. Required fields are marked *