Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಕರ್ತವ್ಯ ಮರೆಯದಿರಲಿ

Friday, 21.09.2018, 3:03 AM       No Comments

ರಾಜಧಾನಿ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಿಸಲು ನ್ಯಾಯಾಂಗವೇ ಕ್ರಿಯಾಶೀಲವಾಗಬೇಕಾದ ಪ್ರಸಂಗ ಮತ್ತು ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನ ಅಂದಗೆಡಿಸಿದ್ದ ಫ್ಲೆಕ್ಸ್, ಬ್ಯಾನರ್​ಗಳ ಹಾವಳಿಗೆ ಮುಕ್ತಿ ನೀಡಿದ ಹೈಕೋರ್ಟ್, ಇದೀಗ ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿಗೆ ಮೂರು ದಿನಗಳ ಗಡುವು ವಿಧಿಸಿದೆ. ಬುಧವಾರ ಮಧ್ಯಾಹ್ನದ ನಂತರ ಎರಡು ಸಾವಿರಕ್ಕೂ ಅಧಿಕ ಗುಂಡಿಗಳನ್ನು ಮುಚ್ಚಲಾಗಿದ್ದು, ರಾತ್ರಿಹಗಲೆನ್ನದೆ ಕಾಮಗಾರಿ ಸಮರೋಪಾದಿಯಲ್ಲಿ ನಡೆದಿದೆ. ಆದರೆ, ಸಂಬಂಧಪಟ್ಟವರ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆಯ ಪರಿಣಾಮ ಜನರು ರಸ್ತೆಗುಂಡಿಗಳಿಂದ ತೊಂದರೆ ಅನುಭವಿಸುವಂತಾಗಿದೆ ಎಂಬುದನ್ನು ಮರೆಯುವಂತಿಲ್ಲ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಣೆಗಾರಿಕೆಗಳನ್ನು, ಸುಗಮ ಆಡಳಿತಕ್ಕೆ ಬೇಕಾದ ಚೌಕಟ್ಟನ್ನು ಸಮರ್ಪಕವಾಗಿ ರೂಪಿಸಿ, ಹಂಚಲಾಗಿದೆ. ಸಂಸದರು/ಶಾಸಕರು ಜನೋಪಯೋಗಿ ಕಾನೂನು ರೂಪಿಸುವ ಬದ್ಧತೆ ಹೊಂದಿದ್ದರೆ, ಅಧಿಕಾರಶಾಹಿ ಅಂದರೆ ಕಾರ್ಯಾಂಗ ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಆ ಮೂಲಕ ಜನಹಿತವನ್ನು ಕಾಪಾಡುವ ಕೆಲಸ ಮಾಡಬೇಕಾಗುತ್ತದೆ. ನಮ್ಮಲ್ಲಿ ಉತ್ತಮ ಕಾನೂನುಗಳು, ಯೋಜನೆಗಳು, ಮಹತ್ವದ ಕಾರ್ಯಕ್ರಮಗಳಿಗೆ ಬರವಿಲ್ಲ. ಆದರೆ, ಸಮಸ್ಯೆ ಸೃಷ್ಟಿಯಾಗುವುದೇ ಅನುಷ್ಠಾನದ ಹಂತದಲ್ಲಿ. ಅಧಿಕಾರಶಾಹಿಯ ‘ಚಲ್ತಾ ಹೈ’ ಎಂಬ ಮನೋಭಾವದಿಂದ ಮಹತ್ವದ ಯೋಜನೆ/ಕಾರ್ಯಕ್ರಮಗಳು ಕೂಡ ಜನರಿಗೆ ತಲುಪದೆ ಗೌಣವಾಗಿ ಬಿಡುತ್ತವೆ. ಅಲ್ಲದೆ, ನಿಯತವಾಗಿ ಆಗಬೇಕಾದ ಕೆಲಸಗಳೂ ಆಗದೆ ಜನರು ಪರದಾಡಬೇಕಾಗುತ್ತದೆ. ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ಇದೇ ಸಾಲಿಗೆ ಸೇರಿದ್ದು. ಈ ಬಗ್ಗೆ ಜನಸಾಮಾನ್ಯರು, ಮಾಧ್ಯಮಗಳು ದನಿ ಎತ್ತಿದರೂ ಜಡನಿದ್ರೆಯಲ್ಲಿದ್ದ ಅಧಿಕಾರಿಗಳು ಹೈಕೋರ್ಟ್ ಚಾಟಿ ಬೀಸಿದ ಬಳಿಕವೇ ಎಚ್ಚೆತ್ತುಕೊಂಡಿದ್ದಾರೆ.

ತಾವು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾದ ಕೆಲಸಗಳನ್ನು ಮರೆತು, ನ್ಯಾಯಾಲಯ ಎಚ್ಚರಿಸಿದ ಬಳಿಕವಷ್ಟೇ ಕ್ರಿಯಾಶೀಲವಾಗುವುದು ಉತ್ತಮ ಬೆಳವಣಿಗೆಯೇನೂ ಅಲ್ಲ. ಸ್ಥಳೀಯ ಸಂಸ್ಥೆಗಳು, ಆಯಾ ಪ್ರಾಧಿಕಾರ, ಸಂಬಂಧಪಟ್ಟ ಇಲಾಖೆಗಳು ನಿಗದಿತ ಕಾಲಮಿತಿಯಲ್ಲಿ ಕೆಲಸಗಳನ್ನು ಪೂರ್ಣಗೊಳಿಸಿದರೆ ಇಂಥ ಸಮಸ್ಯೆಗಳೇ ಉದ್ಭವವಾಗುವುದಿಲ್ಲ. ಜನರ ತೊಂದರೆ ಕಂಡೂ ಕಾಣದಂತೆ ವರ್ತಿಸುವ ಅಧಿಕಾರಶಾಹಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಧೋರಣೆ ಅಕ್ಷಮ್ಯ. ಸ್ಥಳೀಯ ಮಟ್ಟದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ ಮತ್ತು ಅವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ ಎಂಬುದಕ್ಕೆ ಮುಖ್ಯಮಂತ್ರಿಗಳ ‘ಜನತಾ ದರ್ಶನ’ ಕಾರ್ಯಕ್ರಮವೂ ಸಾಕ್ಷಿ. ತಾಲೂಕು, ಜಿಲ್ಲಾ ಮಟ್ಟದಲ್ಲೇ ಪರಿಹಾರವಾಗಬಹುದಾದ ಸಮಸ್ಯೆಗಳಿಗೆ ಅಲ್ಲಿನ ಅಧಿಕಾರಿಗಳು ಸ್ಪಂದಿಸದಿದ್ದಾಗ ಶ್ರೀಸಾಮಾನ್ಯರು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ದೂರದ ಬೆಂಗಳೂರಿನವರೆಗೆ ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ‘ಸ್ಥಳೀಯ ಮಟ್ಟದಲ್ಲೇ ಪರಿಹಾರ ಕಾಣಬಹುದಾದ ಸಮಸ್ಯೆಗಳನ್ನು ಬೆಂಗಳೂರಿನವರೆಗೂ ಯಾಕೆ ತರುತ್ತೀರಿ?’ ಎಂದು ಮುಖ್ಯಮಂತ್ರಿಗಳೂ ಪ್ರಶ್ನಿಸಿದ್ದುಂಟು.

ಇತ್ತೀಚಿನ ದಿನಗಳಲ್ಲಂತೂ ಸಮಸ್ಯೆಗಳನ್ನು ಕ್ಷಿಪ್ರವಾಗಿ ಪರಿಹರಿಸಲು ತಂತ್ರಜ್ಞಾನದ, ಹಣಕಾಸಿನ ನೆರವು ಕೂಡ ಲಭ್ಯವಿದೆ. ಹೀಗಿರುವಾಗಲೂ ಸಬೂಬು ಹೇಳುತ್ತ ಅಧಿಕಾರಿಗಳು ಮೈಮರೆತರೆ ನ್ಯಾಯಾಂಗವೇ ಜನರ ನೆರವಿಗೆ ಬರಬೇಕಾಗುತ್ತದೆ. ಫ್ಲೆಕ್ಸ್ ಪ್ರಕರಣವಿರಬಹುದು, ರಸ್ತೆಗುಂಡಿ ವಿಚಾರ ಇರಬಹುದು- ಇಲ್ಲಿ ನ್ಯಾಯಾಲಯ ಎಚ್ಚರಿಕೆಯ ಗಂಟೆ ಬಾರಿಸಿದೆ. ‘ಹೇಗೆ ಮಾಡಿದರೂ ನಡೆಯುತ್ತದೆ’ ಎಂದು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಪಾಠ ಕಲಿಯಲು ಇದು ಸಕಾಲ, ಇಲ್ಲದಿದ್ದಲ್ಲಿ ಇಂಥ ಮನೋಭಾವವನ್ನು ನ್ಯಾಯಾಲಯವೇ ಬದಲಿಸುತ್ತದೆ ಎಂಬ ಸಂದೇಶವಂತೂ ರವಾನೆಯಾಗಿದೆ.

Leave a Reply

Your email address will not be published. Required fields are marked *

Back To Top