Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಪಾಕ್ ಇಬ್ಬಂದಿತನ

Saturday, 22.09.2018, 3:02 AM       No Comments

ಭಾರತದ ಕುರಿತಾದ ದ್ವಂದ್ವ ನಿಲುವಿಗೆ, ನಂಬಿಕೆದ್ರೋಹಕ್ಕೆ ಹೆಸರಾದ ಪಾಕಿಸ್ತಾನ, ವಿಶ್ವಸಮುದಾಯದ ವಿಶ್ವಾಸವನ್ನೂ ಕಳೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ ಎನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅದು ವರ್ತಿಸುತ್ತಿರುವ ರೀತಿ ಈ ಮಾತಿಗೆ ಪುಷ್ಟಿನೀಡುತ್ತದೆ. ಪಾಕಿಸ್ತಾನದ ಹಿಂದಿನ ಪ್ರಧಾನಿ ನವಾಜ್ ಷರೀಫ್ ಹುಟ್ಟುಹಬ್ಬದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿಬರುತ್ತಿದ್ದಂತೆ, ಪಠಾಣ್​ಕೋಟ್ ದಾಳಿ ನಡೆಸಿತ್ತು ಪಾಕ್. ಈಗ ಬದಲಾದ ಕಾಲಘಟ್ಟದಲ್ಲಿ, ಗಡಿಭಾಗದಲ್ಲಿ ಭಾರತೀಯ ಯೋಧನನ್ನು ಪಾಕ್ ಸೇನೆ ಹತ್ಯೆಮಾಡಿದ ತರುವಾಯ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಸ್ನೇಹ ಮತ್ತು ಶಾಂತಿವರ್ಧನೆಯ ಆಶಯವನ್ನೊಳಗೊಂಡ ಪತ್ರವನ್ನು ಬರೆದಿರುವುದು ನೋಡಿದರೆ, ‘ಕಂಕಳಲ್ಲಿ ದೊಣ್ಣೆ ಕೈಯಲ್ಲಿ ಶರಣಾರ್ಥಿ’ ಎಂಬ ಜಾಣನುಡಿ ಅಪ್ರಯತ್ನವಾಗಿ ನೆನಪಾಗುತ್ತದೆ. ಈ ಹಿನ್ನೆಲೆಯಲ್ಲಿ, ನ್ಯೂಯಾರ್ಕ್​ನಲ್ಲಿ ನಡೆಯುಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತುಕತೆಗೆ ಭಾರತ ನಿರಾಕರಿಸಿದೆ. ಇದು ಸೂಕ್ತ ನಡೆಯೇ ಸರಿ.

ಮತ್ತೊಂದೆಡೆ, ಜಮ್ಮು-ಕಾಶ್ಮೀರದ ಭದ್ರತಾ ಸಿಬ್ಬಂದಿ ಯನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕರು, ಮತ್ತೆ ಮೂವರು ಪೊಲೀಸರನ್ನು ಅಪಹರಿಸಿ ಹತ್ಯೆ ಮಾಡಿರುವುದರ ಜತೆಗೆ, ಪೊಲೀಸ್ ವೃತ್ತಿಯನ್ನು ತೊರೆಯುವಂತೆ ಕಾಶ್ಮೀರಿಗರಿಗೆ ಬೆದರಿಕೆ ಹಾಕುತ್ತಿರುವಂಥ ಹೀನ ಬೆಳವಣಿಗೆಗಳಾಗಿವೆ. ಜಮ್ಮು-ಕಾಶ್ಮೀರದಲ್ಲಿ ಭಾರತದ ಮತ್ತು ಭಾರತೀಯತೆಯ ಅಸ್ಮಿತೆಯನ್ನು ಕಾಪಾಡುವಲ್ಲಿ ಇನ್ನಿಲ್ಲದಂತೆ ಶ್ರಮಿಸುತ್ತಿರುವ ಪೊಲೀಸ್ ಬಲದ ನೈತಿಕ ಸ್ಥೈರ್ಯವನ್ನೇ ಉಡುಗಿಸಿಬಿಟ್ಟರೆ, ಅದು ತಮ್ಮ ಕುತ್ಸಿತ ಕಾರ್ಯಾಚರಣೆಗೆ ಪೂರಕ ವಾತಾವರಣವನ್ನು ನಿರ್ವಿುಸುತ್ತದೆ ಎಂಬುದು ಈ ಉಗ್ರರ ಹವಣಿಕೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಷ್ಟು ಸಾಲದೆಂಬಂತೆ, ಉಗ್ರವಾದಕ್ಕೆ ತನ್ನ ಉತ್ತೇಜನವಿಲ್ಲ ಎಂದೇ ಜಾಗತಿಕ ಮಟ್ಟದಲ್ಲಿ ತುತ್ತೂರಿ ಊದುವ ಪಾಕ್, ಭಾರತೀಯ ಭದ್ರತಾಪಡೆಯಿಂದ ಎನ್​ಕೌಂಟರ್​ಗೆ ಒಳಗಾದ ಉಗ್ರ ಬುರ್ಹಾನ್ ವಾನಿಯ ಅಂಚೆಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ತನ್ನ ಮಾರ್ಜಾಲ ನೀತಿಯನ್ನು ಸ್ವತಃ ಪುಷ್ಟೀಕರಿಸಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತವು ತನ್ನ ವ್ಯೂಹಾತ್ಮಕ ಕಾರ್ಯತಂತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.

ಉಭಯ ದೇಶಗಳ ಹಾಗೂ ಅದರ ನಾಗರಿಕರ ಭವಿಷ್ಯಕ್ಕಾಗಿ ಶಾಂತಿಯುತ ಪರಿಹಾರ ಸೂತ್ರವೊಂದನ್ನು ಕಂಡುಕೊಳ್ಳಬೇಕಿದೆ ಎಂಬುದು ಇಮ್ರಾನ್ ಖಾನ್ ಪತ್ರದಲ್ಲಿನ ಆಶಯವಾಗಿದೆಯಾದರೂ, ಅದು ಹೃದಯಾಂತರಾಳದ ಮಾತು ಎಂದು ನಂಬಲಾಗದು. ಈ ಅಭಿಪ್ರಾಯಕ್ಕೆ ಕಾರಣಗಳು ಇಲ್ಲದಿಲ್ಲ. ಪಾಕಿಸ್ತಾನದಲ್ಲಿ ಚುನಾಯಿತ ಜನಪ್ರಿಯ ಸರ್ಕಾರವೇ ಇದ್ದರೂ, ಮಿಲಿಟರಿ ವ್ಯವಸ್ಥೆಯು ನೇಪಥ್ಯದಲ್ಲಿದ್ದುಕೊಂಡೇ ಪ್ರಭಾವ ಬೀರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಅದರಲ್ಲೂ ಈಗ ಪಾಕ್ ಪ್ರಧಾನಿ ಗದ್ದುಗೆ ಅಲಂಕರಿಸಿರುವ ಇಮ್ರಾನ್ ಖಾನ್, ಮಿಲಿಟರಿಯ ಕೈಗೊಂಬೆ ಎಂದೇ ಖ್ಯಾತರು. ಚುನಾವಣಾ ಗೆಲುವಿನಲ್ಲಿ ಸೇನೆ ವಹಿಸಿದ ‘ಪರೋಕ್ಷಪಾತ್ರ’ದ ಋಣಭಾರ ಅವರ ಹೆಗಲ ಮೇಲಿರುವುದರಿಂದ, ಸೇನೆಯ ಕಣ್ಣ ಇಶಾರೆಗೆ ತಕ್ಕಂತೆ ವರ್ತಿಸಬೇಕಾದ ಅನಿವಾರ್ಯತೆ ಅವರದ್ದಾಗಿದೆ. ಹೀಗಾಗಿ ಭಾರತದ ಮೇಲೆ ಮುರಕೊಂಡು ಬೀಳುವಂಥ ಒಂದೇ ಒಂದು ಸಂದರ್ಭವನ್ನೂ ಕಳೆದುಕೊಳ್ಳಲು ಅವರು ಸಿದ್ಧರಿಲ್ಲ. ಭಾರತವೂ ಪಾಕಿಸ್ತಾನದ ಮೃದುಮಾತಿಗೆ ಜಗ್ಗದೆ, ‘ಭಯೋತ್ಪಾದನೆ ಮತ್ತು ಮಾತುಕತೆ ಜತೆಜತೆಯಾಗಿ ನಡೆಯಲು ಸಾಧ್ಯವಿಲ್ಲ’ ಎಂಬ ನಿಲುವಿಗೆ ಗಟ್ಟಿಯಾಗಿ ಅಂಟಿಕೊಳ್ಳಬೇಕು.

Leave a Reply

Your email address will not be published. Required fields are marked *

Back To Top