ಹನಿಟ್ರ್ಯಾಪ್ ಹಳ್ಳ

ಪಾಕಿಸ್ತಾನದ ಬೇಹುಗಾರ್ತಿಯೊಬ್ಬಳು ತನ್ನ ವಾಸ್ತವಿಕ ಹೆಸರನ್ನು ಮರೆಮಾಚಿ, ನಕಲಿ ಹೆಸರಿನಲ್ಲಿ ಫೇಸ್​ಬುಕ್ ಖಾತೆ ತೆರೆದು ಅದರ ಮೂಲಕ ಭಾರತದ ಸೈನಿಕರನ್ನು ಮೋಹದಬಲೆಗೆ (ಹನಿಟ್ರ್ಯಾಪ್​ಗೆ) ಸಿಲುಕಿಸಿಕೊಂಡಿದ್ದ ಸಂಗತಿ ವರದಿಯಾಗಿದೆ. ಇಂಥ ಬಲೆಗೆ ಬಿದ್ದಿರುವ 50 ಮಂದಿ ಭಾರತೀಯ ಸೈನಿಕರ ಪೈಕಿ ಪ್ರಸ್ತುತ ಬಂಧಿತನಾಗಿರುವ ಯೋಧ ಸೋಮ್​ವೀರ್​ ಸಿಂಗ್, ಭಾರತದ ಸೇನಾ ತರಬೇತಿ ಶಿಬಿರಗಳು, ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಇತರ ಆಯಕಟ್ಟಿನ ನೆಲೆಗಳ ಮಾಹಿತಿ ಮತ್ತು ನಕ್ಷೆಗಳನ್ನು ಪಾಕಿಸ್ತಾನ ಸೇನೆಗೆ ರವಾನಿಸುತ್ತಿದ್ದ ಎನ್ನಲಾಗಿದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿಯೇ ಸರಿ.

ಕಣಿವೆರಾಜ್ಯ ಕಾಶ್ಮೀರವನ್ನು ಹೊರತುಪಡಿಸಿದರೆ, ದೇಶದ ಮಿಕ್ಕ ಭಾಗಗಳಲ್ಲಿ ಭಯೋತ್ಪಾದನೆಯ ಪ್ರತ್ಯಕ್ಷ ಅನುಭವ ಮತ್ತು ತೀವ್ರತೆ ಸಾಕಷ್ಟು ತಗ್ಗಿದೆ, ತಹಬಂದಿಗೆ ಬಂದಿದೆ ಎನ್ನಬೇಕು. ಆದರೆ ಇದಕ್ಕೆ ಜಗ್ಗದ ಉಗ್ರರು, ಬದಲಿ ಮಾರ್ಗಗಳನ್ನು ಕಂಡುಕೊಂಡು ದೇಶದ ಮೇಲೆ ಮುರಕೊಂಡು ಬೀಳುವ ಯತ್ನದಲ್ಲಿ ವ್ಯಸ್ತರಾಗಿದ್ದಾರೆ ಎಂಬುದಕ್ಕೆ ಇಂಥ ನಿದರ್ಶನಗಳು ಸಾಕ್ಷಿಯಾಗಬಲ್ಲವು. ಇಂಥ ಕುತಂತ್ರಗಳಿಗೆ ಪಾಕ್ ಸೇನೆ ಹಾಗೂ ಅಲ್ಲಿನ ಐಎಸ್​ಐ ಗುಪ್ತಚರ ಸಂಸ್ಥೆಯ ಒತ್ತಾಸೆಯೂ ಇರುವುದರಿಂದ, ಉಗ್ರರಿಗೆ ಇನ್ನಿಲ್ಲದ ಹುರುಪು ದಕ್ಕಿದಂತಾಗಿದೆ. ನೇರದಾಳಿಯನ್ನು ಪಕ್ಕಕ್ಕಿಟ್ಟು ಹನಿಟ್ರಾ್ಯಪ್ ಮಾಗೋಪಾಯದ ಮೊರೆಹೋಗಿ ಭಾರತೀಯ ಸೇನೆಯ ಮಾಹಿತಿ ಪಡೆಯುವಿಕೆ, ಸೈಬರ್​ದಾಳಿ, ಜಾಲತಾಣಗಳನ್ನು ಹ್ಯಾಕ್ ಮಾಡುವಿಕೆ, ಇಂಥ ತಾಣಗಳ ಮೂಲಕ ಯುವಕರನ್ನು ಸೆಳೆಯುವಿಕೆ- ಹೀಗೆ ಬದಲಿಮಾರ್ಗಗಳನ್ನು ಬಳಸಿಕೊಳ್ಳುತ್ತಿರುವಂಥ ಬೆಳವಣಿಗೆಗಳು ಸಾಕಷ್ಟು ದಿನಗಳಿಂದ ನಡೆಯುತ್ತಿವೆ. ಕಳೆದ ವರ್ಷದ ಅಕ್ಟೋಬರ್​ನಲ್ಲಿ, ಬ್ರಹ್ಮೋಸ್ ಏರೋಸ್ಪೇಸ್ ಇಂಜಿನಿಯರ್ ನಿಶಾಂತ್ ಅಗರ್​ವಾಲ್ ಇದೇ ರೀತಿಯಲ್ಲಿ ಮೋಹದಜಾಲಕ್ಕೆ ಸಿಲುಕಿ ಶತ್ರುದೇಶಕ್ಕೆ ತಾಂತ್ರಿಕ ಮಾಹಿತಿಯನ್ನು ರವಾನಿಸುತ್ತಿದ್ದರು ಎಂಬ ಆರೋಪದ ಮೇಲೆ ಉತ್ತರಪ್ರದೇಶ ಪೊಲೀಸರಿಂದ ಬಂಧಿತರಾಗಿದ್ದು ಗೊತ್ತಿರುವ ಸಂಗತಿಯೇ. ಆದ್ದರಿಂದ ಇಂಥ ಸಂಭಾವ್ಯ ಮಾಗೋಪಾಯಗಳು ಮತ್ತು ಅದು ತಂದೊಡ್ಡುವ ಅಪಾಯಗಳ ಕುರಿತೂ ಕೂಲಂಕಷ ಗಮನ ಹರಿಸಬೇಕಿದೆ. ಪ್ರಸ್ತುತ ಸೇನಾಯೋಧನೊಬ್ಬ ಸಿಕ್ಕಿಬಿದ್ದಿದ್ದಾನೆಂದ ಮಾತ್ರಕ್ಕೆ, ಎಲ್ಲ ಸ್ತರದ ಸೇನಾಸಿಬ್ಬಂದಿಯ ಕೈಮಸಿಯಾಗಿದೆ ಎನ್ನಲಾಗದು. ಆದರೆ ‘ಬುಟ್ಟಿಯಲ್ಲಿನ ಒಂದು ಹಣ್ಣು ಕೊಳೆತಾಗ ಎಚ್ಚೆತ್ತುಕೊಳ್ಳದಿದ್ದರೆ, ಮಿಕ್ಕಹಣ್ಣುಗಳಿಗೂ ಅದೇ ದುಸ್ಥಿತಿ ಒದಗುತ್ತದೆ’ ಎಂಬ ಅನುಭವಜನ್ಯ ಮಾತಿನಂತೆ, ಒಬ್ಬನ ಎಡವುವಿಕೆ ಮಿಕ್ಕವರಿಗೂ ಸಾಂಕ್ರಾಮಿಕವಾಗದ ರೀತಿಯಲ್ಲಿ ಸೇನಾಮುಖ್ಯಸ್ಥರು ಕಟ್ಟೆಚ್ಚರ ವಹಿಸಬೇಕಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚು ವ್ಯಸ್ತರಾಗುವವರ ಮೇಲೆ ಹದ್ದಿನಕಣ್ಣು ಇರಿಸಬೇಕಿದೆ. ಇಂಥ ಅನುಮಾನಾಸ್ಪದ ಚಟುವಟಿಕೆಗೆ ಸಂಬಂಧಿಸಿದಂತೆ ಕಣ್ಗಾವಲು ಇರಿಸುವುದಕ್ಕೆ ಕೇಂದ್ರ ಸರ್ಕಾರವು ವಿಶಿಷ್ಟ ಕಾಯ್ದೆಯ ಮೂಲಕ ನೀಡಿರುವ ಬಲವನ್ನು, ಅಂಥ ಬಳಕೆದಾರರ ವೈಯಕ್ತಿಕತೆ/ಖಾಸಗಿತನಕ್ಕೆ ಧಕ್ಕೆಯಾಗದ ಹಾಗೆ ಮತ್ತು ಸೇನಾವ್ಯವಸ್ಥೆಯ ವಾಡಿಕೆಯ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗದ ರೀತಿಯಲ್ಲಿ ಈ ಸಂದರ್ಭದಲ್ಲಿ ಸಮರ್ಥವಾಗಿ ಬಳಸಿಕೊಂಡು ದೇಶದ ಭದ್ರತೆ-ಸಮಗ್ರತೆಗೆ ಒದಗಬಹುದಾದ ಸಂಭಾವ್ಯ ಸಂಚಕಾರಕ್ಕೆ ತಡೆಯೊಡ್ಡಬೇಕಾಗಿದೆ. ಏಕೆಂದರೆ, ವಾಮಮಾರ್ಗದ ಮೂಲಕ ಪಾಕಿಸ್ತಾನದ ಕೈಸೇರುವ ಭಾರತೀಯ ಸೇನಾವ್ಯವಸ್ಥೆಯ ಕುರಿತಾದ ಯಾವುದೇ ಮಹತ್ವದ ಮಾಹಿತಿ ತರುವಾಯದಲ್ಲಿ, ನಮ್ಮ ಮತ್ತೋರ್ವ ಶತ್ರು ಚೀನಾವನ್ನೂ ತಲುಪುವಂತಾಗಿಬಿಟ್ಟಲ್ಲಿ ಅಪಾಯ ದುಪ್ಪಟ್ಟಾಗುವ ಸಂಭವವೇ ಹೆಚ್ಚು. ಅಂಥ ಸ್ಥಿತಿ ಒದಗುವ ಮುನ್ನವೇ ಈಗಿಂದೀಗಲೇ ಕಟ್ಟೆಚ್ಚರ ವಹಿಸುವುದು ಸೂಕ್ತ.