Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸರ್ಕಾರ ಚುರುಕಾಗಲಿ

Thursday, 07.06.2018, 3:05 AM       No Comments

ಅಂತೂ ಇಂತೂ ಹದಿನೈದು ದಿನಗಳ ಹಗ್ಗಜಗ್ಗಾಟದ ಬಳಿಕ ಸಚಿವ ಸಂಪುಟ ವಿಸ್ತರಣೆ ಎಂಬ ಗಜಪ್ರಸವ ಬುಧವಾರ ನಡೆದಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ಸೇರಿ 25 ಸಚಿವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದು, ರಾಜಕೀಯ ಕಸರತ್ತೊಂದು ಈ ಮೂಲಕ ಅಂತ್ಯಗೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆದು ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅದಕ್ಕೆ ಸರ್ಕಾರ ರಚಿಸಲು ಬೇಕಾದ ಬಹುಮತ ದೊರೆಯಲಿಲ್ಲ. ಪರಿಣಾಮ, ಕಾಂಗ್ರೆಸ್ ಜೆಡಿಎಸ್​ಗೆ ಬೇಷರತ್ ಬೆಂಬಲ ಘೋಷಿಸಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಜಿ.ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಬಳಿಕವೂ ಪೂರ್ಣಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂದಿರಲಿಲ್ಲ.

ಎರಡೂ ಪಕ್ಷಗಳ ನಡುವೆ ಖಾತೆ ಹಂಚಿಕೆ ಬಿಕ್ಕಟ್ಟು, ಸಚಿವ ಸ್ಥಾನದ ಆಕಾಂಕ್ಷಿಗಳ ದಂಡು, ಜಾತಿ-ಪ್ರದೇಶವಾರು ಪ್ರಾತಿನಿಧ್ಯದ ಲೆಕ್ಕಾಚಾರದ ನಡುವೆ ಸಂಪುಟ ವಿಸ್ತರಣೆಯ ಪ್ರಕ್ರಿಯೆ ಕಗ್ಗಂಟಾಗುತ್ತಲೇ ಸಾಗಿತ್ತು. ಇದೀಗ ಸಂಪುಟ ವಿಸ್ತರಣೆಯಾದರೂ ಅತೃಪ್ತರ ಬೇಗುದಿ, ಅಸಮಾಧಾನಗಳು ಭುಗಿಲೆದ್ದಿದ್ದು, ಆಯಾ ಪಕ್ಷದ ನಾಯಕರು ಇದನ್ನು ಹೇಗೆ ನಿರ್ವಹಿಸುತ್ತಾರೆಂಬುದನ್ನು ಕಾದುನೋಡಬೇಕಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕಾಗಿ ಹಲವೆಡೆ ಪ್ರತಿಭಟನೆ ನಡೆದಿದ್ದು ರಾಜಕೀಯ ಪ್ರಹಸನ ಮುಂದುವರಿದಿದೆ. ಅದೇನೇ ಇರಲಿ ಇನ್ನೂ ರಾಜಕೀಯ ಕಸರತ್ತುಗಳನ್ನು, ಪ್ರಹಸನವನ್ನು ಮುಂದುವರಿಸಲಾಗದು ಎಂಬುದನ್ನು ಆಳುಗರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಸಂಪುಟ ಅಸ್ತಿತ್ವಕ್ಕೆ ಬರಲು ಒಂದಿಷ್ಟು ಸಮಯ ತೆಗೆದುಕೊಂಡಿರಬಹುದು. ಆದರೆ, ಆಡಳಿತದಲ್ಲಿ ವಿಳಂಬವನ್ನಾಗಲಿ, ಜಡತ್ವವನ್ನಾಗಲಿ ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಜನರಿಲ್ಲ. ಚುನಾವಣೆ ನೀತಿಸಂಹಿತೆಯ ಅವಧಿ, ಆ ಬಳಿಕದ ಸರ್ಕಾರ ರಚನೆಯ ಅವಧಿಯಲ್ಲಿ ಅಭಿವೃದ್ಧಿಯಂತ್ರ ಸ್ಥಗಿತಗೊಂಡಿದೆ. ಹಾಗಾಗಿ, ಹೊಸ ಸರ್ಕಾರ ಚುರುಕಿನಿಂದ, ಹುಮ್ಮಸ್ಸಿನಿಂದ ಕೆಲಸ ಆರಂಭಿಸಿ ಅದೇ ವೇಗವನ್ನು ಮುಂದೆ ಕಾಯ್ದುಕೊಳ್ಳುವುದು ಅಗತ್ಯ, ಅನಿವಾರ್ಯ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಭರಪೂರ ಭರವಸೆ ನೀಡಿದ್ದು, ಅವನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಲು ಮುಂದಾಗುವ ಸವಾಲೂ ಇದೆ. ಏಕೆಂದರೆ ಇವಕ್ಕೆಲ್ಲ ಹಣಕಾಸನ್ನು ಹೊಂದಿಸುವುದು ಸುಲಭವಲ್ಲ. ರೈತರ ಸಾಲಮನ್ನಾ ವಿಚಾರದಲ್ಲಿ ಸರ್ಕಾರ ಸಮಯಾವಕಾಶ ಕೋರಿರುವುದೇ ಈ ಮಾತಿಗೆ ಪುಷ್ಟಿನೀಡುತ್ತದೆ. ಮುಂಗಾರು ರಾಜ್ಯಕ್ಕೆ ಅಡಿಯಿಟ್ಟಿದ್ದು, ಹವಾಮಾನ ಇಲಾಖೆ ಉತ್ತಮ ಮಳೆಯ ಮುನ್ಸೂಚನೆ ನೀಡಿದೆ. ಆದ್ದರಿಂದ, ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಕೃಷಿ ಪರಿಕರಗಳ ಕೊರತೆಯಾಗದಂತೆ ನಿಗಾವಹಿಸಿ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡಬೇಕಿದೆ. ನೆರೆ ಸೇರಿದಂತೆ ಮಳೆಸಂಬಂಧಿ ಅವಘಡಗಳನ್ನು ಎದುರಿಸಲು ಆಡಳಿತಯಂತ್ರ ಸನ್ನದ್ಧವಾಗಬೇಕಿದೆ. ಕೆಲ ದಿನಗಳ ಹಿಂದಷ್ಟೇ ಮಂಗಳೂರು, ಉಡುಪಿ ನಗರಗಳು ಭಾರಿಮಳೆಯಿಂದ ತತ್ತರಿಸಿ, ಜನ ಸಂಕಷ್ಟಕ್ಕೆ ಸಿಲುಕಿದರೂ ಸರ್ಕಾರದಿಂದ ಸ್ಪಂದಿಸಲು ಸಂಪುಟದಲ್ಲಿ ಸಚಿವರೇ ಇರಲಿಲ್ಲ. ಈಗ ಅಂಥ ಪರಿಸ್ಥಿತಿ ಏನೂ ಇಲ್ಲ. 25 ಸಚಿವರಿಗೆ ಖಾತೆ ಹಂಚಿಕೆಯೂ ಆಗಲಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತ ಅಭಿವೃದ್ಧಿಯನ್ನು ಪ್ರಮುಖ ಧ್ಯೇಯವಾಗಿಸಿಕೊಂಡು ಕಾರ್ಯೋನ್ಮುಖವಾಗಲಿ. ಅಧಿಕಾರಿಶಾಹಿಗೆ ಚುರುಕು ನೀಡುವ ಕೆಲಸವೂ ಆಗಬೇಕಿದೆ. ಅಂತಿಮವಾಗಿ ಜನ ಬಯಸುವುದು ಉತ್ತಮ ಆಡಳಿತವನ್ನು, ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರಗಳನ್ನು ಎಂಬುದನ್ನು ಮರೆಯುವಂತಿಲ್ಲ.

Leave a Reply

Your email address will not be published. Required fields are marked *

Back To Top