Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಹಾಲಲ್ಲೂ ಹಾಲಾಹಲವೇ?

Thursday, 15.11.2018, 6:10 AM       No Comments

ತ್ತೀಚೆಗೆ, ಆಹಾರ ಸುರಕ್ಷತಾ ನಿಯಂತ್ರಕ ವ್ಯವಸ್ಥೆಯಿಂದ ಪರೀಕ್ಷಿಸಲ್ಪಟ್ಟ ಹಾಲಿನ ಮಾದರಿಗಳಲ್ಲಿ (ಇವುಗಳಲ್ಲಿ ಕಚ್ಚಾ ಹಾಲು ಮತ್ತು ಸಂಸ್ಕರಿತ ಹಾಲೂ ಸೇರಿದ್ದವು) ಸರಿಸುಮಾರು ಅರ್ಧದಷ್ಟು ಮಾದರಿಗಳು ಅಗತ್ಯ ಮಾನದಂಡಗಳಿಗೆ ಅನುಸಾರವಾಗಿರಲಿಲ್ಲ ಎಂಬ ಸತ್ಯ ಹೊರಬಿದ್ದಿದೆ. ಅದರಲ್ಲೂ, ಸಂಸ್ಕರಿತ ಹಾಲಿನ ಕೆಲ ಮಾದರಿಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲ ಘಟಕಾಂಶಗಳನ್ನು ಅಂದರೆ, ಆಂಟಿಬಯಾಟಿಕ್​ಗಳು, ರಸಗೊಬ್ಬರಗಳಲ್ಲಿ ಬಳಕೆಯಾಗುವ ಅಮೋನಿಯಂ ಸಲ್ಪೇಟ್, ಅಫ್ಲೊಟಾಕ್ಸಿನ್ ಎಂ1ನಂಥ ವಿಷಕಾರಿ ಪದಾರ್ಥಗಳನ್ನು ‘ಸಹನಾಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ’ ಒಳಗೊಂಡಿದ್ದವು ಎಂಬುದು ನಿಜಕ್ಕೂ ಆಘಾತಕಾರಿಯೇ ಸರಿ. ಹಾಲಿನ ಗುಣಮಟ್ಟ ಮತ್ತು ಆರೋಗ್ಯದ ನಡುವೆ ಅವಿನಾಭಾವ ಸಂಬಂಧ ಇರುವುದನ್ನು ಬಿಡಿಸಿ ಹೇಳಬೇಕಿಲ್ಲ. ಕ್ಷೀರ ಮತ್ತು ಕ್ಷೀರೋತ್ಪನ್ನಗಳ ಬಳಕೆಯು ನಮ್ಮ ಸಂಸ್ಕೃತಿ-ಪರಂಪರೆಗಳ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಪೌಷ್ಟಿಕಾಂಶಗಳ ಆಗರ ಎಂಬ ಕಾರಣಕ್ಕೆ ಶಾಲಾಮಕ್ಕಳಿಗೆ ಹಾಲನ್ನು ವಿತರಿಸುತ್ತ ಬಂದಿರುವ ಸಂಗತಿಯೂ ಹೊಸದೇನಲ್ಲ. ಆದರೆ ಹಾಲೂ ಹಾಲಾಹಲವಾಗಿ ಪರಿಣಮಿಸಿಬಿಟ್ಟರೆ ಯಾರಲ್ಲಿ ಮೊರೆಯಿಡಬೇಕು ಎಂಬುದು ಪ್ರಶ್ನೆ. ಕಲಬೆರಕೆ ಹಾಲಿನ ಸೇವನೆಯಿಂದಾಗಿ ಜಠರ, ಕರುಳು, ಚರ್ಮ, ಕಣ್ಣು ಮತ್ತು ಹೃದಯಸಂಬಂಧಿ ಸಮಸ್ಯೆಗಳು ಉದ್ಭವಿಸುತ್ತವೆ ಎನ್ನುತ್ತದೆ ಒಂದು ಅಧ್ಯಯನ.

ಕಲಬೆರಕೆ ಎಂಬುದು ನಮ್ಮ ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಮಾಮೂಲು ಎನ್ನುವಂತಾಗಿಬಿಟ್ಟಿದೆ; ಅದು ಅಮೃತಸಮಾನ ಹಾಲಿಗೂ ವಿಸ್ತರಿಸಿರುವುದು ಕಳವಳಕಾರಿ. ಹಾಲಿಗೆ ನೀರು ಬೆರೆಸಿ ಮಾರುವುದು ಕೂಡ ಅನಪೇಕ್ಷಿತ ವರ್ತನೆಯಾದರೂ ಅದು ‘ಅಸುರಕ್ಷಿತ’ ಎನಿಸದು; ಆದರೆ ಅಪಾಯಕಾರಿ ರಾಸಾಯನಿಕ ಅಥವಾ ಮಿಶ್ರಣಗಳನ್ನು ಬೆರೆಸುವ ಪರಿಪಾಠ ಸರ್ವಥಾ ಸ್ವೀಕಾರಾರ್ಹವಲ್ಲ, ಕ್ಷಮಾರ್ಹವಲ್ಲ. ಸದರಿ ವರದಿಯಲ್ಲಿ ಅನಾವರಣಗೊಂಡಿರುವ ಕಹಿವಾಸ್ತವಗಳನ್ನು ಮನಗಂಡಾದರೂ ಮತ್ತು ಹಾಲಿಗಿರುವ ಆರೋಗ್ಯರಕ್ಷಕ ಗುಣ-ವೈಶಿಷ್ಟ್ಯವನ್ನು ಕಾಪಿಟ್ಟುಕೊಂಡು ಹೋಗುವ ದೃಷ್ಟಿಯಿಂದಲಾದರೂ, ಕಲಬೆರಕೆ ಪಿಡುಗನ್ನು ಮೂಲೋತ್ಪಾಟನ ಮಾಡಬೇಕಾಗಿದೆ. ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕು. ಅಬ್ಬರದ ಬ್ರಾ್ಯಂಡ್ ಹಣೆಪಟ್ಟಿಯನ್ನು ನಂಬಿ ಮಳಿಗೆಯಿಂದ ಹಾಲು ಖರೀದಿಸುವವರು, ಅದರ ಪ್ಯಾಕಿಂಗ್ ಮೇಲೆ ಉಲ್ಲೇಖಿಸಲಾದ ಸುರಕ್ಷತಾ ಭರವಸೆಯನ್ನು ದೃಢವಾಗಿ ನಂಬಿ ಮನೆಮಂದಿಗೆಲ್ಲ ಹಂಚುತ್ತಾರೆಯೇ ವಿನಾ, ಅದನ್ನು ಮರುಪರೀಕ್ಷೆಯ ಒರೆಗಲ್ಲಿಗೆ ಹಚ್ಚಲು ಹೋಗುವುದಿಲ್ಲ; ಜತೆಗೆ ಅಂಥ ವ್ಯವಧಾನವಾಗಲೀ, ವ್ಯವಸ್ಥೆಯಾಗಲೀ ಬಹುತೇಕರಲ್ಲಿ ಇರುವುದಿಲ್ಲ. ಆದರೆ, ಇದು ಹಾಲಲ್ಲ, ಹಾಲಾಹಲ ಎಂಬ ಆಘಾತಕಾರಿ ಸತ್ಯ ಅರಿವಾದಾಗ, ಅದೆಷ್ಟು ಆಘಾತವಾಗಬಹುದು ಎಂಬುದನ್ನು ಮನಗಂಡು ಸಂಬಂಧಪಟ್ಟ ನಿಯಂತ್ರಕ ವ್ಯವಸ್ಥೆಗಳು ಚಾಟಿಯನ್ನು ಮತ್ತಷ್ಟು ತೀಕ್ಷ್ಣವಾಗಿಸಬೇಕಿದೆ. ಗುಣಮಟ್ಟದ ಮಾನದಂಡಗಳ ಪರಿಪೂರ್ಣ ಅನುಸರಣೆಯಾಗುತ್ತಿದೆಯೇ ಇಲ್ಲವೇ ಎಂಬುದಕ್ಕೆ ಹದ್ದಿನಕಣ್ಣಿನ ನಿಗಾ ಇರಿಸಿ, ಕಲಬೆರಕೆ ತಡೆಯುವುದಕ್ಕೆ ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕಿದೆ. ವಿವಿಧ ಮೂಲಗಳಿಂದ ಹಾಲನ್ನು ಸಂಗ್ರಹಿಸುವಿಕೆ, ಶೈತ್ಯಾಗಾರ ವ್ಯವಸ್ಥೆಯಲ್ಲಿ ಅದನ್ನು ಸಂರಕ್ಷಿಸಿಡುವಿಕೆ, ಸಂಸ್ಕರಣೆ, ಪ್ಯಾಕ್ ಮಾಡುವಿಕೆ- ಹೀಗೆ ಹಲವು ಕಾರ್ಯಸ್ತರಗಳನ್ನು ಹೊಂದಿರುವಂಥ ಈ ವಲಯ, ವ್ಯಾಪ್ತಿ, ನಿರ್ವಹಣೆ ಹಾಗೂ ಕಣ್ಗಾವಲಿನ ದೃಷ್ಟಿಯಿಂದ ಅಗಾಧವಾಗಿರುವುದಂತೂ ಹೌದು; ಆದರೆ ಆರೋಗ್ಯರಕ್ಷಣೆ, ತನ್ಮೂಲಕ ಸಮುದಾಯದ ಹಿತರಕ್ಷಣೆ ಎಂಬುದು ಅದಕ್ಕಿಂತಲೂ ಮಿಗಿಲಾದ ಹೊಣೆಗಾರಿಕೆ. ಇದಕ್ಕೆ ಸಂಚಕಾರ ತರುವಂಥ ಕಲಬೆರಕೆಯಂಥ ಯಾವ ಬಾಬತ್ತೂ ಕಬಂಧಬಾಹುವನ್ನು ಚಾಚುವಂತಾಗಬಾರದು, ತ್ರಿವಿಕ್ರಮನಂತೆ ಬೆಳೆಯಬಾರದು. ಹಾಲಿನ ಕಲಬೆರಕೆ ಯಾವುದೇ ಹಂತದಲ್ಲಿ ಆಗುತ್ತಿದ್ದರೂ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಳುಗರು ಕಟಿಬದ್ಧರಾಗಬೇಕಿದೆ, ಸಮಾಜದ ಹಿತರಕ್ಷಣೆಗೆ ಮುಂದಾಗಬೇಕಿದೆ.

Leave a Reply

Your email address will not be published. Required fields are marked *

Back To Top