ಜನತಂತ್ರದ ವಿಜಯ

ಒಂದು ತಿಂಗಳಿನಿಂದ ದೇಶ ಮಾತ್ರವಲ್ಲ, ಇಡೀ ವಿಶ್ವ ಕಾತರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದೆ. ಮತದಾನೋತ್ತರ ಸಮೀಕ್ಷೆಗಳು ಅಂದಾಜಿಸಿದ ಪ್ರಕಾರ, ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಹುಮತ ದಾಖಲಿಸಿದೆ. ಇದರೊಂದಿಗೆ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ.

ಕಾಂಗ್ರೆಸ್ ಮತ್ತಿತರ ಪಕ್ಷಗಳು ಮಹಾಮೈತ್ರಿಕೂಟ ರಚಿಸಿಕೊಂಡು ಬಿಜೆಪಿಯನ್ನು ಎದುರಿಸಲು ಪ್ರಯತ್ನಗಳು ನಡೆದಿದ್ದರಿಂದಾಗಿ, ಈ ಚುನಾವಣೆಯಲ್ಲಿ ಏನಾಗಬಹುದೆಂಬ ಕುತೂಹಲ ಮೂಡಿತ್ತು. ಆದರೆ, ಈ ಯತ್ನ ದಡ ಸೇರದ್ದರಿಂದ ಬಿಜೆಪಿ ನಿರೀಕ್ಷೆಗಿಂತಲೂ ತುಸು ಹೆಚ್ಚೇ ಸಾಧನೆ ಮಾಡಿತೆನ್ನಬಹುದು. ಮಹಾಮೈತ್ರಿಕೂಟದ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಲು ಅದರ ನಾಯಕರಿಗೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಜನರು, ಹಲವು ಪಕ್ಷಗಳ ಅಸ್ಥಿರ ಆಡಳಿತಕ್ಕಿಂತ ಸ್ಥಿರ ಸರ್ಕಾರದತ್ತ ಒಲವು ತೋರಿದರು. ಪ್ರಚಾರ ಕಣದಲ್ಲಿನ ಮಾತಿನ ಅಬ್ಬರಗಳು, ಇವಿಎಂ ಸಾಚಾತನ ಕುರಿತು ವಿಪಕ್ಷಗಳ ಆಕ್ಷೇಪ ಈ ಮುಂತಾದ ಕಾರಣಗಳಿಂದ ಚುನಾವಣಾ ಪ್ರಚಾರ ಭರ್ಜರಿಯಾಗಿಯೇ ಸುದ್ದಿಮಾಡಿತ್ತು. ಪಶ್ಚಿಮ ಬಂಗಾಳದಲ್ಲಿನ ಕೆಲ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಒಟ್ಟಾರೆ ಪ್ರಚಾರ ಸಾಂಗವಾಗಿ ನೆರವೇರಿದ್ದು ಸಮಾಧಾನಕರ ಸಂಗತಿ. ದೇಶದ ಜನರು ಲೋಕಸಭಾ ಚುನಾವಣೆಗಳನ್ನು ನೋಡುವ ದೃಷ್ಟಿ ಬದಲಾಗಿದೆ ಎಂಬುದು ಕಳೆದ ಸಲವೇ ಬಿಂಬಿತವಾಗಿತ್ತು. ಈ ಬಾರಿ ಅದು ಮತ್ತಷ್ಟು ದೃಢಗೊಂಡಿದೆ.

ದೇಶದ ಸುರಕ್ಷತೆ, ರಾಷ್ಟ್ರೀಯತೆ, ಅಂತಾರಾಷ್ಟ್ರೀಯವಾಗಿ ಭಾರತದ ಗೌರವ, ಜನಸಾಮಾನ್ಯರನ್ನು ತಲುಪುವ ಯೋಜನೆಗಳು, ಸರ್ಕಾರದ ಮೇಲ್ಮಟ್ಟದಲ್ಲಿ ಭ್ರ್ರ್ಟಾಚಾರ ಇಲ್ಲದಿರುವುದು, ಬಲಿಷ್ಠ ನಾಯಕತ್ವ ಈ ಮುಂತಾದ ಅಂಶಗಳನ್ನು ಜನಸಾಮಾನ್ಯರು ಗಮನಿಸಿರುವುದು ಫಲಿತಾಂಶದಿಂದ ವೇದ್ಯವಾಗುತ್ತದೆ. ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಬಿಜೆಪಿಯ ಬಹಳಷ್ಟು ಹುರಿಯಾಳುಗಳು ಮೋದಿ ಅಲೆಯನ್ನೇ ಪ್ರಧಾನವಾಗಿ ನಂಬಿಕೊಂಡಿದ್ದರು. ಚುನಾವಣಾ ಗೆಲುವಿಗೆ ಇಂಥ ಅಂಶಗಳು ಒಂದು ಹಂತಕ್ಕೆ ಅಗತ್ಯವಾದರೂ, ಇದೇ ಒಂದು ಮನೋಭಾವವಾಗಿಬಿಡಬಾರದು. ಆಗ ಸಂಸದರ ವೈಯಕ್ತಿಕ ಸಾಧನೆ ಏನೆಂಬ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ. ಈಗ ಉಳಿದಿರುವ ಕುತೂಹಲ, ಪ್ರಧಾನಿಯಾಗಿ ಎರಡನೇ ಅವಧಿಯಲ್ಲಿ ಮೋದಿ ಸಾಧನೆ ಹೇಗಿರುತ್ತದೆಂಬುದು. ಮೊದಲ ಅವಧಿಯಲ್ಲಿ ಹಾಕಿಕೊಂಡ, ಶುರುಮಾಡಿದ ಯೋಜನೆಗಳನ್ನು, ಚಿಂತನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಇಂಗಿತವನ್ನು ಅವರು ಚುನಾವಣಾ ಪ್ರಚಾರ ಸಂದರ್ಭ ದಲ್ಲಿ ವ್ಯಕ್ತಪಡಿಸಿದ್ದರು. ಈಗ ಆ ಅವಕಾಶ ಅವರೆದುರು ಬಂದಿದೆ. ಮೋದಿ ಅಧಿಕಾರಾವಧಿಯಲ್ಲಿ ಭಾರತದ ಗೌರವವನ್ನು ಹೆಚ್ಚಿಸುವ, ಪ್ರಗತಿಯ ವೇಗ ವರ್ಧನೆಯ ಕೆಲಸಗಳು ನಡೆಯುತ್ತದೆಂಬುದನ್ನು ನಂಬಲು ಸಕಾರಣಗಳಿವೆ.

Leave a Reply

Your email address will not be published. Required fields are marked *