Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಸಮ್ಮಿಶ್ರ ಕಸರತ್ತು

Friday, 06.07.2018, 3:05 AM       No Comments

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ತಾವು ಮುಂಗಡಪತ್ರ ಮಂಡಿಸಿದ್ದರಿಂದ ಮತ್ತೆ ಬಜೆಟ್ ಮಂಡನೆ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದ್ದಂದಾಗಿ ಹೊಸ ಬಜೆಟ್ ಮಂಡನೆಯಾಗುತ್ತದೆಯೋ ಇಲ್ಲವೋ ಎಂಬ ಶಂಕೆಯೂ ಒಂದು ಹಂತದಲ್ಲಿ ಮೂಡಿತ್ತು. ಆದರೆ ಸಿಎಂ ಕುಮಾರಸ್ವಾಮಿ ತಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡು, ಸಮ್ಮಿಶ್ರ ಸರ್ಕಾರದ ಕನಸುಗಳನ್ನು ಬಜೆಟ್ ರೂಪದಲ್ಲಿ ನಾಡಿನೆದುರು ಹರವಿಟ್ಟಿದ್ದಾರೆ. ನಿರೀಕ್ಷೆಯಂತೆ ರೈತರ ಸಾಲಮನ್ನಾ ಘೋಷಣೆಯಾಗಿದೆ. ಜತೆಗೆ, ರೈತಾಪಿ ವಲಯಕ್ಕೆ ಅನುಕೂಲವಾಗಬಲ್ಲ ಇತರ ಅನೇಕ ಯೋಜನೆಗಳೂ ಪ್ರಕಟವಾಗಿವೆ. ಸಾಲಮನ್ನಾ ಮೊತ್ತ ಸುಮಾರು 34 ಸಾವಿರ ಕೋಟಿ ರೂ.ಗಳಾಗಬಹುದೆಂದು ಅಂದಾಜಿಸಲಾಗಿದ್ದು, ಈ ಮೊತ್ತ ಭರಿಸಲು ಸಂಪನ್ಮೂಲ ಕ್ರೋಡೀಕರಿಸಲು ತೆರಿಗೆ ಹೆಚ್ಚಿಸುವ ಉಪಾಯಕ್ಕೆ ಮುಖ್ಯಮಂತ್ರಿಗಳು ಮೊರೆಹೋಗಿದ್ದಾರೆ. ಸಾಲಮನ್ನಾ ಕ್ರಮಕ್ಕೆ ಶ್ಲಾಘನೆ ಬಂದರೂ ತೆರಿಗೆ ಹೆಚ್ಚಳಕ್ಕೆ ಜನರು ಅಸಮಾಧಾನಗೊಂಡಾರು. ಬಜೆಟ್​ನ ಇನ್ನೊಂದು ಅಂಶವೆಂದರೆ, ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗೆ ಅದರಲ್ಲೂ ಜೆಡಿಎಸ್ ಪ್ರಬಲವಾಗಿರುವ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಕುರಿತು ಹಲವು ಶಾಸಕರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ಎಲ್ಲ ಜಿಲ್ಲೆೆಗಳಿಗೆ ಪ್ರಾತಿನಿಧ್ಯ ಇದ್ದುದರಿಂದ ಇಲ್ಲಿ ಹೊಸದಾಗಿ ಯೋಜನೆ ಘೋಷಿಸಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಳ್ಳಬಹುದಾದರೂ ಅದರಿಂದ ಅಸಮಾಧಾನ ಶಮನವಾಗುವ ಸಾಧ್ಯತೆ ಕಡಿಮೆ. ಇದೇನೇ ಇದ್ದರೂ, ಮುಖಮಂತ್ರಿಗಳು ಬಜೆಟ್​ನಲ್ಲಿ ಪ್ರಸ್ತಾಪಿಸಿರುವ ಕೆಲ ಯೋಜನೆಗಳು ಕುತೂಹಲಕರವಾಗಿವೆ. ಆ ಪೈಕಿ ಹೆಚ್ಚು ಗಮನಸೆಳೆಯುವಂಥದು ಚೀನಾದ ಉತ್ಪನ್ನಗಳಿಗೆ ಸಡ್ಡುಹೊಡೆದು ಸ್ಥಳಿಯವಾಗಿಯೇ ವಸ್ತುಗಳನ್ನು ತಯಾರಿಸುವ ಯೋಜನೆಗಳು. ರಾಜ್ಯದ ಹಲವು ಜಿಲ್ಲೆಗಳನ್ನು ಇದಕ್ಕಾಗಿ ಹೆಸರಿಸಿದ್ದು, ಈ ಯೋಜನೆಗಳ ಅನುಷ್ಠಾನ ಎಷ್ಟು ಪರಿಣಾಮಕಾರಿಯಾಗಿ ಆಗುತ್ತದೆ ಎಂಬುದರ ಮೇಲೆ ಯಶಸ್ಸು ಅವಲಂಬಿಸಿದೆ. ಆದರೆ ಇಂಥದೊಂದು ಹೊಸ ಬಗೆಯ ಚಿಂತನೆಯಂತೂ ಸ್ವಾಗತಾರ್ಹ. ಉಳಿದಂತೆ, ಹಿಂದಿನ ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗಳನ್ನೂ ಮುಂದುವರಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಸಮ್ಮಿಶ್ರ ಸರ್ಕಾರವಾದುದರಿಂದ ಇದು ಅವರಿಗೆ ಅನಿವಾರ್ಯ ಎನ್ನಬಹುದು. ಸಾಲಮನ್ನಾ, ಸರ್ಕಾರಿ ನೌಕರರಿಗೆ ವೇತನ ಆಯೋಗದ ಶಿಫಾರಸಿನ ಅನ್ವಯ ನೀಡಬೇಕಾದ ವೇತನ ಇತ್ಯಾದಿ ಕಾರಣಗಳಿಂದ ಸರ್ಕಾರದ ಬೊಕ್ಕಸದ ಮೇಲಿನ ಒತ್ತಡ ಹೆಚ್ಚುವುದು ಸಹಜ. ಆರ್ಥಿಕ ಶಿಸ್ತು ಹಳಿತಪ್ಪದಂತೆ, ಇತರ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗದಂತೆ ಹೇಗೆ ಸಮತೋಲನ ಮಾಡುತ್ತಾರೆಂಬುದು ಮುಂದಿನ ಕುತೂಹಲ. ಏಕೆಂದರೆ, ಆಡಳಿತ ನಡೆಸುವಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಸರ್ಕಾರದ ಅಸ್ತಿತ್ವಕ್ಕೇ ಸಂಚಕಾರ ಒದಗಬಹುದಾದ ಪರಿಸ್ಥಿತಿಯಿದೆ.

Leave a Reply

Your email address will not be published. Required fields are marked *

Back To Top