Wednesday, 12th December 2018  

Vijayavani

Breaking News

ವಿಶ್ವಾಸಾರ್ಹತೆ ಉಳಿಯಲಿ

Thursday, 22.03.2018, 3:04 AM       No Comments

ವಿಶ್ವಾದ್ಯಂತ ಜನಪ್ರಿಯವಾಗಿರುವ ಫೇಸ್​ಬುಕ್ ಸಾಮಾಜಿಕ ಜಾಲತಾಣವೀಗ ಸುದ್ದಿಯ ಮುನ್ನೆಲೆಗೆ ಬಂದಿದೆ. ಫೇಸ್​ಬುಕ್ ಕಾರ್ಯವ್ಯಾಪ್ತಿಯಲ್ಲಿ ಬರುವ ಮತ್ತು ದತ್ತಾಂಶ ವಿಶ್ಲೇಷಣೆ ಮಾಡುವ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯು 5 ಕೋಟಿಗೂ ಹೆಚ್ಚು ಬಳಕೆದಾರರ ದತ್ತಾಂಶವನ್ನು ಕಳವು ಮಾಡಿ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರ ಅಲೆ ಸೃಷ್ಟಿಸುವಂಥ ಕುಕೃತ್ಯ ಎಸಗಿದೆ ಎಂಬುದೀಗ ಕೇಳಿಬಂದಿರುವ ಆರೋಪ. ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್​ರಿಂದ ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಬ್ರಿಟನ್ ಸ್ಪಷ್ಟನೆ ಕೇಳಿವೆ ಎಂಬುದು ಲಭ್ಯ ಸುದ್ದಿ.

ನಮ್ಮಲ್ಲಿನ ಆಧಾರ್ ಗುರುತಿನ ಚೀಟಿಯ ನೀಡಿಕೆಯ ಪ್ರಕ್ರಿಯೆ ಇಲ್ಲಿ ನೆನಪಾಗುತ್ತದೆ. ವಿವಿಧ ತೆರನಾದ ಸರ್ಕಾರಿ ಸೇವೆಗಳನ್ನು ಪಡೆಯಲು ಮತ್ತು ಯೋಜನೆಗಳ ಫಲಾನುಭವಿಗಳಾಗಲು ಮೂಲಅಗತ್ಯವಾಗಿರುವ ಆಧಾರ್ ಚೀಟಿಯನ್ನು ಪಡೆಯುವಾಗ ಸಂಬಂಧಪಟ್ಟವರು ವೈಯಕ್ತಿಕ ಮತ್ತು ಕೌಟುಂಬಿಕ ಮಾಹಿತಿಗಳನ್ನು ನೀಡಬೇಕಾದ್ದು ಅಗತ್ಯ. ಇದು ಅಪಾತ್ರರ ಕೈಗೆ ನುಸುಳದಂತೆ ಭದ್ರತೆ ಒದಗಿಸಬೇಕಾದ್ದು ಸಂಬಂಧಪಟ್ಟವರ ಆದ್ಯಕರ್ತವ್ಯ. ಆದರೆ ಆಧಾರ್ ನೀಡಿಕೆಯಲ್ಲಿನ ಎಡವಟ್ಟುಗಳು, ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆಯೊದಗುವ ಶಂಕೆ, ಮೂಲಭೂತ ಪೂರಕ ದಾಖಲೆಗಳಿಲ್ಲದೆಯೇ ಆಧಾರ್ ಚೀಟಿಯನ್ನು ಪಡೆಯಬಹುದಾದ ಸಾಧ್ಯತೆ ಈ ಎಲ್ಲ ಅಂಶಗಳು ಈಗಲೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೊಳಗಾಗಿರುವುದು, ನ್ಯಾಯಾಲಯದಲ್ಲೂ ವಿಚಾರಣೆಗೆ ಬಂದಿರುವುದು ಗೊತ್ತಿರುವ ಸಂಗತಿಯೇ. ಈ ಕಾರಣದಿಂದಾಗಿ ಆಧಾರ್ ವಿಶ್ವಾಸಾರ್ಹತೆಯ ಬಗ್ಗೆ ಬಹುತೇಕರಲ್ಲಿ ಸಣ್ಣಮಟ್ಟಿಗಿನ ಸಂದೇಹ ಇರುವುದಂತೂ ದಿಟ.

ಅದು ಫೇಸ್​ಬುಕ್ ಇರಬಹುದು, ಆಧಾರ್ ಇರಬಹುದು, ಅಷ್ಟೇಕೆ ವಾಟ್ಸ್​ಆಪ್​ನಂಥ ಸವಲತ್ತುಗಳೇ ಇರಬಹುದು, ಇಂಥ ವ್ಯವಸ್ಥೆಗಳಿಗೆ ತೆರೆದುಕೊಳ್ಳುವವರು ಸಹಜವಾಗಿಯೇ ವಿಶ್ವಾಸವಿಟ್ಟಿರುತ್ತಾರೆ. ತಾವು ಹಂಚಿಕೊಳ್ಳುವ ವಿಷಯ/ಮಾಹಿತಿಗಳು ದುರುಳರ ಕೈಸೇರುತ್ತಿಲ್ಲ, ತಮಗೇನೂ ಅಪಾಯವಿಲ್ಲ ಎಂಬ ಭಾವ ಇಲ್ಲಿ ದಟ್ಟವಾಗಿರುತ್ತದೆ. ಆದರೆ ಓರ್ವ ವ್ಯಕ್ತಿಯ, ಕುಟುಂಬದ, ಸಮಾಜದ, ಅಂತಿಮವಾಗಿ ದೇಶದ ಭದ್ರತೆ, ಸುರಕ್ಷತೆಗೆ ಸಂಚಕಾರ ತಂದೊಡ್ಡುವಂಥ ಕುತ್ಸಿತ ಚಿಂತನೆಗಳು ಅದರ ಹಿಂದೆ ಕೆಲಸಮಾಡುತ್ತಿವೆ ಎಂದಾದರೆ ಅದು ನಿರ್ಲಕ್ಷಿಸುವಂಥ ಸಮಸ್ಯೆಯಲ್ಲ. ಇಂಥ ವ್ಯವಸ್ಥೆಗಳ ಉಸ್ತುವಾರಿ/ಮೇಲ್ವಿಚಾರಣೆ ಹೊತ್ತವರಿಂದ ಅಥವಾ ಕಾರ್ಯಭಾರ ವಹಿಸಿಕೊಂಡ ಏಜೆನ್ಸಿಗಳಿಂದ ಆಗುವ ಒಂದು ಚಿಕ್ಕ ಪ್ರಮಾದಕ್ಕೆ ಯಾರೋ ಬೆಲೆ ತೆರುವಂತಾಗಬಹುದು. ಆದ್ದರಿಂದ ದತ್ತಾಂಶದ ದುರುಪಯೋಗಕ್ಕೆ ಕಾರಣವಾಗುವವರ ಮತ್ತು ಅದಕ್ಕೆ ಒತ್ತಾಸೆಯಾಗಿ ನಿಲ್ಲುವವರ ವಿರುದ್ಧ ಸರ್ಕಾರ ಕಠಿಣ ಶಿಸ್ತುಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಚೀನಿ ಹ್ಯಾಕರ್​ಗಳು ವಾಟ್ಸ್​ಆಪ್ ಮೂಲಕ ಭಾರತೀಯ ಬಳಕೆದಾರರ ಮಾಹಿತಿ ಕದಿಯುತ್ತಿದ್ದಾರೆ ಎಂದು ಶಂಕಿಸಿರುವ ಭಾರತೀಯ ಸೇನೆ, ಇಂಥ ಸಾಮಾಜಿಕ ವೇದಿಕೆಗಳನ್ನು ಬಳಸುವವರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿರುವುದು ಗೊತ್ತಿರುವಂಥದ್ದೇ. ತಮ್ಮ ಬಳಗದೊಂದಿಗೆ ಮಾತ್ರವೇ ಹಂಚಿಕೊಂಡಿರುವುದಾಗಿ ಬಳಕೆದಾರರು ಭಾವಿಸಿರುವ ಮಾಹಿತಿಗಳು, ಇಂಥ ವೇದಿಕೆ/ಜಾಲಗಳ ‘ಅಜ್ಞಾತ’ ವ್ಯಾಪಕತೆಯ ಕಾರಣದಿಂದಾಗಿ ಅಪಾತ್ರರ ಕೈಸೇರುವಂತಾಗಬಾರದು. ಇದು ಬಳಕೆದಾರರ ಖಾಸಗಿತನಕ್ಕೆ ಒದಗಿದ ಸಂಚಕಾರ ಮಾತ್ರವೇ ಅಲ್ಲ, ಅವರ ಹಕ್ಕುಗಳ ಅತಿಕ್ರಮಣ ಕೂಡ. ಪ್ರಸ್ತುತ, ಫೇಸ್​ಬುಕ್, ವಾಟ್ಸ್​ಆಪ್​ನಂಥ ವೇದಿಕೆಗಳ ಇಂಥ ಎಡವಟ್ಟುಗಳು ಆಗೊಮ್ಮೆ ಈಗೊಮ್ಮೆ ವರದಿಯಾಗುವುದೇನೋ ಸರಿ. ಆದರೆ ಜನರ ಗಮನಕ್ಕೆ ಬಾರದೆಯೇ ಏನೆಲ್ಲ ನಡೆಯುತ್ತಿರಬಹುದು ಎಂಬುದನ್ನು ಒಮ್ಮೆ ಕಲ್ಪಿಸಿಕೊಂಡರೆ ಆತಂಕವಾಗುತ್ತದೆ. ಕಾನೂನಿನ ಭಯ ಮತ್ತು ದಂಡನೆ/ಶಿಕ್ಷೆಯ ಬಿಸಿ ಇಲ್ಲವಾದಲ್ಲಿ ಇದು ಅಬಾಧಿತವಾಗಿ ಮುಂದುವರಿದೀತು.

Leave a Reply

Your email address will not be published. Required fields are marked *

Back To Top