ಉತ್ತಮ ಕ್ರಮ

ವೈದ್ಯಕೀಯ ಸೇವೆಗಳು ಶ್ರೀಸಾಮಾನ್ಯರ ಕೈಗೆ ಎಟುಕದಷ್ಟು ದುಬಾರಿಯಾಗಿ ಪರಿಣಮಿಸುತ್ತಿರುವುದು ಗೊತ್ತಿರುವಂಥದ್ದೇ. ಅದಕ್ಕೆಂದೆ, ಆಸ್ಪತ್ರೆಗಳು ಎಂದಾಕ್ಷಣ ಬಹುತೇಕರು ಬೆಚ್ಚಿಬೀಳುತ್ತಾರೆ. ಜೀವನಪೂರ್ತಿ ಉಳಿತಾಯ ಮಾಡಿದ ಹಣವನ್ನು ಚಿಕಿತ್ಸೆಗೆಂದು ಸುರಿದು, ಔಷಧ ಇತ್ಯಾದಿ ಬಾಬತ್ತುಗಳಿಗೆ ಸಾಲಸೋಲ ಮಾಡುವುದರಿಂದ ಇಡೀ ಮನೆಯ ಆರ್ಥಿಕ ನೌಕೆಯೇ ದಿಕ್ಕು ತಪು್ಪತ್ತದೆ. ಇದರಿಂದ ಸಾವರಿಸಿಕೊಳ್ಳೋದು ಸುಲಭಸಾಧ್ಯವೇನಲ್ಲ. ಅದರಲ್ಲೂ, ಮನೆಗೆ ಆಧಾರವಾಗಿರುವ, ದುಡಿಯುವ ವ್ಯಕ್ತಿಯೇ ಹಾಸಿಗೆ ಹಿಡಿದು ಬಿಟ್ಟರೆ ಆ ಸಂಕಷ್ಟ ಕೇಳುವುದೇ ಬೇಡ. ಇನ್ನು, ಕ್ಯಾನ್ಸರ್​ನಂಥ ಕಾಯಿಲೆ ಆವರಿಸಿಕೊಂಡು ಬಿಟ್ಟರಂತೂ ರೋಗಿ ರೋಗಕ್ಕಿಂತ ಆ ಚಿಕಿತ್ಸೆಯ ವೆಚ್ಚ, ಔಷಧದರದ ಭಾರ ಕಂಡೇ ಮತ್ತಷ್ಟು ಕುಸಿದು ಹೋಗುತ್ತಾನೆ. ಔಷಧಗಳಿಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಸುರಿಯುವುದು ಎಲ್ಲಿಂದ? ಆರ್ಥಿಕವಾಗಿ ಚೈತನ್ಯದಿಂದ ಇರುವವರು ಹೇಗೋ ಖರ್ಚು ಮಾಡಿ ಬಿಡಬಹುದು. ಆದರೆ, ಬಡವರು, ಮಧ್ಯಮವರ್ಗದವರ ಸ್ಥಿತಿಯೇನು? ಅವರ ಮುಂದಿರುವ ದಾರಿ ಏನು? ಎಂಬ ಪ್ರಶ್ನೆಗಳ ಮಧ್ಯೆಯೇ ಸಮಾಧಾನ ಮೂಡಿಸುವ ಕ್ರಮವೊಂದು ಪ್ರಕಟವಾಗಿದೆ.

ಹೌದು, ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧ ದೊರೆಯಬೇಕು, ಈ ಮೂಲಕ ಅವರ ಮೇಲಿನ ಆರ್ಥಿಕ ಹೊರೆ ತಗ್ಗಿಸಬೇಕು ಎಂಬ ಆಶಯದಿಂದ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ(ಎನ್​ಪಿಪಿಎ) ಕ್ಯಾನ್ಸರ್ ನಿರೋಧಕ ಒಂಬತ್ತು ಔಷಧಗಳ ದರವನ್ನು ಶೇಕಡ 90ರವರೆಗೂ ಇಳಿಸಿದೆ. ಇದು ನಿಜಕ್ಕೂ ಸ್ವಾಗತಾರ್ಹ ಕ್ರಮವಾಗಿದ್ದು, ಬಡವರ ಪಾಲಿಗೆ ತುಂಬ ಅನುಕೂಲಕರವಾಗಿ ಪರಿಣಮಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಕಾರ್ಯನಿರ್ವಹಿಸುವ ಎನ್​ಪಿಪಿಎ, ಔಷಧ ದರದ ಮೇಲೆ ನಿಗಾ ಇರಿಸಿ ನಿಯಂತ್ರಿಸುತ್ತದೆ. 2018ರ ಮಾರ್ಚ್​ನಲ್ಲೂ ಕೆಲ ಔಷಧಗಳ ದರ ಇಳಿಸಲಾಗಿತ್ತು. ಅದಾದ ಬಳಿಕ ಪ್ರಸಕ್ತ ಕ್ಯಾನ್ಸರ್ ನಿರೋಧಕ ಔಷಧಗಳ ದರ ಇಳಿಸಲಾಗಿದೆ. ದರ ಇಳಿಕೆಯಾದ ಕಾರಣದಿಂದ ಉತ್ಪಾದನೆ ಕಡಿಮೆ ಮಾಡುವಂತಿಲ್ಲವೆಂದು ಔಷಧ ಕಂಪನಿಗಳಿಗೆ ಇದೇ ವೇಳೆ ಎನ್​ಪಿಪಿಎ ಸೂಚನೆ ನೀಡಿರುವುದು ಗಮನಾರ್ಹ. ಶ್ವಾಸಕೋಶದ ಕ್ಯಾನ್ಸರ್​ನ ಕಿಮೋಥೆರೆಪಿಗೆ ಪೆಮೆಕ್ಸೆಲ್ ಬ್ರಾ್ಯಂಡ್​ನ ಹೆಸರಿನಲ್ಲಿ ಬಳಸುವ ಇಂಜೆಕ್ಷನ್ ಪಮೆಟ್ರೆಕ್ಸೆಡ್ (500 ಎಂಜಿ) ದರ -ಠಿ; 22 ಸಾವಿರದಿಂದ -ಠಿ; 2800ಕ್ಕೆ ಇಳಿದಿದ್ದು, ಇದೇ ಮಾದರಿಯಲ್ಲಿ ಒಂಬತ್ತು ಔಷಧಗಳ ದರದಲ್ಲಿ ಗಣನೀಯ ಇಳಿಕೆಯಾಗಿರುವುದರಿಂದ, ರೋಗಿಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಇತರೆ ಔಷಧಗಳನ್ನು ಕೂಡ ಅಗ್ಗದ ದರದಲ್ಲಿ ವಿತರಿಸಲು ಕೇಂದ್ರ ಸರ್ಕಾರ ದೇಶಾದ್ಯಂತ ಜನೌಷಧ ಕೇಂದ್ರಗಳೇನೋ ತೆರೆದಿದೆ. ವಿಪರ್ಯಾಸವೆಂದರೆ, ಅಪನಂಬಿಕೆ, ವದಂತಿ, ಅಪೂರ್ಣ ಮಾಹಿತಿ, ಅರಿವಿನ ಕೊರತೆ ಹಿನ್ನೆಲೆಯಲ್ಲಿ ಬಡವರು ಹೆಚ್ಚಿನ ಪ್ರಮಾಣದಲ್ಲಿ ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ಬದಲಾಗಿ, ಹೆಚ್ಚು ಶಿಕ್ಷಿತರು ಮತ್ತು ಉಳ್ಳವರೇ ಇಂಥ ಕೇಂದ್ರಗಳಿಗೆ ಆಗಮಿಸಿ ಔಷಧ ಖರೀದಿಸುತ್ತಿರುವುದು ಮಾಮೂಲಿ ಸಂಗತಿಯಾಗಿದೆ. ಈ ಬಗ್ಗೆ ಶ್ರೀಸಾಮಾನ್ಯರಲ್ಲಿ ಸೂಕ್ತ ಅರಿವು, ತಿಳಿವಳಿಕೆ ಮೂಡಿಸುವ ಕೆಲಸ ಆರೋಗ್ಯ ಇಲಾಖೆಯಿಂದ ನಡೆಯಲಿ. ಆಗಲೇ, ಜನೋಪಯೋಗಿ ಯೋಜನೆ ಮತ್ತು ಕ್ರಮಗಳು ಸಾರ್ಥಕಗೊಳ್ಳಲು ಸಾಧ್ಯ.

Leave a Reply

Your email address will not be published. Required fields are marked *