More

    ವಿವಾದ ಅನಗತ್ಯ

    ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ಗೊತ್ತಿರುವಂಥದ್ದೇ. ಸೈದ್ಧಾಂತಿಕ ವಿರೋಧಿಗಳೊಂದಿಗೆ ‘ಮೈತ್ರಿ’ ಮಾಡಿಕೊಂಡು ಸರ್ಕಾರ ರಚಿಸಿರುವ ಶಿವಸೇನೆ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಭಾವನಾತ್ಮಕ ವಿಷಯಗಳನ್ನು ಎತ್ತಿಕೊಂಡು, ಅದಕ್ಕೆ ವಿವಾದದ ಸ್ವರೂಪ ನೀಡುತ್ತಿದೆ. ಮತ್ತೊಂದೆಡೆ, ಈಗಾಗಲೇ ಆ ರಾಜ್ಯಕ್ಕೆ ಮಂಜೂರಾದ ಅಭಿವೃದ್ಧಿ ಯೋಜನೆಗಳಿಗೂ ಅನಗತ್ಯ ತಡೆ ಒಡ್ಡುತ್ತಿದೆ. ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಆಗುತ್ತಲೇ, ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಆವೇಶಭರಿತರಾಗಿ ಮಾತನಾಡುತ್ತ, ಎರಡು ನೆರೆ ರಾಜ್ಯಗಳು ಸೌಹಾರ್ದದಿಂದ ಇರಬೇಕು ಎಂಬ ಸೌಜನ್ಯವನ್ನೂ ಮರೆತುಬಿಟ್ಟಿದ್ದಾರೆ. ಭಾರತ-ಪಾಕಿಸ್ತಾನದ ವಿವಾದದಂತೆ ಉದ್ಧವ್ ಇದನ್ನು ಕಾಣುತ್ತಿರುವುದು ತೀರಾ ಬಾಲಿಶತನ ಮತ್ತು ರಾಜಕೀಯ ಅಪ್ರಬುದ್ಧತೆಗೆ ಸಾಕ್ಷಿ. ಅಷ್ಟಕ್ಕೂ, ಗಡಿ ವಿವಾದ ಸಂಬಂಧದ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿ ಇದೆ ಎಂಬುದು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೇ? ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರಬೇಕಾದರೆ ರಾಜಕೀಯ ಲಾಭ ಪಡೆಯಲು ಇಲ್ಲ ಸಲ್ಲದ, ಆವೇಶದ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ? ‘ಬೆಳಗಾವಿ ನಮಗೆ ಸೇರಬೇಕು’ ಎಂಬ ಉದ್ಧವ್ ಮಾತಿನಲ್ಲಿ ಯಾವುದೇ ಹುರುಳಿಲ್ಲ, ಅದೊಂದು ರಾಜಕೀಯ ಗಿಮಿಕ್​ನ ಭಾಗ ಎಂಬುದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ.

    ಒಂದೆಡೆ, ಎಲ್ಲ ರಾಜ್ಯಗಳು, ರಾಜ್ಯ ಸರ್ಕಾರಗಳು ‘ಟೀಂ ಇಂಡಿಯಾ’ದಂತೆ ಒಟ್ಟಾಗಿ, ತಂಡಸ್ಪೂರ್ತಿಯಿಂದ ಅಭಿವೃದ್ಧಿ ನಿಟ್ಟಿನಲ್ಲಿ ಶ್ರಮಿಸಬೇಕು, ಜನೋಪಯೋಗಿ ಯೋಜನೆಗಳಿಗೆ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಳಕಳಿ ತೋರಿದ್ದರೆ, ಮತ್ತೊಂದೆಡೆ ಹೀಗೆ ವಿವಾದಗಳಿಗೆ ಕಿಡಿ ತಾಗಿಸುವ ಪ್ರಯತ್ನ ಮಹಾರಾಷ್ಟ್ರ ಸರ್ಕಾರದಿಂದ ನಡೆಯುತ್ತಿರುವುದು ವಿಷಾದನೀಯ. ಈ ಕುರಿತಂತೆ ಕರ್ನಾಟಕ ಕಡೆಯಿಂದಲೂ ತೀಕ್ಷ್ಣ ಪ್ರತಿಕ್ರಿಯೆ ಹೊರಬಿದ್ದಿರುವುದು ಸರಿಯಾಗಿಯೇ ಇದೆ. ‘ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರ ಮಹಾಜನ್ ವರದಿಯಲ್ಲೇ ಇತ್ಯರ್ಥವಾಗಿದೆ. ಈ ವಿಚಾರವಾಗಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವುದನ್ನು ಬಿಟ್ಟು ಒಳ್ಳೆಯ ಕೆಲಸ ಮಾಡುವುದು ಸೂಕ್ತ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಖಡಕ್ಕಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ, ಕರ್ನಾಟಕ-ಮಹಾರಾಷ್ಟ್ರದ ಜನರು ಸೌಹಾರ್ದದಿಂದ ಬಾಳುತ್ತಿದ್ದಾರೆ. ಎರಡೂ ಭಾಷೆಗಳ ನಡುವೆ ಸಾಂಸ್ಕೃತಿಕ ವಿನಿಮಯವೂ ಉತ್ತಮವಾಗಿದೆ. ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷಿಕರು ಅನೋನ್ಯವಾಗಿಯೇ ಇದ್ದಾರೆ. ಈ ವಾಸ್ತವಗಳನ್ನು ಆ ರಾಜ್ಯದ ರಾಜಕಾರಣಿಗಳು ಸೂಕ್ಷ್ಮವಾಗಿ ಗಮನಿಸಿ, ಅರ್ಥಮಾಡಿಕೊಳ್ಳಬೇಕು. ಈಗಿನ ಕಾಲಘಟ್ಟದಲ್ಲಿ ಪರಿಸರ ರಕ್ಷಣೆ, ಆರ್ಥಿಕತೆ ಸೇರಿ ಹಲವು ಸವಾಲುಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. ಅವುಗಳಿಗೆ ಪರಿಹಾರ ಕಂಡುಕೊಂಡು, ಜನರ ಬದುಕನ್ನು ಉತ್ತಮಗೊಳಿಸಲು ಯತ್ನಿಸಬೇಕು. ಅದನ್ನು ಬಿಟ್ಟು ಮುಗಿದುಹೋದ ಅಧ್ಯಾಯವನ್ನು ಮತ್ತೆ ಕೆದಕಿ ಸೌಹಾರ್ದಕ್ಕೆ ಧಕ್ಕೆ ತರುವುದು ಬೇಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts