ಗುಣಮಟ್ಟಕ್ಕಿರಲಿ ಆದ್ಯತೆ

ಸೇನೆಯ ಬಲವರ್ಧನೆಗೆ ಹಲವು ಮಹತ್ವದ ಉಪಕ್ರಮಗಳು ನಡೆಯುತ್ತಿವೆ. ಅದರಲ್ಲೂ, ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ವಹಿಸಲಾಗಿದೆ. ಮುಖ್ಯವಾಗಿ, ಸೇನೆಯನ್ನು ಸ್ವಾವಲಂಬಿಗೊಳಿಸಲು ಶಸ್ತ್ರಾಸ್ತ್ರ ಮತ್ತು ಇತರ ಭದ್ರತಾ ಉಪಕರಣಗಳ ಉತ್ಪಾದನೆಯನ್ನು ಭಾರತದಲ್ಲೇ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ವಿದೇಶಿ ಕಂಪನಿಗಳೂ ಉತ್ಪಾದನೆಯನ್ನು ಇಲ್ಲೇ ನಡೆಸುವುದು ಕಡ್ಡಾಯ. ಹೀಗಾಗಿ, ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಷಿಪಣಿ ಸೇರಿ ಹಲವು ಬಗೆಯ ಭದ್ರತಾ ಸಾಮಗ್ರಿಗಳ ಉತ್ಪಾದನಾ ಪ್ರಮಾಣ ಏರಿಕೆಯಾಗಿದ್ದು, ನಿಗದಿತ ಅವಧಿಗೆ ಸೇನೆಯ ಕೈ ಸೇರುತ್ತಿವೆ ಎಂಬುದು ಸಮಾಧಾನದ ವಿಚಾರ. ಆದರೆ, ಕಳಪೆ ಭದ್ರತಾ ಸಾಮಗ್ರಿ ಪೂರೈಕೆಯಾಗುತ್ತಿರುವ ಕುರಿತಂತೆ ಸೇನೆಯೇ ರಕ್ಷಣಾ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದು, ಕಳವಳಕ್ಕೆ ಕಾರಣವಾಗಿದೆ.

ಸರ್ಕಾರಿ ಸ್ವಾಮ್ಯದ ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್​ಬಿ)ನಿಂದ ಯುದ್ಧಟ್ಯಾಂಕ್, ಫಿರಂಗಿ, ವಾಯು ರಕ್ಷಣಾ ವ್ಯವಸ್ಥೆ, ಮತ್ತಿತರ ಗನ್​ಗಳಿಗೆ ಪೂರೈಸಲಾಗಿರುವ ಮದ್ದುಗುಂಡುಗಳು ಕಳಪೆಯಾಗಿದ್ದು, ಇದರಿಂದ ಅವಘಡಗಳ ಸಂಖ್ಯೆ ಹೆಚ್ಚುತ್ತಿದೆ. ಮತ್ತು ಮದ್ದುಗುಂಡುಗಳ ಕಾರಣದಿಂದ ಸಂಭವಿಸುವ ಅವಘಡದಿಂದ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸೇನೆ ವರದಿಯಲ್ಲಿ ವಿವರಿಸಿದೆ. ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ಒಎಫ್​ಬಿ ದೇಶದಾದ್ಯಂತ 41 ಫ್ಯಾಕ್ಟರಿಗಳನ್ನು ಹೊಂದಿದ್ದು, ವಾರ್ಷಿಕ 19 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ. ಆದರೆ, ಕಳಪೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು ಏಕೆ? ಇದರಿಂದ ಸೇನೆ ಅನುಭವಿಸುತ್ತಿರುವ ತೊಂದರೆ ಕುರಿತು ರಕ್ಷಣಾ ಸಚಿವಾಲಯ ಗಂಭೀರ ಪರಿಶೀಲನೆ ನಡೆಸಬೇಕಿದೆ.

ರಕ್ಷಣಾ ಉತ್ಪನ್ನಗಳ ದೇಶೀ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು ಸರಿಯೇ. ಆದರೆ, ಆ ಹೆಸರಲ್ಲಿ ಕಳಪೆ ಮಟ್ಟದ ಭದ್ರತಾ ಉಪಕರಣಗಳು ತಯಾರಾಗುವುದು ಅಕ್ಷಮ್ಯ. ಇದು ರಾಷ್ಟ್ರದ ಭದ್ರತೆಯೊಂದಿಗೆ ಚೆಲ್ಲಾಟವಾಡಿದಂತೆ. ಪುಲ್ವಾಮಾ ದಾಳಿ ಬಳಿಕವಂತೂ ಭಾರತ-ಪಾಕಿಸ್ತಾನ ನಡುವಿನ ಸಂಬಂಧಗಳು ಮತ್ತಷ್ಟು ಉದ್ವಿಗ್ನಗೊಂಡು, ಯುದ್ಧಸದೃಶ ಸ್ಥಿತಿಯೇ ನಿರ್ವಣವಾಗಿತ್ತು. ಈಗಲೂ ಭಾರತೀಯ ಸೇನೆ ಪಾಕ್ ಗಡಿಯಲ್ಲಿ ಭದ್ರತೆ ಬಿಗಿಗೊಳಿಸಿದ್ದು, ವಾಯು ರಕ್ಷಣಾ ವ್ಯವಸ್ಥೆ ನಿಯೋಜಿಸಲು ಮುಂದಾಗಿದೆ.

ಆಕಸ್ಮಾತ್, ಯುದ್ಧದ ಸನ್ನಿವೇಶ ಎದುರಾದಲ್ಲಿ ಸೇನೆ ಕಳಪೆ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಯುದ್ಧ ಮಾಡಲು ಸಾಧ್ಯವೇ? ಅಂಥ ಸಂದರ್ಭದಲ್ಲಿ ಸೇನೆಯ ಮುಂದಿರುವ ಆಯ್ಕೆ ಏನು? ಎಂಬುದಕ್ಕೆ ಉತ್ತರಗಳಿಲ್ಲ. ರಕ್ಷಣಾ ಸಾಮಗ್ರಿಗಳು ಗುಣಮಟ್ಟದಿಂದ ಕುಡಿರಬೇಕು ಎಂಬ ಕಾರಣಕ್ಕೆ ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಇವುಗಳು ದೇಶಿಯವಾಗಿ ಉತ್ಪಾದನೆಯಾದರೂ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಬೇಕು. ಮದ್ದುಗುಂಡು, ಯುದ್ಧಟ್ಯಾಂಕ್ ಸೇರಿದಂತೆ ಯಾವುದೇ ಬಗೆಯ ಶಸ್ತ್ರಾಸ್ತ್ರಗಳೇ ಆಗಿರಲಿ ಅವು ಗುಣಮಟ್ಟದಿಂದ ಕೂಡಿರಬೇಕು. ಆಗ ಮಾತ್ರ, ಸೇನೆಗೆ ನಿಜವಾದ ಅರ್ಥದಲ್ಲಿ ಬಲ ತುಂಬಲು ಸಾಧ್ಯ. ಅಲ್ಲಿನ ಪಡೆಗಳನ್ನು ಬಲಿಷ್ಠಗೊಳಿಸಲು ಸಾಧ್ಯ ಎಂಬುದನ್ನು ಕೇಂದ್ರ ಸರ್ಕಾರ ಅರಿತು, ಈ ಅಪಸವ್ಯಗಳನ್ನು ಹೋಗಲಾಡಿಸಲಿ.

Leave a Reply

Your email address will not be published. Required fields are marked *